ರಾಹುಲ್ ವಿರುದ್ಧ 10ಕ್ಕೂ ಹೆಚ್ಚು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ; ಯಾರ ವಿರುದ್ಧವೂ ದೂರು ದಾಖಲಿಸದ ಕಾಂಗ್ರೆಸ್ ನಾಯಕ

ವಾಸ್ತವದಲ್ಲಿ ರಾಹುಲ್ ಕ್ರಿಮಿನಲ್ ಮಾನನಷ್ಟ ಕಾನೂನನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರಾಜಕೀಯ ವಿರೋಧಿಗಳನ್ನು ಬಾಯಿ ಮುಚ್ಚಿಸಲು ಅದು ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಅರ್ಜಿ ವಜಾಗೊಂಡಿತ್ತು.
Rahul Gandhi
Rahul Gandhi Facebook

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ 10ಕ್ಕೂ ಹೆಚ್ಚು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳು ಬಾಕಿ ಇವೆ. ಆದರೆ ಅವರು ಮಾತ್ರ ಯಾರ ವಿರುದ್ಧವೂ ಮಾನನಷ್ಟ ಮೊಕದ್ದಮೆ ದಾಖಲಿಸಿಲ್ಲ.

ರಾಹುಲ್‌ ಅವರ ವಿರೋಧಿಗಳು ಕೂಡ ಅವರ ವಿರುದ್ಧ ಮತ್ತು ಅವರ ಕುಟುಂಬದ ವಿರುದ್ಧ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅವರಿಗೆ ʼಪಪ್ಪುʼ ಎಂಬ ಹಣೆಪಟ್ಟಿಯನ್ನೂ ಹಚ್ಚಲಾಗಿದೆ. ಆದರೂ ಅವರು ಯಾರ ವಿರುದ್ಧವೂ ಈವರೆಗೆ ಮೊಕದ್ದಮೆ ದಾಖಲಿಸಿಲ್ಲ.

Also Read
ರಾಹುಲ್‌ ಸದಸ್ಯತ್ವ ಅನರ್ಹತೆ ಪ್ರಕರಣ: ಮಾನನಷ್ಟ ದಾವೆಯಲ್ಲಿ ಸಾಕ್ಷ್ಯ ನುಡಿದಿದ್ದವರು ಕೋಲಾರದ ಬಿಜೆಪಿ ಮುಖಂಡ ರಘುನಾಥ್‌

ವಾಸ್ತವದಲ್ಲಿ ರಾಹುಲ್‌ ಕ್ರಿಮಿನಲ್ ಮಾನನಷ್ಟ ಕಾನೂನನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.  ರಾಜಕೀಯ ವಿರೋಧಿಗಳನ್ನು ಬಾಯಿ ಮುಚ್ಚಿಸಲು ಅದು ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿದ ನಂತರ ಶುಕ್ರವಾರ ಅವರನ್ನು ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ರಾಹುಲ್‌ ಅವರ ಭಾಷಣಗಳು ಅವರನ್ನು ಹಲವು ಬಾರಿ ತೊಂದರೆಗೆ ಸಿಲುಕಿಸಿವೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ - ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)  ವಿರುದ್ಧ ನೀಡಿದ್ದ ಹೇಳಿಕೆಗಳಿಗಾಗಿ ಹತ್ತಕ್ಕೂ ಹೆಚ್ಚು ಮಾನನಷ್ಟ ಪ್ರಕರಣಗಳನ್ನು ಅವರ ವಿರುದ್ಧ ದಾಖಲಿಸಲಾಗಿದ್ದು ಅವುಗಳ ವಿವರ ಹೀಗಿದೆ:

  • ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ ʼಮಹಾತ್ಮ ಗಾಂಧಿ ಅವರನ್ನು ಕೊಂದದ್ದು ಆರ್‌ಎಸ್‌ಎಸ್‌ ಮಂದಿʼ ಎಂದರು. ಇದನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ ಮುಖಂಡ ರಾಜೇಶ್‌ ಕುಂಟೆ ಎಂಬುವವರು ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ನ್ಯಾಯಾಲಯ ಆರೋಪ ನಿಗದಿಪಡಿಸಿತು. ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಗಮನಾರ್ಹವಾಗಿ, ಆಗಸ್ಟ್ 2016 ರಲ್ಲಿ ತಾನು ಇಡಿಯಾಗಿ ಆರ್‌ಎಸ್‌ಎಸ್‌ ಸಂಘಟನೆಯನ್ನು ದೂಷಿಸಿಲ್ಲ ಆರ್‌ಎಸ್‌ಎಸ್‌ ಜತೆ ನಂಟಿದ್ದ ವ್ಯಕ್ತಿಗಳು ಗಾಂಧೀಜಿ ಅವರನ್ನು ಕೊಂದದ್ದಾಗಿ ಹೇಳಿದೆ ಎಂದು ರಾಹುಲ್‌ ಸ್ಪಷ್ಟನೆ ನೀಡಿದರು.

  • ಇನ್ನೊಂದೆಡೆ “ಆರ್‌ಎಸ್‌ಎಸ್‌ನವರು ದೇಗುಲ ಪ್ರವೇಶಿಸಲು ನನಗೆ ಅನುಮತಿಸಿಲ್ಲ. ಮಹಿಳೆಯರನ್ನು ನನ್ನೆದುರು ನಿಲ್ಲಿಸಿ ಒಳಹೋಗದಂತೆ ತಡೆದರು” ಎಂದು ಡಿಸೆಂಬರ್ 2015ರಲ್ಲಿ  ರಾಹುಲ್‌ ನೀಡಿದ್ದ ಹೇಳಿಕೆ ವಿರುದ್ಧ ಸಂಘದ ಕಾರ್ಯಕರ್ತ ಅಂಜನ್ ಬೋರಾ ಎಂಬುವವರು ಅರ್ಜಿ ಸಲ್ಲಿಸಿದರು. ರಾಹುಲ್‌ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

  • ಮತ್ತೊಂದು ಪ್ರಕರಣದಲ್ಲಿ ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿದ್ದಾರೆ. ನೋಟು ರದ್ದತಿಯಾದ ಐದು ದಿನಗಳ ಅವಧಿಯಲ್ಲಿ ಬ್ಯಾಂಕ್ ₹750 ಕೋಟಿ ನೋಟುಗಳನ್ನು ವಿನಿಮಯ ಮಾಡಿಕೊಂಡಿದೆ ಎಂದು ಆರೋಪಿಸಿ ರಾಹುಲ್‌ ಮಾಡಿದ ಟ್ವೀಟ್ ಮಾಡಿದರು. ನೋಟು ಅಮಾನ್ಯೀಕರಣದ ನಂತರ ಶೇ 80ರಷ್ಟು ಶ್ರೀಮಂತರಾದ ಪಕ್ಷದ ಅಧ್ಯಕ್ಷರು ಎಂದು ಅಮಿತ್‌ ಶಾ ಅವರ ಭಾವಚಿತ್ರ ಲಗತ್ತಿಸಿ ಅವರು ಆರೋಪ ಹೊರಿಸಿದರು. ಆಗಸ್ಟ್ 2018ರಲ್ಲಿ, ಬ್ಯಾಂಕ್ ಮತ್ತು ಅದರ ಅಧ್ಯಕ್ಷ ಅಜಯ್ ಪಟೇಲ್ ಅವರು ಎರಡು ಪ್ರತ್ಯೇಕ ಕ್ರಿಮಿನಲ್‌ ಮಾನನಷ್ಟ ದೂರುಗಳನ್ನು ರಾಹುಲ್‌ ವಿರುದ್ಧ ಸಲ್ಲಿಸಿದರು. ರಾಹುಲ್‌ ಹೇಳಿಕೆ ಆಧಾರರಹಿತ ಇದರಿಂದ ತಮ್ಮ ವರ್ಚಸ್ಸಿಗೆ ಕುಂದುಂಟಾಗಿದೆ ಎಂದರು. ಅಹಮದಾಬಾದ್‌ನ ಸ್ಥಳೀಯ ನ್ಯಾಯಾಲಯ  ಜುಲೈ 2019ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಅವರಿಗೆ ಜಾಮೀನು ನೀಡಿತು.

  • ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್‌ ಗಾಂಧಿ "ಬಿಜೆಪಿಯ ಸಿದ್ಧಾಂತದ ವಿರುದ್ಧ, ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧ ಮಾತನಾಡುವ ಯಾರ ಮೇಲೆಯೂ ಒತ್ತಡ ಹೇರಲಾಗುತ್ತದೆ, ಥಳಿಸಲಾಗುತ್ತದೆ, ದಾಳಿ ಮಾಡಲಾಗುತ್ತದೆ ಹಾಗೂ ಕೊಲ್ಲಲಾಗುತ್ತದೆ" ಎಂದು ವಾಗ್ದಾಳಿ ನಡೆಸಿದ್ದರು. ಆರ್‌ಎಸ್‌ಎಸ್‌ ಕಾರ್ಯಕರ್ತರು ಮತ್ತು ವಕೀಲರಾದ ಧೃತಿಮಾನ್‌ ಜೋಷಿ ಹಾಗೂ ಆದಿತ್ಯ ಮಿಶ್ರಾ ಈ ಹೇಳಿಕೆಗಳ ವಿರುದ್ಧ ಕ್ರಮವಾಗಿ ಕ್ರಿಮಿನಲ್‌ ಮತ್ತು ಸಿವಿಲ್‌ ಮಾನನಷ್ಟ ಮೊಕದ್ದಮೆ ಹೂಡಿದರು. ಕ್ರಿಮಿನಲ್‌ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಮತ್ತು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರಿಗೆ ಮುಂಬೈನ ನ್ಯಾಯಾಲಯವೊಂದು 2018 ರಲ್ಲಿ ಆರೋಪ ನಿಗದಿಪಡಿಸಿತು. ಅವರಿಗೆ ಜಾಮೀನು ದೊರೆಯಿತಾದರೂ ವಿಚಾರಣೆಯೇ ಆರಂಭವಾಗದೆ ಜಾಮೀನು ನೀಡಿದ್ದಕ್ಕೆ ಜೋಶಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರ ಕರಣದ ಮುಂದಿನ ವಿಚಾರಣೆ ಏಪ್ರಿಲ್ 15 ರಂದು ನಡೆಯಲಿದೆ. ಮಿಶ್ರಾ ಸಲ್ಲಿಸಿರುವ ಸಿವಿಲ್ ಮೊಕದ್ದಮೆಯು ಥಾಣೆಯ ಸ್ಥಳೀಯ ನ್ಯಾಯಾಲಯದಲ್ಲಿ ಬಾಕಿ ಇದ್ದು ರಾಹುಲ್‌ ತಮ್ಮ ವಿವಾದಾತ್ಮಕ ಹೇಳಿಕೆಗಳಿಗಾಗಿ ₹1 ಪರಿಹಾರ ನೀಡಬೇಕು ಎಂದು ಅರ್ಜಿದಾರರು ಕೇಳಿದ್ದಾರೆ.  ಈ ಪ್ರಕರಣ ಜೂನ್ 6 ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

  • ರಿಲಯನ್ಸ್‌ ಪರವಾಗಿ ರಫೇಲ್‌ ಫೈಟರ್‌ ಜೆಟ್‌ ಒಪ್ಪಂದ ನಡೆದಿದೆ ಎಂದು ಆರೋಪಿಸುತ್ತಾ ಸೆಪ್ಟೆಂಬರ್ 2018ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ʼಕಮಾಂಡರ್‌ ಇನ್‌ ಥೀಫ್‌ʼ ಎಂದು ರಾಹುಲ್‌ ಗಾಂಧಿ ಜರೆದರು. ಇದನ್ನು ಪ್ರಶ್ನಿಸಿ ಬಿಜೆಪಿಯ ಮಾಜಿ ನಾಯಕ ಮಹೇಶ್ ಶ್ರೀಶ್ರೀಮಲ್ ಕ್ರಿಮಿನಲ್‌ ಮಾನಷ್ಟ ಮೊಕದ್ದಮೆ ಹೂಡಿದರು. ಪ್ರಕರಣ ಗಿರಿಗಾಂವ್‌ ನ್ಯಾಯಾಲಯದಲ್ಲಿ ಬಾಕಿ ಇದೆ.

  • ಮಧ್ಯಪ್ರದೇಶದ ಜಬಾಲ್ಪುರದಲ್ಲಿ ಏಪ್ರಿಲ್ 2019ರಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ, ರಾಹುಲ್ ಗಾಂಧಿ ಅವರು ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಕೊಲೆ ಆರೋಪಿ ಎಂದು ಹರಿಹಾಯ್ದರು. ಬಳಿಕ ಬಿಜೆಪಿ ಕಾರ್ಪೊರೇಟರ್ ಕೃಷ್ಣವದನ್ ಬ್ರಹ್ಮಭಟ್ ಅವರು ರಾಹುಲ್‌ ವಿರುದ್ಧ ಅಹಮದಾಬಾದ್‌ ನ್ಯಾಯಾಲಯದ ಮೊರೆ ಹೋದರು. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ದೋಷಮುಕ್ತರಾಗಿರುವುದರಿಂದ ಶಾ ಅವರನ್ನು ಕೊಲೆ ಆರೋಪಿ ಎನ್ನುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂಬುದು ಅವರ ದೂರಿನ ಸಾರವಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ.

  • ಜಾರ್ಖಂಡ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವೇಳೆ ರಾಹುಲ್‌ ಅವರು ಮತ್ತೊಮ್ಮೆ ಅಮಿತ್‌ ಶಾ ಅವರನ್ನು ಕೊಲೆ ಆರೋಪಿ ಎಂದು ವಾಕ್‌ಪ್ರಹಾರ ನಡೆಸಿದರು. ಬಿಜೆಪಿಯಂತೆ ಕೊಲೆಗಾರನನ್ನು ಕಾಂಗ್ರೆಸ್ ಪಕ್ಷ ಅಧ್ಯಕ್ಷರನ್ನಾಗಿ ಸ್ವೀಕರಿಸುವುದಿಲ್ಲ ಎಂದರು. ಈ ಹೇಳಿಕೆ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾದವು. ರಾಹುಲ್‌ ಮನವಿಯ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಜಾರ್ಖಂಡ್‌ ಹೈಕೋರ್ಟ್‌ ಆದೇಶಿಸಿತು. ಹೀಗಾಗಿ ಈ ಪ್ರಕರಣಗಳಲ್ಲಿ ನೀಡಲಾದ ಸಮನ್ಸ್‌ಇನ್ನೂ ಜಾರಿಯಾಗಿಲ್ಲ.

  • ಸಂಸದ ಸ್ಥಾನದಿಂದ ರಾಹುಲ್‌ ಅವರನ್ನು ಅನರ್ಹಗೊಳಿಸಲು ಕಾರಣವಾಗಿದ್ದು ʼಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕೆ ಇದೆ?ʼ ಎಂಬ ಹೇಳಿಕೆ. ನರೇಂದ್ರ ಮೋದಿ ಅವರನ್ನು ನೀರವ್‌ ಮೋದಿ ಹಾಗೂ ಲಲಿತ್‌ ಮೋದಿ ಅವರಂತಹ ಆರ್ಥಿಕ ಅಪರಾಧಿಗಳೊಂದಿಗೆ ಹೋಲಿಸಿ ರಾಹುಲ್‌ ಟೀಕೆ ಮಾಡಿದ್ದರು. 2019 ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಸಮಾವೇಶ ನಡೆದಾಗಲೂ ಇದೇ ಬಗೆಯ ವಿವಾದಾತ್ಮಕ ಹೋಲಿಕೆ ಮಾಡಿದ್ದಕ್ಕಾಗಿ ಗಾಂಧಿ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. ಒಂದು ದೂರನ್ನು ಬಿಜೆಪಿ ಮಾಜಿ ಶಾಸಕ ಪೂರ್ಣೇಶ್‌ ಮೋದಿ ಸೂರತ್‌ನಲ್ಲಿ ದಾಖಲಿಸಿದ್ದರು. ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಮತ್ತೊಂದು ಮಾನನಷ್ಟ ಮೊಕದ್ದಮೆಯನ್ನು ವಕೀಲ ಪ್ರದೀಪ್ ಮೋದಿ ಅವರು ಸಲ್ಲಿಸಿದ್ದರು.  ರಾಂಚಿಯ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಮೂರನೇ ಪ್ರಕರಣವನ್ನು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ದಾಖಲಿಸಿದ್ದಾರೆ. ಈ ಹೇಳಿಕೆ ಪ್ರಧಾನಿ ಅವರನ್ನು ಮಾತ್ರವಲ್ಲದೆ ಮೋದಿ ಎಂಬ ಉಪನಾಮ ಹೊತ್ತ ಇನ್ನೊಬ್ಬ ವ್ಯಕ್ತಿಯ ಮಾನಹಾನಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದರು. ಪ್ರಕರಣದಲ್ಲಿ ರಾಹುಲ್‌ ಅವರಿಗೆ ಜಾಮೀನು ದೊರೆತಿದೆ.

  • 'ಭಾರತ್ ಜೋಡೋ ಯಾತ್ರೆ' ಸಮಯದಲ್ಲಿ ʼಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಬಗೆದ ಸಾವರ್ಕರ್‌ ಬ್ರಿಟಿಷರ ಕ್ಷಮೆಯಾಚಿಸಿದರುʼ ಎಂದು ರಾಹುಲ್‌ ಅವರು ನೀಡಿದ ಹೇಳಿಕೆ ವಿರುದ್ಧ ಎರಡು ಎಫ್‌ಐಆರ್‌ ದಾಖಲಾದವು. ಶಿವಸೇನೆ (ಏಕನಾಥ್ ಶಿಂಧೆ ಬಣ) ನಾಯಕಿ ವಂದನಾ ಡೋಂಗ್ರೆ ಅವರು ಥಾಣೆಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದರು. ಸಾವರ್ಕರ್ ಅವರ ಮೊಮ್ಮಗ ವಿನಾಯಕ್ ಸಾವರ್ಕರ್ ಅವರು ಕೂಡ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com