
ಗೋರಖ್‌ಪುರ ಗಲಭೆಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣ ಸಹಿತ ವಿವಿಧ ಆರೋಪಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಪರ್ವೇಜ್ ವರ್ಸಸ್ ಉತ್ತರ ಪ್ರದೇಶ ಸರ್ಕಾರ].
ಪ್ರಕರಣದ ವಿಚಾರಣೆ ನಡೆಸಿದ ನಿವೃತ್ತರಾಗುತ್ತಿರುವ ಸಿಜೆಐ ಎನ್ ವಿ ರಮಣ ಅವರ ನೇತೃತ್ವದ ಪೀಠವು, "ಈ ಪ್ರಕರಣದಲ್ಲಿ ಅನುಮತಿ (ಆದಿತ್ಯನಾಥ್ ವಿರುದ್ಧದ ತನಿಖೆಗೆ) ನೀಡದೆ ಇರುವ ವಿಚಾರದ ಕುರಿತು ಚರ್ಚಿಸುವ ಅಗತ್ಯವಿಲ್ಲ. ಅನುಮತಿ ನೀಡುವ ವಿಚಾರದಲ್ಲಿ ಉದ್ಬವಿಸುವ ಕಾನೂನು ಪ್ರಶ್ನೆಗಳು ಸೂಕ್ತ ಪ್ರಕರಣದಲ್ಲಿ ಚರ್ಚಿಸಲು ಮುಕ್ತವಾಗಿರಲಿವೆ," ಎಂದಿತು.
2007ರ ಗೋರಖ್‌ಪುರ ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಗೆ ಅನುಮತಿಸಲು ಉತ್ತರ ಪ್ರದೇಶ ಸರ್ಕಾರವು ನಿರಾಕರಿಸಿ ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿತ್ತು.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಫೋರೆನ್ಸಿಕ್ ಮತ್ತು ಮುಕ್ತಾಯ ವರದಿಯನ್ನು ಒಪ್ಪಿಕೊಂಡ ನಂತರ ಪ್ರಕರಣದಲ್ಲಿ ಏನೂ ಉಳಿದಿಲ್ಲ. ಆದಿತ್ಯನಾಥ್ ಅವರು ದ್ವೇಷ ಭಾಷಣ ಮಾಡಿದ್ದಾರೆ ಎನ್ನಲಾದ ಸಿಡಿಯು ನಕಲಿ ಎನ್ನುವುದು ತಿಳಿದು ಬಂದಿದೆ ಎಂದು ಹೇಳಿದ್ದರು.
ಅರ್ಜಿದಾರರ ಪರ ವಾದಿಸಿದ್ದ ವಕೀಲ ಫುಜೈಲ್ ಅಯ್ಯುಬಿ ಅವರು, ಮುಖ್ಯಮಂತ್ರಿಯವರ ವಿಚಾರಣೆಗೆ ಅನುಮತಿ ನೀಡುವ ಪ್ರಶ್ನೆಯು ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪುಗಳ ಅನ್ವಯ ರಾಜ್ಯಪಾಲರ ಮುಂದೆ ಹೋಗಬೇಕು ಎನ್ನುವ ಪ್ರಶ್ನೆ ಎತ್ತಿದ್ದರು.
ಇದಕ್ಕೆ ಸಿಜೆಐ ಅವರು, "ನೀವು ಎತ್ತಿರುವುದು ಅಕೆಡೆಮಿಕ್ ಪ್ರಶ್ನೆಯಾಗಿದೆ. ಅವರ ವಿರುದ್ಧ ಕ್ರಿಮಿನಲ್ ವಿಚಾರಣೆಯೇ ಇಲ್ಲವೆಂದಾದ ಮೇಲೆ ಅನುಮತಿ ನೀಡುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ?" ಎಂದು ವಿಚಾರಣೆ ವೇಳೆ ಹೇಳಿದ್ದರು.