“ನಾನು ಬಿರುನುಡಿದರೆ ಅದರ ಹಿಂದೆ ಯಾವುದೇ ಉದ್ದೇಶ ಇರುವುದಿಲ್ಲ”: ನ್ಯಾ.ಅರುಣ್ ಮಿಶ್ರಾ ಅವರ ವಿವಾದಾತ್ಮಕ ಹೇಳಿಕೆಗಳು

ಮಾಧ್ಯಮಗಳಿಗೆ ತಲೆಬರಹಗಳಾಗಿ ಒದಗುತ್ತಿದ್ದ ನ್ಯಾಯಾಲಯದೊಳಗೆ (ಮತ್ತು ಹೊರಗೆ) ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ನೀಡುತ್ತಿದ್ದ ವಿವಾದಾತ್ಮಕ ಹೇಳಿಕೆಗಳ ಪಟ್ಟಿ ಇಲ್ಲಿದೆ
Justice Arun Mishra
Justice Arun Mishra

ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರಿಗೆ ಬುಧವಾರ ಪೂರ್ಣಗೊಳ್ಳುವುದರೊಂದಿಗೆ ಸುಪ್ರೀಂ ಕೋರ್ಟ್ ನ ಐದು ವರ್ಷದ ಪ್ರಕ್ಷುಬ್ಧ ದಿನಗಳು ಮುಗಿದಿವೆ. ನ್ಯಾ. ಮಿಶ್ರಾ ಅವರ ನ್ಯಾಯಾಲಯದಲ್ಲಿನ ಕಲಾಪ ಮತ್ತು ತೀರ್ಪು ಪ್ರಕಟಣೆಗೆ ಸಂಬಂಧಿಸಿದಂತೆ ವಕೀಲ ವೃಂದ ಇಬ್ಭಾಗವಾಗಿದ್ದು, ಹಾಲಿ ನ್ಯಾಯಮೂರ್ತಿಗಳಲ್ಲಿ ಸಾಮಾನ್ಯವಾಗಿ ವಿರಳವಾದ ಉದ್ವೇಗವನ್ನು ನ್ಯಾ. ಮಿಶ್ರಾ ಅವರು ತೋರ್ಪಡಿಸಿದ್ದಾರೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ಅವರ ಮುಂದೆ ವಾದಿಸುತ್ತಿದ್ದ ವಕೀಲರು, ಕಂಪೆನಿಗಳ ಪ್ರತಿನಿಧಿಗಳು ಮತ್ತು ಸಹೋದ್ಯೋಗಿ ನ್ಯಾಯಮೂರ್ತಿಗಳೂ ಇದನ್ನು ಗಮನಿಸಿದಂತೆ ಈ ಉದ್ವೇಗ ನಕಾರಾತ್ಮಕವಾಗಿ ಪ್ರಕಟವಾಗಿದ್ದೇ ಹೆಚ್ಚು. ಆ ಮೂಲಕ ಅದು ಅನೇಕರನ್ನು ಕೆಟ್ಟದಾಗಿ ತಾಕಿತು ಕೂಡ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೋಡುವುದಾದರೆ ವರ್ಚುವಲ್ ವಿದಾಯ ಸಮಾರಂಭದಲ್ಲಿ ಮಾತನಾಡಿದವರು ಬೇರೆಯದೇ ಆದ ನ್ಯಾ.ಮಿಶ್ರಾ ಎಂದೆನಿಸುತ್ತದೆ. ಅವರು ಸಮಾರಂಭದಲ್ಲಿ ಹೀಗೆ ಹೇಳಿದ್ದರು:

“ಕೆಲವು ಸಂದರ್ಭದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅತ್ಯಂತ ಕಠಿಣವಾಗಿ ನಡೆದುಕೊಂಡಿರಬಹುದು. ಅದಕ್ಕಾಗಿ ಯಾರೂ ನೊಂದುಕೊಳ್ಳಬಾರದು. ಪ್ರತಿಯೊಂದು ತೀರ್ಪನ್ನೂ ವಿಶ್ಲೇಷಿಸಿ, ಆದರೆ ಅದಕ್ಕೆ ಈ ತರಹ ಅಥವಾ ಆ ತರಹ ಎಂದು ಬಣ್ಣ ಹಚ್ಚಬೇಡಿ. ಯಾರನ್ನಾದರೂ ನಾನು ನೋಯಿಸಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನನ್ನು ಕ್ಷಮಿಸಿ, ನನ್ನನ್ನು ಕ್ಷಮಿಸಿ.”

ಇದೇ ತಾಣದಲ್ಲಿನ ಇನ್ನೊಂದು ಲೇಖನದಲ್ಲಿ ನ್ಯಾ. ಅರುಣ್ ಮಿಶ್ರಾ ಅವರು ನೀಡಿದ ಮಹತ್ವದ ತೀರ್ಪುಗಳನ್ನು ಪಟ್ಟಿ ಮಾಡಲಾಗಿದೆ. ಪ್ರಸಕ್ತ ಲೇಖನದಲ್ಲಿ ಮಾಧ್ಯಮಗಳಿಗೆ ತಲೆಬರಹಗಳಾಗಿ ಒದಗುತ್ತಿದ್ದ ನ್ಯಾಯಾಲಯದೊಳಗೆ (ಮತ್ತು ಹೊರಗೆ) ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ನೀಡುತ್ತಿದ್ದ ವಿವಾದಾತ್ಮಕ ಹೇಳಿಕೆಗಳ ಪಟ್ಟಿ ನೀಡಲಾಗಿದೆ.

ಮುಂದಿನ ಪೀಳಿಗೆ ನ್ಯಾ. ಮಿಶ್ರಾ ಅವರನ್ನು ಹೇಗೆ ನೆನೆಯಲಿದೆ? ನ್ಯಾ. ಮಿಶ್ರಾ ಅವರನ್ನು ಅವರ ಗೆಳೆಯರು ಮತ್ತು ಕಿರಿಯರು ಹೃದಯವಂತ, ಉದಾರವಾದಿ, ಕಠಿಣ ಪರಿಶ್ರಮಿ ಎಂದು ಬಣ್ಣಿಸಿದ್ದಾರೆ. ಅದಾಗ್ಯೂ, ಒಂದು ಅಥವಾ ಎರಡು ಪ್ರಕರಣಗಳು ಅವರ ಮತ್ತೊಂದು ಮುಖವನ್ನು ಪರಿಚಯಿಸಲಿವೆ.

ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳ ಗ್ರಹಿಕಾ ಶಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಾರದು ಎನ್ನುವುದಾದರೂ ನ್ಯಾ. ಮಿಶ್ರಾ ಅವರು ನೀಡಿರುವ ಹೇಳಿಕೆಗಳು ಅವರನ್ನು “ಉಕ್ಕಿನ ನ್ಯಾಯಮೂರ್ತಿ” ಎಂಬ ಬಣ್ಣನೆಯ ಮತ್ತೊಂದು ಮುಖವನ್ನು ಸಾದರಪಡಿಸಿವೆ.

1. “ಕಂಪೆನಿಗಳು ತಾವು ಹೆಚ್ಚು ಶಕ್ತಿಶಾಲಿ ಎಂದುಕೊಂಡಿವೆಯೇ? ಯಾರಾದರೂ ತಾವು ಹೆಚ್ಚು ಶಕ್ತಿವಂತರು ಎಂದುಕೊಂಡರೆ ಅಥವಾ ನಮ್ಮ ಮೇಲೆ ಪ್ರಭಾವ ಬೀರಲು ಮುಂದಾದರೆ ಅದು ತಪ್ಪಾಗಲಿದೆ.”

ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್) ಪ್ರಕರಣದ ಸಂದರ್ಭದಲ್ಲಿ ನ್ಯಾ. ಮಿಶ್ರಾ ಅವರು ಈ ಹೇಳಿಕೆ ನೀಡಿದ್ದರು. ಮಾರ್ಚ್‌ 18ರಂದು ನಡೆದ ವಿಚಾರಣೆಯಲ್ಲಿ ಟೆಲಿಕಾಂ ಕಂಪೆನಿಗಳು ಬಾಕಿ ಮೊತ್ತದ ಮರುಮೌಲ್ಯ ಮಾಪನ ಬಯಸಿದಾಗ ನ್ಯಾ. ಮಿಶ್ರಾ ಮೇಲಿನಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಂದುವರಿದು, ನ್ಯಾಯಾಲಯದ ಆದೇಶಗಳನ್ನು ಪಾಲಿಸದಿದ್ದರೆ ಕಂಪೆನಿಯ ಮುಖ್ಯಸ್ಥರನ್ನು ಸೆರೆಮನೆಗೆ ತಳ್ಳುವುದಾಗಿಯೂ ಬೆದರಿಸಿದ್ದರು.

2. “ಜಾಗತಿಕವಾಗಿ ಆಲೋಚಿಸುವ ಹಾಗೂ ಸ್ಥಳೀಯವಾಗಿ ಕಾರ್ಯಗತಗೊಳಿಸುವ ಅಸಾಧಾರಣ ಬಹುಮುಖಿ ಪ್ರತಿಭಾವಂತ ಶ್ರೀ ನರೇಂದ್ರ ಮೋದಿಯವರನ್ನು ಅವರ ಸ್ಪೂರ್ತಿದಾಯಕ ಭಾಷಣಕ್ಕಾಗಿ ಅಭಿನಂದಿಸುತ್ತೇವೆ. ಅವರ ಮಾತುಗಳು ಈ ಸಮ್ಮೇಳನದ ಕಾರ್ಯಸೂಚಿ ನಿರ್ಧರಿಸುವಲ್ಲಿ ಉದ್ದೀಪನಕಾರಿಯಾಗಲಿವೆ”.

ನ್ಯಾಯಾಲಯದ ಹೊರಗೆ ವ್ಯಕ್ತಪಡಿಸಿದ ಈ ಅಭಿಪ್ರಾಯಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ನ್ಯಾ. ಮಿಶ್ರಾ ಅವರು ಕಳೆದ ಫೆಬ್ರುವರಿಯಲ್ಲಿ ನಡೆದ ಅಂತಾರಾಷ್ಟ್ರೀಯ ನ್ಯಾಯಿಕ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ್ದರು. ನ್ಯಾ. ಮಿಶ್ರಾ ಅವರ ಅಭಿಪ್ರಾಯ ಅಸಮಂಜಸವ ಎಂದು ವಕೀಲ ವೃಂದ ಹೇಳಿದ್ದು, ಭಾರತ ಇತಿಹಾಸದಲ್ಲಿನ ಅತ್ಯಂತ ಕಷ್ಟದ ದಿನಗಳ ಈ ಸಂದರ್ಭದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ವ್ಯಾಪಕ ಚರ್ಚೆ ಆರಂಭಕ್ಕೆ ಮುನ್ನುಡಿ ಬರೆಯಲಾಗಿತ್ತು.

3. “ಈ ಸನ್ನಿವೇಶಗಳಲ್ಲಿ, ಮಾಡಲಾಗಿರುವ ಮನವಿಗಳ ಆಧಾರದಲ್ಲಿ ನಾನು ವಿಚಾರಣೆಯಿಂದ ಹಿಂದೆ ಸರಿದರೆ ಘೋರ ಪ್ರಮಾದವೆಸಗಿದಂತಾಗುತ್ತದೆ. ಭವಿಷ್ಯದ ಪೀಳಿಗೆಯು ಕೆಟ್ಟ ಪರಂಪರೆಗೆ ನಾಂದಿ ಹಾಡಿದ ಕಾರಣಕ್ಕಾಗಿ ನನ್ನನ್ನು ಮನ್ನಿಸುವುದಿಲ್ಲ.”

ಭೂಸ್ವಾಧೀನ ಕಾಯಿದೆಗೆ ಸಂಬಂಧಿಸಿದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ್ದ ನ್ಯಾಯಮೂರ್ತಿ ಮಿಶ್ರಾ ಅವರು ಬರೆದಿರುವ ತೀರ್ಪಿನಲ್ಲಿ ಮೇಲಿನಂತೆ ಹೇಳಿದ್ದರು. ಇಂದೋರ್ ಅಭಿವೃದ್ಧಿ ಪ್ರಾಧಿಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಮಿಶ್ರಾ ಅವರು ತೀರ್ಪು ಪ್ರಕಟಿಸಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಪಕ್ಷಪಾತದ ಕಾರಣವೊಡ್ಡಿ ನ್ಯಾ. ಮಿಶ್ರಾ ಅವರು ವಿಚಾರಣೆಯಿಂದ ಹಿಂದೆ ಸರಿಯುವಂತೆ ಅರ್ಜಿದಾರರು ಕೋರಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ್ದ ತ್ರಿಸದಸ್ಯ ಪೀಠದಲ್ಲೂ ನ್ಯಾ. ಮಿಶ್ರಾ ಇದ್ದರು. ಇದೇ ಪ್ರಕರಣ ನ್ಯಾ. ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾಗಿತ್ತು.

4. “ಇನ್ನೊಂದು ಮಾತು ಆಡಿದರೂ ನಿಮ್ಮ ವಿರುದ್ಧ ನಿಂದನೆಯ ಆರೋಪವನ್ನು ದಾಖಲಿಸುವುದು ಮಾತ್ರವೇ ಅಲ್ಲ, ನಿಮಗೆ ಶಿಕ್ಷೆಯಾಗುವುದನ್ನೂ ಖಾತ್ರಿಪಡಿಸುತ್ತೇನೆ.”

ನ್ಯಾಯಾಲಯದಲ್ಲಿ ವಕೀಲ ವೃಂದದ ಜೊತೆ ನ್ಯಾ. ಮಿಶ್ರಾ ಅವರು ಜಟಾಪಟಿ ನಡೆಸಿದ ಹಲವು ಉದಾಹರಣೆಗಳಿವೆ. ಈ ಪೈಕಿ ಪ್ರಕರಣವೊಂದರಲ್ಲಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್‌ ಅವರು ನ್ಯಾಯಮೂರ್ತಿಯವರ ಕೋಪಕ್ಕೆ ತುತ್ತಾಗಿದ್ದರು. ಭೂಸ್ವಾಧೀನ ಕಾಯಿದೆ ಹಿನ್ನೆಲೆ ಕುರಿತು ವಿವರಿಸಲು ಗೋಪಾಲ್ ಶಂಕರನಾರಾಯಣನ್ ಅವರು ನ್ಯಾಯಪೀಠದ ಒಪ್ಪಿಗೆ ಕೋರಿದಾಗ, ನೇರ ವಿಚಾರಕ್ಕೆ ಬರುವಂತೆ ಪೀಠವು ಅವರಿಗೆ ಸೂಚಿಸಿತ್ತು. ಬಿಸಿಬಿಸಿ ಚರ್ಚೆ ನಡೆಯುತ್ತಿದ್ದಾಗ ನ್ಯಾ. ಮಿಶ್ರಾ ಅವರು ನ್ಯಾಯಾಂಗ ನಿಂದನೆ ವಿಚಾರ ಪ್ರಸ್ತಾಪಿಸಿ ಗೋಪಾಲ್ ಶಂಕರನಾರಾಯಣನ್ ಅವರನ್ನು ಬೆದರಿಸಿದ್ದರು. ಇದರಿಂದ ಬೇಸರಗೊಂಡ ಶಂಕರನಾರಾಯಣನ್ ಅವರು ವಿಚಾರಣಾ ಕೊಠಡಿಯಿಂದ ಹೊರನಡೆದಿದ್ದರು.

5. “ಪ್ರತಿದಿನವೂ ಇಲ್ಲಿ ಎಷ್ಟೊಂದು ಪ್ರಕರಣಗಳಿರುತ್ತವೆ ಎಂದರೆ, ಒತ್ತಡದಲ್ಲಿ ನಾನು ಏನಾದರೂ ಬಿರುನುಡಿದರೆ, ಅದರ ಹಿಂದೆ ಯಾವುದೇ ಉದ್ದೇಶವಿರುವುದಿಲ್ಲ.”

ಗೋಪಾಲ್ ಶಂಕರನಾರಾಯಣ್ ಅವರ ಜೊತೆ ಮಾತನಾಡುವಾಗ ತಾಳ್ಮೆ ಕಳೆದುಕೊಂಡದ್ದಕ್ಕೆ ಕ್ಷಮೆ ಕೋರುವುದರಲ್ಲಿಯೂ ನ್ಯಾ. ಮಿಶ್ರಾ ತಡ ಮಾಡಲಿಲ್ಲ. ಇದಾದ ಬಳಿಕ ವಕೀಲ ವೃಂದದ ಹಿರಿಯ ವಕೀಲರು ನ್ಯಾ. ಮಿಶ್ರಾ ಅವರ ಕೊಠಡಿಗೆ ತೆರಳಿ ತಮ್ಮ ಆತಂಕ ವ್ಯಕ್ತಪಡಿಸಿದ್ದರು. ಪ್ರಕರಣವು ಸೌಹಾರ್ದಯುತವಾಗಿ ಅಂತ್ಯಕಂಡ ಬಳಿಕ ನ್ಯಾ. ಮಿಶ್ರಾ ಅವರು ಗೋಪಾಲ್ ಶಂಕರನಾರಾಯಣನ್ ಅವರಿಗೆ ಶುಭ ಕೋರಿದ್ದರು.

6. “ನಾನು ನಿಮ್ಮನ್ನು ಕಾಪಾಡಿದ್ದೇನೆ. ಇದನ್ನು ನಾನು ಅತ್ಯಂತ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ಇಲ್ಲದೇ ಹೋಗಿದ್ದಲ್ಲಿ ವಿದೇಶೀ ಸಂಸ್ಥೆಗಳು ನಿಮ್ಮ ಕೆಲಸವನ್ನು ತೆಗೆದುಕೊಂಡಿರುತ್ತಿದ್ದವು.”

ಎಜಿಆರ್ ಪ್ರಕರಣದಲ್ಲಿ ಭಾರ್ತಿ ಏರ್‌ ಟೆಲ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಉದ್ದೇಶಿಸಿ ನ್ಯಾ. ಮಿಶ್ರಾ ಮೇಲಿನಂತೆ ಹೇಳಿದ್ದರು.

7. “ಕೇರಳದಲ್ಲಿರುವ ನಿಮ್ಮ ನ್ಯಾಯಮೂರ್ತಿಗಳಿಗೆ ಹೇಳಿ ಅವರು ಭಾರತದ ಭಾಗ ಎಂದು.”

ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಮಲಂಕಾರ ಚರ್ಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾದ ಆದೇಶ ಹೊರಡಿಸಿದ್ದ ಕೇರಳ ಹೈಕೋರ್ಟ್‌ ಕುರಿತು ನ್ಯಾ. ಮಿಶ್ರಾ ಮೇಲಿನಂತೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದರು. ಮುಕ್ತ ನ್ಯಾಯಾಲಯದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯ ಹೆಸರು ಹಿಡಿದು ನ್ಯಾಯಿಕ ಅಶಿಸ್ತು ಹೆಚ್ಚುತ್ತಿರುವುದರ ಬಗ್ಗೆಯೂ ಅವರ ಮಾತನಾಡಿದ್ದರು.

8. “ಯಾರನ್ನು ಈ ನ್ಯಾಯಾಲಯದಲ್ಲಿ ಬಿಡಲಾಗಿದೆ ಹೇಳಿ? ಪ್ರತಿಯೊಬ್ಬ ನ್ಯಾಯಮೂರ್ತಿಯನ್ನೂ ಗುರಿಯಾಗಿಸಲಾಗಿದೆ. ಒಂದೇ ಬಾಣದಿಂದ ಎಲ್ಲರನ್ನೂ ಸಾಯಿಸಲು ನೀವು ಬಯಸಿದ್ದೀರಿ. ನೀವು ಈ ಸಂಸ್ಥೆಯನ್ನೇ ನಾಶ ಮಾಡುತ್ತಿದ್ದೀರಿ. ಈ ಸಂಸ್ಥೆಯನ್ನೇ ನಾಶ ಮಾಡಿದರೆ ಆಗ ನೀವೂ ಸಹ ಬದುಕಿ ಉಳಿಯಲಾರಿ.”

ಕೇರಳದ ವೈದ್ಯಕೀಯ ಕಾಲೇಜು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮುಕ್ತ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಮಿಶ್ರಾ ಮೇಲಿನಂತೆ ಹೇಳಿದ್ದಾಗಿ ವರದಿಯಾಗಿತ್ತು.

9. “ಕಳೆದ 3-4 ವರ್ಷಗಳಿಂದ ಈ ಸಂಸ್ಥೆಯನ್ನು ನಡೆಸಿಕೊಂಡಿರುವ ರೀತಿ ಹೇಗಿದೆಯೆಂದರೆ ಈ ಸಂಸ್ಥೆಯು ಇನ್ನೇನು ತೀರಿಕೊಳ್ಳಲಿದೆಯೇನೋ ಎನ್ನುವಂತಿದೆ. ಈ ದೇಶದ ಜನತೆಗೆ ಸತ್ಯ ತಿಳಿಯಬೇಕು. ಈ ದೇಶದ ಪ್ರಬಲರು ತಾವೇ ಈ ದೇಶವನ್ನು ನಡೆಸಬಹುದು ಎಂದುಕೊಂಡಿದ್ದಾರೇನು?”.

ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾ. ಮಿಶ್ರಾ ಮೇಲಿನಂತೆ ಹೇಳಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಸಲಹೆ ನೀಡಿದ ಬಳಿಕ ನ್ಯಾ. ಮಿಶ್ರಾ ಮೇಲಿನಂತೆ ಹೇಳಿದರು.

10. “ಪ್ರತಿಯೊಂದು ಪ್ರಕರಣವನ್ನೂ ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ನಿಭಾಯಿಸಿದ್ದೇನೆ.”

ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಕರ್ತವ್ಯವನ್ನು ಉಲ್ಲೇಖಿಸಿ ನ್ಯಾ. ಮಿಶ್ರಾ ಅವರು ಬುಧವಾರ ನಡೆದ ವಿದಾಯ ಭಾಷಣದಲ್ಲಿ ಮೇಲಿನಂತೆ ಹೇಳಿದರು.

Related Stories

No stories found.
Kannada Bar & Bench
kannada.barandbench.com