ಡಿಕೆಶಿ ಹೂಡಿರುವ ಮಾನಹಾನಿ ದಾವೆ: ಯತ್ನಾಳ್‌ಗೆ ಭದ್ರತೆ ಒದಗಿಸಲು ಎಸ್‌ಪಿಗೆ ನಿರ್ದೇಶಿಸಿದ ಹೈಕೋರ್ಟ್‌

ಯತ್ನಾಳ್‌ ವಿಚಾರಣೆಗಾಗಿ ಕನಕಪುರಕ್ಕೆ ಹೋದಾಗ ಸೂಕ್ತ ಭದ್ರತೆ ಒದಗಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಎಚ್ಚರವಹಿಸುವಂತೆ ರಾಮನರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸಿದೆ.
D K Shivakumar, Basanagouda Patil Yatnal and Karnataka HC
D K Shivakumar, Basanagouda Patil Yatnal and Karnataka HC

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ವಿರುದ್ಧ 204 ಕೋಟಿ ರೂಪಾಯಿ ಪರಿಹಾರ ಕೋರಿ ಹೂಡಿರುವ ಮಾನಹಾನಿ ದಾವೆಯನ್ನು ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿರುವ ಕರ್ನಾಟಕ ಹೈಕೋರ್ಟ್‌, ಯತ್ನಾಳ್‌ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಹಾಗೂ ಸಾಕ್ಷಿಗಳ ಮೇಲೆ ಡಿ ಕೆ ಶಿವಕುಮಾರ್‌ ಪ್ರಭಾವ ಬೀರದಂತೆ ಎಚ್ಚರವಹಿಸುವಂತೆ ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿಗೆ ನಿರ್ದೇಶಿಸಿದೆ.

ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಅವರು ಸಲ್ಲಿಸಿದ್ದ ಸಿವಿಲ್ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠ ಮಂಗಳವಾರ ಆದೇಶ ಪ್ರಕಟಿಸಿದೆ.

ಅರ್ಜಿದಾರರು ವಿಚಾರಣೆಗಾಗಿ ಕನಕಪುರಕ್ಕೆ ಹೋದ ಸಂದರ್ಭದಲ್ಲಿ ಸೂಕ್ತ ರೀತಿಯ ಭದ್ರತೆ ಒದಗಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಎಚ್ಚರವಹಿಸಬೇಕು ಎಂದು ರಾಮನರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ನಮ್ಮ ಕಕ್ಷಿದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಡಿ ಕೆ ಶಿವಕುಮಾರ್ ಅವರು ಕನಕಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಲ್ಲಿ ದಾವೆ ಹೂಡಿದ್ದಾರೆ” ಎಂದು ಆಕ್ಷೇಪಿಸಿದ್ದರು.

“ತಾನು ವಿಜಯಪುರದ ಶಾಸಕನಾಗಿದ್ದು, ವಿಜಯಪುರ- ಕನಕಪುರದ ನಡುವಿನ ಅಂತರ 565 ಕಿ ಮೀ. ಹೀಗಾಗಿ, ಪ್ರಕರಣವನ್ನು ಕನಕಪುರದಿಂದ ಬೆಂಗಳೂರಿಗೆ ವರ್ಗಾಯಿಸಬೇಕು. ತಾನು ಕನಕಪುರಕ್ಕೆ ಭೇಟಿ ನೀಡಿದರೆ ತನ್ನ ಮೇಲೆ ದಾಳಿಯಾಗುವ ಸಂಭವವಿದೆ. 2008ರಿಂದ ಡಿ ಕೆ ಶಿವಕುಮಾರ್ ಅವರು ಕನಕಪುರದ ಶಾಸಕರಾಗಿದ್ದು, ಸಾಕ್ಷಿ ತಿರುಚುವ ಸಾಧ್ಯತೆ ಇದೆ. ತಾನು ವಿಜಯಪುರದಲ್ಲಿ ಹೇಳಿಕೆ ನೀಡಿದ್ದು, ಕನಕಪುರದಲ್ಲಿ ದಾವೆ ಹೂಡಲಾಗಿದೆ. ಹೀಗಾಗಿ, ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಬೇಕು” ಎಂದು ವಾದಿಸಿದ್ದರು.

Also Read
[₹204 ಕೋಟಿ ಪರಿಹಾರ ಕೋರಿದ ಪ್ರಕರಣ] ಬೆಂಗಳೂರಿಗೆ ವರ್ಗಾವಣೆ ಕೋರಿ ಯತ್ನಾಳ್‌ ಮನವಿ: ಡಿಕೆಶಿಗೆ ಹೈಕೋರ್ಟ್‌ ನೋಟಿಸ್‌

ಪ್ರಕರಣದ ಹಿನ್ನೆಲೆ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ 2019ರ ಜೂನ್ 23ರಂದು ವಿಜಯಪುರದಲ್ಲಿ ಯತ್ನಾಳ್ ಅವರು, ಡಿ ಕೆ ಶಿವಕುಮಾರ್ ಅವರು ನಮ್ಮ (ಬಿಜೆಪಿ) ನಾಯಕರನ್ನು ಭೇಟಿ ಮಾಡಿ ತಮ್ಮ ವಿರುದ್ಧದ ಆದಾಯ ತೆರಿಗೆ ಇಲಾಖೆ ಪ್ರಕರಣಗಳಿಂದ ರಕ್ಷಣೆ ಕೊಡಿಸುವಂತೆ ಕೋರಿದ್ದಾರೆ. ಈ ಸಂಬಂಧ ಡಿ ಕೆ ಶಿವಕುಮಾರ್ ಅವರು ನಮ್ಮ ಕೇಂದ್ರ ಸಚಿವರ ಮೂಲಕ ಲಾಬಿ ಮಾಡಿದ್ದಾರೆ. ವಿವಿಧ ಮೂಲಗಳನ್ನು ಬಳಸಿ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಒತ್ತಡ ಹೇರಲು ಡಿ ಕೆ ಶಿವಕುಮಾರ್ ಪ್ರಯತ್ನಿಸಿದ್ದಾರೆ ಎಂಬುದು ನನಗೆ ತಿಳಿದಿದೆ. ತಮ್ಮ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣಗಳನ್ನು ಮುಕ್ತಾಯಗೊಳಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ತಮ್ಮ ವಿರೋಧ ಇಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದನ್ನು ಮಾಧ್ಯಮಗಳು ವ್ಯಾಪಕವಾಗಿ ಪ್ರಸಾರ ಮಾಡಿದ್ದವು.

ಈ ಹೇಳಿಕೆಯನ್ನು ಆಧರಿಸಿ ಡಿ ಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರ ನ್ಯಾಯಾಲಯದಲ್ಲಿ ಯತ್ನಾಳ್ ವಿರುದ್ಧ ದಾವೆ ಹೂಡಿದ್ದರು. ತಮ್ಮ ಘನತೆ ಮತ್ತು ವರ್ಚಸ್ಸಿಗೆ ಹಾನಿಯಾಗಿದೆ. ಇದಕ್ಕಾಗಿ 204 ಕೋಟಿ ರೂ. ಹಾನಿ ತುಂಬಿಕೊಡಲು ಯತ್ನಾಳ್‌ಗೆ ಆದೇಶಿಸಬೇಕು ಎಂದು ಕೋರಿದ್ದಾರೆ. ಈ ಪ್ರಕರಣವನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಯತ್ನಾಳ್ ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com