ವಕ್ಫ್ ತಿದ್ದುಪಡಿ ಕಾಯಿದೆ: ಐದು ವರ್ಷದ ಪರೀಕ್ಷೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶದ ಸುತ್ತ

ಸುಪ್ರೀಂ ಕೋರ್ಟ್‌ ನೀಡಲಿರುವ ಅಂತಿಮ ತೀರ್ಪು ಈಗಿನ ಸಾಂವಿಧಾನಿಕ ಸಂಘರ್ಷಗಳನ್ನು ಸ್ಪಷ್ಟವಾಗಿ ಇಲ್ಲವಾಗಿಸಬೇಕು ಎನ್ನುತ್ತಾರೆ ಲಖನೌ ಮೂಲದ ವಕೀಲ, ಅಂಕಣಕಾರ ಶ್ರೇಷ್ಠ ಶ್ರೀವಾಸ್ತವ.
supreme court and waqf amendment act
supreme court and waqf amendment act
Published on

ವಕ್ಫ್ ತಿದ್ದುಪಡಿ ಕಾಯಿದೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಮಧ್ಯಂತರ ಆದೇಶ ಒಬ್ಬ ವ್ಯಕ್ತಿಯ ಧಾರ್ಮಿಕ ಆಚರಣೆಯ ಸತ್ಯಾಸತ್ಯತೆಯನ್ನು ಪ್ರಭುತ್ವ ಯಾವಾಗ ತನಿಖೆ ನಡೆಸಬಹುದು ಎಂಬ ಸಮಕಾಲೀನ ಸಾಂವಿಧಾನಿಕ ಕಾನೂನಿನ ಗೊಂದಲಮಯ ಪ್ರಶ್ನೆಗೆ ಎಡೆ ಮಾಡಿಕೊಡುತ್ತದೆ.

ವಕ್ಫ್ ಆಸ್ತಿ ಎಂದು ಘೋಷಿಸುವ ಮೊದಲು ವ್ಯಕ್ತಿಗಳು ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಕಡ್ಡಾಯವಾಗಿ ಪಾಲಿಸಿರಬೇಕೆಂಬ ನಿಬಂಧನೆಯನ್ನು ತಡೆಹಿಡಿಯುವ ನ್ಯಾಯಾಲಯದ ತೀರ್ಪು ತಾತ್ಕಾಲಿಕ ಪರಿಹಾರ  ನೀಡುತ್ತದೆಯಾದರೂ  ಈ ತಡೆಯಾಜ್ಞೆ ಹಿಂದಿನ ಕಾರಣವನ್ನು ಎಚ್ಚರಿಕೆಯಿಂದ ಪರೀಕ್ಷಿಸಬೇಕಾದಂತಹ ಆಳವಾದ ಸಾಂವಿಧಾನಿಕ ಉದ್ವಿಗ್ನತೆ ಎದುರಾಗಿದೆ. ತಿದ್ದುಪಡಿ ಮಾಡಿದ ಕಾಯಿದೆಯ ಸೆಕ್ಷನ್ 3(ಆರ್) ನಲ್ಲಿರುವ ವಿವಾದಿತ ನಿಬಂಧನೆ ತಾತ್ಕಾಲಿಕ ಅವಶ್ಯಕತೆಯನ್ನು ಜಾರಿಗೆ ತರುವ ಮೂಲಕ ವಕ್ಫ್ ಅನ್ನು ಐದು ವರ್ಷಗಳ  ಕಾಲ  ಇಸ್ಲಾಮ್‌ ಪಾಲಿಸಿರುವವರು ರೂಪಿಸಬಹುದು ಎಂದು ಮರು ವ್ಯಾಖ್ಯಾನಿಸಲು ಪ್ರಯತ್ನಿಸುತ್ತದೆ. ವಂಚನೆಯ ಮತಾಂತರ ತಡೆಯುವುದು ಶಾಸಕಾಂಗದ ಉದ್ದೇಶವೆಂದು ತೋರುತ್ತದೆಯಾದರೂ, ಇದರ ಸಾಂವಿಧಾನಿಕ ಪರಿಣಾಮಗಳು ವಕ್ಫ್ ಆಸ್ತಿ ಘೋಷಣೆಗೆ ಸಂಬಂಧಿಸಿದಂತೆ ಅದರ ತಕ್ಷಣದ ಅನ್ವಯವನ್ನು ಮೀರಿ ಚಾಚಿಕೊಂಡಿವೆ.

ಆಸ್ತಿ ಹಕ್ಕು ಮತ್ತು ಧಾರ್ಮಿಕ ಆಯ್ಕೆ

ಪ್ರೊಫೆಸರ್ ಫೈಜಾನ್ ಮುಸ್ತಫಾ ಗಮನಸೆಳೆದಂತೆ , ಆಸ್ತಿ ಮಾಲೀಕತ್ವದ ಹಕ್ಕು ಎಂಬುದು ಧಾರ್ಮಿಕ ಕಾನೂನಿಗಿಂತ ಮಿಗಿಲಾದ ಸ್ವತಂತ್ರ ಅಸ್ತಿತ್ವ ಹೊಂದಿದ್ದು ಅದು ಸಾಮಾನ್ಯ ನ್ಯಾಯಕ್ಕೆ ಸಂಬಂಧಿಸಿದ ವಿಚಾರವಾಗಿದೆ.

ಒಬ್ಬ ವ್ಯಕ್ತಿ ತನ್ನ ಧಾರ್ಮಿಕ ರುಜುವಾತುಗಳ ಆಧಾರದ ಮೇಲೆ ತನ್ನ ಆಸ್ತಿಯನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಕುರಿತು ಪ್ರಭುತ್ವ ಷರತ್ತುಗಳನ್ನು ವಿಧಿಸಿದಾಗ, ಅದು ವ್ಯಕ್ಯಿಗತ ಧಾರ್ಮಿಕ ಶ್ರದ್ಧೆ ಮತ್ತು ಆಸ್ತಿ ಹಕ್ಕಿನ ನಡುವೆ ಅಹಿತಕರ ಗೋಡೆಯೊಂದನ್ನು ಕಟ್ಟುತ್ತದೆ. ಇದು ಸೃಷ್ಟಿಸುವ ಪ್ರಾಯೋಗಿಕ ಅಸಂಬದ್ಧತೆಯನ್ನು  ಗಮನಿಸಿ. ವಕ್ಫ್‌ ಆಸ್ತಿ ಘೋಷಿಸಲು ಬಯಸುವ ಆಸ್ತಿ ಮಾಲೀಕರು ಈಗ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಧಾರ್ಮಿಕ ಋಜುವಾತನ್ನು ಸಾಬೀತುಪಡಿಸಬೇಕು. ಇದು ಸಂವಿಧಾನಾತ್ಮಕ ಹಕ್ಕುಗಳು ವ್ಯಕ್ತಿಯ ಧಾರ್ಮಿಕ ನಿಷ್ಠೆಯ ಆಡಳಿತಾತ್ಮಕ ಮೌಲ್ಯಮಾಪನಕ್ಕೆ ಅವಲಂಬಿತವಾಗುವ ಪರಿಸ್ಥಿತಿ  ಸೃಷ್ಟಿಸುತ್ತದೆ, ಹೀಗಾಗಿ ಇದು ಸಂವಿಧಾನದ ತತ್ತ್ವಗಳ ದೃಷ್ಟಿಯಿಂದ ಯೋಚನೆಗೀಡುಮಾಡುವಂತಹ ಸಂಗತಿಯಾಗಿದೆ.

ವಕ್ಫ್ ಆಸ್ತಿ ಘೋಷಣೆಗೆ ಸಂಬಂಧಿಸಿದಂತೆ ಮುಸ್ಲಿಮೇತರರನ್ನು ಹೊರಗಿಡುವುದು ಈ ಸಮಸ್ಯೆಯ ಇನ್ನಷ್ಟು ಸ್ಪಷ್ಟ ವಿವರಣೆ ನೀಡುತ್ತದೆ. ಚರಿತ್ರೆಯಲ್ಲಿ ಇಸ್ಲಾಮ್‌ ದೇಣಿಗೆಗಳಿಗೆ ಮುಸ್ಲಿಮೇತರು ಕೊಡುಗೆ ನೀಡಿದ ಸಾಕ್ಷ್ಯಗಳು ಇದ್ದರೂ ತಿದ್ದುಪಡಿ ಕಾಯಿದೆ ಅಂತಹ ಲೋಕೋಪಕಾರವನ್ನು ಸಂಪೂರ್ಣ ನಿಷೇಧಿಸುತ್ತದೆ.

ಇದೇ ಕಾಯಿದೆ ಮುಸ್ಲಿಮೇತರರು ವಕ್ಫ್‌ ಮಂಡಳಿ ಮತ್ತು ಕೇಂದ್ರ ವಕ್ಫ್‌ ಸಮಿತಿ ಸದಸ್ಯರಾಗಲು ಅನುಮತಿಸುತ್ತದೆಯಾದರೂ ಮುಸ್ಲಿಮೇತರರು ಆಸ್ತಿ ದಾನ ಮಾಡದಂತೆ ನಿಷೇಧ ಹೇರುತ್ತಿರುವುದು ವಿಚಿತ್ರವಾಗಿದೆ. ಮುಸ್ಲಿಮೇತರರು ಅಸ್ತಿತ್ವದಲ್ಲಿರುವ ವಕ್ಫ್‌ಗಳನ್ನು ಮೇಲ್ವಿಚಾರಣೆ ಮಾಡಲು ಅವಕಾಶವಿದ್ದರೂ ಅವರು ವಕ್ಫ್‌ ಆಸ್ತಿ ಘೋಷಣೆ ಮಾಡುವಂತಿಲ್ಲ ಎಂಬ ತರ್ಕ ವಿಲಕ್ಷಣವಾದದುದಾಗಿದೆ. 

ಗೌಪ್ಯತೆ, ಧರ್ಮಶ್ರದ್ಧೆ ಹಾಗೂ ಪುಟ್ಟಸ್ವಾಮಿ ತೀರ್ಪು

ಕೆ ಎಸ್‌ ಪುಟ್ಟಸ್ವಾಮಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ಐದು ವರ್ಷದ ಷರತ್ತು ವ್ಯತಿರಿಕ್ತವಾಗಿದೆ. ಧಾರ್ಮಿಕ ನಂಬಿಕೆಗಳು ರಕ್ಷಿತ ಗೌಪ್ಯತೆಯ ವ್ಯಾಪ್ತಿಗೆ ಸೇರಿವೆ ಮತ್ತು ಸಂವಿಧಾನದ 25ನೇ ವಿಧಿಯಡಿ ಒದಗಿಸಲಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ವ್ಯಕ್ತಿಗೆ ತನ್ನ ಧರ್ಮ ಆಯ್ಕೆ  ಮಾಡಿಕೊಳ್ಳುವ ಮತ್ತು ಆ ಆಯ್ಕೆಯನ್ನು ಲೋಕಕ್ಕೆ ತಿಳಿಸುವ ಅಥವಾ ತಿಳಿಸದೇ ಇರುವ ಎರಡೂ ಸ್ವಾತಂತ್ರ್ಯ ಇದೆ ಎಂದು ಈ ತೀರ್ಪು ಹೇಳುತ್ತದೆ.

"ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು  ಚಲಾಯಿಸುವುದು ಸಂಪೂರ್ಣ ವೈಯಕ್ತಿಕವಾದುದು" ಎಂಬ ನ್ಯಾಯಾಲಯದ ಅವಲೋಕನ ಬಹುಶಃ ಅತಿ ಹೆಚ್ಚು ಪ್ರಸ್ತುತವಾಗಿದೆ. ವಕ್ಫ್ ತಿದ್ದುಪಡಿ ಕಾಯಿದೆಯು ಧಾರ್ಮಿಕ ಆಚರಣೆಯನ್ನು ವೈಯಕ್ತಿಕ ಆಯ್ಕೆಯ ಬದಲು ಪ್ರಭುತ್ವದ ಪರಿಶೀಲನೆಯ ವಿಷಯವನ್ನಾಗಿ ಮಾಡುವ ಮೂಲಕ ಈ ತೀರ್ಪನ್ನು ತಲೆಕೆಳಗಾಗಿಸುತ್ತದೆ. ಪ್ರಭುತ್ವವೇ ಮುಂದೆ ನಿಂತು ನಿಜವಾದ ಧರ್ಮಾನುಯಾಯಿ ಯಾರು ಎಂದು ನಿರ್ಧರಿಸುವಂತಾದರೆ ಧಾರ್ಮಿಕ ಕೇಂದ್ರಗಳು ಪ್ರಭುತ್ವದ ಹಸ್ತಕ್ಷೇಪ ಇಲ್ಲದೆ ನಿರ್ಧಾರ ತೆಗೆದುಕೊಳ್ಳಲು ಇರುವ ಸಾಂವಿಧಾನಿಕ ರಕ್ಷಣೆ ಅರ್ಥಹೀನವಾಗುತ್ತದೆ.

ಧಾರ್ಮಿಕ ಋಜುವಾತಿನ ಪ್ರಮಾಣೀಕರಣ

ಐದು ವರ್ಷದ ಷರತ್ತು ಪ್ರಭುತ್ವವನ್ನು ಧಾರ್ಮಿಕ ಋಜುವಾತು ನಿರ್ಣಯಿಸುವ ಅಸಹಜ ಸ್ಥಿತಿಗೆ ಕರೆದೊಯ್ಯುತ್ತದೆ. ಕಾನೂನಿನಲ್ಲಿರುವ ʼಇಸ್ಲಾಂ ಧರ್ಮವನ್ನು ಒಪ್ಪಿಕೊಂಡವರುʼ ಎಂಬ ಶಬ್ದಕ್ಕಿಂತ ಭಿನ್ನವಾದ ʼಇಸ್ಮಾಂ ಅಭ್ಯಾಸ ಮಾಡುವವರುʼ ಎಂಬ ಪದವನ್ನು ನ್ಯಾಯಾಲಯ ಬಳಸಿದರೆ ಅದು ಅಜಾಗರೂಕತೆಯಿಂದ ಸರ್ಕಾರಿ ಅಧಿಕಾರಿಗಳಿಗೆ ಧಾರ್ಮಿಕ ಆಚರಣೆ ರೂಪಿಸುವ ಅಧಿಕಾರವನ್ನು ಅಜಾಗರೂಕತೆಯಿಂದ ನಡುತ್ತದೆ. ಇದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದುದು.

ಅಲ್ಲದೆ ಪ್ರಾಯೋಗಿಕ ಪರಿಣಾಮಗಳನ್ನು ಪರಿಗಣಿಸುವುದು ಯೋಗ್ಯವಾಗಿದೆ. ನಿಯಮಿತವಾಗಿ ಪ್ರಾರ್ಥನೆ ಮಾಡದ ಮುಸ್ಲಿಮರು,  ಬಡ್ಡಿ ವ್ಯವಹಾರದಲ್ಲಿ ತೊಡಗಿರುವವರು ಅಥವಾ ಎಲ್ಲಾ ಧಾರ್ಮಿಕ ಕಟ್ಟುಪಾಡುಗಳನ್ನು ಪಾಲಿಸದವರು ವಕ್ಫ್‌ ಆಸ್ತಿ ಘೋಷಣೆ ಮಾಡಿದಾಗ ಅವರು ಧರ್ಮಾಚರಣೆಯಲ್ಲಿ ತೊಡಗಿಲ್ಲ ಎಂದು ಪರಿಗಣಿತರಾಗುತ್ತಾರೆಯೇ? ಇಂತಹ ತೀರ್ಮಾನಗಳು ಪ್ರಭುತ್ವದ ಅಧಿಕಾರಿಗಳು ಭಕ್ತಿ ಅಳೆಯಲು ಅನುವು ಮಾಡಿಕೊಟ್ಟು ಎಲ್ಲಾ ಧರ್ಮಗಳು ಸಮಾನ ಎಂದು ಪರಿಗಣಿಸುವ ಸಾಂವಿಧಾನಿಕ ಬದ್ಧತೆಗೆ ವ್ಯತಿರಿಕ್ತವಾಗುತ್ತದೆ.

“ಕಾನೂನು ಬಾಧ್ಯತೆಯನ್ನು ತಪ್ಪಿಸಲು ಕುಶಲ ತಂತ್ರಗಳನ್ನು ತಡೆಯುವುದು” ಎಂಬ ತತ್ವವನ್ನು ನ್ಯಾಯಾಲಯ ಉಲ್ಲೇಖಿಸಿದ್ದು ಪ್ರಾಯೋಗಿಕವಾಗಿ ಅರ್ಥಪೂರ್ಣವಾಗಿದ್ದರೂ, ಅದು ನಿರೀಕ್ಷಿಸಬಹುದಾದ ಸಂವಿಧಾನಾತ್ಮಕ ಕಾಠಿಣ್ಯತೆ ಹೊಂದಿಲ್ಲ. ಐದು ವರ್ಷಗಳ ಪರೀಕ್ಷೆ ಅನ್ವಯವಾಗದೆ ಹಿಂದೆಲ್ಲಾ ವಕ್ಫ್‌ ದುರುಪಯೋಗ ನಡೆದಿದೆಯಾದರೂ ಧಾರ್ಮಿಕ ಆಚರಣೆಯನ್ನು ಪ್ರಭುತ್ವ ಕಡ್ಡಾಯವಾಗಿ ಪರಿಶೀಲಿಸಲು ಹೊರಡುವುದು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂದು ತೋರುತ್ತದೆ. ಇದಲ್ಲದೆ, ಈ ನಿರ್ದಿಷ್ಟ ರೀತಿಯ ಪ್ರಭುತ್ವದ ವಿಚಾರಣೆಯನ್ನು ಸಾಂವಿಧಾನಿಕವಾಗಿ ಅನುಮತಿಸಲಾಗಿದೆ ಎಂದು ನ್ಯಾಯಾಲಯ ತಾರ್ಕಿಕವಾಗಿ ಪರಿಗಣಿಸಲು ಸಾಧ್ಯವಾಗಿಲ್ಲ.

ನಿಯಮಗಳನ್ನು ರೂಪಿಸುವವರೆಗೆ ಕಾಯೋಣ

ಕಾರ್ಯವಿಧಾನದ ನಿಯಮಗಳನ್ನು ರೂಪಿಸುವವರೆಗೆ ಸೆಕ್ಷನ್‌  ತಡೆಹಿಡಿದು ಮಧ್ಯಂತರ ಆದೇಶ ನೀಡಿರುವುದು ಸಮಕಾಲೀನ ನ್ಯಾಯಶಾಸ್ತ್ರದಲ್ಲಿ ಕಂಡುಬರುವ ಸಾಂವಿಧಾನಿಕ ಉಲ್ಲಂಘನೆಗಳನ್ನು ಕೇವಲ ಪ್ರಕ್ರಿಯಾತ್ಮಕ ಸಮಸ್ಯೆ ಇನ್ನುವ ಆತಂಕಕಾರಿ ಪ್ರವೃತ್ತಿಯನ್ನು ಹೇಳುತ್ತದೆ. 

ಈ ದೃಷ್ಟಿಕೋನ ಆಳವಾದ ಮೂಲಭೂತ ಸಮಸ್ಯೆಯನ್ನು ಕಡೆಗಣಿಸುತ್ತದೆ. ಪ್ರಭುತ್ವವು ಧಾರ್ಮಿಕ ಆಚರಣೆಯನ್ನು ಪರಿಶೀಲಿಸಲು ನ್ಯಾಯಸಮ್ಮತ ಪ್ರಕ್ರಿಯೆಯನ್ನು ರೂಪಿಸಬಹುದೇ ಅಥವಾ ಇಲ್ಲವೆ ಎಂಬುದು ಮುಖ್ಯ ಪ್ರಶ್ನೆಯಲ್ಲ. ಬದಲಿಗೆ ಅಂತಹ ಪರಿಶೀಲನೆ ನಡೆಯಲೇಬೇಕೆ ಎಂಬುದು ಪರಿಗಣಿಸಬೇಕಾದ ಮುಖ್ಯ ಸಂಗತಿಯಾಗಿದೆ.

ನ್ಯಾಯಾಲಯ ನಿಯಂತ್ರಿತ ವ್ಯಕ್ತಿಗಳು ಕೇವಲ ಟ್ರಸ್ಟ್ ರಚಿಸಬಹುದು ಅಥವಾ ಇತರ ರೀತಿಯಲ್ಲಿ ದೇಣಿಗೆ ನೀಡಬಹುದು ಎಂದಿರುವುದು ಸಮಂಜಸವಾಗಿದ್ದರೂ, ಇದು ಧಾರ್ಮಿಕ ಸ್ವಾತಂತ್ರ್ಯದ ಆಳವಾದ ಅರ್ಥವನ್ನು ಹೇಳುವುದಿಲ್ಲ. ಶಾಶ್ವತತೆ ಮತ್ತು ದೈವಿಕ ಮಾಲಿಕತ್ವದ ವಿಶಿಷ್ಟ ಗುಣಲಕ್ಷಣಗಳನ್ನು ವಕ್ಫ್‌ ಬಿಂಬಿಸಲಿದ್ದು ಇದು  ಬೇರೆ ಕಾನೂನಿನ ಮೂಲಕ ಪುನರಾವರ್ತಿಸಲಾಗದ ಧಾರ್ಮಿಕ ಅಭಿವ್ಯಕ್ತಿಯ ನಿರ್ದಿಷ್ಟ ರೂಪವಾಗಿದೆ.

ಪ್ರಭುತ್ವವು ಧಾರ್ಮಿಕ ಅಸ್ಮಿತೆಯನ್ನು ಪ್ರಮಾಣೀಕರಿಸಲು ಅಥವಾ ಪರಿಶೀಲಿಸಲು ಯತ್ನಿಸಿದಾಗ,  ಅದು ಧಾರ್ಮಿಕ ಮಾನ್ಯತೆಯ ಏಣಿ ಶ್ರೇಣಿಯನ್ನು ಸೃಷ್ಟಿಸುವ ಅಪಾಯ ಎದುರಾಗಿ ಕಾನೂನಿನೆದುರು ಎಲ್ಲರೂ ಸಮಾನರು ಎಂಬ ಹಕ್ಕನ್ನು ದುರ್ಬಲಗೊಳಿಸುತ್ತದೆ.

ಎಲ್ಲಿಗೆ ಕೊಂಡೊಯ್ಯಲಿದೆ ಇದು?

ಸಾಂವಿಧಾನಿಕ ಪ್ರಜಾಪ್ರಭುತ್ವವು ಅರ್ಥವನ್ನು ಉಳಿಸಿಕೊಳ್ಳಬೇಕಾದರೆ ಪುಟ್ಟಸ್ವಾಮಿ ಪ್ರಕರಣದ ತೀರ್ಪು ಹೇಳಿರುವಂತೆ ಮನುಷ್ಯರ ಕೆಲವು ಅನುಭವಗಳು ಪ್ರಭುತ್ವದ ಪರಿಶೀಲನೆಗೆ ಒಳಗಾಗದಂತೆ ಉಳಿಯಬೇಕು. ಹೀಗಾದಾಗ ಮಾತ್ರ ಸಾಂವಿಧಾನಿಕ ಪ್ರಜಾಪ್ರಭುತ್ವ ಅರ್ಥಪೂರ್ಣಗೊಂಡು ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ರಕ್ಷಿತ ಕ್ಷೇತ್ರದೊಳಗೆ ಬರುತ್ತವೆ. ಧಾರ್ಮಿಕ ಗೌಪ್ಯತೆ ರಕ್ಷಿಸುವ ಬದಲು ಪ್ರಭುತ್ವ ಪರಿಶೀಲನೆಗೆ ಅವಕಾಶ ನೀಡುವ ನ್ಯಾಯಾಲಯದ ತೀರ್ಪು ಹಿಮ್ಮುಖ ಚಲನೆಯಾಗಿದ್ದು ಸಾಂವಿಧಾನಿಕ ಚಿಂತನೆಯಲ್ಲಿನ ಕಳವಳಕಾರಿ ಬದಲಾವಣೆಯನ್ನು ಹೇಳುತ್ತದೆ. ವಂಚನೆ ಬಗ್ಗೆ ಕಾನೂನುಬದ್ಧ ಕಳಕಳಿ ಇರಬೇಕಾದರೂ ಅವುಗಳು ವ್ಯವಹಾರ ಒಪ್ಪಂದದ ಮೇಲೆ ಗಮನಹರಿಸಬೇಕೆ ವಿನಾ ಧಾರ್ಮಿಕ ದೃಢತೆಯನ್ನು ಪರಿಶೀಲಿಸಲು ಹೊರಡಬಾರದು.

ಸುಪ್ರೀಂ ಕೋರ್ಟ್‌ ನೀಡಲಿರುವ ಅಂತಿಮ ತೀರ್ಪು ಈ ಸಾಂವಿಧಾನಿಕ ಸಂಘರ್ಷಗಳನ್ನು ಸ್ಪಷ್ಟವಾಗಿ ಇಲ್ಲವಾಗಿಸಬೇಕು. ಆತ್ಮಸಾಕ್ಷಿಯ ಬೇರೆ ವಿಚಾರಗಳಂತೆ ಧಾರ್ಮಿಕ ಸ್ವಾತಂತ್ರ್ಯವನ್ನು ದುರ್ಬಲಗೊಳಿಸದೆ ಪ್ರಭುತ್ವದ ಪರಿಶೀಲನೆಗೆ ಧಾರ್ಮಿಕ ಋಜುವಾತನ್ನು ಒಳಪಡಿಸುವಂತಿಲ್ಲ ಎಂಬ ಹೆಚ್ಚು ದೃಢವಾದ ನಿಲುವು ತಳೆಯಬೇಕಿದೆ.

ಸಾಂವಿಧಾನಿಕ ತತ್ವಗಳನ್ನು ಸಂರಕ್ಷಿಸುತ್ತಾ ಕಾನೂನುಬದ್ಧ ಪ್ರಭುತ್ವ ಹಿತಾಸಕ್ತಿಗಳನ್ನು ರಕ್ಷಿಸುವ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು ಈಗಿರುವ ಸವಾಲು. ಇದಕ್ಕೆ ಮಧ್ಯಂತರ ಆದೇಶವನ್ನು ನಿರೂಪಿಸುವ ಕಾರ್ಯವಿಧಾನದ ಚಿಂತನೆಯನ್ನು ಮೀರಿದ ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಎಂಬುದು ನಿಜವಾಗಿಯೂ ಏನು ಎಂಬುದರ ಕುರಿತು ಹೆಚ್ಚು ವಸ್ತುನಿಷ್ಠವಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಮಧ್ಯಂತರ ಆದೇಶ  ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆಯಾದರೂ, ಧಾರ್ಮಿಕ ಸ್ವಾತಂತ್ರ್ಯ, ಆಸ್ತಿ ಹಕ್ಕುಗಳು ಮತ್ತು ಪ್ರಭುತ್ವ ತಟಸ್ಥತೆಯ ಬಗ್ಗೆ   ನಿರಂತರ ನ್ಯಾಯಿಕ ಪರಿಶೀಲನೆಯ ಅಗತ್ಯವಿದೆ. ನ್ಯಾಯಾಲಯದ ಅಂತಿಮ ತೀರ್ಪು ವಕ್ಫ್ ಆಸ್ತಿ ಮೇಲಷ್ಟೇ ಅಲ್ಲದೆ, ಸಮಕಾಲೀನ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಅರ್ಥವನ್ನು ರೂಪಿಸುವುದರಲ್ಲಿ ಮುಖ್ಯ ಪರಿಣಾಮ ಬೀರಲಿದೆ.

[ಕನ್ನಡಕ್ಕೆ: ರಮೇಶ್‌ ಡಿ.ಕೆ.]

Kannada Bar & Bench
kannada.barandbench.com