'ಇಪ್ಪತ್ತೈದು ವರ್ಷಗಳಲ್ಲಿ 2.33 ದಶಲಕ್ಷ ಹೆಕ್ಟೇರ್ ವೃಕ್ಷ ಹೊದಿಕೆ ನಾಶ?' ಕೇಂದ್ರದ ಪ್ರತಿಕ್ರಿಯೆ ಕೇಳಿದ ಎನ್‌ಜಿಟಿ

ಗ್ಲೋಬಲ್ ಫಾರೆಸ್ಟ್ ವಾಚ್ ಮಾಹಿತಿ ಪ್ರಕಾರ 2013ರಿಂದ 2023ರ ನಡುವೆ ನಾಶವಾಗಿರುವ ವೃಕ್ಷ ಹೊದಿಕೆಯ ಪ್ರಮಾಣದಲ್ಲಿ ಅಸ್ಸಾಂ, ಮಿಜೋರಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಮಣಿಪುರದ ಒಟ್ಟು ಪಾಲು ಶೇ.60ರಷ್ಟು.
Trees
Trees

ಈ ಶತಮಾನದ ಆರಂಭದಿಂದ ಅಂದರೆ 2000ರಿಂದ ಭಾರತದಲ್ಲಿ 2.33 ದಶಲಕ್ಷ ಹೆಕ್ಟೇರ್ (ಶೇ 6ರಷ್ಟು) ವೃಕ್ಷ ಹೊದಿಕೆ ನಾಶವಾಗಿದೆ ಎಂಬ ವರದಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸೋಮವಾರ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ, ಭಾರತೀಯ ಸರ್ವೇಕ್ಷಣಾ ಇಲಾಖೆ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಪ್ರತಿಕ್ರಿಯೆ ಕೇಳಿದೆ.

ಕಳೆದ 24 ವರ್ಷಗಳಲ್ಲಿ ಭಾರತ 2.33 ದಶಲಕ್ಷ ಹೆಕ್ಟೇರ್ ಮರಗಳ ಹೊದಿಕೆಯನ್ನು ಕಳೆದುಕೊಂಡಿದೆ ಎಂಬ ಗ್ಲೋಬಲ್ ಫಾರೆಸ್ಟ್ ವಾಚ್ ಮಾಹಿತಿ ಆಧಾರಿತ ಇಂಡಿಯನ್ ಎಕ್ಸ್‌ಪ್ರೆಸ್ ದೈನಿಕದ ವರದಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ, ನ್ಯಾಯಾಂಗ ಸದಸ್ಯರಾದ ನ್ಯಾ. ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಡಾ ಎ ಸೆಂಥಿಲ್ ವೇಲ್‌ ಅವರಿದ್ದ ಪೀಠ ತಿಳಿಸಿದೆ.

ಉಪಗ್ರಹ ದತ್ತಾಂಶ ಮತ್ತಿತರ ಮೂಲಗಳನ್ನು ಬಳಸಿಕೊಂಡು ನೈಜ ಸಮಯದಲ್ಲಿ ಅರಣ್ಯ ಸಂಬಂಧಿತ ಬದಲಾವಣೆಗಳನ್ನು ಪತ್ತೆ ಹಚ್ಚುವ ಗ್ಲೋಬಲ್ ಫಾರೆಸ್ಟ್ ವಾಚ್ (ಜಿಎಫ್‌ಡಬ್ಲ್ಯೂ)  ಮಾಹಿತಿ ಪ್ರಕಾರ, ದೇಶದಲ್ಲಿ 2002ರಿಂದ 2023ರವರೆಗೆ 4,14,000 ಹೆಕ್ಟೇರ್ ಪ್ರಾಥಮಿಕ ಅರಣ್ಯವನ್ನು ಕಳೆದುಕೊಂಡಿದ್ದು ಒಟ್ಟು ಮರದ ಹೊದಿಕೆ  ಶೇ.18%ರಷ್ಟು ನಷ್ಟವಾಯಿತು.

ಮರ ಕಡಿಯುವಿಕೆಯಂತಹ ಮಾನವ ಚಟುವಟಿಕೆ ಹಾಗೂ ಬೆಂಕಿ ಮತ್ತು ಬಿರುಗಾಳಿಗಳಂತಹ ನೈಸರ್ಗಿಕ ಘಟನೆಗಳಿಂದಾಗಿ ವೃಕ್ಷ ಹೊದಿಕೆಯಲ್ಲಿ ನಷ್ಟ ಉಂಟಾಗಿದೆ. 2013 ರಿಂದ 2023 ರವರೆಗೆ, ಭಾರತದ ನೈಸರ್ಗಿಕ ಕಾಡುಗಳಲ್ಲಿ 95% ರಷ್ಟು ವೃಕ್ಷ ಹೊದಿಕೆ ನಷ್ಟ  ಸಂಭವಿಸಿದೆ.

ಜಿಎಫ್‌ಡಬ್ಲ್ಯೂ ಮಾಹಿತಿಯ ಪ್ರಕಾರ, ಭಾರತದಲ್ಲಿ 2001 ಮತ್ತು 2023 ರ ನಡುವೆ ನಾಶವಾಗಿರುವ ವೃಕ್ಷ ಹೊದಿಕೆಯ ಒಟ್ಟು ಪ್ರಮಾಣದಲ್ಲಿ ಶೇ. 60ರಷ್ಟು ಅಸ್ಸಾಂ, ಮಿಜೋರಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಮಣಿಪುರ ಈ ಐದು ರಾಜ್ಯಗಳಲ್ಲಿಯೇ ಸಂಭವಿಸಿದೆ. ಅಸ್ಸಾಂ 324,000 ಅತಿ ಹೆಚ್ಚು ಅಂದರೆ 324,000ನಷ್ಟು ವೃಕ್ಷ ಹೊದಿಕೆ ಕಳೆದುಕೊಂಡರೆ, ಮಿಜೋರಾಂ 312,000 ಹೆಕ್ಟೇರ್, ಅರುಣಾಚಲ ಪ್ರದೇಶ 262,000 ಹೆಕ್ಟೇರ್‌, ನಾಗಾಲ್ಯಾಂಡ್ 259,00 ಹೆಕ್ಟೇರ್ ಹಾಗೂ ಮಣಿಪುರ 240,000 ಹೆಕ್ಟೇರ್‌ ಭೂಮಿಯಲ್ಲಿ ವೃಕ್ಷ ಹೊದಿಕೆ ನಾಶವಾಗಿದೆ.

ವರದಿಯು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಉಲ್ಲೇಖಿಸಿದ್ದು ಅದರ ಪ್ರಕಾರ ಭಾರತದಲ್ಲಿ 2015 ರಿಂದ 2020 ರವರೆಗೆ ವರ್ಷಕ್ಕೆ 668,000 ಹೆಕ್ಟೇರ್ ಅರಣ್ಯನಾಶವಾಗಿದ್ದು, ಜಾಗತಿಕವಾಗಿ ಅತಿಹೆಚ್ಚು ಮರಗಳು ನಾಶವಾಗುತ್ತಿರುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿದೆ.

ಪ್ರಕರಣ ಅರಣ್ಯ ಸಂರಕ್ಷಣಾ ಕಾಯಿದೆ- 1980, ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯಿದೆ ಹಾಗೂ ಪರಿಸರ ಸಂರಕ್ಷಣಾ ಕಾಯಿದೆಯ ಉಲ್ಲಂಘನೆಯನ್ನು ಸೂಚಿಸುತ್ತದೆ ಎಂದು ಎನ್‌ಜಿಟಿ ಹೇಳಿದೆ. ಆದ್ದರಿಂದ ಸಂಬಂಧ ಪಟ್ಟ ಸಚಿವಾಲಯ ಹಾಗೂ ಸಿಪಿಸಿಬಿಗೆ ನೋಟಿಸ್‌ ನೀಡಿರುವ ಅದು ಪ್ರಕರಣವನ್ನು ಆಗಸ್ಟ್ 28ರಂದು ಮತ್ತೆ ವಿಚಾರಣೆ ನಡೆಸಲು ನಿರ್ಧರಿಸಿದೆ.

ಗಮನಾರ್ಹವಾಗಿ 2000 ರಿಂದ 2024ರವರೆಗೆ ಪ್ರತಿ ಐದು ವರ್ಷಗಳಿಗೊಮ್ಮೆ ದೇಶದ ಈಶಾನ್ಯ ಭಾಗದಲ್ಲಿ ಅರಣ್ಯ ಹೊದಿಕೆಯಲ್ಲಿ ಆಗಿರುವ ಮಾರ್ಪಾಡಿನ ಸ್ಥಿತಿಗತಿ  ತಿಳಿಸುವ ವರದಿ ಸಲ್ಲಿಸುವಂತೆ ಭಾರತೀಯ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕರಿಗೆ ಅದು ಸೂಚಿಸಿದೆ.

Kannada Bar & Bench
kannada.barandbench.com