ಬಿಬಿಎಂಪಿ ವ್ಯಾಪ್ತಿಯ 196 ಶೌಚಾಲಯಗಳು ಸ್ಥಿತಿ ದಯನೀಯ: ಹೈಕೋರ್ಟ್‌ಗೆ ಕೆಎಸ್‌ಎಲ್‌ಎಸ್‌ಎ ವರದಿ ಸಲ್ಲಿಕೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ಒಟ್ಟು 803 ಶೌಚಾಲಯಗಳಿವೆ. ಪಾಲಿಕೆ ಹೊಸದಾಗಿ 800 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಿದೆ ಎಂದು ಕೆಎಸ್‌ಎಲ್‌ಎಸ್‌ಎ ವರದಿಯಲ್ಲಿ ತಿಳಿಸಲಾಗಿದೆ.
BBMP and Karnataka HC
BBMP and Karnataka HC

ಬೆಂಗಳೂರು ಮಹಾನಗರದಲ್ಲಿನ ಶೌಚಾಲಯಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿರುವ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.

ಬೆಂಗಳೂರು ನಗರದಲ್ಲಿನ ಶೌಚಾಲಯಗಳ ಕೊರತೆ ಕುರಿತಂತೆ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ ಒಟ್ಟು 803 ಶೌಚಾಲಯಗಳಿವೆ. ಪಾಲಿಕೆ ಹೊಸದಾಗಿ 800 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಹಾಲಿ ಇರುವ 196 ಶೌಚಾಲಯಗಳು ದುಸ್ಥಿತಿಯಲ್ಲಿದ್ದು ಅವುಗಳನ್ನು ನವೀಕರಿಸಬೇಕಾಗಿದೆ ಎಂದು ಕೆಎಸ್‌ಎಲ್‌ಎಸ್‌ಎ ವರದಿಯಲ್ಲಿ ತಿಳಿಸಲಾಗಿದೆ.

ಕೆಎಸ್‌ಎಲ್‌ಎಸ್‌ಎ ವಕೀಲ ಶ್ರೀಧರ್ ಪ್ರಭು ಅವರು ನ್ಯಾಯಾಲಯದ ಸೂಚನೆಯಂತೆ ವರದಿಯನ್ನು ಸಿದ್ಧಪಡಿಸಲಾಗಿದ್ದು, ಅರ್ಜಿದಾರರ ಪರ ವಕೀಲರಿಗೆ ಸಲ್ಲಿಸಲಾಗಿದೆ. ಪಾಲಿಕೆಯ ಜೊತೆ ಸೇರಿ ನಡೆಸಿದ ಅಧ್ಯಯನದಲ್ಲಿ ಬೆಂಗಳೂರು ನಗರದಲ್ಲಿ ಹೊಸದಾಗಿ 600 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೇ, 100 ಮಹಿಳಾ ಶೌಚಾಲಯಗಳು, 204 ಸಾರ್ವಜನಿಕ ಶೌಚಾಲಯಗಳು, 64 ಒಡಿಎಫ್ ಪ್ಲಸ್ ಪ್ಲೆಸ್ ಶೌಚಾಲಯಗಳನ್ನು ನಿರ್ಮಿಸುವ ಪ್ರಸ್ತಾವವಿದ್ದು, ಆ ಕುರಿತು ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಹಾಲಿ ಇರುವ ಶೌಚಾಲಯಗಳ ಪೈಕಿ 196ರ ನವೀಕರಿಸಬೇಕಾಗಿದೆ ಎಂದು ವಿವರಿಸಿದರು.

ಆಗ ಬಿಬಿಎಂಪಿ ವಕೀಲರು, ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದರು. ಅದಕ್ಕೆ ಪೀಠವು ಎಷ್ಟು ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದ್ಧೀರಿ, ಅದರ ವಿವರ ನೀಡಿ. ಶೌಚಾಲಯಗಳ ಸಂಖ್ಯೆ ನಮೂದಿಸದೆ ಸುಮ್ಮನೆ ಟೆಂಡರ್ ಕರೆದರೆ ಹೇಗೆ? ನ್ಯಾಯಾಲಯ ಅದೇ ಕಾರಣಕ್ಕೆ ತಡೆ ನೀಡಬಹುದು. ಹೀಗಾಗಿ ಎಷ್ಟು ಶೌಚಾಲಯಗಳ ನಿರ್ಮಾಣಕ್ಕೆ  ಟೆಂಡರ್ ಕರೆಯಲಾಗಿದೆ ಎಂಬ ಮಾಹಿತಿ ನೀಡುವಂತೆ ಸೂಚಿಸಿತು.

ಅಲ್ಲದೇ, ಕೆಎಸ್‌ಎಲ್‌ಎಸ್‌ಎ ಅಧ್ಯಯನ ವರದಿಯ ಪ್ರತಿಯನ್ನು ಬಿಬಿಎಂಪಿ ಹಾಗೂ ಸರ್ಕಾರಿ ವಕೀಲರಿಗೆ ನೀಡುವಂತೆ ಸೂಚನೆ ನೀಡಿದ ಪೀಠವು ವಿಚಾರಣೆಯನ್ನು ಜನವರಿ 24ಕ್ಕೆ ಮುಂದೂಡಿತು.

ವರದಿಯಲ್ಲಿ ರಾಜ್ಯದ 10 ಮಹಾನಗರ ಪಾಲಿಕೆ, 61 ಪುರಸಭೆ ಮತ್ತು 126 ನಗರಸಭೆ ಮತ್ತು 124 ಪಟ್ಟಣ ಪಂಚಾಯ್ತಿ ಸೇರಿ ಒಟ್ಟು 312 ನಗರ ಸ್ಥಳೀಯ ಸಂಸ್ಥೆಗಳಲ್ಲಿ 1,360 ಶೌಚಾಲಯ ಬ್ಲಾಕ್ ಗಳಿದ್ದು, 9,167 ಆಸನಗಳಿವೆ ಮತ್ತು 689 ಸೀಟ್‌ಗಳಿರುವ 108 ಮೂತ್ರಾಲಯಗಳಿವೆ ಎಂದು ತಿಳಿಸಲಾಗಿದೆ. ಅಲ್ಲದೆ, ಹೊಸದಾಗಿ ಸರ್ಕಾರ ಸ್ವಚ್ಛ ಭಾರತ್ ಮಿಷನ್ ಅಡಿ 3,081 ಸೀಟುಗಳ 384 ಹೊಸ ಶೌಚಾಲಯ ಬ್ಲಾಕ್‌ಗಳನ್ನು ಹಾಗೂ 2,726 ಮೂತ್ರಾಲಯಗಳಿರುವ 635 ಹೊಸ ಬ್ಲಾಕ್‌ಗಳನ್ನು ನಿರ್ಮಿಸಲು  ಉದ್ದೇಶಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com