ತಮ್ಮನ್ನು ಘೋರಾಪರಾಧ ಎಸಗಿದವರ ಜೊತೆ ಜೈಲಿನಲ್ಲಿ ಇರಿಸಿಲಾಗಿದ್ದು ತಕ್ಷಣ ಬಿಡುಗಡೆ ಮಾಡಬೇಕೆಂದು ಕೋರಿ ಹದಿಮೂರರಿಂದ 22 ವರ್ಷ ಜೈಲಿನಲ್ಲೇ ಕಳೆದ ಆಗ್ರಾದ 13 ಬಾಲಾಪರಾಧಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
2012ರಲ್ಲಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಗಿದ್ದು ಅದರಂತೆ ಬಾಲಾಪರಾಧ ಅರ್ಜಿಗಳನ್ನು ವಿಲೇವಾರಿ ಮಾಡಲು ಬಾಲಾಪರಾಧ ನ್ಯಾಯ ಮಂಡಳಿಗೆ ನಿರ್ದೇಶನ ನೀಡಲಾಗಿದೆ ಎಂದು ವಕೀಲ ರಿಷಿ ಮಲ್ಹೋತ್ರಾ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿದಾರರನ್ನು ಬಾಲಾಪರಾಧಿಗಳೆಂದು ಘೋಷಿಸುವ ನ್ಯಾಯ ಮಂಡಳಿಯ ಸ್ಪಷ್ಟ ಮತ್ತು ಸಂದೇಹಾತೀತ ತೀರ್ಪಿನ ಹೊರತಾಗಿಯೂ ಮತ್ತು ಅವರೆಲ್ಲಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬ ಸ್ಪಷ್ಟ ವಿವರ ಲಭ್ಯ ಇದ್ದರೂ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದು ಉತ್ತರ ಪ್ರದೇಶದ ದುರದೃಷ್ಟಕರ ಮತ್ತು ವಿಷಾದನೀಯ ಸ್ಥಿತಿಯ ಸೂಚಕ ಎಂದು ಅರ್ಜಿದಾರರು ಹೇಳಿದ್ದಾರೆ.
ಆಗ್ರಾದ ಕೇಂದ್ರ ಕಾರಾಗೃಹದಲ್ಲಿ 14ರಿಂದ 22 ವರ್ಷಗಳವರೆಗೆ ಇವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಬಾಲಾಪರಾಧಿ ನ್ಯಾಯ ಕಾಯ್ದೆ- 2000ರ ಸೆಕ್ಷನ್ 26ರೊಂದಿಗೆ ಸೆಕ್ಷನ್ 15ನ್ನು ಓದಿದಾಗ ಗರಿಷ್ಠ ಸೆರೆವಾಸದ ಅವಧಿ 3 ವರ್ಷಗಳು ಮತ್ತು ಅಂತಹ ಸೆರೆವಾಸವನ್ನು ಅವರ ಮನೆಗಳಲ್ಲಿ ವಿಧಿಸಬೇಕು ಎಂದು ತಿಳಿಸಲಾಗಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಘೋರಾಪರಾಧ ಎಸಗಿದ ಕೈದಿಗಳ ಜೊತೆ ಬಾಲಾಪರಾಧಿಗಳನ್ನು ಇರಿಸಲಾಗಿದೆ. ಇದು ಕಾಯಿದೆಯ ಉದ್ದೇಶ ಮತ್ತು ಗುರಿಯ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಹದಿಮೂರು ಪ್ರಕರಣಗಳಲ್ಲಿ ಬಹುತೇಕರು ತಮ್ಮ ಮೇಲೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಹೂಡಲಾಗಿರುವ ಮೊಕದ್ದಮೆಗಳನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅವರು ಕಾಯಿದೆಯಡಿ ಗರಿಷ್ಠ ಜೈಲುವಾಸ ಅನುಭವಿಸಿದ್ದಾರೆ ಎಂಬುದನ್ನು ಪರಿಗಣಿಸಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕೋರಲಾಗಿದೆ.