ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸ್ಸು ಮಾಡಿದ್ದ 18 ಹೆಸರುಗಳನ್ನು ಕೇಂದ್ರ ಸರ್ಕಾರವು ಮರುಪರಿಶೀಲಿಸಲು ಸೂಚಿಸಿ ಕೊಲಿಜಿಯಂ ಸಮಿತಿಗೆ ಮರಳಿಸಿರುವ ಮಾಹಿತಿಯನ್ನು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ರಾಜ್ಯಸಭೆಗೆ ಗುರುವಾರ ಮಾಹಿತಿ ನೀಡಿದರು.
ಇದಲ್ಲದೆ ಕೊಲಿಜಿಯಂ ಶಿಫಾರಸ್ಸು ಮಾಡಿರುವ 64 ಹೆಸರುಗಳು ಸರ್ಕಾರದ ಮುಂದೆ ಬಾಕಿ ಇವೆ ಎನ್ನುವ ಮಾಹಿತಿಯನ್ನು ಸಚಿವರು ನೀಡಿದರು. ರಾಜ್ಯಸಭಾ ಸದಸ್ಯರಾದ ಸಿಪಿಐ(ಎಂ)ನ ಜಾನ್ ಬ್ರಿಟ್ಟಾಸ್ ಮತ್ತು ಆಮ್ ಆದ್ಮಿ ಪಕ್ಷದ ರಾಘವ್ ಛಡ್ಡಾ ಅವರು ಕೇಳಿದ್ದ ಎರಡು ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
ರಿಜಿಜು ಉತ್ತರದ ಪ್ರಮುಖಾಂಶಗಳು:
ಮರಳಿಸಲಾಗಿರುವ 18 ಹೆಸರುಗಳಲ್ಲಿ, 6 ಹೆಸರುಗಳನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಸಮಿತಿಯು (ಎಸ್‌ಸಿಸಿ) ಪುನರುಚ್ಚರಿಸಿದ್ದು, 7 ಹೆಸರುಗಳ ಸಂಬಂಧ ಹೆಚ್ಚಿನ ಮಾಹಿತಿಯನ್ನು ಹೈಕೋರ್ಟ್‌ನ ಕೊಲಿಜಿಯಂಗಳಿಂದ ಎಸ್‌ಸಿಸಿ ಕೋರಿದೆ. ಉಳಿದಂತೆ 5 ಹೆಸರುಗಳನ್ನು ಹೈಕೋರ್ಟ್‌ಗಳಿಗೆ ಹಿಂದಿರುಗಿಸಲಾಗಿದೆ.
ಎಸ್‌ಸಿಸಿ ಶಿಫಾರಸ್ಸು ಮಾಡಿರುವ 64 ಹೆಸರುಗಳು ವಿವಿಧ ಪ್ರಕ್ರಿಯಾ ಹಂತದಲ್ಲಿವೆ.
ವಿವಿಧ ಹೈಕೋರ್ಟ್‌ಗಳಲ್ಲಿ ಒಟ್ಟು ಅನುಮತಿಸಲಾಗಿರುವ ನ್ಯಾಯಮೂರ್ತಿಗಳ ಹುದ್ದೆಯ ಸಂಖ್ಯೆ 1108 ಆಗಿದ್ದು, ಇದರಲ್ಲಿ 775 ಹುದ್ದೆಗಳು ಭರ್ತಿಯಾಗಿದ್ದು, 333ಹುದ್ದೆಗಳು ಪ್ರಸ್ತುತ ಖಾಲಿ ಇವೆ.
ಹೈಕೋರ್ಟ್ ಕೊಲಿಜಿಯಂಗಳಿಂದ ಶಿಫಾರಸ್ಸು ಮಾಡಲಾಗಿರುವ 142 ಹೆಸರುಗಳು ವಿವಿಧ ಪ್ರಕ್ರಿಯಾ ಹಂತದಲ್ಲಿವೆ. 67 ಶಿಫಾರಸ್ಸುಗಳು ಎಸ್‌ಸಿಸಿಗೆ ಕಳುಹಿಸುವ ಹಂತದಲ್ಲಿವೆ. 11 ಶಿಫಾರಸ್ಸುಗಳು ಎಸ್‌ಸಿಸಿಯಿಂದ ವಿಳಂಬಿತವಾಗಿವೆ.
2019 ರಿಂದ 2023ರ ವರೆಗೆ 22 ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ಹಾಗೂ 446 ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ನೇಮಿಸಲಾಗಿದೆ.