ಸುಪ್ರೀಂ ಹಾಗೂ ಹೈಕೋರ್ಟ್‌ಗಳ ಹಾಲಿ ನ್ಯಾಯಮೂರ್ತಿಗಳ ಪೈಕಿ ಆಸ್ತಿ ವಿವರ ಘೋಷಿಸಿದವರ ಪ್ರಮಾಣ ಕೇವಲ 12%

ಸುಪ್ರೀಂನ ಹಾಲಿ 33 ನ್ಯಾಯಮೂರ್ತಿಗಳ ಪೈಕಿ 30 ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಸಿಜೆಐ ಅವರಿಗೆ ಸಲ್ಲಿಸಿದ್ದಾರೆ. ದೇಶಾದ್ಯಂತ ಇರುವ 762 ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ 95 (12.46%) ಮಂದಿಯ ಆಸ್ತಿ ವಿವರಗಳು ಮಾತ್ರ ಲಭ್ಯವಿವೆ.
Supreme Court
Supreme Court
Published on

ಸುಪ್ರೀಂ ಕೋರ್ಟ್‌ನ ಹಾಲಿ 33 ನ್ಯಾಯಮೂರ್ತಿಗಳ ಪೈಕಿ 30 ಮಂದಿ ನ್ಯಾಯಮೂರ್ತಿಗಳು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಅವರಿಗೆ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಅಂತರ್ಜಾಲ ತಾಣದಲ್ಲಿ ಈ ಕುರಿತ ವಿವರಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.

ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠವು ಇತ್ತೀಚೆಗಷ್ಟೇ ತನ್ನ ಎಲ್ಲಾ ಹಾಲಿ ನ್ಯಾಯಮೂರ್ತಿಗಳು ಮತ್ತು ಭವಿಷ್ಯದಲ್ಲಿ ನೇಮಕಗೊಳ್ಳುವ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಸರ್ವೋಚ್ಚ ನ್ಯಾಯಾಲಯದ ಅಂತರ್ಜಾಲ ತಾಣದಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎನ್ನುವ ನಿರ್ಧಾರ ಕೈಗೊಂಡಿತ್ತು.

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ, ಪ್ರಸ್ತುತ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿರುವ ಯಶವಂತ್ ವರ್ಮಾ ಅವರ ದೆಹಲಿ ನಿವಾಸದಲ್ಲಿ ಸಂಭವಿಸಿದ್ದ ಬೆಂಕಿ ಆಕಸ್ಮಿಕದ ವೇಳೆ ಸುಟ್ಟು ಕರಕಲಾಗಿರುವ ಅಪಾರ ಪ್ರಮಾಣದ ನಗದು ಹಣ ಇತ್ತೀಚೆಗೆ ಪತ್ತೆಯಾಗಿತ್ತು. ಈ ಘಟನೆಯಿಂದಾಗಿ ದೇಶಾದ್ಯಂತ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತಾದ ಚರ್ಚೆಯು ಮುನ್ನೆಲೆಗೆ ಬಂದಿತ್ತು. ಈ ಬೆಳವಣಿಗೆಗಳ ಬೆನ್ನಿಗೇ ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠವು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಆಸ್ತಿ ವಿವರವನ್ನು ತನ್ನ ಅಂತರ್ಜಾಲದ ತಾಣದಲ್ಲಿ ಘೋಷಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿತ್ತು.

ಸುಪ್ರೀಂ ಕೋರ್ಟ್‌ನ 33 ನ್ಯಾಯಮೂರ್ತಿಗಳ ಪೈಕಿ 30 ನ್ಯಾಯಮೂರ್ತಿಗಳು ಪ್ರಸ್ತುತ ಸಿಜೆಐ ಅವರಿಗೆ ತಮ್ಮ ಆಸ್ತಿ ವಿವರಗಳ ಸಲ್ಲಿಕೆಯನ್ನು ಮಾಡಿರುವುದು ತಿಳಿದು ಬಂದಿದ್ದು, ತಾಂತ್ರಿಕ ಕಾರಣಗಳಿಂದಾಗಿ ಈ ಮಾಹಿತಿಯನ್ನು ಅಂತರ್ಜಾಲದ ತಾಣದಲ್ಲಿ ಪ್ರಕಟಿಸಲಾಗಿಲ್ಲ.

ಸುಪ್ರೀಂ ಕೋರ್ಟ್ ಮತ್ತು ದೇಶಾದ್ಯಂತ ಇರುವ 25 ಹೈಕೋರ್ಟ್‌ಗಳ ವೆಬ್‌ತಾಣಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶವನ್ನು ಪರಿಶೀಲಿಸಿದಾಗ, ಏಪ್ರಿಲ್ 11, 2025 ರವರೆಗೆ, ಭಾರತದಲ್ಲಿ ಕೇವಲ 11.94% ಹಾಲಿ ನ್ಯಾಯಮೂರ್ತಿಗಳು ಮಾತ್ರ ತಮ್ಮ ಆಸ್ತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಆಸ್ತಿ ವಿವರಗಳ ಘೋಷಣೆ ವಿಚಾರದಲ್ಲಿ ಹೈಕೋರ್ಟ್‌ಗಳ ಸಾಧನೆ ಕಳಪೆಯಾಗಿದೆ. ಪ್ರಸ್ತುತ ದೇಶಾದ್ಯಂತ ಇರುವ 762 ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ 95 (12.46%) ಮಂದಿಯ ಆಸ್ತಿ ವಿವರಗಳು ಮಾತ್ರ ನ್ಯಾಯಾಲಯಗಳ ವೆಬ್‌ತಾಣದಲ್ಲಿ ಲಭ್ಯವಿವೆ.

ದೇಶದ ಒಟ್ಟು 25 ಹೈಕೋರ್ಟ್‌ಗಳಲ್ಲಿ 18 ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಆಸ್ತಿ ವಿವರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಪರ್ಯಾಸವೆಂದರೆ ಇದರಲ್ಲಿ ದೇಶದ ಅತಿದೊಡ್ಡ ಹೈಕೋರ್ಟ್ ಆದ ಅಲಹಾಬಾದ್ ಹೈಕೋರ್ಟ್ ಕೂಡ ಸೇರಿದೆ. ಪ್ರಸ್ತುತ ಅಲಾಹಾಬಾದ್‌ ಹೈಕೋರ್ಟ್‌ 81 ನ್ಯಾಯಮೂರ್ತಿಗಳನ್ನು ಹೊಂದಿದೆ.

ಕೇರಳ ಹೈಕೋರ್ಟ್‌ನ 44 ನ್ಯಾಯಮೂರ್ತಿಗಳಲ್ಲಿ 41 (93%) ನ್ಯಾಯಮೂರ್ತಿಗಳು ತಮ್ಮ ಆಸ್ತಿಯನ್ನು ಘೋಷಿಸುವ ಮೂಲಕ ದೇಶದ ಹೈಕೋರ್ಟ್‌ಗಳಲ್ಲಿಯೇ ಮುಂಚೂಣಿಯಲ್ಲಿದ್ದಾರೆ. ಅಂದಹಾಗೆ, ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ನಂತರವಷ್ಟೇ ಇದು ಸಂಭವಿಸಿದೆ.

ಉಳಿದಂತೆ, ಹಿಮಾಚಲ ಪ್ರದೇಶದ 12 ನ್ಯಾಯಮೂರ್ತಿಗಳಲ್ಲಿ 11 ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ 53 ನ್ಯಾಯಮೂರ್ತಿಗಳ ಪೈಕಿ 30 ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕಗೊಳಿಸಿದ್ದಾರೆ.

ದೆಹಲಿ ಹೈಕೋರ್ಟ್‌ನ 36 ನ್ಯಾಯಮೂರ್ತಿಗಳಲ್ಲಿ 7 ನ್ಯಾಯಮೂರ್ತಿಗಳು ಆಸ್ತಿ ವಿವರ ಘೋಷಿಸಿದ್ದಾರೆ. ಮದ್ರಾಸ್‌ ಹೈಕೋರ್ಟ್‌ನ ಐವರು ನ್ಯಾಯಮೂರ್ತಿಗಳು ಹಾಗೂ ಛತ್ತೀಸ್‌ಗಢದ ಒಬ್ಬರು ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ.

ನ್ಯಾಯಮೂರ್ತಿಗಳ ಆಸ್ತಿ ಘೋಷಣೆಯ ಕುರಿತಾದ ಅಂಕಿಅಂಶಗಳ ಮಾಹಿತಿ ಇಲ್ಲಿದೆ:

Kannada Bar & Bench
kannada.barandbench.com