ಈ ವರ್ಷದ ಆಗಸ್ಟ್‌ನಿಂದ ಡಿಸೆಂಬರ್ ನಡುವೆ 135 ಕೋಟಿ ಡೋಸ್‌ನಷ್ಟು ಲಸಿಕೆ ಲಭಿಸುವ ಸಾಧ್ಯತೆ ಇದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿರುವ ಕೇಂದ್ರ ಸರ್ಕಾರ ಡಿಜಿಟಲ್ ಕಂದರದಿಂದ ಲಸಿಕೆ ಅಭಿಯಾನಕ್ಕೆ ತೊಂದರೆಯಾಗದು ಎಂದು ಸ್ಪಷ್ಟಪಡಿಸಿದೆ.
ಕೋವಿಡ್ ನಿರ್ವಹಣೆ ಕುರಿತಂತೆ ದಾಖಲಿಸಿಕೊಳ್ಳಲಾಗಿರುವ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಮಾಹಿತಿ ನೀಡಲಾಗಿದೆ. ಕೇಂದ್ರ ಸರ್ಕಾರ ಹೇಳಿದ್ದು ಕಾರ್ಯರೂಪಕ್ಕೆ ಬಂದರೆ ಈ ವರ್ಷದ ಅಂತ್ಯದ ಹೊತ್ತಿಗೆ ದೇಶದ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ಪೂರ್ಣಗೊಂಡಂತಾಗುತ್ತದೆ. 135 ಕೋಟಿ ಡೋಸ್‌ನಲ್ಲಿ 50 ಕೋಟಿಯಷ್ಟು ಡೋಸ್ ಕೋವಿಶೀಲ್ಡ್‌ನದಾಗಿದ್ದರೆ 40 ಕೋಟಿಯಷ್ಟು ಕೊವ್ಯಾಕ್ಸಿನ್ ಲಸಿಕೆಯಾಗಿದೆ. ಇನ್ನು10 ಕೋಟಿಯಷ್ಟು ಲಸಿಕೆ ರಷ್ಯಾ ತಯಾರಿಸಿದ ಸ್ಫುಟ್ನಿಕ್- ವಿಯದ್ದಾಗಿದೆ. ಉಳಿದ 30 ಕೋಟಿಯಷ್ಟು ಲಸಿಕೆಯನ್ನು ಬಯೋ ಇ ಸಬ್ ಒದಗಿಸಿದರೆ ಜೈಡಸ್ ಕ್ಯಾಡಿಲಾ 5 ಕೋಟಿ ಡೋಸ್ ಪೂರೈಸಲಿದೆ. ಆದರೆ ಈ ಎರಡೂ ಲಸಿಕೆಗಳಿಗೆ ಕೇಂದ್ರ ಸರ್ಕಾರ ಇನ್ನಷ್ಟೇ ಅನುಮೋದನೆ ನೀಡಬೇಕಿದ್ದು ಶೀಘ್ರದಲ್ಲೇ ಅದು ಸಾಕಾರಗೊಳ್ಳಲಿದೆ ಎಂದು ಕೇಂದ್ರ ತಿಳಿಸಿದೆ.
ಈ ವರ್ಷದ ಜನವರಿಯಿಂದ ಜುಲೈವರೆಗೆ 51.6 ಕೋಟಿಯಷ್ಟು ಡೋಸ್‌ಗಳು ಲಭಿಸಿವೆ. ಇನ್ನೂ93- 94 ಕೋಟಿ ಮಂದಿಗೆ ಲಸಿಕೆ ಹಾಕಬೇಕಿರುವುದರಿಂದ ಎರಡು ಡೋಸ್‌ಗಳಂತೆ ನೀಡಲು 186.6 ಕೋಟಿ ಡೋಸ್‌ನಷ್ಟು ಲಸಿಕೆ ಅಗತ್ಯವಿದೆ. ಜುಲೈ ಅಂತ್ಯದ ಹೊತ್ತಿಗೆ 51.6 ಕೋಟಿ ಲಸಿಕೆ ನೀಡಿರುವುದರಿಂದ ಇನ್ನು135 ಕೋಟಿಯಷ್ಟು ಡೋಸ್ ಲಸಿಕೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ "ಸ್ವೇಚ್ಛೆಯಿಂದ ಕೂಡಿದೆ" ಎಂದು ಕೇಂದ್ರದ ಲಸಿಕಾ ನೀತಿಯನ್ನು ಈ ಹಿಂದೆ ಟೀಕಿಸಿತ್ತು.
ʼಲಸಿಕೆ ನೀಡುವಿಕೆ ಅಭಾದಿತʼ ಅಭಾದಿತ
ಇದೇ ವೇಳೆ ಕೇಂದ್ರ ಸರ್ಕಾರ ಸ್ಥಳದಲ್ಲೇ ನೋಂದಣಿ ಮಾಡಿಸಿ ಆಗಲೇ ಲಸಿಕೆ ಪಡೆಯುವುದಕ್ಕೆ ಅನುಮತಿ ನೀಡಲಾಗಿದ್ದು ಲಸಿಕೆ ಪಡೆಯಲು ಡಿಜಿಟಲ್ ಕಂದರ ಅಡ್ಡಿಯಾಗದು ಎಂದು ತಿಳಿಸಿದೆ. ಅಂತರ್ಜಾಲ ಅಥವಾ ಡಿಜಿಟಲ್ ಸಾಧನಗಳ ಲಭ್ಯತೆ ಇಲ್ಲದ ಅಥವಾ ಸ್ವಯಂ ನೋಂದಣಿ ಮಾಡಿಕೊಳ್ಳಲು ಇಚ್ಛೆ ಇಲ್ಲದವರು ಲಸಿಕೆ ಪಡೆಯಲು ಬಯಸಿದರೆ ಹತ್ತಿರದ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಬಹುದು. ಆಯಾ ಕೇಂದ್ರಗಳಲ್ಲೇ ಆರೋಗ್ಯ ಕಾರ್ಯಕರ್ತರು ಅವರನ್ನು ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಂಡು ಲಸಿಕೆ ನೀಡುತ್ತಾರೆ ಎಂದು ಅದು ಹೇಳಿದೆ.
ಲಸಿಕೆ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳ ಪಾತ್ರವನ್ನು ವಿವರಿಸಿರುವ ಕೇಂದ್ರ ಸರ್ಕಾರ "ಯಾವುದೇ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದಲ್ಲಿ – ಅದು ಲಸಿಕೆ ನೀಡುವುದಿರಲಿ ಅಥವಾ ಇಲ್ಲದಿರಲಿ, ಖಾಸಗಿ ಆಸ್ಪತ್ರೆಗಳ ಪಾಲ್ಗೊಳ್ಳುವಿಕೆ ಯಾವಾಗಲೂ ಅಪೇಕ್ಷಣೀಯವಾಗಿದೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ದೇಶದ ಜನಸಂಖ್ಯೆಯ ಸರಿಸುಮಾರು ಶೇ 55 ಜನರು ಖಾಸಗಿ ಆಸ್ಪತ್ರೆಗಳಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಾರೆ. ಇನ್ನು ಶೇ 45 ಮಂದಿ ಸರ್ಕಾರಿ ಆಸ್ಪತ್ರೆಗಳಿಂದ ಆರೋಗ್ಯ ಸೇವೆಗಳನ್ನು ಪಡೆಯುತ್ತಾರೆ” ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ.
ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ನಾಗರಿಕರಿಗೆ ಕೋವಿಡ್ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತಿದ್ದರೂ ʼವರ್ಗಾವಣೆ ಮಾಡಲಾಗದ ವೋಚರ್ʼಗಳನ್ನು ಬಳಸುವ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಿಗೂ ಖಾಸಗಿ ಲಸಿಕಾ ಕೇಂದ್ರಗಳು ಲಭಿಸುವಂತೆ ಮಾಡುವ ಹೊಸ ಪರಿಕಲ್ಪನೆಯನ್ನು ಪರಿಶೀಲಿಸಲಾಗಿದೆ ಎಂದು ಅದು ವಿವರಿಸಿದೆ.
ರಾಷ್ಟ್ರೀಯ ಕೋವಿಡ್ ಲಸಿಕಾ ಕಾರ್ಯಕ್ರಮದಡಿ ಸೌಲಭ್ಯ ಒದಗಿಸದ ಕಾರಣ ಅಂಗವಿಕಲರ ಮನೆಗಳಿಗೆ ತೆರಳಿ ಲಸಿಕೆ ನೀಡಲಾಗುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.