ಪಿಯು ಪರೀಕ್ಷೆ ಅಂಕ ಶೇ.98ರಿಂದ 99ಕ್ಕೆ ಹೆಚ್ಚಿಸಲು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕರ್ನಾಟಕದ ವಿದ್ಯಾರ್ಥಿ

ಪ್ರತಿಷ್ಠಿತ ಕಾಲೇಜುಗಳಲ್ಲಿ ಕಟ್-ಆಫ್ ಅಂಕ ಹೆಚ್ಚಿರುವುದರಿಂದ ಪ್ರವೇಶಾತಿಗೆ ಅಂಕಗಳ ಅಗತ್ಯವಿದೆ ಎಂದು ಅರ್ಜಿದಾರ ವಿದ್ಯಾರ್ಥಿಯ ಪರ ವಕೀಲರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.
Supreme Court
Supreme Court
Published on

ಪಿಯು ಪರೀಕ್ಷೆಯಲ್ಲಿ 97.83% ಅಂಕ ಗಳಿಸಿದ ಕರ್ನಾಟಕದ 18 ವರ್ಷದ ವಿದ್ಯಾರ್ಥಿಯೊಬ್ಬ  ಮರುಮೌಲ್ಯಮಾಪನದ ವೇಳೆ ಶೇ 99ರಷ್ಟು ಅಂಕಗಳಿಸಲು ವಿಫಲನಾದ ಹಿನ್ನೆಲೆಯಲ್ಲಿ ಹೆಚ್ಚು ಅಂಕ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ (ದೇವಯ್ಯ ಎಂಸಿ ಮತ್ತು ರಿತೇಶ್ ಕುಮಾರ್ ಸಿಂಗ್ ಇನ್ನಿತರರ ನಡುವಣ ಪ್ರಕರಣ).

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಗುರುವಾರ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಪರೀಕ್ಷಾ ಇಲಾಖೆಯ ಅಧಿಕಾರಿಗಳ ಪ್ರತಿಕ್ರಿಯೆ ಕೇಳಿತು.

ಅರ್ಜಿದಾರ ವಿದ್ಯಾರ್ಥಿ ದೇವಯ್ಯ ವಿದ್ಯಾರ್ಥಿ 2022ರಲ್ಲಿ ನಡೆದ ಪದವಿ ಪೂರ್ವ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದರು. ಇಂಗ್ಲಿಷ್‌ನಲ್ಲಿ 90 , ಕನ್ನಡದಲ್ಲಿ 98 ಹಾಗೂ ಜೀವಶಾಸ್ತ್ರದಲ್ಲಿ 99 ಅಂಕಗಳನ್ನು ಪಡೆದಿದ್ದರು.

ಮೌಲ್ಯಮಾಪನ ಮಾಡಿದ್ದ ಉತ್ತರ ಪತ್ರಿಕೆಗಳ ಪ್ರತಿಗಳನ್ನು ಪರಿಶೀಲಿಸಿದ್ದ ಆತ ತನಗೆ ಜೀವಶಾಸ್ತ್ರದಲ್ಲಿ ಒಂದು ಹಾಗೂ ಇಂಗ್ಲಿಷ್‌ನಲ್ಲಿ 5.5 ಅಂಕಗಳು ಬರಬೇಕಿತ್ತು ಎಂದು ಲೆಕ್ಕ ಹಾಕಿದ್ದರು. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಅಂಕ ಬದಲಾವಣೆಗೆ ಯಾವುದೇ ಕಾರಣ ಇಲ್ಲ ಎಂದು ರಾಜ್ಯ ಪಿಯು ಮಂಡಳಿ ಆರಂಭದಲ್ಲಿ ಹೇಳಿತ್ತು. ಬಳಿಕ ವಿವರವಾದ ಪತ್ರವನ್ನು ವಿದ್ಯಾರ್ಥಿ ಮಂಡಳಿಗೆ ಬರೆದಿದ್ದರು.

Also Read
[ಪಿಯು ಅಂಕ ಪರಿಗಣಿಸದ ಕೆಇಎ] ಹೈಕೋರ್ಟ್‌ ಕದತಟ್ಟಿದ ಪುನರಾವರ್ತಿತ ಸಿಇಟಿ ವಿದ್ಯಾರ್ಥಿಗಳು, ವಿಚಾರಣೆ ಮುಂದೂಡಿಕೆ

ಇದಾಗಲೇ ಒಂದು ಬಾರಿ ವಿದ್ಯಾರ್ಥಿಯು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಅಂಕಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗದು ಎಂದು ವಿದ್ಯಾರ್ಥಿಗೆ ತಿಳಿಸಲಾಯಿತು. ಅಲ್ಲದೆ, ಗ್ರೇಡ್‌ ಶೀಟ್‌ನಲ್ಲಿ ಹೊಸತಾಗಿ ಬದಲಾವಣೆ ಮಾಡಲು ಆರು ಅಂಕಗಳಷ್ಟು ವ್ಯತ್ಯಾಸವಿರಬೇಕು ಎಂದು ತಿಳಿಸಿತು.

ಇದನ್ನು ಪ್ರಶ್ನಿಸಿ ವಿದ್ಯಾರ್ಥಿ ಹೈಕೋರ್ಟ್‌ ಮೆಟ್ಟಿಲೇರಿದರು. ಆಗ ಹೈಕೋರ್ಟ್‌ ಪ್ರಕರಣದಲ್ಲಿ ಕಾನೂನು ಪ್ರಶ್ನೆಯನ್ನು ಮುಕ್ತವಾಗಿಟ್ಟು ವಿದ್ಯಾರ್ಥಿಯ ಪತ್ರವನ್ನು ಪರಿಶೀಲಿಸುವಂತೆ ಸೂಚಿಸಿತು.  

ಅಧಿಕಾರಿಗಳು ಪ್ರತಿಕ್ರಿಯಿಸಲು ವಿಳಂಬ ಮಾಡಿದ್ದರಿಂದ ವಿದ್ಯಾರ್ಥಿ ಅರ್ಜಿ ಸಲ್ಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿ ನೀಡುವಂತೆ ಹೈಕೋರ್ಟ್‌ ಅಧಿಕಾರಿಗಳಿಗೆ ಆದೇಶಿಸಿತು. ಆದರೆ ಆದೇಶ ಪಾಲಿಸದ ಮತ್ತು ತನ್ನ ಅಂಕ ಬದಲಾವಣೆ ಮಾಡದ ಅಧಿಕಾರಿಗಳ ವಿರುದ್ಧ ದೇವಯ್ಯ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದರು.

ಇತ್ತ ಅಸ್ತಿತ್ವದಲ್ಲಿರುವ ಗ್ರೇಡ್ ಶೀಟ್‌ಗೆ ಪೂರಕವಾಗಿ ಪರಿಷ್ಕೃತ ಅಂಕಗಳನ್ನು ಸೂಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಗಮನಿಸಿದ ಹೈಕೋರ್ಟ್ ಅರ್ಜಿಯನ್ನು ವಿಲೇವಾರಿ ಮಾಡಿತು ಹೀಗಾಗಿ ವಿದ್ಯಾರ್ಥಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಪ್ರತಿಷ್ಠಿತ ಕಾಲೇಜುಗಳಲ್ಲಿ ಕಟ್‌-ಆಫ್‌ ಅಂಕ ಹೆಚ್ಚಿರುವುದರಿಂದ ಪ್ರವೇಶಾತಿಗೆ ಅಂಕಗಳ ಅಗತ್ಯವಿದೆ ಎಂದು ಅರ್ಜಿದಾರ ವಿದ್ಯಾರ್ಥಿಯ ಪರ ವಕೀಲರಾದ ವಿಕ್ರಮ್‌ ಹೆಗ್ಡೆ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.

Kannada Bar & Bench
kannada.barandbench.com