ಅಮೆರಿಕ ಚುನಾವಣೆ - ನ್ಯಾಯಾಲಯಗಳು, ಮತ ಎಣಿಕೆ ಹಾಗೂ ಮರುಎಣಿಕೆ

ಚುನಾವಣಾ ಪ್ರಕ್ರಿಯೆಯಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಲು ಸಾಧ್ಯವೇ ಹಾಗಿದ್ದರೆ ಅದು ಹೇಗೆ ಮತ್ತು ಯಾವಾಗ ಎಂಬುದನ್ನು ಈ ಲೇಖನ ಚರ್ಚಿಸುತ್ತದೆ.
Election Vote
Election Vote

ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸಲು ಅಲ್ಲಿನ ಸುಪ್ರೀಂಕೋರ್ಟನ್ನು ಸಂಪರ್ಕಿಸುವ ಬಯಕೆ ಹೊಂದಿರುವುದಾಗಿ ನವೆಂಬರ್ 4 ರ ಮುಂಜಾನೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ. ಅಧ್ಯಕ್ಷರ ಅನೇಕ ಘೋಷಣೆಗಳಂತೆಯೇ ಇದು ಸಹ ಅನೇಕ ಪ್ರಶ್ನೆ, ವಿವಾದ, ವಾದ, ಪ್ರತಿವಾದಗಳಿಗೆ ತಿದಿ ಒತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಿ ಹೇಗೆ ಮತ್ತು ಯಾವಾಗ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬಹುದು ಎಂಬ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಹಿನ್ನೆಲೆ

ಅಮೆರಿಕದ ಪ್ರತಿಯೊಂದು ರಾಜ್ಯ ಕೂಡ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ತನ್ನದೇ ಆದ ಜನಪ್ರಿಯ ಮತ ಚುನಾವಣೆ ಏರ್ಪಡಿಸಿದ್ದರೂ ಕೂಡ ಅಲ್ಲಿನ ಮತದಾರರು ವಾಸ್ತವವಾಗಿ ಮತದಾರ ಪ್ರತಿನಿಧಿಗಳಿಗೆ (ಎಲೆಕ್ಟರ್ಸ್‌) ಮತ ಚಲಾಯಿಸಲಿದ್ದು ನಂತರ ಈ ಪ್ರತಿನಿಧಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಬಹುತೇಕ ರಾಜ್ಯಗಳು ಆಯಾ ರಾಜ್ಯದ ಬಹುಮತ ಪಡೆಯುವ ಅಭ್ಯರ್ಥಿಗೆ ತಮ್ಮೆಲ್ಲಾ ಮತದಾರ ಪ್ರತಿನಿಧಿಗಳ ಮತವನ್ನು (ಎಲೆಕ್ಟೊರಲ್‌ ವೋಟ್‌) ನೀಡುತ್ತವೆ. ಪ್ರತಿಯೊಂದು ರಾಜ್ಯವು ವಿಭಿನ್ನ ಸಂಖ್ಯೆಯ ಮತದಾರ ಪ್ರತಿನಿಧಿಗಳನ್ನು ಹೊಂದಿದ್ದು ಇದು ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್‌ನ (ಕೆಳಮನೆ) ಪ್ರತಿನಿಧಿಗಳ ಸಂಖ್ಯೆ ಮತ್ತು ಅಮೆರಿಕ ಸಂಸತ್ತಿನಲ್ಲಿ (ಕಾಂಗ್ರೆಸ್‌) ಪ್ರತಿ ರಾಜ್ಯಗಳು ಹೊಂದಿರುವ ಇಬ್ಬರು ಸೆನೆಟರ್‌ಗಳ (ಮೇಲ್ಮನೆ ಸದಸ್ಯರು) ಸಂಖ್ಯೆಯ ಒಟ್ಟು ಮೊತ್ತಕ್ಕೆ ಸಮನಾಗಿರುತ್ತದೆ. ಎಲ್ಲಾ ಮತದಾರ ಪ್ರತಿನಿದಿಗಳ ಮತಗಳನ್ನು ಆಧರಿಸಿ ಸಂಪೂರ್ಣ ಬಹುಮತ (ಅಂದರೆ 270 ಮತಗಳನ್ನು) ಪಡೆಯುವ ಯಾವುದೇ ಅಧ್ಯಕ್ಷೀಯ ಅಭ್ಯರ್ಥಿ ರಾಷ್ಟ್ರೀಯ ಮಟ್ಟದ ಚುನಾವಣೆಯಲ್ಲಿ ಜಯಶಾಲಿಯಾಗುತ್ತಾರೆ.

ಚುನಾವಣಾ ಮೊಕದ್ದಮೆಗಳು ನೇರ ಸುಪ್ರೀಂಕೋರ್ಟ್‌ ತಲುಪುತ್ತವೆಯೇ?

ಇದು ತುಂಬಾ ಅಸಂಭವನೀಯ. ಅಮೆರಿಕ ಸಂವಿಧಾನದ IIIನೇ ವಿಧಿಯ ಪ್ರಕಾರ, ರಾಯಭಾರಿಗಳನ್ನು ಒಳಗೊಂಡ ಪ್ರಕರಣಗಳಿಗೆ ಮತ್ತು ರಾಜ್ಯಗಳ ನಡುವಿನ ವಿವಾದಗಳಿಗೆ ಅಲ್ಲಿನ ಸುಪ್ರೀಂಕೋರ್ಟ್‌ನ ಮೂಲ ನ್ಯಾಯಿಕ ವ್ಯಾಪ್ತಿ ಸೀಮಿತವಾಗಿದೆ. ಆದ್ದರಿಂದ ಚುನಾವಣೆಯಲ್ಲಿ ಮಧ್ಯಪ್ರವೇಶಿಸಲು ಅಧ್ಯಕ್ಷ ಅಥವಾ ಬೇರೆ ಯಾರಾದರೂ ನೇರವಾಗಿ ಸುಪ್ರೀಂಕೋರ್ಟ್ ಸಂಪರ್ಕಿಸುವುದು ಸಾಧ್ಯವಾಗದು. ಒಕ್ಕೂಟ ಜಿಲ್ಲಾ ನ್ಯಾಯಾಲಯದಲ್ಲಿ ಅಥವಾ ರಾಜ್ಯ ನ್ಯಾಯಾಲಯದಲ್ಲಿ ಅಂತಹ ಮೊಕದ್ದಮೆ ಹೂಡಬಹುದಾಗಿದೆ. ಇಷ್ಟಾದರೂ ಮೇಲ್ಮನವಿ ಮೂಲಕ ಸುಪ್ರೀಂಕೋರ್ಟ್‌ ಕದ ತಟ್ಟಬಹುದಾಗಿದೆ. ಭಾರತದಲ್ಲಿ ಇರುವಂತೆ, ಅಮೆರಿಕ ಏಕೀಕೃತ ನ್ಯಾಯಾಂಗ ವ್ಯವಸ್ಥೆ ಹೊಂದಿಲ್ಲ. ಬದಲಾಗಿ, ರಾಜ್ಯವೊಂದರ ನ್ಯಾಯಾಂಗ, ಫೆಡರಲ್ ನ್ಯಾಯಾಂಗಕ್ಕೆ ಸಮಾನಾಂತರವಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ಪ್ರತಿ ರಾಜ್ಯ ತನ್ನದೇ ಆದ ಸರ್ವೋಚ್ಚ ನ್ಯಾಯಾಲಯ ಅಥವಾ ಅದಕ್ಕೆ ಸಮವಾದ ನ್ಯಾಯಾಂಗ ವ್ಯವಸ್ಥೆ ಹೊಂದಿರುತ್ತದೆ.

ಮೊಕದ್ದಮೆಗೆ ಆಧಾರವೇನು?

ತಮ್ಮನ್ನು ಚುನಾವಣೆಯ ವಿಜೇತರೆಂದು ಘೋಷಿಸುವಂತೆ ನ್ಯಾಯಾಲಯ ಸಂಪರ್ಕಿಸುವ ಸಾಧ್ಯತೆ ಅಧ್ಯಕ್ಷ ಟ್ರಂಪ್‌ ಅವರಿಗೆ ಇರುವುದಿಲ್ಲ. ಒಂದು ವಿಷಯವೆಂದರೆ, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳು ಸೀಮಿತ ಪ್ರಾದೇಶಿಕ ನ್ಯಾಯಿಕವ್ಯಾಪ್ತಿ ಹೊಂದಿದ್ದು, ರಾಷ್ಟ್ರವ್ಯಾಪಿ ಅಧ್ಯಕ್ಷೀಯ ಚುನಾವಣೆಯ ವಿಜೇತರನ್ನು ನಿರ್ಧರಿಸಲು ಸೂಕ್ತ ಅಲ್ಲದ ವೇದಿಕೆಯಾಗಿವೆ. ಈ ನ್ಯಾಯಾಲಯಗಳಲ್ಲಿ ಹೂಡುವ ಮೊಕದ್ದಮೆ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ದಿಷ್ಟ ಹಕ್ಕುಗಳ ಸುತ್ತ ಸುತ್ತುತ್ತದೆ - ಅಂದರೆ ಯಾವ ಮತಪತ್ರಗಳನ್ನು ಎಣಿಸಲಾಗುತ್ತದೆ ಎಂಬುದನ್ನು ನಿರ್ಧರಿಸುವ ರಾಜ್ಯ ನಿಯಮಗಳು ಅಥವಾ ಸ್ಥಳೀಯ ಚುನಾವಣೆಯನ್ನು ನಡೆಸಿದ ರೀತಿಯನ್ನು ಇಲ್ಲಿ ಪ್ರಶ್ನಿಸಬಹುದು.

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮತದಾನಕ್ಕೆ ಸಂಬಂಧಿಸಿದಂತೆ ರೂಪಿಸಲಾದ ನಿಯಮಗಳನ್ನು ಸಹ ಪ್ರಶ್ನಿಸಬಹುದು. ಕೆಲ ಸಂದರ್ಭಗಳಲ್ಲಿ ಕೋವಿಡ್‌ಗೆ ಪ್ರತಿಕ್ರಿಯೆಯಾಗಿ ರಾಜ್ಯ ಶಾಸಕಾಂಗದ ಬದಲು ರಾಜ್ಯಪಾಲರಂತಹ ರಾಜ್ಯಾಧಿಕಾರಿಗಳು ನಿರ್ದಿಷ್ಟ ಮತದಾನದ ನಿಯಮ ರೂಪಿಸಿರುವುದನ್ನು ಪ್ರಶ್ನಿಸಬಹುದು. ಅಲ್ಲದೆ ದಾವೆ ಹೂಡಲು ಮತದಾನ ಪ್ರಕ್ರಿಯೆ ಮುಗಿದ ಬಳಿಕ ಅಂಚೆ ಮೂಲಕ‌ ಮತಪತ್ರಗಳನ್ನು ಸ್ವೀಕರಿಸಿರುವುದನ್ನು ಬೆರಳು ಮಾಡಬಹುದು.

ಈ ಬಾರಿಯ ಅಧ್ಯಕ್ಷೀಯ ಚುನಾವಣೆ 2000ನೇ ಇಸವಿಯ ಬುಷ್ ಮತ್ತು ಗೋರ್‌ ನಡುವಣ ಪ್ರಕರಣದ ಪ್ರತಿರೂಪವೇ?

ಹೌದು ಮತ್ತು ಇಲ್ಲ. ಬುಷ್ ಮತ್ತು ಗೋರ್‌ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಲಾದ ಅನೇಕ ದಾವೆಗಳಿಗೆ ಪ್ರತಿಕ್ರಿಯೆಯಾಗಿ, ಫ್ಲೋರಿಡಾ ಸುಪ್ರೀಂಕೋರ್ಟ್ ರಾಜ್ಯವ್ಯಾಪಿ ಕೆಲ ಮತಪತ್ರಗಳ ಮರುಎಣಿಕೆಗೆ ಆದೇಶಿಸಿತು. ಜಾರ್ಜ್ ಡಬ್ಲ್ಯು. ಬುಷ್ ಅವರ ಪ್ರಚಾರ ತಂಡ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೊರೆ ಹೋದಾಗ, ಸರ್ವೋಚ್ಚ ನ್ಯಾಯಾಲಯ ಅಂತಿಮವಾಗಿ ಫ್ಲೋರಿಡಾ ಸುಪ್ರೀಂಕೋರ್ಟ್‌ ತೀರ್ಪನ್ನು ತಡೆಹಿಡಿದು ಮರುಎಣಿಕೆಗೆ ಇತಿಶ್ರೀ ಹಾಡಿತು.

ಬುಷ್ ಮತ್ತು ಗೋರ್‌ ನಡುವಣ ಸಂಘರ್ಷದಂತೆ, ಸ್ಥಳೀಯ ಅಥವಾ ರಾಜ್ಯ ಚುನಾವಣಾ ಪ್ರಕ್ರಿಯೆಗಳಲ್ಲಿ ಅಧೀನ ಫೆಡರಲ್ ನ್ಯಾಯಾಲಯಗಳು ಅಥವಾ ರಾಜ್ಯ ನ್ಯಾಯಾಲಯಗಳ ತೀರ್ಪುಗಳನ್ನು ಒಪ್ಪದ ಪಕ್ಷಗಳು ಅಂತಿಮವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದು. ಇಷ್ಟಾದರೂ, ಫ್ಲೋರಿಡಾದ ಏಕೈಕ ರಾಜ್ಯಕ್ಕೆ ಸಂಬಂಧಿಸಿದ ಬುಷ್ ಮತ್ತು ಗೋರ್‌ ಪ್ರಕರಣಕ್ಕಿಂತ ಭಿನ್ನವಾಗಿ, ಈ ವರ್ಷ ಮಿಷಿಗನ್, ವಿಸ್ಕಾನ್ಸಿನ್ ಮತ್ತು ಪೆನ್ಸಿಲ್ವೇನಿಯಾದಂತಹ ಹಲವಾರು ರಾಜ್ಯಗಳಲ್ಲಿ ನಿಕಟ ಸ್ಪರ್ಧೆ ಏರ್ಪಟ್ಟಿದೆ.

ಈ ಇಬ್ಬರೂ ಚುನಾವಣಾ ಸೆಣಸಿಗೆ ನಿರ್ದಾಕ್ಷಿಣ್ಯವಾಗಿ ಈಡಾಗಿರುವಂತೆಯೇ, ಬುಷ್ ಮತ್ತು ಗೋರ್‌ ನಡುವಣ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ಟೀವನ್ಸ್ ಹೇಳಿದ ಅಂತಿಮ ಮಾತುಗಳು ಅಮೆರಿಕದ ಅನೇಕ ನ್ಯಾಯಾಧೀಶರ ಮನಃಪಟಲದಲ್ಲಿ ಅಚ್ಚ ಹಸಿರಾಗಿರಬಹುದು.

"ಈ ವರ್ಷದ ಅಧ್ಯಕ್ಷೀಯ ಚುನಾವಣೆಯ ವಿಜೇತರು ಯಾರೆಂಬುದು ನಮಗೆ ಸಂಪೂರ್ಣವಾಗಿ ತಿಳಿದಿಲ್ಲವಾದರೂ, ಸೋತವರು ಯಾರೆಂಬುದು ಸಂಪೂರ್ಣ ಸ್ಪಷ್ಟವಾಗಿದೆ. ಅದು ಕಾನೂನು ನಿಯಮದ ನಿಷ್ಪಕ್ಷಪಾತ ರಕ್ಷಕನಾಗಿರುವ ನ್ಯಾಯಾಧೀಶರಲ್ಲಿ ರಾಷ್ಟ್ರ ಇರಿಸಿರುವ ವಿಶ್ವಾಸ.”

Kannada Bar & Bench
kannada.barandbench.com