
ಅಸ್ತಿತ್ವದಲ್ಲಿರುವ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ವಿವಾದಕ್ಕೆಳೆಸುವ ಪ್ರಕರಣಗಳಲ್ಲಿ ಅಂತಹ ಧಾರ್ಮಿಕ ಸ್ಥಳಗಳ ಸಮೀಕ್ಷೆಗಾಗಲಿ ಅಥವಾ ವಿವಾದದ ಸಂಬಂಧ ಅಂತಿಮ ಆದೇಶವನ್ನಾಗಲಿ ನೀಡದಂತೆ ಗುರುವಾರ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮಂಗಳೂರಿನ ಮಳಲಿ ಮಸೀದಿ ಸೇರಿದಂತೆ ದೇಶದ ವಿವಿಧ ನ್ಯಾಯಾಲಯಗಳ ಮುಂದೆ ಇರುವ 11 ಧಾರ್ಮಿಕ ಸ್ಥಳಗಳ ಕುರಿತಾದ ಪ್ರಕರಣಗಳ ಮೇಲೆ ಈ ಆದೇಶ ಪರಿಣಾಮ ಬೀರಲಿದೆ.
ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ -1991ರ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಈ ಮಧ್ಯಂತರ ನಿರ್ದೇಶನ ನೀಡಿದೆ.
ಆಗಸ್ಟ್ 15, 1947ರಂದು ಇದ್ದಂತೆಯೇ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪ ಮುಂದುವರೆಯಬೇಕು ಎನ್ನುವ ಪೂಜಾ ಸ್ಥಳಗಳ ಕಾಯಿದೆ ಹಾಗೆ ದಾವೆ ಹೂಡುವುದನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ.
ಕಾಯಿದೆಯ ಸಿಂಧುತ್ವ ನಿರ್ಧಾರವಾಗುವವರೆಗೆ ಈ ಸಂಬಂಧ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಹೂಡಲಾಗಿರುವ ವ್ಯಾಜ್ಯಗಳನ್ನು ಮುಂದುವರೆಸಲಾಗದು ಎಂದು ನ್ಯಾಯಾಲಯ ತಿಳಿಸಿದೆ.
ಪ್ರಸ್ತುತ ಭಾರತದ ವಿವಿಧ ನ್ಯಾಯಾಲಯಗಳಲ್ಲಿ ಪೂಜಾ ಸ್ಥಳಗಳಿಗೆ ಸಂಬಂಧಿಸಿದಂತೆ ವ್ಯಾಜ್ಯಕ್ಕೊಳಪಟ್ಟಿರುವ 11 ಧಾರ್ಮಿಕ ಸ್ಥಳಗಳಿದ್ದು ಅವುಗಳಲ್ಲಿ 7 ಸ್ಥಳಗಳು ಉತ್ತರಪ್ರದೇಶದಲ್ಲಿವೆ. ಯಾವುವು ಆ ಸ್ಥಳಗಳು? ಇಲ್ಲಿದೆ ಸಂಕ್ಷಿಪ್ತ ವಿವರ:
ಶೀರ್ಷಿಕೆ: ರಾಖಿ ಸಿಂಗ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ ಮತ್ತು ಸಂಬಂಧಿತ ಅರ್ಜಿಗಳು
ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರ ಮಧ್ಯಪ್ರವೇಶಿಸುವ ಮುನ್ನ 1993ರವರೆಗೆ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳೇ ಪ್ರಾರ್ಥನೆ ಮಾಡುತ್ತಿದ್ದರು. 17 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ಈ ಭೂಮಿಯಲ್ಲಿರುವ ಪ್ರಾಚೀನ ದೇವಾಲಯ ನಾಶವಾಯಿತು. ಹೀಗಾಗಿ ಭಗವಾನ್ ವಿಶ್ವೇಶ್ವರ ದೇಗುಲವನ್ನು ಮರುಸ್ಥಾಪಿಸಬೇಕು ಎಂಬುದು ಹಿಂದೂ ಪಕ್ಷಕಾರರ ವಾದವಾಗಿದೆ.
ಆದರೆ, ಮಸೀದಿ ಔರಂಗಜೇಬನ ಆಳ್ವಿಕೆಗಿಂತ ಮುಂಚಿನದು ಮತ್ತು ಕಾಲಾನಂತರದಲ್ಲಿ ಅದು ವಿವಿಧ ಬದಲಾವಣೆಗಳಿಗೆ ಒಳಪಟ್ಟಿತ್ತು ಎನ್ನುವುದು ಮುಸ್ಲಿಂ ದಾವೆದಾರರ ವಾದ. ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಸುಪ್ರೀಂ ಕೋರ್ಟ್ ಕಳೆದ ವರ್ಷ ಅನುಮತಿ ನೀಡಿತ್ತು.2022ರಲ್ಲಿ ಸಲ್ಲಿಸಲಾದ ಸಿವಿಲ್ ಮೊಕದ್ದಮೆಗಳು ವಾರಣಾಸಿಯ ಜಿಲ್ಲಾ ನ್ಯಾಯಾಧೀಶರ ಮುಂದೆ ಬಾಕಿ ಉಳಿದಿವೆ.
ಈಚೆಗೆ ಸುಪ್ರೀಂ ಕೋರ್ಟ್, ಕಾಶಿ ವಿಶ್ವನಾಥ ದೇವಾಲಯ-ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಹದಿನೈದು ಪ್ರಕರಣಗಳನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿತ್ತು.
ಶೀರ್ಷಿಕೆ: ಭಗವಾನ್ ಶ್ರೀಕೃಷ್ಣ ವಿರಾಜಮಾನ್ ಕತ್ರಾ ಕೇಶವ್ ದೇವ್ ಮತ್ತಿತರರು ಹಾಗೂ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಇನ್ನಿತರರ ನಡುವಣ ಪ್ರಕರಣ
ಕೃಷ್ಣ ಜನ್ಮಭೂಮಿ ಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿ (ಮಸೀದಿ) ನಿರ್ಮಿಸಲಾಗಿದೆ ಎಂದು ಹಿಂದೂ ಅರ್ಜಿದಾರರು ಸಿವಿಲ್ ನ್ಯಾಯಾಲಯದಲ್ಲಿ ಮೂಲ ದಾವೆ ಹೂಡುವ ಮೂಲಕ ಪ್ರಕರಣ ಕಣ್ತೆರೆಯಿತು.
ಹಿಂದೂ ದೇವತೆ ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಮತ್ತು ಹಲವಾರು ಹಿಂದೂ ಭಕ್ತರ ಪರವಾಗಿ ಮೊಕದ್ದಮೆ ಹೂಡಲಾಗಿದ್ದು ಮಸೀದಿಯನ್ನು ಪ್ರಸ್ತುತ ಸ್ಥಳದಿಂದ ತೆರವುಗೊಳಿಸುವಂತೆ ಕೋರಲಾಗಿದೆ.
ಶಾಹಿ ಈದ್ಗಾ ಮಸೀದಿಯು ಮೂಲತಃ ಹಿಂದೂ ದೇವಾಲಯವಾಗಿತ್ತು ಎಂದು ಸೂಚಿಸುವ ವಿವಿಧ ಸಾಕ್ಷ್ಯಗಳನ್ನು ಫಿರ್ಯಾದಿಗಳು ಒದಗಿಸಿದ್ದು ಹೀಗಾಗಿ ಸ್ಥಳ ಪರಿಶೀಲನೆಗೆ ಆಯುಕ್ತರನ್ನು ನೇಮಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳೊಂದಿಗೆ 2023ರಲ್ಲಿ ಸಲ್ಲಿಸಲಾದ ಮೂಲ ಮೊಕದ್ದಮೆ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ.
ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುವಾಗ ಎಚ್ಚರಿಕೆ ವಹಿಸುವಂತೆ ಹೈಕೋರ್ಟ್ ಮಾಧ್ಯಮಗಳಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಶೀರ್ಷಿಕೆ: ಹರಿ ಶಂಕರ್ ಜೈನ್ ಮತ್ತು ಕೇಂದ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ
ಈಚೆಗೆ ಕೋಮು ಉದ್ವಿಗ್ನತೆಗೆ ಕಾರಣವಾದ ಈ ಪ್ರಕರಣದಲ್ಲಿ ಹಿಂದೂ ಪಕ್ಷಕಾರರು ಸಂಭಾಲ್‌ನ ಜಾಮಾ ಮಸೀದಿ ಮೂಲತಃ ವಿಷ್ಣುವಿನ ಅಂತಿಮ ಅವತಾರವಾದ ಕಲ್ಕಿಗೆ ಸಮರ್ಪಿತವಾದ ಪುರಾತನ ದೇವಾಲಯ. . ಜಾಮಾ ಮಸೀದಿ ಉಸ್ತುವಾರಿ ಸಮಿತಿಯು ಅಕ್ರಮವಾಗಿ ಸ್ಥಳ ಆಕ್ರಮಿಸಿಕೊಂಡಿದೆ ಎಂದು ವಾದಿಸಿದ್ದರು.2024 ರಲ್ಲಿ ಸಲ್ಲಿಸಲಾದ ಸಿವಿಲ್ ಮೊಕದ್ದಮೆಯು ಸಂಭಾಲ್‌ನಲ್ಲಿರುವ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ಮುಂದೆ ಬಾಕಿ ಉಳಿದಿದೆ.
ನವೆಂಬರ್ 19 ರಂದು ಸಿವಿಲ್ ನ್ಯಾಯಾಲಯ ಸಂಭಾಲ್ನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುವಂತೆ ಅಡ್ವೊಕೇಟ್ ಕಮಿಷನರ್ ಅವರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಮುಗಲಭೆ ಉಂಟಾಗಿ ನಾಲ್ವರು ಸಾವನ್ನಪ್ಪಿದ್ದರು. ಘಟನೆ ಸಂಬಂಧ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ.
ಶೀರ್ಷಿಕೆ: ಭಗವಾನ್ ಶ್ರೀ ಸಂಕಟಮೋಚನ ಮಹಾದೇವ್ ವಿರಾಜಮಾನ್ ಮತ್ತಿತರರು ಹಾಗೂ ವಿರುದ್ಧ ಖವಾಜಾ ಸಾಹಬ್ದ ದರ್ಗಾ ಸಮಿತಿ ಇನ್ನಿತರರ ನಡುವಣ ಪ್ರಕರಣ
ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ವಕೀಲ ಶಶಿ ರಂಜನ್ ಕುಮಾರ್ ಸಿಂಗ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ದರ್ಗಾ ಸಮಿತಿಯನ್ನು ಪೂಜಾ ಸ್ಥಳದ ಆವರಣದಿಂದ ತೆರವುಗೊಳಿಸಲು ಮತ್ತು ದರ್ಗಾದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಲು ಕೋರಲಾಗಿದೆ.
ಅಜ್ಮೀರ್ ದರ್ಗಾವನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಬದಲಿಗೆ ಮಹದೇವ ದೇಗುಲ ಮತ್ತು ಜೈನ ಮಂದಿರಗಳು ಅಲ್ಲಿದ್ದವು ಎಂಬುದನ್ನು ಇತಿಹಾಸದ ದಾಖಲೆಗಳು ಸೂಚಿಸುತ್ತವೆ. ಆದ್ದರಿಂದ, ವಿವಾದಿತ ಆಸ್ತಿಯ ಸ್ಥಳದಲ್ಲಿ ಭಗವಾನ್ ಶ್ರೀ ಸಂಕಟ್ಮೋಚನ್ ಮಹಾದೇವ್ ದೇವಾಲಯವನ್ನು ಪುನರ್ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅದು ಕರೆ ನೀಡಿದೆ.
2024 ರಲ್ಲಿ ಸಲ್ಲಿಸಲಾದ ಸಿವಿಲ್ ಮೊಕದ್ದಮೆಯು ಅಜ್ಮೀರ್‌ನ ಸಿವಿಲ್ ನ್ಯಾಯಾಧೀಶರ (ಕಿರಿಯ ವಿಭಾಗ) ಎದುರು ಬಾಕಿ ಉಳಿದಿದೆ. ನವೆಂಬರ್ 27 ರಂದು ನ್ಯಾಯಾಲಯ ಪ್ರಸ್ತುತ ಸಿವಿಲ್ ಮೊಕದ್ದಮೆಯಲ್ಲಿ ಪ್ರತಿವಾದಿಗಳಿಗೆ (ಮುಸ್ಲಿಂ ಕಡೆ) ನೋಟಿಸ್ ನೀಡಿದೆ.
ಶೀರ್ಷಿಕೆ: ಭಗವಾನ್ ಶೇಷನಾಗೇಶ್ ತೀಲೇಶ್ವರ್ ಮಹಾದೇವ್ ವಿರಾಜಮಾನ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ
ಲಕ್ಷ್ಮಣ ತೀಲಾ (ತೀಲೆ ವಾಲಿ ಮಸೀದಿ) ಆವರಣದಲ್ಲಿರುವ ಶೇಷಾವತಾರ ಮಂದಿರ ಮತ್ತು ಇತರ ಸ್ಥಳಗಳಲ್ಲಿ ಪೂಜೆ, ಅರ್ಚನೆ, ಆರತಿ ಮತ್ತು ಹನುಮಾನ್ ಚಾಲೀಸಾ ಪಠಣದಂತಹ ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯುವ ಗುರಿ ಈ ಮೊಕದ್ದಮೆಯದ್ದಾಗಿತ್ತು.
ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ಹಿಂದೂ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು ಎಂದು ಮೊಕದ್ದಮೆಯು ಆರೋಪಿಸಿದ್ದು ಸಮರದಲ್ಲಿ ಜಯಗಳಿಸಿದ ನಂತರ ದೇವಾಲಯಗಳನ್ನು ಮಸೀದಿಗಳಾಗಿ ಬದಲಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
2013 ರಲ್ಲಿ ಸಲ್ಲಿಸಲಾದ ಮೊಕದ್ದಮೆಯನ್ನು ಲಖನೌ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಲಯ (ಹಿರಿಯ ವಿಭಾಗ) ವಿಚಾರಣೆ ನಡೆಸುತ್ತಿದೆ.
ಕಳೆದ ಫೆಬ್ರವರಿಯಲ್ಲಿ , ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಸಿವಿಲ್ ಮೊಕದ್ದಮೆಯ ನಿರ್ವಹಣೆಯ ಬಗ್ಗೆ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಲಖನೌ ನ್ಯಾಯಾಲಯ ತಿರಸ್ಕರಿಸಿತ್ತು.
ಶೀರ್ಷಿಕೆ: ಸ್ವರಾಜ್ ವಾಹಿನಿ ಸಂಸ್ಥೆ ಮತ್ತು ವಕ್ಫ್ ಅಟಾಲಾ ಮಸೀದಿ ಇನ್ನಿತರರ ನಡುವಣ ಪ್ರಕರಣ
ಉತ್ತರ ಪ್ರದೇಶದ ಜೌನ್‌ಪುರ್‌ನಲ್ಲಿರುವ ಅಟಾಲಾ ಮಸೀದಿ ಮೂಲತಃ 'ಅಟಾಲಾ ದೇವಿ ಮಂದಿರ'ವಾಗಿತ್ತು ಎಂದು ಹಿಂದೂ ಪರ ಸಂಘಟನೆ ತನ್ನ ಪ್ರಾತಿನಿಧಿಕ ಸಾಮರ್ಥ್ಯದ ಸ್ವರೂಪದಲ್ಲಿ ಹಿಂದೂ ಸಂಘಟನೆ ಸ್ವರಾಜ್ ವಾಹಿನಿ ಸಂಸ್ಥೆ ಹಾಗೂ ಸಂತೋಷ್ ಕುಮಾರ್ ಮಿಶ್ರಾ ಎಂಬುವವರು ಜೌನ್‌ಪುರದ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿವಾದಿತ ಆಸ್ತಿ 'ಅಟಾಲಾ ದೇವಿ ಮಂದಿರ' 14ನೇ ಶತಮಾನಕ್ಕೆ ಸೇರಿದ್ದು ಮತ್ತು ಅಲ್ಲಿ ಪೂಜೆ ಮಾಡುವ ಹಕ್ಕು ಸನಾತನ ಧರ್ಮದ ಅನುಯಾಯಿಗಳಿಗೆ ಇದೆ ಎಂದು ಘೋಷಿಸುವಂತೆ ಹಿಂದೂ ಸಂಘಟನೆ ಕೋರಿತ್ತು. ವಿವಾದಿತ ಆಸ್ತಿಯನ್ನು ತಮಗೆ ನೀಡಲು ಆದೇಶಿಸಬೇಕು ಮತ್ತು ಈ ಆಸ್ತಿ ಪ್ರವೇಶಿಸದಂತೆ ಹಿಂದೂಯೇತರರನ್ನು ನಿರ್ಬಂಧಿಸಲು ಕಡ್ಡಾಯ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿ ಕೋರಿತ್ತು.
2024 ರಲ್ಲಿ ಸಲ್ಲಿಸಲಾದ ಸಿವಿಲ್ ಮೊಕದ್ದಮೆಯು ಉತ್ತರ ಪ್ರದೇಶದ ಜೌನ್ಪುರದ ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಮುಂದೆ ಬಾಕಿ ಉಳಿದಿದೆ. ಈ ಮೊಕದ್ದಮೆಯನ್ನು ನ್ಯಾಯಾಲಯ ನಾಳೆ (ಡಿಸೆಂಬರ್ 16) ವಿಚಾರಣೆ ನಡೆಸಲಿದೆ.
ಶೀರ್ಷಿಕೆ: ಭಗವಾನ್ ಶ್ರೀ ನೀಲಕಂಠ ಮಹಾದೇವ್ ಮಹಾಕಾಳ (ಇಶಾನ್ ಶಿವ ಮಂದಿರ) ಮತ್ತು ಇಂತೆಜಾಮೀಯಾ ಸಮಿತಿ ತಥಾಕಥಿತ ಜಾಮಿಯಾ ಮಸೀದಿ (ಜಾಮಾ ಮಸೀದಿ ಶಂಶಿ) ನಡುವಣ ಪ್ರಕರಣ
ಅಖಿಲ ಭಾರತೀಯ ಹಿಂದೂ ಮಹಾಸಭಾ (ಎಬಿಎಚ್ಎಂ), ಸಂಚಾಲಕ ಮುಖೇಶ್ ಪಟೇಲ್ ನೇತೃತ್ವದಲ್ಲಿ ಬುಡೌನ್ನ ಮೂವರು ನಿವಾಸಿಗಳು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಶಂಶಿ ಸ್ಥಳ್ದಲ್ಲಿದ್ದ ನೀಲಕಂಠ ಮಹಾದೇವ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಅರ್ಜಿಯ ಪ್ರಕಾರ, ದೇವಾಲಯವು ಹಿಂದೂ ರಾಜ ಮಹಿಪಾಲ್‌ಗೆ ಸೇರಿದ ಕೋಟೆಯ ಭಾಗವಾಗಿತ್ತು ಮತ್ತು ಇದನ್ನು 13 ನೇ ಶತಮಾನದ ಆರಂಭದಲ್ಲಿ ದೆಹಲಿಯ ಮೂರನೇ ಮಾಮ್ಲುಕ್ ಸುಲ್ತಾನ್ ಶಮ್ಸ್ ಉದ್-ದಿನ್ ಇಲ್ತುಟ್ಮಿಶ್ ನಾಶಪಡಿಸಿದರು.
2022 ರಲ್ಲಿ ದಾಖಲಾದ ಪ್ರಕರಣ ಬದೌನ್ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ಎದುರು ಬಾಕಿ ಉಳಿದಿದೆ. ಈ ದಾವೆಯ ವಿಚಾರಣೆಯೂ ನಾಳೆ (ಡಿಸೆಂಬರ್ 16) ನಡೆಯಲಿದೆ.
ಶೀರ್ಷಿಕೆ: ಶ್ರೀ ಭಗವಾನ್ ಶ್ರೀ ಕಾಮಾಕ್ಯ ಮಾತಾ ಅಲಿಯಾಸ್ ಕಾಮಾಖ್ಯ ದೇವಿ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಇನ್ನಿತರರ ನಡುವಣ ಪ್ರಕರಣ
ಕ್ಷತ್ರಿಯ ಶಕ್ತಿಪೀಠ ವಿಕಾಸ್ ಟ್ರಸ್ಟ್‌ನ ಅಜಯ್ ಪ್ರತಾಪ್ ಸಿಂಗ್ ಅವರು ದಾಖಲಿಸಿರುವ ಪ್ರಕರಣದಲ್ಲಿ, ಶೇಖ್ ಸಲೀಂ ಚಿಸ್ತಿಯ ದರ್ಗಾ ಮತ್ತು ಜಾಮಾ ಮಸೀದಿ ಆವರಣ ಮೂಲತಃ ಕಾಮಾಕ್ಯ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ವಾದಿಸಲಾಗಿತ್ತು.
ಎಎಸ್ಐ ಸಂರಕ್ಷಿತ ಸ್ಮಾರಕವನ್ನು ಅತಿಕ್ರಮಿಸಲಾಗಿದೆ ಎಂದು ಸಿಂಗ್ ತಮ್ಮ ಮನವಿಯಲ್ಲಿ ವಾದಿಸಿದ್ದಾರೆ. ಫತೇಪುರ್ ಸಿಕ್ರಿಯನ್ನು ಮೂಲತಃ ವಿಜೌಪುರ ಸಿಕ್ರಿ ಎಂದು ಕರೆಯಲಾಗುತ್ತಿತ್ತು, ಇದನ್ನು ಸಿಕರ್‌ವರ್ ರಾಜವಂಶ ಆಳಿತ್ತು ಎಂದು ಅವರು ಹೇಳಿದ್ದಾರೆ. 2024ರಲ್ಲಿ ದಾಖಲಿಸಲಾದ ಪ್ರಕರಣ ಆಗ್ರಾದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮುಂದೆ ವಿಚಾರಣೆಯಲ್ಲಿದೆ. ಪ್ರಕರಣವನ್ನು ಈ ತಿಂಗಳು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಶೀರ್ಷಿಕೆ: ಜಿತೇಂದರ್ ಸಿಂಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ಹಾಗೂ ಭಗವಾನ್ ರಿಷಭ್ ದೇವ್ ವಾದಮಿತ್ರ ಹರಿಶಂಕರ್ ಜೈನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ
ದೇವತೆಗಳಾದ ವಿಷ್ಣು ಮತ್ತು ಭಗವಾನ್ ರಿಷಭ್ ದೇವ್ ಪರವಾಗಿ ವಾದ ಮಿತ್ರರಾದ ವಕೀಲರಾದ ಹರಿ ಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿಯ ಮೂಲಕ ಸಲ್ಲಿಸಲಾದ ಮೊಕದ್ದಮೆಯು ಸಂಕೀರ್ಣದೊಳಗಿನ ದೇವತೆಗಳ ಪುನಃಸ್ಥಾಪನೆ ಮತ್ತು ಪೂಜೆ ಹಾಗೂ ದರ್ಶನದ ಹಕ್ಕನ್ನು ಕೋರುತ್ತದೆ .
ಈ ದೇವಾಲಯಗಳನ್ನು ಕೆಡವಿ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾದ ಕುವ್ವಾತ್-ಉಲ್-ಇಸ್ಲಾಂ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅದು ಹೇಳುತ್ತದೆ.
ಹಿಂದೂ ಪಕ್ಷಕಾರರು ಹೂಡಿರುವ ಮೊಕದ್ದಮೆ ಮೂಲತಃ ದೋಷಪೂರಿತವಾಗಿದೆ ಎಂದು ಮುಸ್ಲಿಂ ಕಡೆಯವರು ವಾದಿಸಿದ್ದಾರೆ. ಫಿರ್ಯಾದಿ ಕಾನೂನು ಸ್ಥಾನಮಾನ ಹೊಂದಿದ ವ್ಯಕ್ತಿಯಲ್ಲ ಮತ್ತು ಆದ್ದರಿಂದ ಪ್ರಾತಿನಿಧಿಕ ಸಾಮರ್ಥ್ಯದಲ್ಲಿ ಮೊಕದ್ದಮೆಯನ್ನು ಸಲ್ಲಿಸುವ ಕಾನೂನು ಸ್ಥಾನಮಾನ ಅವರಿಗಿಲ್ಲ ಎಂದು ತಿಳಿಸಲಾಗಿದೆ. 2022ರಲ್ಲಿ ದಾಖಲಾಗಿರುವ ಎರಡು ಪ್ರಕರಣಗಳು ಜಿಲ್ಲಾ ನ್ಯಾಯಾಧೀಶ ಸಾಕೇತ್ ಅವರ ಮುಂದೆ ಬಾಕಿ ಉಳಿದಿವೆ.
ಶೀರ್ಷಿಕೆ: ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ
ಭೋಜಶಾಲಾ ಸಂಕೀರ್ಣವನ್ನು ಹಿಂದೂಗಳಿಗೆ ಮರಳಿಸಬೇಕು ಮತ್ತು ಅದರ ಆವರಣದಲ್ಲಿ ಮುಸ್ಲಿಮರು ನಮಾಜ್ ಮಾಡುವುದನ್ನು ತಡೆಯಬೇಕು ಎಂದು ಕೋರಿ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಯಿತು . ವಿವಾದಿತ ಸ್ಥಳದ ನೈಜತೆ ಪತ್ತೆ ಹಚ್ಚಲು ಎಎಸ್‌ಐ ವೈಜ್ಞಾನಿಕ ಸಮೀಕ್ಷೆ ನಡೆಸಲು ತಾತ್ಕಾಲಿಕ ಆದೇಶ ನೀಡಬೇಕೆಂದು ಕೋರುವ ಮಧ್ಯಂತರ ಅರ್ಜಿಯನ್ನು ಕೂಡ ಮನವಿದಾರರು ಸಲ್ಲಿಸಿದ್ದರು.
ಪ್ರತಿವಾದಿಗಳಲ್ಲೊಬ್ಬರು ಇದನ್ನುವಿರೋಧಿಸಿದ್ದು 2003 ರಲ್ಲಿ ಹೈಕೋರ್ಟ್ನ ಪ್ರಧಾನ ಪೀಠವು ಇದೇ ರೀತಿಯ ರಿಟ್ ಅರ್ಜಿಯನ್ನು ವಜಾಗೊಳಿಸಿದೆ ಎಂದು ಸೂಚಿಸಿದ್ದರು. 2022ರಲ್ಲಿ ದಾಖಲಿಸಲಾದ ಪ್ರಕರಣ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಭೋಜಶಾಲಾ ಸಂಕೀರ್ಣದ ASI ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಏಪ್ರಿಲ್ 1,2024ರಂದು, ನಿರಾಕರಿಸಿತ್ತು. ಜುಲೈನಲ್ಲಿ ಎಎಸ್‌ಐ ಮಧ್ಯಪ್ರದೇಶ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಮಸೀದಿ ಹಿಂದೂ ದೇವಾಲಯಗಳ ಅವಶೇಷಗಳಿಂದ ನಿರ್ಮಾಣವಾಗಿದೆ ಎಂದು ತಿಳಿಸಿತು.
ಪ್ರಕರಣದ ಶೀರ್ಷಿಕೆ: ಧನಂಜಯ್ ಮತ್ತು ಜುಮ್ಮಾ ಮಸೀದಿ ಮಳಲಿಪೇಟೆ ನಡುವಣ ಪ್ರಕರಣ
ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಭೂ ವಿವಾದ ಇರುವುದನ್ನು ಪ್ರಸ್ತಾಪಿಸಿ ಮಂಗಳೂರು ಸಮೀಪ ಇರುವ ಮಳಲಿ ಮಸೀದಿಯನ್ನು ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿಯಂತೆಯೇ ಸಮೀಕ್ಷೆ ನಡೆಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿತ್ತು.
ಮಸೀದಿಯ ಆವರಣದೊಳಗೆ ದೇವಸ್ಥಾನದಂತಹ ರಚನೆ ಇದೆ ಎಂದು ಹಿಂದೂ ಪಕ್ಷಕಾರರು ಪ್ರತಿಪಾದಿಸಿದ್ದು ಸಮೀಕ್ಷೆ ನಡೆಸುವಂತೆ ಕೋರಿದ್ದರು. ಆದರೆ ಭೂಮಿಯ ಹಕ್ಕು ತಮ್ಮದೆಂದ ಮುಸ್ಲಿಂ ಪಕ್ಷಕಾರರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರು.
2022ರಲ್ಲಿ ಸಲ್ಲಿಸಲಾದ ಮೂಲ ಮೊಕದ್ದಮೆ ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ.
ನವೆಂಬರ್ 2024 ರಲ್ಲಿ ಉಪ ವಿಭಾಗಾಧಿಕಾರಿ ನ್ಯಾಯಾಲಯ ಮಸೀದಿಯ ಸಮೀಕ್ಷೆಗೆ ಸಂಬಂಧಿಸಿದಂತೆ ವಿಎಚ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.