ಕಳೆದ 5 ವರ್ಷಗಳಲ್ಲಿ ಶೇ 21ರಷ್ಟು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಿಗೆ ನಿವೃತ್ತಿ ನಂತರದ ಹುದ್ದೆ

ನಿವೃತ್ತ ನ್ಯಾಯಮೂರ್ತಿಗಳು ತಮ್ಮ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾದ ಬಳಿಕವೂ ನಂತರ ಸಾಂವಿಧಾನಿಕ ಅಥವಾ ಶಾಸನಬದ್ಧ ಹುದ್ದೆಗಳನ್ನು ಹೊಂದಿರಬೇಕೆ ಎಂಬುದು ಹಲವು ವರ್ಷಗಳಿಂದ ಚರ್ಚೆಗೆ ಗ್ರಾಸವಾದ ವಿಚಾರವಾಗಿದೆ.
Judges who took up post-retirement posts
Judges who took up post-retirement posts

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ದೊಡ್ಡ ಸಂಕಟ ಎದುರಾಗುವುದು ಅವರು ಅಧಿಕಾರದಲ್ಲಿದ್ದಾಗ ಅಲ್ಲ, ಬದಲಿಗೆ ನಿವೃತ್ತರಾದ ಬಳಿಕ. 

ನಿವೃತ್ತಿಯ ನಂತರ ನ್ಯಾಯಮೂರ್ತಿಗಳು ಅಧಿಕೃತ ಹುದ್ದೆಯನ್ನು ಅಲಂಕರಿಸಬೇಕೆ ಎಂಬುದು ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ವಿಷಯ. ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಔಪಚಾರಿಕ ಸಂಸ್ಕೃತಿಗೆ ಕುಮ್ಮಕ್ಕು ನೀಡುವುದರಿಂದ ಕೆಲವರು ಈ ಪ್ರವೃತ್ತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಉಳಿದವರು ಇದರಲ್ಲಿ ಯಾವುದೇ ಲೋಪ ಕಂಡಿಲ್ಲ.

ವಾಸ್ತವವಾಗಿ ಅಂತಹ ಹುದ್ದೆಗಳಿಗೆ ಪ್ರಾಮಾಣಿಕವಾಗಿರುವ ಅತ್ಯುನ್ನತ ನ್ಯಾಯಾಂಗ ಸಿಬ್ಬಂದಿಯ ಅಗತ್ಯವಿದ್ದು ಹೀಗೆ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ಸೂಕ್ತವೆಂದು ಪರಿಗಣಿಸಲಾದ ನ್ಯಾಯಮೂರ್ತಿಗಳನ್ನು ನೇಮಿಸಿಕೊಳ್ಳುವುದಕ್ಕೆ ಸಂವಿಧಾನದಲ್ಲಿ ಯಾವುದೇ ನಿಷೇಧ ಇಲ್ಲ ಎಂದು ಸರ್ಕಾರ ಸದಾ ಹೇಳುತ್ತಿರುತ್ತದೆ.

Also Read
ಪೆಗಾಸಸ್‌ ನಿಗಾ ಇರಿಸಿದ್ದ ಪಟ್ಟಿಯಲ್ಲಿ ಗೊಗೊಯ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಸಿಬ್ಬಂದಿಯ ಹೆಸರು!

ಕಳೆದ ಐದು ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ನ ಎಷ್ಟು ನಿವೃತ್ತ ನ್ಯಾಯಮೂರ್ತಿಗಳು ಸಾಂವಿಧಾನಿಕ ಅಥವಾ ಶಾಸನಬದ್ಧ ಹುದ್ದೆ ವಹಿಸಿಕೊಂಡಿದ್ದಾರೆ ಮತ್ತು ಚರ್ಚೆಯಲ್ಲಿರುವ ಈ ವಿಚಾರ ಕುರಿತಂತೆ ಅವರ ಆಲೋಚನೆ ಏನು ಎಂಬುದುನ್ನು ಪ್ರಸ್ತುತ ವರದಿಯಲ್ಲಿ ಕಾಣಬಹುದು.

ಕಳೆದ ಅರ್ಧ ದಶಕದಲ್ಲಿ ನಿವೃತ್ತರಾದ 28 ನ್ಯಾಯಮೂರ್ತಿಗಳ ಪೈಕಿ 6 ನ್ಯಾಯಮೂರ್ತಿಗಳಿಗೆ ಸಾಂವಿಧಾನಿಕ ಅಥವಾ ಶಾಸನಬದ್ಧ ಹುದ್ದೆ ನೀಡಲಾಗಿದೆ.

Supreme Court judges who retired in past 5 years
Supreme Court judges who retired in past 5 years

ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನಿವೃತ್ತರಾದ ದಿನವೇ ಅಂದರೆ  ಜುಲೈ 6, 2018ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡರು. ಆರು ವರ್ಷಗಳ ಕಾಲ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಹುದ್ದೆ ಅಲಂಕರಿಸಿದ್ದ ನ್ಯಾ. ಅರುಣ್‌ ಮಿಶ್ರಾ ಅವರು ನಿವೃತ್ತರಾದ ಸುಮಾರು ಒಂದು ವರ್ಷದ ಬಳಿಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡರು.  ಜುಲೈ 4, 2021ರಂದು ನಿವೃತ್ತರಾದ ನ್ಯಾ. ಅಶೋಕ್‌ ಭೂಷಣ್‌ ನವೆಂಬರ್‌ 8, 2021ರಂದು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡರು. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರನ್ನು ಡಿಸೆಂಬರ್ 22, 2022ರಂದು, ಕೇಂದ್ರ ಸರ್ಕಾರ ಸಾಂಸ್ಥಿಕ ಮಧ್ಯಸ್ಥಿಕೆಗಾಗಿ ಸ್ವತಂತ್ರ ಮತ್ತು ಸ್ವಾಯತ್ತ ಆಡಳಿತವನ್ನು ರಚಿಸುವ ಉದ್ದೇಶದಿಂದ ಸ್ಥಾಪಿತವಾದ ನವದೆಹಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ (ಎನ್‌ಡಿಐಎಸಿ) ಅಧ್ಯಕ್ಷರನ್ನಾಗಿ ನೇಮಿಸಿತು,  ಜನವರಿ 4, 2023ರಂದು ನಿವೃತ್ತರಾದ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಆಂಧ್ರಪ್ರದೇಶದ 24ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Also Read
ಆಂಧ್ರಪ್ರದೇಶ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಎಸ್ ಅಬ್ದುಲ್ ನಜೀರ್ ನೇಮಕ

ನವೆಂಬರ್ 17, 2019ರಲ್ಲಿ ನಿವೃತ್ತರಾದ ಸುಪ್ರೀಂ ಕೋರ್ಟ್‌  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ಮಾರ್ಚ್ 19, 2020ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದರು,. ಅವರು ರಾಜ್ಯಸಭೆಯ ಅಧ್ಯಕ್ಷರ ಸಮ್ಮುಖದಲ್ಲಿ ಮೇಲ್ಮನೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿ ನಿವೃತ್ತಿಯ ನಂತರದ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚು ಚರ್ಚೆಗೆ ಗ್ರಾಸವಾದ ಮಾಜಿ ಸಿಜೆಐ ರಂಜನ್‌ ಗೊಗೊಯ್‌ ನಿವೃತ್ತರಾದ ಆರು ತಿಂಗಳಲ್ಲೇ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು. “ಒಬ್ಬ ನ್ಯಾಯಮೂರ್ತಿ ತನ್ನ (ಅಧಿಕಾರಾವಧಿಯ) ಕಾರ್ಯಗಳಿಗೆ ಪ್ರಾಮಾಣಿಕವಾಗಿದ್ದರೆ ನಿವೃತ್ತಿ ನಂತರದ ಹುದ್ದೆ ಸರಿಯಾಗೇ ಇರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಆಧಾರಿತವಾಗಿರುತ್ತದೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು.

ನಿವೃತ್ತಿಯ ನಂತರ ನ್ಯಾಯಮೂರ್ತಿಗಳು ಅಂತಹ ಹುದ್ದೆಗಳನ್ನು ಸ್ವೀಕರಿಸುವುದನ್ನು ತಡೆಯುವ ಯಾವುದೇ ನಿರ್ದಿಷ್ಟ ನಿಯಮವಿಲ್ಲದಿದ್ದರೂ, ಭಾರತೀಯ ನ್ಯಾಯಶಾಸ್ತ್ರಜ್ಞ ಎಂ ಸಿ ಸೆತಲ್ವಾಡ್ (ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್‌ ಅವರ ತಾತ) ನೇತೃತ್ವದ ಹದಿನಾಲ್ಕನೇ ಕಾನೂನು ಆಯೋಗದ ವರದಿಯು ʼನ್ಯಾಯಮೂರ್ತಿಗಳು ನಿವೃತ್ತಿಯ ನಂತರದ ಕೆಲಸವನ್ನು ಸರ್ಕಾರದಿಂದ ತೆಗೆದುಕೊಳ್ಳಬಾರದುʼ ಎಂದು ಶಿಫಾರಸು ಮಾಡಿತ್ತು.

ಗಮನಾರ್ಹವಾಗಿ, ನ್ಯಾಯಮೂರ್ತಿ ಜಸ್ತಿ ಚೆಲಮೇಶ್ವರ್ ಮಾಜಿ ಸಿಜೆಐಗಳಾದ ಜೆ ಎಸ್ ಖೇಹರ್, ಆರ್‌ಎಂ ಲೋಧಾ ಮತ್ತು ಎಸ್‌ ಎಚ್ ಕಪಾಡಿಯಾ ಸೇರಿದಂತೆ ಸುಪ್ರೀಂ ಕೋರ್ಟ್‌ನ ಹಲವು ನ್ಯಾಯಮೂರ್ತಿಗಳು ನಿವೃತ್ತಿ ಬಳಿಕ ಸರ್ಕಾರದ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂದು ದೃಢಸಂಕಲ್ಪ ಮಾಡಿದ್ದರು.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು ನಿವೃತ್ತಿಗೆ 3 ತಿಂಗಳ ಮೊದಲು ಪೂರ್ಣ ವೇತನವನ್ನು (ಇತರ ಪ್ರಯೋಜನಗಳನ್ನು ಹೊರತುಪಡಿಸಿ) ಪಡೆಯಬೇಕು ಇಲ್ಲವೇ ಕಾನೂನಿನ ಅಡಿಯಲ್ಲಿ ನಿಗದಿಪಡಿಸಿದಂತೆ ಪಿಂಚಣಿ ಪಡೆಯಬೇಕು ಎಂಬ ಆಯ್ಕೆ ನೀಡುವಂತೆ ನ್ಯಾ ಲೋಧಾ ಅವರು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಆಮೂಲಾಗ್ರ ಪ್ರಸ್ತಾವನೆ ಸಲ್ಲಿಸಿದ್ದರು.

ಪೂರ್ಣ ವೇತನ  ಆಯ್ಕೆ ಮಾಡಿಕೊಳ್ಳುವವರನ್ನು ಮಾತ್ರ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಗತ್ಯವಿರುವ ಹುದ್ದೆಗಳಿಗೆ ಆಯ್ಕೆ ಮಾಡಲು ಅವಕಾಶ ನೀಡಬೇಕು.  ಪೂರ್ಣ ಸಂಬಳ ಆಯ್ಕೆ ಮಾಡಿಕೊಳ್ಳುವ ನ್ಯಾಯಮೂರ್ತಿಗಳಿಗೆ ಮಧ್ಯಸ್ಥಿಕೆ ಸೇರಿದಂತೆ ಯಾವುದೇ ಖಾಸಗಿ ಕೆಲಸ ಕೈಗೊಳ್ಳಲು ಅವಕಾಶ ನೀಡಬಾರದು ಎಂದಿದ್ದರು ನ್ಯಾ. ಲೋಯಾ.

ನಿವೃತ್ತ ಸಿಜೆಐ ದೀಪಕ್ ಮಿಶ್ರಾ ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಅಂದಿನ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು "ನ್ಯಾಯಮೂರ್ತಿಗಳು ನಿವೃತ್ತಿಯ ನಂತರದ ಉದ್ಯೋಗಗಳನ್ನು ಸ್ವೀಕರಿಸಬಾರದು ಎಂಬ ಕಲ್ಪನೆಯನ್ನು ನಾನು ಒಪ್ಪುವುದಿಲ್ಲ. ಇದರಿಂದಾಗಿ ತೀರ್ಪು ನೀಡುವಲ್ಲಿ ವರ್ಷಾನುಗಟ್ಟಲೆ ಅನುಭವವನ್ನು ನಿರ್ಲಕ್ಷಿಸಿದಂತಾಗುತ್ತದೆ” ಎಂದಿದ್ದರು.

ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಅಂದಿನ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅವರು ʼಕನಿಷ್ಠ ಎರಡು ವರ್ಷಗಳ ಯಾವುದೇ ಹುದ್ದೆ ಅಲಂಕರಿಸದಂತೆ ಅಂದಿನ ಸಿಜೆಐ ದೀಪಕ್‌ ಮಿಶ್ರಾ ಅವರಿಗೆ ಸಲಹೆ ನೀಡಿದ್ದರು. ಅದಾಗಿ ಎರಡು ದಿನಗಳ ಬಳಿಕ ಕೆ ಕೆ ವೇಣುಗೋಪಾಲ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ನಿವೃತ್ತರಾದ ನ್ಯಾ. ಎಂ ಆರ್‌ ಶಾ ಅವರು ಬಾರ್ & ಬೆಂಚ್‌ಗೆ ನೀಡಿದ್ದ ಸಂದರ್ಶನದಲ್ಲಿ ಅಂತಹ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ. ಅದಕ್ಕೆ ತಮ್ಮದೇ ಆದ ಕಾರಣಗಳಿವೆ ಎಂದಿದ್ದರು.

ಮತ್ತೊಂದೆಡೆ, ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಬಾರ್ & ಬೆಂಚ್‌ ಜೊತೆ ಮಾತನಾಡುವಾಗ ನ್ಯಾಯಮೂರ್ತಿಗಳು ಅಂತಹ ಹುದ್ದೆ ಅಲಂಕರಿಸುವುದಕ್ಕೆ  ಯಾವುದೇ ನಿರ್ಬಂಧವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.

ಈಗ ನವದೆಹಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ (ಎನ್‌ಡಿಐಎಸಿ) ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಬಾರ್‌ ಅಂಡ್‌ ಬೆಂಚ್‌ ಜೊತೆ ಮಾತನಾಡುತ್ತಾ ತಾವು ನ್ಯಾಯಾಂಗದ ವ್ಯಾಪ್ತಿಯಲ್ಲಿ ಮುಂದುವರಿಯುವುದಾಗಿ ಹೇಳಿದ್ದರು.

ನಿವೃತ್ತಿಯ ನಂತರದ ಹುದ್ದೆಯನ್ನು ಸ್ವೀಕರಿಸಲು ನ್ಯಾಯಮೂರ್ತಿಗಳು ನಿರಾಕರಿಸಿದ ಇತ್ತೀಚಿನ ಉದಾಹರಣೆ ಎಂದರೆ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಹಾಗೂ ಸುಪ್ರೀಂ ಕೋರ್ಟ್‌ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್. ಕೆಲವರು ನ್ಯಾಯಮಂಡಳಿಯೊಂದರ ಮುಖ್ಯಸ್ಥರಾಗುವಂತೆ ನ್ಯಾ. ರಾಮಸುಬ್ರಮಣಿಯನ್‌ ಅವರನ್ನು ಒತ್ತಾಯಿಸಿದ್ದರೂ ಅವರು ಉತ್ಸಾಹ ತೋರಿರಲಿಲ್ಲ.  

ತಮ್ಮ ನಿವೃತ್ತಿಯ ದಿನ ನಡೆದ ಪೀಠದ ಔಪಚಾರಿಕ ಕಲಾಪದ ವೇಳೆ ಮಾತನಾಡಿದ ಅವರು “ನ್ಯಾಯಾಂಗ ಹುದ್ದೆಯ ಕರ್ತವ್ಯಗಳಿಂದ ಮುಕ್ತನಾದ ವ್ಯಕ್ತಿಯಾಗಿ ಉಳಿಯಲು ಬಯಸುವುದಾಗಿ ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com