ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪೊಲೀಸ್ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ ಜಾರಿಯಿಂದ ಹಿಂದೆ ಸರಿದ ಕೇರಳ ಸರ್ಕಾರ

ವಾಕ್ ಸ್ವಾತಂತ್ರ್ಯದ ಮೇಲಿನ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇರಳ ಪೊಲೀಸ್ ಕಾಯಿದೆಗೆ ತರಲಾಗಿರುವ ತಿದ್ದುಪಡಿಯನ್ನು ಜಾರಿಗೊಳಿಸುವುದಿಲ್ಲ ಎಂಬ ಸುಳಿವನ್ನು ಕೇರಳ ಸರ್ಕಾರ ನೀಡಿದೆ.
Chief Minister of Kerala, Pinarayi Vijayan
Chief Minister of Kerala, Pinarayi Vijayan
Published on

ಕೇರಳ ಪೊಲೀಸ್‌ ಕಾಯಿದೆಗೆ ತರಲಾಗಿರುವ ವಿವಾದಾತ್ಮಕ ತಿದ್ದುಪಡಿಯನ್ನು ಜಾರಿಗೊಳಿಸುವುದರಿಂದ ಕೇರಳ ಸರ್ಕಾರವು ಹಿಂದೆ ಸರಿದಿದೆ. ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತರಲಾಗಿರುವ ತಿದ್ದುಪಡಿ ಕಾಯಿದೆಯಲ್ಲಿ ಸೆಕ್ಷನ್‌ 118A ಅನ್ನು ಅಳವಡಿಸಲಾಗಿದ್ದು, ಇದರಲ್ಲಿ ನಿಂದನಾತ್ಮಕ, ಮಾನಹಾನಿ ಮತ್ತು ದ್ವೇಷ ಭಾಷಣದ ಸಂವಹನವನ್ನು ಅಪರಾಧವನ್ನಾಗಿ ಪರಿಗಣಿಸಲಾಗುತ್ತದೆ.

ನಿಬಂಧನೆಗಳಿಗೆ ಸಾರ್ವಜನಿಕ ಕ್ಷೇತ್ರದಿಂದ ತೀವ್ರ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಜಾರಿಯಿಂದ ಹಿಂದೆ ಸರಿಯಲಾಗಿದೆ ಎಂದು ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶನಿವಾರ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದರು.

ಕೇರಳ ವಿಧಾನಸಭೆಯಲ್ಲಿ ನಿಬಂಧನೆಗಳನ್ನು ವಿಸ್ತೃತ ಚರ್ಚೆಗೆ ಒಳಪಡಿಸಲಾಗುವುದು. ಅಲ್ಲಿಯವರೆಗೆ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸುವುದಿಲ್ಲ. ವಾಕ್‌ ಸ್ವಾತಂತ್ರ್ಯವನ್ನು ಕಡಿತಗೊಳಿಸುವುದು ನಿಬಂಧನೆಗಳ ಉದ್ದೇಶವಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಸೆಕ್ಷನ್‌ 118Aರ ಅಡಿ ಯಾವುದೇ ವ್ಯಕ್ತಿಯ ಮನಸ್ಥಿತಿ ಅಥವಾ ಘನತೆಗೆ ಚ್ಯುತಿ ತರಬಹುದು ಎಂಬ ಅರಿವಿದ್ದರೂ ಅಂಥ ಬೆದರಿಕೆ, ನಿಂದನಾತ್ಮಕ, ಮಾನಹಾನಿ ಅಥವಾ ಅವಮಾನಕಾರಿ ಮಾಹಿತಿಯನ್ನು ಯಾವುದೇ ಸಂವಹನ ಮಾಧ್ಯಮದ ಮೂಲಕ ಪ್ರಕಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಇದರಡಿ ಅಪರಾಧ ಸಾಬೀತಾದರೆ ಅದಕ್ಕೆ ಮೂರು ವರ್ಷಗಳ ಶಿಕ್ಷೆ ಅಥವಾ 10,000 ಸಾವಿರ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ನೀಡಲಾಗಿದೆ.

Also Read
ಪೊಲೀಸ್‌ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದ ಕೇರಳ ಸರ್ಕಾರ; ಇತ್ತ ರಾಜ್ಯ ಬಿಜೆಪಿಯಿಂದ ಹೈಕೋರ್ಟ್‌ಗೆ ಮೊರೆ
“ಮಾನಹಾನಿ ಅಥವಾ ಅವಮಾನ ಮಾಡುವಂಥ, ಬೆದರಿಕೆ, ನಿಂದನಾತ್ಮಕವಾದ ಅಭಿಪ್ರಾಯ ಅಥವಾ ಮಾಹಿತಿ ಪ್ರಸಾರ ಮಾಡುವುದಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿ ಅಥವಾ ವರ್ಗದ ವ್ಯಕ್ತಿಗಳನ್ನು ಬೆದರಿಸುವುದು, ನಿಂದಿಸುವುದು, ಅವಮಾನಿಸುವುದು ಅಥವಾ ಅವರ ಮಾನಹಾನಿ ಮಾಡುವುದು, ಅದು ಸುಳ್ಳು ಎಂದು ಗೊತ್ತಿದ್ದರೂ ಪರರ ಮನಸ್ಸಿಗೆ, ಪ್ರತಿಷ್ಠೆಗೆ ಧಕ್ಕೆ ತರಲು ಮುಂದಾಗುವ ಯಾವುದೇ ವ್ಯಕ್ತಿಯ ಅಪರಾಧ ಸಾಬೀತಾದರೆ ಅವರಿಗೆ ಮೂರು ವರ್ಷಗಳವರೆಗೆ ಶಿಕ್ಷೆ ಅಥವಾ ಹತ್ತು ಸಾವಿರ ರೂಪಾಯಿ ದಂಡ ಅಥವಾ ಇವರೆಡರ ಜೊತೆಗೆ ವಿಸ್ತರಿಸಬಹುದಾದ ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಬಹುದು” ಎಂದು ನಿಬಂಧನೆಯಲ್ಲಿ ತಿಳಿಸಲಾಗಿದೆ.

ಸುಗ್ರೀವಾಜ್ಞೆಯನ್ನು ಬಿಜೆಪಿ ಮತ್ತು ಯುಡಿಎಫ್‌ ನಾಯಕರು ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ನಾಳೆ ಹೈಕೋರ್ಟ್‌ ಪ್ರಕರಣದ ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com