ತುರ್ತು ಪರಿಸ್ಥಿತಿ ವೇಳೆ 16 ನ್ಯಾಯಮೂರ್ತಿಗಳು ಏಕಕಾಲಕ್ಕೆ ವರ್ಗಾವಣೆ ಆಗಿದ್ದರು, ಈಗ 24 ಮಂದಿ ವರ್ಗ: ನ್ಯಾ. ಚೌಧರಿ

ನ್ಯಾಯಮೂರ್ತಿ ಬಿಬೇಕ್ ಚೌಧರಿ ಅವರನ್ನು ಪಾಟ್ನಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದ್ದು, ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸಿಗೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಮೂರ್ತಿ ಬಿಬೇಕ್ ಚೌಧರಿ ಮತ್ತು ಕಲ್ಕತ್ತಾ ಹೈಕೋರ್ಟ್
ನ್ಯಾಯಮೂರ್ತಿ ಬಿಬೇಕ್ ಚೌಧರಿ ಮತ್ತು ಕಲ್ಕತ್ತಾ ಹೈಕೋರ್ಟ್

ತುರ್ತು ಪರಿಸ್ಥಿತಿ ವೇಳೆ, ವಿವಿಧ ಹೈಕೋರ್ಟ್‌ಗಳ ಕನಿಷ್ಠ 16 ನ್ಯಾಯಮೂರ್ತಿಗಳನ್ನು ಒಂದೇ ಬಾರಿಗೆ ವರ್ಗಾಯಿಸಲಾಗಿತ್ತು. ಅದಾಗಿ 48 ವರ್ಷಗಳ ನಂತರ ಏಕಕಾಲಕ್ಕೆ 24 ನ್ಯಾಯಮೂರ್ತಿಗಳನ್ನು ಕೊಲಿಜಿಯಂ ವರ್ಗ ಮಾಡಿದೆ ಎಂದು ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಬಿಬೇಕ್ ಚೌಧರಿ ಸೋಮವಾರ ಹೇಳಿದ್ದಾರೆ.

ನ್ಯಾಯಮೂರ್ತಿ ಚೌಧರಿ ಅವರನ್ನು ಪಾಟ್ನಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದ್ದು, ಈ ಸಂಬಂಧ ನವೆಂಬರ್ 13ರಂದು ಅಧಿಸೂಚನೆ ಹೊರಡಿಸಲಾಗಿದೆ. ಆಗಸ್ಟ್ 11 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸಿಗೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಹೈಕೋರ್ಟ್ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ತಾನು ಆ ಇತಿಹಾಸದ ಭಾಗವಾಗಲಿರುವುದಾಗಿ ನ್ಯಾ. ಚೌಧರಿ ತಿಳಿಸಿದರು. "ನಮ್ಮ ಮುಖ್ಯ ನ್ಯಾಯಮೂರ್ತಿ (ಟಿ ಎಸ್‌ ಶಿವಜ್ಞಾನಂ) ಯಾವಾಗಲೂ ನಾನು ನೇರ ಮಾತನಾಡುವ ನ್ಯಾಯಮೂರ್ತಿ ಎಂದು ಹೇಳುತ್ತಿರುತ್ತಾರೆ. ಇದು ನಿಮ್ಮೊಂದಿಗಿನ ಕೊನೆಯ ಸಭೆಯಾಗಿದ್ದು 1975 ರ ತುರ್ತು ಪರಿಸ್ಥಿತಿಯ ಸಮಯದಲ್ಲಿ, ವಿವಿಧ ಹೈಕೋರ್ಟ್‌ಗಳ 16 ನ್ಯಾಯಮೂರ್ತಿಗಳನ್ನು ಒಂದೇ ಬಾರಿಗೆ ವರ್ಗಾಯಿಸಲಾಗಿತ್ತು ಎಂಬ ಅಂಶವನ್ನು ನಾನು ಹೇಳಲೇಬೇಕು. ಸುಮಾರು 48 ವರ್ಷಗಳ ನಂತರ, ಈಗ ಕೊಲಿಜಿಯಂ ಒಂದೇ ಬಾರಿಗೆ 24 ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿದೆ. ಆದ್ದರಿಂದ, ಅಧಿಕಾರವನ್ನು ಕಾರ್ಯಾಂಗದ ಕೈಯಿಂದ ನ್ಯಾಯಾಂಗದ ಕೈಗೆ ವರ್ಗಾಯಿಸುವ ಈ ಬದಲಾವಣೆಯ ಆರಂಭಿಕರಲ್ಲಿ ನಾನೂ ಒಬ್ಬ" ಎಂದು ನ್ಯಾಯಮೂರ್ತಿ ಚೌಧರಿ ಹೇಳಿದರು.

Also Read
ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಇಬ್ಬರು ಸಿಖ್ ಅಭ್ಯರ್ಥಿಗಳ ನೇಮಕ ಮಾಡದ ಕೇಂದ್ರ: ಸುಪ್ರೀಂ ಕೋರ್ಟ್‌ ತಕರಾರು

ಜನವರಿ 28, 1983 ರಂದು ಕೈಗೊಂಡ ನೀತಿ ನಿರ್ಣಯವೊಂದರಲ್ಲಿ ಭಾರತ ಸರ್ಕಾರವು ಪ್ರತಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬೇರೆ ಹೈಕೋರ್ಟ್‌ನಿಂದ ಬಂದವರಾಗಿರಬೇಕು ಎಂದಿತ್ತು. ಪ್ರತಿ ಹೈಕೋರ್ಟ್‌ನ ಮೂರನೇ ಒಂದು ಭಾಗದಷ್ಟು ನ್ಯಾಯಮೂರ್ತಿಗಳು ಹೊರಗಿನವರಾಗಿರಬೇಕು ಎಂದು ಸರ್ಕಾರದ ನಿರ್ಧಾರ ಕಡ್ಡಾಯ ಮಾಡಿದೆ. ನಮ್ಮ ವರ್ಗಾವಣೆಯಿಂದ ಆ ನೀತಿ ಜಾರಿ ಪ್ರಾರಂಭವಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ವಿವರಿಸಿದರು.

ಪಾಟ್ನಾಕ್ಕೆ ವರ್ಗಾವಣೆಯಾಗಿರುವುದರಿಂದ ಕೂಡಲೇ ಕರ್ತವ್ಯದಲ್ಲಿ ತೊಡಗಲು ಸಾಧ್ಯವಾಗದು ಎಂದ ಅವರು ಕುಟುಂಬಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿರುವ ಕಾರಣ ನೀಡಿದರು. ಈ ವೇಳೆ, "ನನಗೆ ಮತ್ತು ವರ್ಗಾವಣೆಗೊಂಡ ಎಲ್ಲಾ ನ್ಯಾಯಮೂರ್ತಿಗಳಿಗೆ ತಮ್ಮ ಮಾತೃ ಹೈಕೋರ್ಟ್‌ಗಳಲ್ಲಿ ಕೆಲಸ ಮಾಡಲು ಅವಕಾಶವಿದ್ದರೆ ಇದು (ಹಲವಾರು ದಿನಗಳವರೆಗೆ ಕರ್ತವ್ಯಗಳನ್ನು ನಿರ್ವಹಿಸದಿರುವುದು) ಸಂಭವಿಸುತ್ತಿರಲಿಲ್ಲ" ಎಂದು ಹೇಳಿದರು.

Kannada Bar & Bench
kannada.barandbench.com