ಜಾರಿ ನಿರ್ದೇಶನಾಲಯದ (ಇ ಡಿ) ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ಕಾಯ್ದಿರಿಸಿದೆ [ಡಾ. ಜಯಾ ಠಾಕೂರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಆದರೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ 2021ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಸಮಂಜಸತೆಯನ್ನು ಪ್ರಶ್ನಿಸುವಂತೆ ತೋರಿತು. 2021ರಲ್ಲಿ ನೀಡಲಾದ ಆದೇಶದಲ್ಲಿ ಮತ್ತೆ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಿಸದಂತೆ ತಡೆಯಲಾಗಿತ್ತು.
ಆರಂಭಿಕ ನೇಮಕಾತಿ ಎಂಬುದು ಅಧಿಕಾರಾವಧಿ ವಿಸ್ತರಣೆಗಿಂತ ಭಿನ್ನವಾದುದಾಗಿದ್ದು 2021ರ ಆದೇಶ ಮೊದಲಿನ ವಾದವನ್ನು ಮಾತ್ರ ಆಲಿಸಿದೆ ಎಂದು ಇಂದು ನಡೆದ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ತಿಳಿಸಿದರು.
ಸುಪ್ರೀಂ ಕೋರ್ಟ್ 2021ರಲ್ಲಿ ತೀರ್ಪನ್ನು ಜಾರಿಗೊಳಿಸಿದ್ದ ದ್ವಿಸದಸ್ಯ ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಗವಾಯಿ ಅವರು ವಿಚಾರಣೆ ವೇಳೆ ಹೀಗೆ ಪ್ರತಿಕ್ರಿಯಿಸಿದರು: “ಮೇಲ್ನೋಟಕ್ಕೆ ಇದನ್ನು ಸರಿಯಾಗಿ ನಿರ್ಧರಿಸಲಾಗಿದೆ ಎಂದು ಅನಿಸುತ್ತಿಲ್ಲ. ನೀವು ವಾದಿಸುತ್ತಿರುವಂತೆ ಅಧಿಕಾರಾವಧಿ ವಿಸ್ತರಣೆಯ ಪ್ರಶ್ನೆ ಆಗ ಇರಲಿಲ್ಲ. ಆದ್ದರಿಂದ ಅಧಿಕಾರಾವಧಿ ವಿಸ್ತರಣೆ ಬಗ್ಗೆ ಮ್ಯಾಂಡಮಸ್ ಪ್ರಶ್ನೆ ಉದ್ಭವಿಸದು. ಉಳಿದ ನ್ಯಾಯಮೂರ್ತಿಗಳು ಒಪ್ಪಿದರೆ ಮರುಪರಿಶೀಲಿಸುವ ಅಗತ್ಯವಿದೆ ಎಂಬುದು ನನ್ನ ಪ್ರಾಥಮಿಕ ದೃಷ್ಟಿಕೋನ” ಎಂದು ಅವರು ಹೇಳಿದರು.
ಮಿಶ್ರಾ ಅವರು ನವೆಂಬರ್ 2018 ರಲ್ಲಿ ಎರಡು ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಈ ಅವಧಿ ನವೆಂಬರ್ 2020ರಲ್ಲಿ ಮುಕ್ತಾಯಗೊಂಡಿತ್ತು. ಮೇ 2020ರಲ್ಲಿ, ಅವರು 60ರ ನಿವೃತ್ತಿ ವಯಸ್ಸನ್ನು ತಲುಪಿದ್ದರು.
ಆದರೂ, ನವೆಂಬರ್ 13, 2020ರಂದು, ಕಚೇರಿ ಆದೇಶ ಹೊರಡಿಸಿದ, ಕೇಂದ್ರ ಸರ್ಕಾರ ರಾಷ್ಟ್ರಪತಿಗಳು 2018ರ ಆದೇಶವನ್ನು ಪೂರ್ವಾನ್ವಯವಾಗುವಂತೆ ಮಾರ್ಪಡಿಸಿದ್ದಾರೆ ಎಂಬುದಾಗಿ ತಿಳಿಸಿ 'ಎರಡು ವರ್ಷಗಳ' ಅವಧಿಯನ್ನು 'ಮೂರು ವರ್ಷಗಳ' ಅವಧಿಗೆ ಬದಲಿಸಿರುವುದಾಗಿ ಹೇಳಿತ್ತು. ಇದನ್ನು ಸರ್ಕಾರೇತರ ಸಂಸ್ಥೆ ʼಕಾಮನ್ ಕಾಸ್ʼ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಪ್ರಕರಣವನ್ನು ಆಲಿಸಿದ ಸುಪ್ರೀಂ ಕೋರ್ಟ್ ಮತ್ತೆ ಅವರ ಅಧಿಕಾರಾವಧಿ ವಿಸ್ತರಿಸದಂತೆ ತೀರ್ಪು ನೀಡಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಕೇಂದ್ರ ವಿಚಕ್ಷಣಾ ಆಯೋಗ ಕಾಯಿದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ ಇ ಡಿ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷ ವಿಸ್ತರಿಸಲು ಸ್ವತಃ ಅಧಿಕಾರ ಪಡೆದುಕೊಂಡಿತ್ತು. ಇದನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದು ವಿಚಾರಣೆ ಬಾಕಿ ಇದೆ.
ಸಂಸತ್ತು ಈ ನಿಟ್ಟಿನಲ್ಲಿ ಕಾನೂನು ರೂಪಿಸಿ ಇ ಡಿ ನಿರ್ದೇಶಕರ ಅಧಿಕಾರಾವಧಿಯನ್ನು ವರ್ಷಕ್ಕೆ ಒಂದು ಬಾರಿಯಂತೆ ಐದು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ನೀಡಿತು.