ಕಳೆದ ಎರಡು ವರ್ಷದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989 ರ ಅಡಿ 1,787 ಪ್ರಕರಣಗಳನ್ನು ಖುಲಾಸೆ ಮಾಡಲಾಗಿದ್ದು ಕೇವಲ 85 ಪ್ರಕರಣಗಳಲ್ಲಿ ಮಾತ್ರವೇ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.
ಇದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಮೇಲ್ಮನವಿ ಸಲ್ಲಿಸಲು ಇರುವ ಪ್ರಕ್ರಿಯೆಯ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
"ಹೆಚ್ಚುವರಿ ಸರ್ಕಾರಿ ವಕೀಲರು ಈ ಸಂಬಂಧ ಮಾಹಿತಿ ಚಿತ್ರವೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ 2019ರಲ್ಲಿ 1,097 ಪ್ರಕರಣಗಳು ಖುಲಾಸೆಗೊಡಿರುವುದಾಗಿಯೂ, 39 ಪ್ರಕರಣಗಳನ್ನು ಪ್ರಾಸಿಕ್ಯೂಷನ್ ಉಪ ನಿರ್ದೇಶಕರ ಮುಂದೆ ರವಾನಿಸಿರುವುದಾಗಿಯೂ ತಿಳಿಸಿರುತ್ತಾರೆ. 2020ರಲ್ಲಿ 690 ಪ್ರಕರಣಗಳಲ್ಲಿ ಕೇವಲ 46 ಪ್ರಕರಣಗಳನ್ನು ಮಾತ್ರವೇ ರವಾನಿಸಲಾಗಿದೆ… ಖುಲಾಸೆಯ ವಿರುದ್ಧ ಮನವಿ ಸಲ್ಲಿಸಲು ಇರುವ ಪ್ರಕ್ರಿಯೆಯ ಬಗ್ಗೆ ಉಪ ನಿರ್ದೇಶಕರು ವಿವರಣೆ ನೀಡಬೇಕು,” ಎಂದು ನ್ಯಾಯಾಲಯ ಹೇಳಿದೆ.
ಎಸ್‌ಸಿ/ಎಸ್‌ಟಿ ತಡೆ ಕಾಯಿದೆಯ ಸೂಕ್ತ ಅನುಷ್ಠಾನ ಮತ್ತು ಅದರಡಿ ರೂಪಿಸಿರುವ ನಿಯಮಾವಳಿಗಳ ಬಗೆಗಿನ ಮನವಿಯ ವಿಚಾರಣೆಯನ್ನು ಬುಧವಾರ ನ್ಯಾಯಾಲಯವು ನಡೆಸಿತ್ತು. ಈ ಸಂದರ್ಭದಲ್ಲಿ ಮೇಲಿನ ಅಂಶಗಳನ್ನು ನ್ಯಾಯಾಲಯವು ಗಮನಿಸಿತು. ವಿಚಾರಣೆಯ ವೇಳೆ, ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ನ್ಯಾಯಾಲಯವು ಪ್ರಶ್ನಿಸಿತು. ಇದಕ್ಕೆ ಸರ್ಕಾರದ ಪರ ವಕೀಲರು, ಮೇಲ್ಮನವಿಗೆ ಹೋಗಬೇಕಾದ ಪ್ರಕರಣಗಳ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಪ್ರತಿಯಾಗಿ ನ್ಯಾಯಾಲಯವು, ಇಷ್ಟು ಅಲ್ಪ ಪ್ರಮಾಣದ ಪ್ರಕರಣಗಳಲ್ಲಿ ಮಾತ್ರವೇ ಏಕೆ ಮೇಲ್ಮನವಿಗೆ ಮುಂದುವರೆಯಲಾಗಿದೆ ಎಂದು ಪ್ರಶ್ನಿಸಿತು. ಬಹುತೇಕ ಪ್ರಕರಣಗಳಲ್ಲಿ ಸಾಕ್ಷಿಗಳು ವಿರುದ್ಧವಾಗಿದ್ದಾಗಿ ಸರ್ಕಾರದ ಪರ ವಕೀಲರು ಉತ್ತರಿಸಿದರು. ಈ ಅಂಕಿಗಳ ಬಗ್ಗೆ ವಿವರಣೆಯ ಅಗತ್ಯವಿದೆ ಎಂದು ನ್ಯಾಯಾಲಯವು ವಿವರಣೆಯನ್ನು ಬಯಸಿತು.
ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 16ರಂದು ನಡೆಯಲಿದೆ.