
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ತಾನು ಸಲ್ಲಿಸಿದ್ದ ಮನವಿ ಕುರಿತು ವಾದ ಮಂಡಿಸಲು ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ದೆಹಲಿ ಹೈಕೋರ್ಟ್ ಮಂಗಳವಾರ ಕಡೆಯ ಅವಕಾಶ ನೀಡಿದೆ [ಜಾರಿ ನಿರ್ದೇಶನಾಲಯ ಮತ್ತು ಅರವಿಂದ್ ಕೇಜ್ರಿವಾಲ್ ನಡುವಣ ಪ್ರಕರಣ ].
ಪ್ರಕರಣವನ್ನು ಹತ್ತು ಬಾರಿ ಮುಂದೂಡಿದ್ದರೂ ಮತ್ತೊಮ್ಮೆ ಮುಂದೂಡುವಂತೆ ಇ ಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರವೀಂದರ್ ದುಡೇಜಾ ಅವರು ಕಡೆಯ ಬಾರಿಗೆ ಮುಂದೂಡಿಕೆ ಮನವಿ ಪುರಸ್ಕರಿಸುತ್ತಿರುವುದಾಗಿ ಹೇಳಿದರು.
"ನ್ಯಾಯದ ಹಿತದೃಷ್ಟಿಯಿಂದ, ಇಲಾಖೆಗೆ ಕೊನೆಯ ಮತ್ತು ಅಂತಿಮ ಅವಕಾಶವನ್ನು ನೀಡಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಸುಪ್ರೀಂ ಕೋರ್ಟ್‌ನಲ್ಲಿ ವಾದನಿರತರಾಗಿದ್ದರಿಂದ ವಕೀಲ ವಿವೇಕ್ ಗುರ್ನಾನಿ ಅವರು ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿ ವಿಚಾರಣೆ ಮುಂದೂಡುವಂತೆ ಕೋರಿದರು.
ಕೇಜ್ರಿವಾಲ್ ಪರ ಹಾಜರಾದ ಹಿರಿಯ ವಕೀಲ ವಿಕ್ರಮ್ ಚೌಧರಿ , ವಿಚಾರಣೆ ಮುಂದೂಡಿಕೆಯನ್ನು ಬಲವಾಗಿ ವಿರೋಧಿಸಿದರು. ಜಾರಿ ನಿರ್ದೇಶನಾಲಯ ಈಗಾಗಲೇ ಸಕಾರಣವಿಲ್ಲದೆ ಒಂಬತ್ತು ಬಾರಿ ವಿಚಾರಣೆ ಮುಂದೂಡಿದೆ ಎಂದು ಹೇಳಿದರು. ಇ ಡಿಗೆ ಇದು ಅಂತಿಮ ಅವಕಾಶ ಎಂದು ತಿಳಿಸಿದ ನ್ಯಾಯಾಲಯ ಪ್ರಕರಣವನ್ನು ಮುಂದೂಡಿತು. ಮುಂದಿನ ವಿಚಾರಣೆ ನವೆಂಬರ್ 10ರಂದು ನಡೆಯಲಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಜೂನ್ 2024ರಲ್ಲಿ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿತ್ತು.
ಗಮನಾರ್ಹ ಅಂಶವೆಂದರೆ, ಇದೇ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಈ ಹಿಂದೆ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಆದರೆ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿತ್ತು. ಹೀಗಾಗಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.