ಸಿನಿಮಾ ನಾಯಕನ ನಟನೆಯ ಚಮತ್ಕಾರದೊಳಗೆ ಮುಳುಗಿ ಎರಡು ಗಂಟೆ ಕಳೆದುಹೋಗುತ್ತಿದ್ದೆ. ಹಾಸ್ಯಗಾರನ ಅಭಿನಯ ಒಂದು ಗಂಟೆಗೂ ಹೆಚ್ಚು ಕಾಲ ನಗು ತರಿಸುತ್ತಿತ್ತು. ನನ್ನ ಆಲೋಚನೆಗಳನ್ನು ಬೆಳಗುತ್ತಿದ್ದ ಪುಸ್ತಕಗಳನ್ನು ಓದುವುದರಲ್ಲಿ ಕೂಡ ಮಗ್ನನಾಗಿರುತ್ತಿದ್ದೆ. ಹಾಡೊಂದು ಆವರಿಸಿಕೊಳ್ಳುತ್ತಿತ್ತು. ಅದರ ಗಾಯಕ ನನ್ನ ಕಣ್ಣು ಆರ್ದ್ರಗೊಳ್ಳುವಂತೆ ಮಾಡುತ್ತಿದ್ದ. ಕವಿತೆಯೊಂದು ನನ್ನ ಒಳಗನ್ನು ಬಿಚ್ಚಿಡುತ್ತಿತ್ತು, ಜೊತೆಗೆ ನನ್ನ ಅಸ್ತಿತ್ವದ ಕುರಿತಂತೆಯೇ ಆಲೋಚನೆಗೆ ಹಚ್ಚುತ್ತಿತ್ತು...
ಆ ಉತ್ಸಾಹದ ಅನುಭವಗಳನ್ನು ನೆನೆಪು ಮಾಡಿಕೊಳ್ಳುತ್ತಿರುವಾಗ, ನನ್ನ ಮನದೊಳಗೆ ಎದ್ದ ಒಂದು ಭಾವನೆ ಎಂದರೆ ನನ್ನಲ್ಲಿ ಆ ಭಾವನೆಗಳನ್ನುಂಟು ಮಾಡಿದ ಆ ನಟ, ಹಾಸ್ಯನಟ, ಬರಹಗಾರ, ಕವಿ, ಗಾಯಕ ಇವರಾರೂ ಜೀವಂತವಿಲ್ಲವೆನ್ನುವುದು . ನಿಜವಾಗಿಯೂ ಬಹುದಿನಗಳ ಹಿಂದೆಯೇ ಅವರೆಲ್ಲರೂ ನಮ್ಮನ್ನಗಲಿದ್ದಾರೆ.
ನಮ್ಮ ಮೇಲೆ ಕೋವಿಡ್-19 ರಾಚಿದ ಭೀಕರ ಸಾಮಾಜಿಕ ಕತ್ತಲೆ, ನಾವು ಈ ಹಿಂದೆ ಒಗ್ಗಿಕೊಂಡಿದ್ದ ಅಜಾಗರೂಕ ಸ್ವಾತಂತ್ರ್ಯದ ವಿಸ್ತಾರಮಯ ಜೀವನಕ್ಕೆ ಕೂಡ ಕೊಕ್ಕೆ ಹಾಕಿದೆ. ಕೆಲ ಗೊತ್ತುಮಾಡಿದ ಮಿತಿಗಳಿಗೆ ನಮ್ಮ ಜೀವನವನ್ನು ಮರು ಹೊಂದಿಸಿಕೊಳ್ಳುವಂತೆ ವೈರಸ್ ಒತ್ತಾಯಿಸುತ್ತಿದೆ. ನಮ್ಮಲ್ಲಿ ಬಹುತೇಕರು ಕಳೆದ ಆರು ತಿಂಗಳಿನಿಂದ ಈ ಅನುಭವಕ್ಕೆ ಒಳಗಾಗಿದ್ದೇವೆ, ನಮ್ಮ ಮನಸ್ಸು ಹಾಗೂ ದೇಹ ಇನ್ನೂ ಇದಕ್ಕೆ ಒಗ್ಗಿಕೊಳ್ಳಬೇಕು. ಬಹುಶಃ ಇದು ಕ್ಷಣಿಕ ಇರಬೇಕು. ನಾವು ಸಾಂಕ್ರಾಮಿಕ ರೋಗ ತಂದೊಡ್ಡಿದ ನಿರ್ಬಂಧ ಮತ್ತು ಸವಾಲುಗಳನ್ನು ಕಿತ್ತೆಸೆದು ಅರಳಿಕೊಳ್ಳುತ್ತೇವೆ.
ಕಳೆದ ಆರು ತಿಂಗಳುಗಳಲ್ಲಿ ನಾನು ಅಳವಡಿಸಿಕೊಂಡ ನಿತ್ಯದ ದಿನಚರಿಯನ್ನು ಮೆಲುಕು ಹಾಕಿದೆ. ವರ್ಚುವಲ್ ಮಾಧ್ಯಮದ ಮೂಲಕವೇ ಹೊರಜಗತ್ತಿನೊಂದಿಗೆ ನನ್ನ ಸಂವಾದ ನಡೆಯುತ್ತಿದೆ ಎಂಬ ಜುಗುಪ್ಸೆ ಹುಟ್ಟಿಸುವ ಸಂಗತಿ ಅರಿವಿಗೆ ಬಂತು. ನಾನು ನಡೆದಾಡುವ, ವ್ಯಾಯಾಮ ಮಾಡುವ ಟೆರೇಸು; ಓದುವ, ಬರೆಯುವ, ಕೋರ್ಟಿನ ಕಲಾಪಗಳಲ್ಲಿ ತೊಡಗುವ ಕಛೇರಿ ಕೊಠಡಿ; ವಿಶ್ರಾಂತಿ ತೆಗೆದುಕೊಳ್ಳುವ ಬೆಡ್ ರೂಮು ಮತ್ತು ಊಟ ಮಾಡುವ, ಟಿವಿ ನೋಡುವ ನನ್ನ ಡೈನಿಂಗ್ ರೂಮು ಮತ್ತು ನಡುಮನೆ- ಇಲ್ಲಿಗೆ ಮಾತ್ರ ನನ್ನ ಕಾಲುಗಳ ಚಲನೆ ಸೀಮಿತವಾಗಿದೆ.
ಫೋನ್, ಐಪ್ಯಾಡ್ ಮತ್ತು ಲ್ಯಾಪ್‌ಟಾಪ್ ಮೂಲಕ ಮಾತ್ರ ಬಾಹ್ಯ ಪ್ರಪಂಚದೊಂದಿಗೆ ನನ್ನ ಸಂವಾದ. ಮೊದಲ ಕೆಲವು ದಿನಗಳ ಕಾಲ ನಾನು ಅಸಹಾಯಕ ಸ್ಥಿತಿಯಲ್ಲಿದ್ದೆ ಮತ್ತು ದಿಗ್ಭ್ರಮೆಗೊಳಗಾಗಿದ್ದೆ. ಇಷ್ಟಾದರೂ ನನ್ನ ಮನಸ್ಸು ಆಶ್ಚರ್ಯಕರ ರೀತಿಯಲ್ಲಿ ವಾಸ್ತವಕ್ಕೆ ಅನುಗುಣವಾಗಿ ಮರುರೂಪುಗೊಳ್ಳತೊಡಗಿತು. ಆದರೆ ಈ ನಿರ್ಬಂಧಿತ ಸ್ಥಿತಿ ಅನಿರ್ದಿಷ್ಟಾವಧಿಯವರೆಗೆ ಮುಂದುವರೆದು ವರ್ಚುವಲ್ ಮಾಧ್ಯಮಕ್ಕೆ ಆದ್ಯತೆ ನೀಡುವಂತೆ ನನ್ನ ಪಾತ್ರ ಬದಲಾದರೇನು ಗತಿ ಎಂಬ ಭೀತಿ ನಡುಕ ಹುಟ್ಟಿಸುತ್ತಿದೆ.
ವಿಶಾಲವಾದ ನ್ಯಾಯಾಲಯ ಮತ್ತದರ ಕಲಾಪಗಳು, ವಕೀಲರು, ಕೋರ್ಟ್ ಅಧಿಕಾರಿಗಳು, ವೈಯಕ್ತಿಕ ಸಹಾಯಕರು, ಸ್ಟೆನೋಗಳೆಲ್ಲಾ ಕಣ್ಮರೆಯಾಗಿದ್ದಾರೆ. ಅವರೀಗ ಚಿಕ್ಕ ಪರದೆಗೆ ಸೀಮಿತವಾಗಿದ್ದಾರೆ. ಅರ್ಜಿಗಳು, ದಾಖಲೆಗಳು ಹಾಗೂ ಟಿಪ್ಪಣಿಗಳು ಡಿಜಿಟಲ್ ರೂಪದಲ್ಲಿ ವಿನಿಮಯವಾಗುತ್ತಿವೆ. ಕಾಯ್ದಿರಿಸಿದ ತೀರ್ಪುಗಳನ್ನು ಟೈಪ್ ಮಾಡುವ ಸಲುವಾಗಿ ಫೋನ್ ಮೂಲಕ ಡಿಕ್ಟೇಟ್ ಮಾಡಲಾಗುತ್ತಿದೆ. ಅದನ್ನೇ ಡಿಜಿಟಲ್ ರೂಪದಲ್ಲಿ ಪಡೆಯಲಾಗುತ್ತಿದೆ. ಕೆಲವೊಮ್ಮೆ, ಆದೇಶಗಳನ್ನು ರೆಕಾರ್ಡ್ ಮಾಡಿ ವಾಟ್ಸಪ್ ಮುಖಾಂತರ ಸ್ಟೆನೋಗಳಿಗೆ ಕಳುಹಿಸಲಾಗುತ್ತಿದೆ. ತೆರೆಯ ಮೇಲೆ ಕಾಣಿಸಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ತಮಿಳುನಾಡಿನ ಬೇರೆ ಬೇರೆ ಜಿಲ್ಲೆಗಳಿಂದ ನ್ಯಾಯಾಲಯವನ್ನುದ್ದೇಶಿಸಿ ಮಾತನಾಡುತ್ತಾರೆ. ಇಡೀ ಕಲಾಪ ಇದೀಗ ವರ್ಚುವಲ್ ಪರದೆಯ ಮಟ್ಟಕ್ಕೆ ಇಳಿದಿದೆ.
ದಿನದ ಕೊನೆಗೆ, ನೀವು ಲ್ಯಾಪ್‌ಟಾಪ್, ಐಪ್ಯಾಡ್ ಮತ್ತು ಫೋನುಗಳನ್ನು ಮುಚ್ಚಿಟ್ಟಂತೆ ಇಡೀ ಲೋಕದಿಂದ ಅನ್-ಪ್ಲಗ್ ಆಗುತ್ತೀರಿ. ಜೊತೆಗೆ ಒಂದು ಚಿಕ್ಕ ಕಚೇರಿ ಕೋಣೆಯಲ್ಲಿ ಇಷ್ಟೆಲ್ಲಾ ನಡೆಯಿತೇ ಎಂದು ಅಂದುಕೊಳ್ಳುತ್ತೀರಿ. ಗುಣಮಟ್ಟದ ಶಿಕ್ಷಣ ಒದಗಿಸಲು, ಪ್ರಯಾಣಕ್ಕೆ ಸಂಬಂಧಿಸಿದಂತೆ ಸಮಯ ಮತ್ತು ಹಣ ಉಳಿಸಲು ವರ್ಚುವಲ್ ತರಗತಿಗಳು ಮತ್ತು ಸಭೆಗಳು ಸೇತುವಾಗಿ ನಿಂತವು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪೂರ್ಣ ಪ್ರಮಾಣದ ನ್ಯಾಯಾಲಯ ಕಲಾಪಗಳು ವರ್ಚುವಲ್ ಜಗತ್ತಿನ ಹಾದಿ ಹಿಡಿಯುತ್ತವೆ ಎಂದು ಯಾರೂ ಅಂದುಕೊಂಡಿರಲಿಲ್ಲ.
ವೆಬಿನಾರ್‌ಗಳು ಮತ್ತು ವರ್ಚುವಲ್ ಮಾಧ್ಯಮಗಳ ಯುಗವನ್ನು ನಮ್ಮ ಮೇಲೆ ಹರವಿಡಲಾಗಿದೆ. ಜ್ಞಾನ ಹಂಚಲು ಈ ವೆಬ್‌ನಾರ್‌ಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸುತ್ತಿದ್ದೇವೆ. ನಾನು ಡಿಜಿಟಲ್ ಮಾಧ್ಯಮದಲ್ಲಿ ಸಾವಿರಾರು ಜನರೊಂದಿಗೆ ಸಂವಹನ, ಜ್ಞಾನ, ವಿಚಾರಗಳು ಮತ್ತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುಬಹುದಾಗಿತ್ತು ಎಂದೆನಿಸುತ್ತದೆ. ನಮ್ಮ ಸ್ವಂತ ಮುಖವೋ ಅಥವಾ ಎದುರಿಗೆ ಪರದೆ ಮೇಲೆ ಮೂಡುತ್ತಿರುವವರ ಮುಖವನ್ನೋ ನೋಡುವ ಮೂಲಕ ನನ್ನ ಭಾವನೆಗಳನ್ನು ಮಂಡಿಸಲು, ಪ್ರತಿಕ್ರಿಯಿಸಲು, ಹದಗೊಳಿಸಲು ಈಗ ಕಲಿತಿದ್ದೇನೆ. ಯಾರೋ ನಮ್ಮ ಮಾತುಗಳನ್ನು ಆಲಿಸುತ್ತಿದ್ದಾರೆ ಎಂಬ ನಂಬಿಕೆಯ ಮೇಲೆ ಇನ್ನಾರೋ ಮಾತಿಗಿಳಿಯುತ್ತಾರೆ. ಮಾತುಕತೆಗಳು ಯಾವತ್ತೂ ಇದಕ್ಕಿಂತ ಹೆಚ್ಚು ಅಮಾನುಷವಾಗಲು ಸಾಧ್ಯವಿಲ್ಲವೇನೋ!
ಮಾನವ ಜನಾಂಗದ ಇತಿಹಾಸ ಎಂಬುದು ಮನುಷ್ಯರನ್ನು ಅತೀತ ಪ್ರಭೇದವಾಗಿ ಗುರುತಿಸುವ ಸಂಸ್ಕೃತಿ ಮತ್ತು ನಾಗರಿಕತೆಗಳ ಸಂಘರ್ಷಗಳು, ರೂಪಾಂತರಗಳು ಹಾಗೂ ಏಳಿಗೆಯ ಕಥನ. ಸಾವಿರಾರು ವರ್ಷಗಳ ಹಿಂದೆ ಈ ಹೊಂದಾಣಿಕೆಯ ರೂಪಾಂತರದ ವಿಕಸನ ನಡೆದಿದೆ. ಈಗ, ಪ್ರತಿಯೊಬ್ಬ ವ್ಯಕ್ತಿಯೂ ವರ್ಚುವಲ್ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ಮುಳುಗಿಹೋಗಿದ್ದಾನೆ. ಈ ವರ್ಚುವಲ್ ಬದುಕು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ? ಕಳೆದ ಎರಡು ದಶಕಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಜೀವನದ ದೃಷ್ಟಿಕೋನವನ್ನು ವೇಗವಾಗಿ ಬದಲಿಸಿದೆ. ಕಳೆದ ಆರು ತಿಂಗಳ ನನ್ನ ಅನುಭವದಲ್ಲೇ ಹೇಳುವುದಾದರೆ ಒಂದಿಡೀ ವ್ಯವಸ್ಥೆಯನ್ನು ಸಣ್ಣ ಪರದೆಯ ಮೂಲಕ ನಡೆಸಲು ಸಾಧ್ಯವಿದೆ. ಯಾರದೋ ಮನೆಯ ಒಂದು ಸಣ್ಣ ಕೊಠಡಿಯೊಳಗೆ ಕುಳಿತು ಇಡೀ ಪ್ರಪಂಚದ ಜೊತೆ ಸಂವಾದಿಸುವ ಅವಕಾಶವಿದೆ. ನಮ್ಮ ಮಿದುಳುಗಳು ವರ್ಚುವಲ್ ಜಗತ್ತು ಮತ್ತು ವರ್ಚುವಲ್ ಅನುಭವಗಳನ್ನು ಸ್ವೀಕರಿಸುತ್ತಾ ಹೋದರೆ, ಅದು ಭೌತಿಕ ಪ್ರಪಂಚದೊಂದಿಗಿನ ನಮ್ಮ ಒಡನಾಟ ಮತ್ತು ನಿಜ ಜೀವನದ ಅನುಭವಗಳ ಮೇಲೆ ಎಂತಹ ಪರಿಣಾಮ ಬೀರುತ್ತದೆ? ಕಾಲವೇ ಉತ್ತರಿಸಬೇಕು.
ಆರಂಭದಲ್ಲಿ ಹೇಳಿದೆನಲ್ಲಾ ಅಲ್ಲಿಗೆ ಈಗ ವಾಪಸ್ ಹೋಗೋಣ. ಈಗಿನ ವರ್ಚುವಲ್ ಜಗತ್ತು ನಮ್ಮ ಮೇಲೆ ದಾಂಗುಡಿಯಿಡುತ್ತಿದೆ. ಭೌತಿಕ ಉಪಸ್ಥಿತಿ ಯಾವಾಗಲೂ ಅನಿವಾರ್ಯವಲ್ಲ ಎಂಬುದಕ್ಕೂ ಕಾರಣವಿದೆ. ಕಾಲ ಮತ್ತು ಅವಕಾಶವನ್ನು (Time and Space) ಬಳಸಿಕೊಂಡು ವ್ಯಕ್ತಿಯ ಭೌತಿಕ ಉಪಸ್ಥಿತಿ ಇರದೇ ಇದ್ದರೂ ಭಾವಾಭಿನಯ, ಹಾಸ್ಯ ಪ್ರದರ್ಶನ, ಪ್ರಕಟಿತ ಬರಹ ಅಥವಾ ಸ್ಫೂರ್ತಿ ಉಕ್ಕಿಸುವ ಗೀತ-ಸಂಯೋಜನೆ ಇಲ್ಲವೇ ಹಾಡಿನಿಂದ ತನ್ನ ಗುರುತುಗಳನ್ನು ಉಳಿಸಬಹುದು. ಆ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಪ್ರಭಾವಿಸಲು ಸಾಧ್ಯವಿದೆ ಮತ್ತು ಅದಕ್ಕೆ ಆತ ಸಮರ್ಥನಾಗಿರುತ್ತಾನೆ ಕೂಡ. ವರ್ಚುವಲ್ ಪ್ರಪಂಚ ನಮ್ಮ ಸುತ್ತಲೂ ಇತ್ತು. ಆದರೆ ನಮಗೆ ಕಾಣದಂತೆ, ಅರಿವಿಗೆ ಬಾರದಂತೆ ಇತ್ತು. ನಮ್ಮ ಆಲೋಚನೆ, ಮಾತು ಹಾಗೂ ಕೃತಿಯ ಮೂಲಕ ನಾವು ಒಬ್ಬ ವ್ಯಕ್ತಿಯ, ಸಂಸ್ಥೆಯ, ಇಡೀ ದೇಶದ ಅಥವಾ ಒಟ್ಟಾರೆ ಜಗದ ಮೇಲೆ ಪ್ರಭಾವ ಬೀರಬಹುದು.
ಮಹಾನುಭಾವರು, ತಮ್ಮ ಮಾತು, ಆಲೋಚನೆ ಹಾಗೂ ಕೃತಿಯ ಮೂಲಕ ನಮ್ಮ ಮಧ್ಯೆ ದೈಹಿಕವಾಗಿ ಬದುಕಿರದೆ ಇದ್ದರೂ ಸಾವಿರಾರು ವರ್ಷಗಳಿಂದ ಉಸಿರಾಡುತ್ತಿದ್ದಾರೆ. ನೀವು ಒಳಗಿನಿಂದ ಸತ್ವಯುತವಾಗಿದ್ದರೆ ಇಂತಹ ಪ್ರಭಾವ ಬೀರಲು ಅಥವಾ ಇನ್ನೊಬ್ಬರ ಮೇಲೆ ವರ್ಚುವಲ್ ಮಾಧ್ಯಮದಂತೆಯೇ ಬದಲಾವಣೆ ತರಲು ಸಾಧ್ಯವಿದೆ. ಅಂತಿಮವಾಗಿ ಬದುಕಿನ ನಿಜವಾದ ಅರ್ಥ ಏನೆಂದರೆ ನಾವು ಇನ್ನೊಬ್ಬರ ಜೀವನದಲ್ಲಿ ಉಸಿರಾಡುತ್ತಲೇ ಇರುವುದು. ಅದನ್ನು ಜಗತ್ತಿನ ಭೌತಿಕ ಬದುಕು ಎಂದಷ್ಟೇ ಅಂದುಕೊಳ್ಳಬಾರದು. ಈಗಿನ ಲಾಕ್‌ಡೌನ್, ನಮ್ಮನ್ನು ಸ್ಥಗಿತಗೊಳಿಸುವ ಬದಲು, ಇಲ್ಲಿಯವರೆಗೆ ಅನ್ವೇಷಿಸದೆ ಇರುವ ಸಾಧ್ಯತೆ ಮತ್ತು ಸಾಮರ್ಥ್ಯವನ್ನು ತೆರೆದಿಡುತ್ತಿದೆ.
ಲೇಖಕರು ಮದ್ರಾಸ್ ಹೈಕೋರ್ಟಿನ ಹಾಲಿ ನ್ಯಾಯಾಧೀಶರು.