ಕಳೆದ ವರ್ಷ ದೇಶದ ವಿಚಾರಣಾ ನ್ಯಾಯಾಲಯಗಳು ವಿಧಿಸಿದ ಮರಣದಂಡನೆ ಶಿಕ್ಷೆಯ ಸಂಖ್ಯೆ144; ಶೇ. 54 ಲೈಂಗಿಕ ಅಪರಾಧ ಪ್ರಕರಣಗಳು

ದೇಶದ ವಿಚಾರಣಾ ನ್ಯಾಯಾಲಯಗಳು ಅಧಿಕ ಪ್ರಮಾಣದಲ್ಲಿ ಮರಣದಂಡನೆ ವಿಧಿಸಿರುವುದರಿಂದ ಮರಣದಂಡನೆಗೊಳಗಾದ ಖೈದಿಗಳ ಒಟ್ಟು ಸಂಖ್ಯೆ ದೇಶದಲ್ಲಿ 488ಕ್ಕೆ ಏರಿದೆ. 2004ರ ನಂತರ ಇದುವೇ ಅಧಿಕವಾಗಿದೆ.
Death Sentence

Death Sentence

Published on

ದೇಶಾದ್ಯಂತ ವಿಚಾರಣಾ ನ್ಯಾಯಾಲಯಗಳು 2021ರಲ್ಲಿ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 144 ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸಿವೆ. ಇದು ಕೋವಿಡ್‌ ಸಾಂಕ್ರಾಮಿಕದ ಆರಂಭಿಕ ವರ್ಷವಾದ 2020ರಲ್ಲಿ ಮರಣದಂಡನೆ ವಿಧಿಸಲಾದ 77 ಪ್ರಕರಣಗಳ ಹೋಲಿಕೆಯಲ್ಲಿ ಸರಿಸುಮಾರು ದುಪ್ಪಟ್ಟಾಗಿದೆ ಎಂದು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಂಶೋಧನಾ ಸಂಸ್ಥೆಯ 39ಎ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ.

ಈ ಬಾರಿಯೂ ಸಹ 2020ರಂತೆಯೇ ಮರಣದಂಡನೆಗೆ ಒಳಪಟ್ಟ ಪ್ರಕರಣಗಳಲ್ಲಿ ಲೈಂಗಿಕ ಅಪರಾಧಗಳ ಸಂಖ್ಯೆಯೇ ಹೆಚ್ಚಿದ್ದು, ಇದರ ಪ್ರಮಾಣ ಶೇ. 54.21 ಆಗಿದೆ. 2021ರಲ್ಲಿ ವಿಚಾರಣಾ ನ್ಯಾಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಣದಂಡನೆ ವಿಧಿಸಿರುವುದರಿಂದ ದೇಶದಲ್ಲಿ ಪ್ರಸ್ತುತ ಮರಣದಂಡನೆಗೊಳಪಟ್ಟಿರುವ ಖೈದಿಗಳ ಸಂಖ್ಯೆ 488. ಇದು 2020ರ ಹೋಲಿಕೆಯಲ್ಲಿ ಶೇ. 21ರಷ್ಟು ಅಧಿಕವಾಗಿದೆ ಎಂದು ವರದಿ ಹೇಳಿದೆ. 2004ರ ನಂತರ ಇದೇ ಮೊದಲ ಬಾರಿಗೆ ದೇಶದಲ್ಲಿ ಮರಣದಂಡನೆಗೊಳಗಾದ ಅಪರಾಧಿಗಳ ಸಂಖ್ಯೆ ಈ ಪ್ರಮಾಣಕ್ಕೆ ಏರಿದೆ.

ಕಳೆದ ವರ್ಷದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಣದಂಡನೆ ಶಿಕ್ಷೆಯನ್ನು ಕಂಡಿರುವ ರಾಜ್ಯಗಳೆಂದರೆ ಉತ್ತರ ಪ್ರದೇಶ (34), ಬಿಹಾರ (27), ತಮಿಳುನಾಡು (15), ಆಂಧ್ರಪ್ರದೇಶ (13) ಮತ್ತು ಒಡಿಶಾ (9). ಡಿಸೆಂಬರ್‌ 31, 2021ರಂತೆ ಅತಿ ಹೆಚ್ಚು ಮರಣದಂಡನೆ ಅಪರಾಧಿಗಳನ್ನು ಹೊಂದಿರುವ ರಾಜ್ಯಗಳೆಂದರೆ ಉತ್ತರ ಪ್ರದೇಶ (86), ಮಹಾರಾಷ್ಟ್ರ (41), ಪಶ್ಚಿಮ ಬಂಗಾಳ (38), ಬಿಹಾರ (27) ಮತ್ತು ಮಧ್ಯಪ್ರದೇಶ (37).

Kannada Bar & Bench
kannada.barandbench.com