
ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಹಾಲಿ ಪ್ರವೇಶ ಮತ್ತು ಆರ್ಥಿಕ ನೀತಿಯು ತೃತೀಯ ಲಿಂಗಿಗಳಿಗೆ ತಾರತಮ್ಯ ಮಾಡುತ್ತಿದೆ. ಹೀಗಾಗಿ, ಎನ್‌ಎಲ್‌ಎಸ್‌ಐಯುನಲ್ಲಿ ಪ್ರವೇಶ ಕೋರಿ ಅರ್ಜಿ ಹಾಕುವ ತೃತೀಯ ಲಿಂಗಿಗಳಿಗೆ ಎಲ್ಲ ಕೋರ್ಸ್‌ಗಳಲ್ಲಿ ಶೇ. 0.5ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಕೋರಿ ಕರ್ನಾಟಕ ಏಕಸದಸ್ಯ ಪೀಠ ಮಾಡಿರುವ ಆದೇಶ ಪ್ರಶ್ನಿಸಿರುವ ಮೇಲ್ಮನವಿ ವಿಚಾರಣೆಯಿಂದ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗುರುವಾರ ಹಿಂದೆ ಸರಿದಿದ್ದಾರೆ.
ಕೆಲ ಕಾಲ ಮೇಲ್ಮನವಿಯ ವಿಚಾರಣೆ ನಡೆಸಿದ ಹಂಗಾಂಮಿ ಮುಖ್ಯ ನ್ಯಾಯಮೂರ್ತಿ ಕೆ ಕಾಮೇಶ್ವರ ರಾವ್ ಅವರು ತಾನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾಗಿರುವುದರಿಂದ ಅರ್ಜಿ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ಹೇಳಿದರು. ಆಡಳಿತ ಮಂಡಳಿಯಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಸದಸ್ಯರು ಎಂದು ಉಲ್ಲೇಖಿಸಲಾಗಿದೆ.
ಆಗ ವಿಭಾಗೀಯ ಪೀಠದ ಮತ್ತೊಬ್ಬರು ಸದಸ್ಯರಾದ ನ್ಯಾಯಮೂರ್ತಿ ಸಿ ಎಂ ಜೋಶಿ ಅವರು “ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಲ್ಲದ ಪೀಠದ ಮುಂದೆ ಮೇಲ್ಮನವಿಯನ್ನು ನಾಳೆಗೆ ವಿಚಾರಣೆಗೆ ನಿಗದಿಪಡಿಸಲಾಗುವುದು” ಎಂದು ಆದೇಶಿಸಿದರು.
ಇದಕ್ಕೂ ಮುನ್ನ, ಸುಮಾರು ಒಂದು ತಾಸಿಗೂ ಅಧಿಕ ಕಾಲ ಹಿರಿಯ ವಕೀಲ ಕೆ ಜಿ ರಾಘವನ್ ಅವರು ಎನ್‌ಎಸ್‌ಎಲ್‌ಐಯು ವಿರುದ್ಧ ಏಕಸದಸ್ಯ ಪೀಠವು ಮಾಡಿರುವ ಆದೇಶ ಕಾನೂನಿನ ವ್ಯಾಪ್ತಿ ಮೀರಿದೆ ಎಂದು ವಾದಿಸಿದರು.