ಪಾದಚಾರಿ ಮಾರ್ಗದಲ್ಲಿದ್ದ 1,911 ಟ್ರಾನ್ಸ್‌ಫಾರ್ಮರ್‌ ಸುರಕ್ಷಿತ ಜಾಗಕ್ಕೆ ಸ್ಥಳಾಂತರ: ಹೈಕೋರ್ಟ್‌ಗೆ ಬೆಸ್ಕಾಂ ಮಾಹಿತಿ

ಬಾಕಿ ಇರುವ 676 ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಕಾರ್ಯವನ್ನು 2023ರ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ ಬೆಸ್ಕಾಂ ವಕೀಲರು.
High Court of Karnataka
High Court of Karnataka

ಬೆಂಗಳೂರಿನ ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಲಾಗಿದ್ದ ಟ್ರಾನ್ಸ್‌ಫಾರ್ಮರ್‌ಗಳ ಪೈಕಿ ಒಟ್ಟು 1,911 ಟ್ರಾನ್ಸ್‌ಫಾರ್ಮರ್‌ಗಳನ್ನು ಸುರಕ್ಷಿತ ಜಾಗಕ್ಕೆ 2023ರ ಮಾರ್ಚ್‌ 30ರವರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿಯಮಿತ (ಬೆಸ್ಕಾಂ) ಗುರುವಾರ ಮಾಹಿತಿ ನೀಡಿದೆ.

ಪಾದಚಾರಿ ಮಾರ್ಗಗಳ ಮೇಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲು ನಿರ್ದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡ್ ಜಿ ಬಿ ಅತ್ರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ವೇಳೆ ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಕುರಿತಂತೆ ಬೆಸ್ಕಾಂ ಪ್ರಧಾನ ವ್ಯಸ್ಥಾಪಕ (ಪ್ರೊಕ್ಯೂರ್‌ಮೆಂಟ್) ಟಿ ಎಂ ಶಿವಪ್ರಕಾಶ್ ಸಲ್ಲಿಸಿದ ಅಫಿಡವಿಟ್‌ ಅನ್ನು ಬೆಸ್ಕಾಂ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.

ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಲಾಗಿದ್ದ 2,587 ಟ್ರಾನ್ಸ್ ಫಾರ್ಮರ್‌ಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ 2023ರ ಮಾರ್ಚ್‌ 30ರವರೆಗೆ 1,911 ಟ್ರಾನ್ಸ್ ಫಾರ್ಮರ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಹಾಗೂ ಹೊಸ ಮಾದರಿಯ ಸ್ಪನ್‌ಪೋಲ್ ಸ್ವರೂಪಕ್ಕೆ ವರ್ಗಾಯಿಸಲಾಗಿದೆ. ಉಳಿದ 676 ಟ್ರಾನ್ಸ್ ಫಾರ್ಮರ್‌ಗಳ ಸ್ಥಳಾಂತರ ಕಾರ್ಯವನ್ನು 2023ರ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಬೆಸ್ಕಾಂ ಅಫಿಡವಿಟ್‌ನಲ್ಲಿನ ಅಂಶಗಳನ್ನು ದಾಖಲಿಸಿಕೊಂಡ ಪೀಠವು ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಕಾರ್ಯ ಮುಂದುವರಿಸಬೇಕು. ಅದರ ಪ್ರಗತಿ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com