ಅಂದು ರಾಹುಲ್‌ ಆ ಸುಗ್ರೀವಾಜ್ಞೆ ಹರಿದು ಹಾಕದಿದ್ದರೆ ಇಂದು ನಿರಾಳರಾಗಿರುತ್ತಿದ್ದರು!

ಯುಪಿಎ ಸರ್ಕಾರ ದಶಕದ ಹಿಂದೆ ಪ್ರಜಾ ಪ್ರತಿನಿಧಿ ಕಾಯಿದೆಗೆ ತಿದ್ದುಪಡಿ ತರುವ ಸಲುವಾಗಿ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಹುಲ್‌ ಅವರು ಮಾಧ್ಯಮ ಗೋಷ್ಠಿಯಲ್ಲಿ ಹರಿದು ಹಾಕಿದ್ದರು. ಅದು ಜಾರಿಗೆ ಬಂದಿದ್ದರೆ ಇಂದು ನಿರಾಳರಾಗಿರುತ್ತಿದ್ದರು.
Rahul Gandhi
Rahul GandhiFacebook
Published on

ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ಗುಜರಾತ್‌ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ವಯನಾಡ್‌ ಸಂಸದ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ ಬೆನ್ನಿಗೇ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿ ಲೋಕಸಭಾ ಕಾರ್ಯಾಲಯವು ಆದೇಶ ಮಾಡಿದೆ.

ಹೀಗಾಗಿ, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಪಡೆದುಕೊಳ್ಳುವುದು ಸದ್ಯ ರಾಹುಲ್‌ ಗಾಂಧಿ ಅವರ ಮುಂದೆ ಇರುವ ಏಕೈಕ ಮಾರ್ಗವಾಗಿದೆ. ಹತ್ತು ವರ್ಷಗಳ ಹಿಂದೆ ಮಾಧ್ಯಮ ಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಅವರು ತಮ್ಮದೇ ಯುಪಿಎ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಸುಗ್ರೀವಾಜ್ಞೆಯ ಪ್ರತಿಯೊಂದನ್ನು ಹರಿದು ಹಾಕಿದ್ದರು. ಒಂದೊಮ್ಮೆ ಆ ಸುಗ್ರೀವಾಜ್ಞೆ ಅಂದು ಜಾರಿಗೆ ಬಂದಿದ್ದರೆ ರಾಹುಲ್‌ ಇಂದಿನ ಅನರ್ಹತೆ ತೂಗುಗತ್ತಿಯಿಂದ ಪಾರಾಗುತ್ತಿದ್ದರು.

2013ರಲ್ಲಿ ಸುಪ್ರೀಂ ಕೋರ್ಟ್‌ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 8(4) ಅನ್ನು ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್‌ ಆದೇಶವನ್ನು ಅಸಿಂಧುಗೊಳಿಸಲು ಸುಗ್ರೀವಾಜ್ಞೆ ಜಾರಿಗೆ ತರಲು ಮುಂದಾಗಿತ್ತು. ಯಾವುದಾದರೂ ಅಪರಾಧ ಪ್ರಕರಣದಲ್ಲಿ ಹಾಲಿ ಸಂಸದ/ಶಾಸಕರು ದೋಷಿಗಳಾದರೆ ಅವರಿಗೆ ರಕ್ಷಣೆ ಒದಗಿಸುವ ಉದ್ದೇಶವನ್ನು ಸುಗ್ರೀವಾಜ್ಞೆ ಹೊಂದಿತ್ತು.

ನ್ಯಾಯಾಲಯದ ಹಾಲಿ ಶಾಸಕ/ಸಂಸದರನ್ನು ದೋಷಿ ಎಂದರೂ ಅವರನ್ನು ಮೂರು ತಿಂಗಳ ಕಾಲ ಅನರ್ಹಗೊಳಿಸುವಂತಿಲ್ಲ ಎಂಬ ನಿಬಂಧನೆಯನ್ನು ಅಡಕಗೊಳಿಸಲಾಗಿತ್ತು. ಅಲ್ಲದೇ, ಆ ಮೂರು ತಿಂಗಳ ಒಳಗೆ ಸಂಸದ/ಶಾಸಕ ಮೇಲ್ಮನವಿ ಅಥವಾ ತೀರ್ಪು ಮರುಪರಿಶೀಲನಾ ಅರ್ಜಿ ದಾಖಲಿಸಿದಲ್ಲಿ ಅದು ಇತ್ಯರ್ಥವಾಗುವವರೆಗೂ ಅವರನ್ನು ಅನರ್ಹಗೊಳಿಸದಿರಲು ಅವಕಾಶ ಕಲ್ಪಿಸಲಾಗಿತ್ತು. ಲಿಲಿ ಥಾಮಸ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಈ ನಿಬಂಧನೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿತ್ತು. ಇದನ್ನು ಅಸಿಂಧುಗೊಳಿಸಲು ಪ್ರಜಾಪ್ರತಿನಿಧಿ (ಎರಡನೇ ತಿದ್ದುಪಡಿ ಮತ್ತು ಸಿಂಧುತ್ವ) ಮಸೂದೆ 2013 ಅನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಯುಪಿಎ ಸರ್ಕಾರ ಮುಂದಾಗಿತ್ತು.

ಸುಗ್ರೀವಾಜ್ಞೆಯಲ್ಲಿ ಸೆಕ್ಷನ್‌ 8 ಅನ್ನು ಈ ರೀತಿ ತಿದ್ದುಪಡಿ ಮಾಡಲು ಬಯಸಿತ್ತು. ಇದರ ಅನ್ವಯ ದೋಷಿ ಎಂದು ತೀರ್ಮಾನಿಸಲಾದ ವ್ಯಕ್ತಿಯು ಸಂಸತ್ತಿನ ಸದಸ್ಯ ಅಥವಾ ಶಾಸಕನಾಗಿದ್ದರೆ ದೋಷಿ ಎಂದು ನಿರ್ಧರಿಸಿದ ದಿನಾಂಕದಿಂದ ತೊಂಬತ್ತು ದಿನಗಳ ಅವಧಿಯೊಳಗೆ ದೋಷಿ ಎನ್ನುವ ತೀರ್ಪಿನ ವಿರುದ್ಧ ಅಥವಾ ಶಿಕ್ಷೆಯ ವಿರುದ್ಧ ಮರುಪರಿಶೀಲನೆ ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸಿದರೆ ಆಗ ಅನರ್ಹತೆಯು ಕಾರ್ಯಗತಗೊಳ್ಳುವುದಿಲ್ಲ. ದೋಷಿ ಎಂದು ತೀರ್ಮಾನಿಸಿದ ದಿನಾಂಕದ ನಂತರ ಮತ್ತು ನ್ಯಾಯಾಲಯವು ಅಪರಾಧ ನಿರ್ಣಯವನ್ನು ಮುಂದೂಡಿದ ದಿನಾಂಕದವರೆಗೆ, ಸದಸ್ಯನು ಮತ ಚಲಾಯಿಸಲು ಅಥವಾ ಸಂಬಳ ಮತ್ತು ಭತ್ಯೆಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ, ಆದರೆ, ಸಂಸತ್‌ ಅಥವಾ ವಿಧಾನಸಭೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಮುಂದುವರಿಸಬಹುದು ಎಂದು ಹೇಳಲಾಗಿತ್ತು.

Also Read
ಕೇಂಬ್ರಿಜ್‌ ವಿವಿ ಭಾಷಣ: ರಾಹುಲ್‌ ವಿರುದ್ಧ ಪ್ರಕರಣ ದಾಖಲಿಸಲು ಕೋರಿದ್ದ ಬಿಜೆಪಿ ನಾಯಕನ ಅರ್ಜಿ ವಜಾ

ಮುಂದುವರಿದು, ಯಾವುದೇ ನ್ಯಾಯಾಲಯ, ನ್ಯಾಯ ಮಂಡಳಿ ಅಥವಾ ಇತರ ಪ್ರಾಧಿಕಾರದ ಯಾವುದೇ ತೀರ್ಪು ಈ ತಿದ್ದುಪಡಿ ಕಾಯಿದೆಯ ವ್ಯಾಪ್ತಿಗೆ ಒಳಪಟ್ಟಿರುತ್ತವೆ ಎಂದು ಹೇಳಲಾಗಿತ್ತು.

ಯುಪಿಎ ಸರ್ಕಾರವು ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಸಮ್ಮತಿಸಿ ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸುವ ಸಂದರ್ಭದಲ್ಲಿ ಮಾಧ್ಯಮ ಗೋಷ್ಠಿಗೆ ಹಾಜರಾಗಿದ್ದ ರಾಹುಲ್‌ ಗಾಂಧಿಯವರು “ಇದು ಸಂಪೂರ್ಣ ಅವಿವೇಕದಿಂದ ಕೂಡಿರುವುದು” ಎಂದು ತಿರಸ್ಕರಿಸಿದ್ದರು. ಆನಂತರ ಅಂದಿನ ಸರ್ಕಾರ ಸುಗ್ರೀವಾಜ್ಞೆಯನ್ನು ಹಿಂಪಡೆದಿತ್ತು.

Kannada Bar & Bench
kannada.barandbench.com