ವಕ್ಫ್ ಕಾಯಿದೆ ಪ್ರಶ್ನಿಸಿರುವ ಹತ್ತು ಅರ್ಜಿಗಳ ವಿಚಾರಣೆಯನ್ನು ನಾಳೆ ನಡೆಸಲಿರುವ ಸುಪ್ರೀಂ ಕೋರ್ಟ್‌

ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿಗಳ ವಿಚಾರಣೆ ನಡೆಸಲಿದೆ.
Supreme Court, Owaisi, Amanatullah Khan, Maulana  Madani, Mohd Fazlurrahim, RJD MP Manoj Kumar jha
Supreme Court, Owaisi, Amanatullah Khan, Maulana Madani, Mohd Fazlurrahim, RJD MP Manoj Kumar jha
Published on

ಈಚೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ವಕ್ಫ್ (ತಿದ್ದುಪಡಿ) ಕಾಯಿದೆ, 2025 ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಹತ್ತು ಅರ್ಜಿಗಳನ್ನು ನಾಳೆ (ಏಪ್ರಿಲ್ 16) ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ .

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ  ಅರ್ಜಿಗಳ ವಿಚಾರಣೆ ನಡೆಸಲಿದೆ.

ಸುಪ್ರೀಂ ಕೋರ್ಟ್‌ ಅಂಗಳದಲ್ಲಿರುವ 10 ಅರ್ಜಿಗಳ ವಿವರ ಇಂತಿದೆ.

1. ಅರ್ಜಿದಾರ: ಅಸಾದುದ್ದೀನ್‌ ಒವೈಸಿ

 ಅರ್ಜಿ ಸಲ್ಲಿಸಿರುವ ವಕೀಲ: ಲಜಫೀರ್ ಅಹ್ಮದ್  

ವಾದಗಳು:

  • ತಿದ್ದುಪಡಿ ಕಾಯಿದೆಯು ವಕ್ಫ್‌ ಆಡಳಿತ ಸಂಸ್ಥೆಗಳಿಗೆ ಈ ಹಿಂದೆ ನೀಡಲಾಗಿದ್ದ ವಿವಿಧ ರಕ್ಷಣೆಗಳನ್ನು ತೆಗೆದುಹಾಕುತ್ತದೆ.

  • ಹಿಂದೂ, ಜೈನ ಹಾಗೂ ಸಿಖ್ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಕೆಲವು ರಕ್ಷಣೆಗಳನ್ನು ವಕ್ಫ್‌ಗಳಿಂದ ಈ ತಿದ್ದುಪಡಿ ಕಾಯಿದೆಯ ಮೂಲಕ ಕಸಿದುಕೊಳ್ಳಲಾಗುತ್ತಿದೆ. ಇದು ಸಂವಿಧಾನದ 14ನೇ ವಿಧಿಯಡಿ ಸಮಾನತೆಯ ಹಕ್ಕಿನ ಉಲ್ಲಂಘನೆ.

  • ಸಂಸತ್ತು ಜನರ ಇಚ್ಛೆಯನ್ನು ಪ್ರತಿನಿಧಿಸುತ್ತದೆ, ಆದರೆ ಬಹುಸಂಖ್ಯಾತರ ರಾಜಕಾರಣದ ಇಂದಿನ ಯುಗದಲ್ಲಿ, ನ್ಯಾಯಾಲಯ ಬಹುಸಂಖ್ಯಾತರ ದಬ್ಬಾಳಿಕೆಯಿಂದ ಅಲ್ಪಸಂಖ್ಯಾತರನ್ನು ರಕ್ಷಿಸುವ ಕಾವಲುಗಾರನಾಗಿ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ.

2. ಅರ್ಜಿದಾರ: ಅಮಾನತುಲ್ಲಾ ಖಾನ್

ಅರ್ಜಿ ಸಲ್ಲಿಸಿರುವ ವಕೀಲ: ಅದೀಲ್ ಅಹ್ಮದ್

ವಾದಗಳು:

  • ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರ ಸದಸ್ಯರನ್ನು ಸೆಕ್ಷನ್ 9 ಮತ್ತು 14 ರ ಅಡಿಯಲ್ಲಿ ನೇಮಿಸುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ. ಏಕೆಂದರೆ ಇದು ಬೌದ್ಧಿಕ ವ್ಯತ್ಯಾಸವನ್ನಾಗಲಿ ಅಥವಾ ಧಾರ್ಮಿಕ ಆಸ್ತಿಯ ಆಡಳಿತಕ್ಕೆ ಸಂಬಂಧಿಸಿದ ತಾರ್ಕಿಕತೆಯನ್ನಾಗಲಿ ಆಧರಿಸಿರದ ವರ್ಗೀಕರಣವನ್ನು ಸೃಷ್ಟಿಸುತ್ತದೆ.

  • ಇದಲ್ಲದೆ, ತಿದ್ದುಪಡಿ ಕಾಯಿದೆಯ ಸೆಕ್ಷನ್ 3 (ಆರ್) ಕನಿಷ್ಠ 5 ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಪಾಲಿಸಿದ ಮತ್ತು ಆಸ್ತಿಯನ್ನು ಹೊಂದಿರುವ ಮುಸ್ಲಿಮರಿಗೆ ಮಾತ್ರ ವಕ್ಫ್ ರಚನೆಯನ್ನು ನಿರ್ಬಂಧಿಸಿರುವುದು  ಬಳಕೆದಾರ ಮತ್ತು ಅನೌಪಚಾರಿಕ ಸಮರ್ಪಣೆಗಳಿಂದ ವಕ್ಫ್‌ನ ಐತಿಹಾಸಿಕ ಸ್ವರೂಪವನ್ನು ಮುಕ್ಕಾಗಿಸುತ್ತದೆ.

3. ಅರ್ಜಿದಾರರು: ನಾಗರಿಕ ಹಕ್ಕುಗಳ ರಕ್ಷಣಾ ಸಂಘ (APCR)

ಅರ್ಜಿ ಸಲ್ಲಿಸಿರುವ ವಕೀಲ: ಅದೀಲ್ ಅಹ್ಮದ್

ವಾದಗಳು:

  • 2006ರ ಸಾಚಾರ್ ಸಮಿತಿ ವರದಿಯ ಶಿಫಾರಸ್ಸಿನಂತೆ, ವಕ್ಫ್ ಮಂಡಳಿಗಳು ಅಥವಾ ಮುತಾವಲಿಗಳು (ವಕ್ಫ್ ಆಸ್ತಿಗಳ ಉಸ್ತುವಾರಿ) ಕಾರ್ಯನಿರ್ವಹಣೆಯಲ್ಲಿನ ಅಸಮರ್ಥತೆಯನ್ನು ಚರ್ಚೆಗಳು ಮತ್ತು ಸಲಹೆಗಾರರ ​​ನೇಮಕಾತಿಯ ಮೂಲಕ ಪರಿಣಾಮಕಾರಿಯಾಗಿ ಪರಿಹರಿಸಬಹುದು

  • ತಿದ್ದುಪಡಿ ಕಾಯಿದೆಯ ಮೂಲಕ ಪ್ರಸ್ತಾಪಿಸಲಾದ ತೀವ್ರ ಪರಿಷ್ಕರಣೆ ಅನಗತ್ಯ ಮಾತ್ರವಲ್ಲದೆ, ಮುಸ್ಲಿಂ ಸಮುದಾಯದ ಧಾರ್ಮಿಕ ವ್ಯವಹಾರಗಳಲ್ಲಿ ಆತಂಕಕಾರಿ ಹಸ್ತಕ್ಷೇಪವಾಗಿದೆ.

  • ಈ ಬದಲಾವಣೆಗಳು ವಕ್ಫ್‌ನ ಮೂಲಭೂತ ಉದ್ದೇಶವನ್ನು ದುರ್ಬಲಗೊಳಿಸುತ್ತವೆ.

4. ಅರ್ಜಿದಾರರು: ಮೌಲಾನಾ ಅರ್ಷದ್ ಮದನಿ

ಅರ್ಜಿ ಸಲ್ಲಿಸಿರುವ ವಕೀಲ: ಫುಜೈಲ್ ಅಹ್ಮದ್ ಅಯ್ಯೂಬಿ

ವಾದಗಳು:

  • ತಿದ್ದುಪಡಿ ಕಾಯಿದೆಯಡಿಯಲ್ಲಿ ರೂಪಿಸಲಾದ ಆನ್‌ಲೈನ್ ಪೋರ್ಟಲ್ ಮತ್ತು ಡೇಟಾಬೇಸ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಲು ಕಡ್ಡಾಯ ಕಾಲಮಿತಿಯಿಂದಾಗಿ ಹಲವಾರು ವಕ್ಫ್ ಆಸ್ತಿಗಳು ಅಪಾಯಕ್ಕೆ ಸಿಲುಕಲಿವೆ.

  • ಇದು ಹೆಚ್ಚಿನ ಸಂಖ್ಯೆಯ ಐತಿಹಾಸಿಕ ವಕ್ಫ್‌ ಆಸ್ತಿಗಳನ್ನು ಅದರಲ್ಲಿಯೂ ಮೌಖಿಕವಾಗಿ ಸಮರ್ಪಿಸಲಾದ ಮತ್ತು ಔಪಚಾರಿಕ ಪತ್ರಗಳಿಲ್ಲದ ಆಸ್ತಿಗಳ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ.

  • ವಕ್ಫ್‌ ವ್ಯಾಖ್ಯಾನದಿಂದ 'ಬಳಕೆಯ ಕಾರಣದಿಂದಾದ ವಕ್ಫ್' ಪದಗುಚ್ಛವನ್ನು ಕೈಬಿಟ್ಟಿದ್ದು, ಇದು ನ್ಯಾಯಾಲಯಗಳು ಸಾಕ್ಷ್ಯಗಳ ಆಧಾರದಲ್ಲಿ ರೂಪಿಸಿದ ತತ್ವ ಎಂದಿದೆ. ಹೀಗಾದ ಪಕ್ಷದಲ್ಲಿ ಸಾಕಷ್ಟು ಸಂಖ್ಯೆಯ ಹಳೆಯ ಮಸೀದಿಗಳು ಮತ್ತು ಸ್ಮಶಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

5. ಅರ್ಜಿದಾರರು: ಸಮಸ್ತ ಕೇರಳ ಜಮೀಯತ್‌ ಉಲೇಮಾ

ಅರ್ಜಿ ಸಲ್ಲಿಸಿರುವ ವಕೀಲ: ಜುಲ್ಫಿಕರ್ ಅಲಿ ಪಿ.ಎಸ್.

  • ವಾದಗಳು:  

  • ರಾಜ್ಯ ವಕ್ಫ್ ಮಂಡಳಿಗಳನ್ನು ದುರ್ಬಲಗೊಳಿಸಲು ಮತ್ತು ವಕ್ಫ್ ಆಸ್ತಿಗಳನ್ನು ಸರ್ಕಾರಿ ಆಸ್ತಿಗಳಾಗಿ ಪರಿವರ್ತಿಸಲು ಕಾಯಿದೆ ರೂಪಿಸಲಾಗಿದೆ.

  • ತಿದ್ದುಪಡಿಗಳು ವಕ್ಫ್‌ಗಳ ಧಾರ್ಮಿಕ ಸ್ವರೂಪವನ್ನು ವಿರೂಪಗೊಳಿಸುತ್ತವೆ ಮತ್ತು ವಕ್ಫ್‌ ಆಸ್ತಿಗಳು ಮತ್ತು ವಕ್ಫ್ ಮಂಡಳಿಗಳ ಆಡಳಿತವನ್ನು ನಿಯಂತ್ರಿಸುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬದಲಾಯಿಸಲಾಗದಷ್ಟು ಹಾನಿಗೊಳಿಸುತ್ತವೆ.

  • ಧಾರ್ಮಿಕ ಪಂಗಡವು ತನ್ನದೇ ಆದ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸಂವಿಧಾನದ 26ನೇ ವಿಧಿಯ ಅಡಿಯಲ್ಲಿ ಒದಗಿಸಲಾದ  ಹಕ್ಕುಗಳಲ್ಲಿ ಮಾಡುವ ಸ್ಪಷ್ಟವಾದ ಹಸ್ತಕ್ಷೇಪವಾಗಿದೆ. 

 6. ಅರ್ಜಿದಾರರು: ಅಂಜುಮ್ ಕದರಿ

ಅರ್ಜಿ ಸಲ್ಲಿಸಿರುವ ವಕೀಲ: ಸಂಜೀವ್ ಮಲ್ಹೋತ್ರಾ

  • ವಾದಗಳು: ವಕ್ಫ್ ಆಸ್ತಿಯ ಆಯ್ದ ತಿದ್ದುಪಡಿಯು "ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತ ಹಕ್ಕುಗಳ ರಕ್ಷಣೆಯ ಮೂಲಭೂತ ತತ್ವಗಳನ್ನು ದುರ್ಬಲಗೊಳಿಸುವ ಅಪಾಯಕಾರಿ ಮತ್ತು ತಾರತತಮ್ಯದ ಪೂರ್ವನಿದರ್ಶನವನ್ನು ಹುಟ್ಟುಹಾಕುತ್ತದೆ".

  • ನ್ಯಾಯಾಂಗ ಪೂರ್ವನಿದರ್ಶನದ ಸಿಂಧುತ್ವ ಮತ್ತು ಪಾವಿತ್ರ್ಯವನ್ನು ಎತ್ತಿಹಿಡಿಯಲು ಮತ್ತು ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು, 'ಬಳಕೆಯ ಕಾರಣದಿಂದಾದ ವಕ್ಫ್' ಪದಗುಚ್ಛ ಕೈಬಿಟ್ಟಿರುವುದನ್ನು ಮತ್ತು ಕಾಯಿದೆಯನ್ನು ಮರುಪರಿಶೀಲಿಸಬೇಕು.

7. ಅರ್ಜಿದಾರ: ತೈಯಬ್ ಖಾನ್ ಸಲ್ಮಾನಿ

ಅರ್ಜಿ ಸಲ್ಲಿಸಿರುವ ವಕೀಲ: ಸಂಜೀವ್ ಮಲ್ಹೋತ್ರಾ

ಪ್ರಮುಖ ವಾದ:

ವಕ್ಫ್ ಅನ್ನು ಯಾರು ನೀಡಬಹುದು ಎಂಬುದರ ಮೇಲಿನ ನಿರ್ಬಂಧವು 1937ರ ಮುಸ್ಲಿಂ ವೈಯಕ್ತಿಕ ಕಾನೂನಿನೊಂದಿಗೆ (ಶರಿಯತ್) ನೇರ ಸಂಘರ್ಷದಲ್ಲಿದೆ.

8. ಅರ್ಜಿದಾರರು: ಮೊಹಮ್ಮದ್ ಶಫಿ

ಅರ್ಜಿ ಸಲ್ಲಿಸಿರುವ ವಕೀಲ: ವಜೀಹ್ ಶಫೀಕ್

ವಾದಗಳು:

  • ನೇರವಾಗಿ ಮಾಡಬಾರದಂತದ್ದನ್ನು ಪರೋಕ್ಷವಾಗಿಯೂ ಮಾಡಬಾರದು ಎನ್ನುವ ತತ್ವವನ್ನು ಕಾಯಿದೆ ಉಲ್ಲಂಘಿಸುತ್ತದೆ.

  • ವಕ್ಫ್ ಆಸ್ತಿಗಳ ಸಮರ್ಪಕ, ಬಳಕೆದಾರರು ಮತ್ತು ವ್ಯವಸ್ಥಾಪಕರ ಹಕ್ಕುಗಳಿಗೆ ಕಾಯಿದೆ ಅಡ್ಡಿಪಡಿಸುತ್ತದೆ.

9. ಅರ್ಜಿದಾರ: ಮೊಹಮ್ಮದ್ ಫಜಲ್‌ಉರ್‌ರಹೀಮ್‌, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ

ಅರ್ಜಿ ಸಲ್ಲಿಸಿರುವ ವಕೀಲ: ತಲ್ಹಾ ಅಬ್ದುಲ್ ರಹಮಾನ್

ವಾದಗಳು:

  • ಕಾಯಿದೆಯನ್ನು ಪ್ರತ್ಯೇಕವಾಗಿ ನೋಡದೆ ಭ್ರಾತೃತ್ವ, ಸಮಾನತೆ ಮತ್ತು ಕಾನೂನಿನ ಸಮಾನ ರಕ್ಷಣೆಯ ತತ್ವಗಳ ಮೇಲೆ ದಾಳಿ ನಡೆಸುವ ಕಾರ್ಯಾಂಗದ ವಿವಿಧ ಆದೇಶಗಳು, ಪೊಲೀಸ್ ವಿಧಾನಗಳು, ಅಸಲಿ ಮತ್ತು ಕಚ್ಚಾ ಅಧಿಕಾರ ಪ್ರಕ್ರಿಯೆ ಮತ್ತು ಅಧೀನ ಶಾಸನಗಳ ಹಿನ್ನೆಲೆಯಲ್ಲಿ ನೋಡಬೇಕು.

  • ಕಾಯಿದೆ ಸಾಂವಿಧಾನಿಕ ನೈತಿಕತೆಯ ತತ್ವಕ್ಕೆ ವಿರುದ್ಧವಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಕಾನೂನಿನ ತಿರುಳು ಮತ್ತು ಸಂದರ್ಭ ಎರಡನ್ನೂ ಬಳಸುವುದು ಮುಖ್ಯ.

10. ಅರ್ಜಿದಾರರು: ಡಾ ಮನೋಜ್ ಕುಮಾರ್ ಝಾ ಮತ್ತು ಫೈಯಾಜ್ ಅಹ್ಮದ್, ಆರ್‌ಜೆಡಿ ಸಂಸದರು

ಅರ್ಜಿ ಸಲ್ಲಿಸಿರುವ ವಕೀಲೆ: ಫೌಜಿಯಾ ಶಕೀಲ್

ವಾದಗಳು:

ಸಂವಿಧಾನದ 1, 14, 15, 21, 25, 26, 29, 30 ಮತ್ತು 300ಎ ವಿಧಿಗಳನ್ನು ಕಾಯಿದೆ ಉಲ್ಲಂಘಿಸುತ್ತದೆ.

ಮುಸ್ಲಿಂ ಧಾರ್ಮಿಕ ದತ್ತಿ ವಿಚಾರಗಳಲ್ಲಿ ಕಾಯಿದೆ ಹಸ್ತಕ್ಷೇಪ ಮಾಡಿ ಸರ್ಕಾರಿ ನಿಯಂತ್ರಣಕ್ಕೆ ಒಳಪಡಿಸುತ್ತದೆ. ಇದರಿಂದ ಧರ್ಮಾಧಾರಿತ ತಾರತಮ್ಯ ಉಂಟು ಮಾಡಿ ಸಂವಿಧಾನದ 14 ಮತ್ತು 15ನೇ ವಿಧಿಗಳನ್ನು ಉಲ್ಲಂಘಿಸುತ್ತದೆ.

Kannada Bar & Bench
kannada.barandbench.com