ಸಿನಿಮಾ ಟಿಕೆಟ್‌ಗೆ ₹200 ದರ ಮಿತಿ: ಟಿಕೆಟ್‌ಗಳನ್ನು ಜತನದಿಂದ ಇರಿಸಿಕೊಳ್ಳಲು ಪ್ರೇಕ್ಷಕರಿಗೆ ರಾಜ್ಯ ಸರ್ಕಾರದ ಸೂಚನೆ

ಸರ್ಕಾರ ನಿಗದಿಪಡಿಸಿರುವ ₹200 ಟಿಕೆಟ್‌ ಸಂಬಂಧಿತ ಪ್ರಕರಣದಲ್ಲಿ ಯಶಸ್ವಿಯಾದರೆ ₹200 ಮೀರಿ ಹಣ ಪಡೆದಿರುವ ಚಿತ್ರಮಂದಿರಗಳು ಗ್ರಾಹಕರಿಂದ ಅದನ್ನು ಯಾವ ರೂಪದಲ್ಲಿ ಪಡೆದಿರುತ್ತವೋ ಅದೇ ರೀತಿ ಹಿಂದಿರುಗಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.
Cinema Theatre
Cinema Theatre
Published on

ರಾಜ್ಯದ ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಕನ್ನಡ ಹಾಗೂ ಬೇರೆ ಯಾವುದೇ ಭಾಷೆಯ ಸಿನಿಮಾ ವೀಕ್ಷಣೆಗೆ ಸಂಬಂಧಿಸಿದಂತೆ ಪಡೆಯುವ ಟಿಕೆಟ್‌ಗಳನ್ನು ಜತನದಿಂದ ಇರಿಸಿಕೊಳ್ಳುವಂತೆ ರಾಜ್ಯ ಸರ್ಕಾರವು ಸಿನಿಮಾ ಪ್ರೇಕ್ಷಕರಿಗೆ ತಿಳಿಸಿದೆ.

ರಾಜ್ಯ ಸರ್ಕಾರ ನಿಗದಿಪಡಿಸಿರುವ ₹200 ಟಿಕೆಟ್‌ ದರ ಸಂಬಂಧಿತ ಪ್ರಕರಣದಲ್ಲಿ ಸರ್ಕಾರ ಯಶಸ್ವಿಯಾದರೆ ₹200 ಮೀರಿ ಚಿತ್ರಮಂದಿರಗಳು ಗ್ರಾಹಕರಿಂದ ಪಡೆದಿರುವ ಹಣವನ್ನು ಯಾವ ರೂಪದಲ್ಲಿ ಪಡೆದಿರುತ್ತವೋ ಅದೇ ಮಾದರಿಯಲ್ಲಿ ಹಿಂದಿರುಗಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ಪ್ರಕಟಣೆಯ ಮೂಲಕ ಈ ಮಾಹಿತಿ ರವಾನಿಸಿದೆ.

ಮಲ್ಟಿಪ್ಲೆಕ್ಸ್‌ ಅಸೋಸಿಯೇಶನ್ಸ್‌ ಆಫ್‌ ಇಂಡಿಯಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ತಮ್ಮಲ್ಲಿ ಮಾರಾಟ ಮಾಡಿರುವ ಟಿಕೆಟ್‌ ಸಮಯ ಮತ್ತು ದಿನಾಂಕ, ಆನ್‌ಲೈನ್‌ ಅಥವಾ ಭೌತಿಕವಾಗಿ ಬುಕಿಂಗ್‌ ಮಾಡಲಾಗಿದೆಯೇ, ಹಣ ಸಂಗ್ರಹಿಸಿರುವ ವಿಧಾನ (ಯುಪಿಐ, ಫೋನ್‌ಪೇ, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ನಗದು ಇತ್ಯಾದಿ), ಸಂಗ್ರಹವಾದ ಹಣ ಮತ್ತು ಜಿಎಸ್‌ಟಿ ಸಂಗ್ರಹ ಎಲ್ಲದರ ದಾಖಲೆಯನ್ನು ನಿರ್ವಹಿಸಬೇಕು. ನಗದಿನಲ್ಲಿನ ಟಿಕೆಟ್‌ ಸಂಗ್ರಹಿಸಿದವರ ಡಿಜಿಟಲ್‌ ಮಾಹಿತಿ ಸಂಗ್ರಹಿಸಬೇಕು, ಪ್ರತಿದಿನ ಸಂಗ್ರಹವಾದ ಹಣದ ಲೆಕ್ಕಕ್ಕೆ ಮಲ್ಟಿಪ್ಲೆಕ್ಸ್‌ ವ್ಯವಸ್ಥಾಪಕರು ಸಹಿ ಮಾಡಬೇಕು. ವಿದ್ಯುನ್ಮಾನ ಮಾದರಿಯಲ್ಲಿ ಸಂಗ್ರಹವಾದ ವಿವರವನ್ನೂ ಇಡಬೇಕು ಎಂದು ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡಿದೆ.

Also Read
ನಗದು, ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿದ ಹಣದ ಲೆಕ್ಕವನ್ನು ಪರವಾನಗಿ ಪ್ರಾಧಿಕಾರಕ್ಕೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಒಂದೊಮ್ಮೆ ಪ್ರಕರಣದಲ್ಲಿ ಮಲ್ಟಿಪ್ಲೆಕ್ಸ್‌ ಅಸೋಸಿಯೇಶನ್ಸ್‌ ಆಫ್‌ ಇಂಡಿಯಾ, ಹೊಂಬಾಳೆ ಫಿಲ್ಮ್ಸ್‌ ಮತ್ತಿತರರಿಗೆ ಸೋಲಾದರೆ ₹200ಕ್ಕಿಂತ ಗ್ರಾಹಕರಿಂದ ಹೆಚ್ಚಿಗೆ ಪಡೆದಿರುವ ಹಣವನ್ನು ಯಾವ ವಿಧಾನದಲ್ಲಿ ಪಡೆದಿರುತ್ತಾರೋ ಅದೇ ವಿಧಾನದಲ್ಲಿ ಹಿಂದಿರುಗಿಸಬೇಕು. ಒಂದೂವರೆ ತಿಂಗಳ ಒಳಗೆ ಮಲ್ಟಿಪ್ಲೆಕ್ಸ್‌ ಅಸೋಸಿಯೇಶನ್ಸ್‌ ಆಫ್‌ ಇಂಡಿಯಾವು ಗ್ರಾಹಕರಿಗೆ ಹಣವನ್ನು ಹಿಂದಿರುಗಿಸುವ ವಿಧಾನದ ಮಾಹಿತಿಯನ್ನು ಪರವಾನಗಿ ನೀಡುವ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಇದನ್ನು ಪರವಾನಗಿ ಪ್ರಾಧಿಕಾರವು ಅಂತಿಮ ಒಪ್ಪಿಗೆಗಾಗಿ ನ್ಯಾಯಾಲಯದ ಮುಂದೆ ಇಡಬೇಕು ಎಂದು ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಮತ್ತು ಕೆ ರಾಜೇಶ್‌ ರೈ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ಸೆಪ್ಟೆಂಬರ್‌ 30ರಂದು ಆದೇಶಿಸಿತ್ತು.

Kannada Bar & Bench
kannada.barandbench.com