ಸಮಾರೋಪಗೊಂಡ ಕಾನೂನು ನೆರವು ಅಭಿಯಾನ: ನೊಂದವರಿಗೆ ಸ್ಥಳದಲ್ಲೇ ನ್ಯಾಯದಾನದ ಭರವಸೆಯಿತ್ತ ನ್ಯಾಯಾಧೀಶರು

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಕಾನೂನು ನೆರವು ಮತ್ತು ಜಾಗೃತಿ ಅಭಿಯಾನ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯಿತು.
Judge B G Shobha and others
Judge B G Shobha and others
Published on

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹದಿನಾಲ್ಕು ದಿನಗಳ ಕಾನೂನು ನೆರವು ಮತ್ತು ಜಾಗೃತಿ ಅಭಿಯಾನ ಭಾನುವಾರ ಸಮಾರೋಪಗೊಂಡಿತು. ಒಟ್ಟು 14 ದಿನಗಳಲ್ಲಿ ಮನೆ ಮನೆ ಭೇಟಿ, ಪಂಚಾಯತ್, ವಾರ್ಡ್ ಮಟ್ಟದಲ್ಲಿ ಸಭೆಗಳು ನಡೆದಿದ್ದು, ಎಲ್ಲೆಡೆ ನಾಗರಿಕರ ಪ್ರತಿಕ್ರಿಯೆ ಆಶಾದಾಯಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಬಿ. ಜಿ. ಶೋಭಾ ಹೇಳಿದರು.

ಮಂಗಳೂರಿನ ಮೇರಿಹಿಲ್ ಮೆಲೇನಿ ರೆಸಿಡೆನ್ಸಿ ಹಾಲ್‌ನಲ್ಲಿ ನಡೆದ 14 ದಿನಗಳ ಅಭಿಯಾನದ ಅಂತಿಮ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ  ಏರ್ಪಡಿಸಲಾಗಿದ್ದ ಅಭಿಯಾನವನ್ನು ಪೃಥ್ವಿ ಸ್ವಯಂವೇಕರು ಚಾರಿಟೆಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿತ್ತು.

Also Read
ನಕ್ಸಲ್ ನಂಟಿನ ಆರೋಪ ಪ್ರಕರಣ: ವಿಠಲ ಮಲೆಕುಡಿಯ ಹಾಗೂ ಅವರ ತಂದೆ ನಿರ್ದೋಷಿ ಎಂದು ತೀರ್ಪು ನೀಡಿದ ಮಂಗಳೂರು ನ್ಯಾಯಾಲಯ

ಸರ್ವರಿಗೂ ಕಡ್ಡಾಯ ಶಿಕ್ಷಣ, ಆರೋಗ್ಯದ ಹಕ್ಕು ಇದ್ದಂತೆ ಎಲ್ಲರಿಗೂ ಕಾನೂನು ನೆರವು ಲಭಿಸಬೇಕು. ಅದಕ್ಕಾಗಿಯೇ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರವು, ಅಗತ್ಯವಿರುವ ನಾಗರಿಕರಿಗೆ ಕಾನೂನು ನೆರವು ನೀಡಲು ಸದಾ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ಯಾನೆಲ್ ವಕೀಲರಾದ ಹರೀಶ್ಚಂದ್ರ ಅವರು ಜನನ ಮರಣ ನೋಂದಣಿ ಬಗ್ಗೆ ವಿವರ ನೀಡಿದರೆ, ಕೌಟುಂಬಿಕ ದೌರ್ಜನ್ಯಗಳ ತಡೆ ಕಾಯಿದೆ ಬಗ್ಗೆ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ನ್ಯಾಯವಾದಿಗಳಾದ ವಾಸುದೇವ ಗೌಡ, ಗೌರಿ, ಪ್ರಶಾಂತ್ ಪೂಜಾರಿ, ಶುಕರಾಜ್ ಕೊಟ್ಟಾರಿ, ಜೀಟಾ ಪ್ರಿಯ ಮೋರಸ್‌, ರತ್ನ ಕುಂದರ್, ಪ್ರಫುಲ್ಲ ಹಾಗೂ ಜಯಶ್ರೀ ಉಪಸ್ಥಿತರಿದ್ದರು.

ಸ್ಥಳದಲ್ಲೇ ಕಾನೂನು ನೆರವು: ಅಭಿಯಾನದ ಕೊನೆಯ ದಿನವಾದ ಭಾನುವಾರ ನಾಗರಿಕರು ತಮ್ಮ ಅಹವಾಲುಗಳನ್ನು ನ್ಯಾಯಾಧೀಶೆ ಶೋಭಾ ಅವರ ಮುಂದೆ ನಿವೇದಿಸಿಕೊಂಡರು. ಕೌಟುಂಬಿಕ ವ್ಯಾಜ್ಯ,  ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳ ವಿರುದ್ಧದ ದೂರು ಹಾಗೂ ಕಂದಾಯ ಅಧಿಕಾರಿಗಳಿಗೆ ಸಂಬಂಧಿಸಿದ ಅಹವಾಲು ಸೇರಿದಂತೆ ಮೂರು ಪ್ರಕರಣಗಳಿಗೆ ಖುದ್ದು ನ್ಯಾಯಾಧೀಶರೇ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದಾಗಿ ಭರವಸೆ ನೀಡಿದರು. ಈ ಬಗ್ಗೆ ನೊಂದ ವ್ಯಕ್ತಿಗಳ ಜೊತೆಗೆ ವೈಯಕ್ತಿಕವಾಗಿ ಮಾತನಾಡಿದ ನ್ಯಾಯಾಧೀಶೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಾಂತ್ವನ ಹೇಳಿದರು.

Kannada Bar & Bench
kannada.barandbench.com