ಪ್ರತಿಪಕ್ಷದ ಬಲ ಕುಗ್ಗಿಸುವ ಉದ್ದೇಶಪೂರ್ವಕ ಯತ್ನ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಮಾನತುಗೊಂಡ 12 ಬಿಜೆಪಿ ಶಾಸಕರು

ತಮ್ಮ ನಡೆಯ ಕುರಿತು ವಿವರಣೆ ನೀಡಲು ಶಾಸಕರಿಗೆ ಸ್ಪೀಕರ್‌ ಅವಕಾಶ ಮಾಡಿಕೊಡಬೇಕಿತ್ತು. ಆದರೆ, ಅದನ್ನು ಅವರು ಮಾಡಿಲ್ಲ ಎಂದು 12 ಶಾಸಕರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿಪಕ್ಷದ ಬಲ ಕುಗ್ಗಿಸುವ ಉದ್ದೇಶಪೂರ್ವಕ ಯತ್ನ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಮಾನತುಗೊಂಡ 12 ಬಿಜೆಪಿ ಶಾಸಕರು
Published on

ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಉಸ್ತುವಾರಿಯನ್ನು ನಿಂದಿಸಿದ್ದಲ್ಲದೇ ಅವರ ಜೊತೆ ಅಸಭ್ಯವಾಗಿ ವರ್ತಿಸಿದ ಬಿಜೆಪಿಯ 12 ಶಾಸಕರನ್ನು ಈಚೆಗೆ ಮಹಾರಾಷ್ಟ್ರ ವಿಧಾನಸಭೆಯಿಂದ ಅಮಾನತು ಮಾಡಲಾಗಿದ್ದು, ಇದನ್ನು ಪ್ರಶ್ನಿಸಿ ಅಮಾನತುಗೊಂಡಿರುವ ಶಾಸಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಘಟನೆ ಸಂಭವಿಸಿದಾಗ ಶಿವಸೇನೆಯ ಶಾಸಕರಾದ ಭಾಸ್ಕರ್‌ ಜಾಧವ್‌ ಅವರು ಸಭಾಧ್ಯಕ್ಷರ ಪೀಠದಲ್ಲಿದ್ದ ಸದನದ ಉಸ್ತುವಾರಿ ವಹಿಸಿದ್ದರು.

ವಿಧಾನಸಭೆಯಲ್ಲಿ ಪ್ರತಿಪಕ್ಷದ ಬಲವನ್ನು ಉದ್ದೇಶಪೂರ್ವಕವಾಗಿ ಕುಂದಿಸುವ ಉದ್ದೇಶದಿಂದ ತಮ್ಮನ್ನು ಅಮಾನತು ಮಾಡಲಾಗಿದೆ ಎಂದು ವಕೀಲರಾದ ಅಭಿಕಲ್ಪ್‌ ಪ್ರತಾಪ್‌ ಸಿಂಗ್‌ ಮತ್ತು ಸಿದ್ಧಾರ್ಥ್‌ ಧರ್ಮಾಧಿಕಾರಿ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಶಾಸಕರು ದೂರಿದ್ದಾರೆ.

ಶಾಸಕರಿಗೆ ವಿವರಣೆ ನೀಡಲು ಸಭಾಧ್ಯಕ್ಷರ ಪೀಠದಲ್ಲಿದ್ದ ಉಸ್ತುವಾರಿ ಅಧಿಕಾರಿ ಅವಕಾಶ ಮಾಡಿಕೊಡಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಸಭಾಧ್ಯಕ್ಷರ ಪೀಠದ ಮುಂದೆ ಆಡಳಿತ ಪಕ್ಷದ ಕೆಲವು ಶಾಸಕರೂ ಇದ್ದರು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಶಾಸಕರನ್ನು ಅಮಾನತು ಮಾಡುವ ಸಂಬಂಧ ಸಂಸದೀಯ ವ್ಯವಹಾರಗಳ ಸಚಿವ ಅನಿಲ್‌ ಪರಬ್‌ ಅವರು ಜುಲೈ 6ರಂದು ನಿಲುವಳಿ ಮಂಡಿಸಿದ್ದು, ಅದಕ್ಕೆ ಸದನವು ಬಹುಮತದ ಮೂಲಕ ಒಪ್ಪಿಗೆ ನೀಡಿದೆ. ಈ ಕ್ರಮವನ್ನು ಬಹಿಷ್ಕರಿಸಿದ್ದ ಬಿಜೆಪಿಯು ಸದನದಿಂದ ಹೊರ ನಡೆದಿದ್ದು, ವಿರೋಧ ಪಕ್ಷದ ಬಲ ಕುಂದಿಸುವ ಮೂಲಕ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿಯು ಆಡಳಿತಾರೂಢ ಮೈತ್ರಿಯ ವಿರುದ್ಧ ಆರೋಪಿಸಿದೆ.

Also Read
ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ಏನು ಹೇಳುತ್ತಿದೆ?

ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕ ದತ್ತಾಂಶವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮಹಾ ವಿಕಾಸ ಅಗಾಡಿ ಸರ್ಕಾರವು ಜಾರಿ ಮಾಡಿದ ನಿಲುವಳಿಗೆ ಸಂಬಂಧಿಸಿದಂತೆ ಸದನದಲ್ಲಿ ದಾಂಧಲೆ ಸೃಷ್ಟಿಯಾಗಿತ್ತು.

ಹಿರಿಯ ಸಚಿವ ಛಗನ್‌ ಭುಜಬಲ್‌ ಅವರು ನಿಲುವಳಿ ಮಂಡಿಸುವುದಕ್ಕೂ ಮುನ್ನ ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌ ಅವರು 15 ತಿಂಗಳಿಂದ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸಿಲ್ಲ. ಇದರಿಂದಾಗಿ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ರದ್ದಾಗಿದೆ ಎಂದು ಆಕ್ಷೇಪ ಎತ್ತಿದ್ದರು.

Kannada Bar & Bench
kannada.barandbench.com