2ಜಿ ಪ್ರಕರಣದ ಮೇಲ್ಮನವಿಗೆ ಸಂಬಂಧಿಸಿದಂತೆ ಇನ್ನೆರಡು ತಿಂಗಳಲ್ಲಿ ವಿಶೇಷ ಅನುಮತಿ ವಿಚಾರಣೆಯನ್ನು ಮುಗಿಸುವ ಉದ್ದೇಶದಿಂದ ದೆಹಲಿ ಹೈಕೋರ್ಟ್ ವಿಚಾರಣೆ ಆರಂಭಿಸಿದ್ದು, ಪ್ರಕರಣದಲ್ಲಿ ಇದಾಗಲೇ ಖುಲಾಸೆಗೊಂಡಿರುವ ಆರೋಪಿಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಅನುಮತಿ ನೀಡಿರುವ ಪತ್ರದ ಸುತ್ತ ಸೋಮವಾರ ನ್ಯಾಯಾಲಯದಲ್ಲಿ ವಾದವಿವಾದ ನಡೆಯಿತು. ಸಿಬಿಐಗೆ ಮೇಲ್ಮನವಿ ಸಲ್ಲಿಸಲು ಕೇಂದ್ರವು ನೀಡಿರುವ ಅನುಮತಿ ಪತ್ರವನ್ನು ತಮಗೆ ನೀಡುವಂತೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಆರೋಪಿ ಆಸಿಫ್ ಬಲ್ವಾ ಕೋರಿದ್ದಾರೆ (ಸಿಬಿಐ ವರ್ಸಸ್ ಎ ರಾಜಾ ಮತ್ತು ಇತರರು).
ಸಿಆರ್‌ಪಿಸಿ ಸೆಕ್ಷನ್ 378(2) ಮತ್ತು ಸಿಬಿಐ ಕೈಪಿಡಿಯ 23ನೇ ಅಧ್ಯಾಯದಲ್ಲಿ ಉಲ್ಲೇಖಿಸಿರುವಂತೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವ ಆದೇಶ ಮುಂದಿಡುವುದು ಅತ್ಯಗತ್ಯ ಎಂದು ಆಸೀಫ್ ಬಲ್ವಾ ಪರ ವಕೀಲ ವಿಜಯ್ ಅಗರ್‌ವಾಲ್ ವಾದಿಸಿದರು.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ಅಗತ್ಯವಾದ ಕಾನೂನು ಪ್ರಕ್ರಿಯೆಗಳನ್ನು ತನಿಖಾ ಸಂಸ್ಥೆಗಳು ಅನುಸರಿಸಿರುತ್ತವೆ ಎಂಬುದು ನಂಬುಗೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರು, "ಸೆಕ್ಷನ್ 378 ಮತ್ತು ಸಿಬಿಐ ಕೈಪಿಡಿಯನ್ನು ಅನುಸರಿಸಲಾಗಿದೆಯೇ ಎಂಬುದನ್ನು ನ್ಯಾಯಾಲಯ ತಿಳಿಯ ಬಯಸಿದರೆ ಅದನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು… ಆದರೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಲು ಆ ದಾಖಲೆಗಳನ್ನು ಎದುರಾಳಿಗೆ ನೀಡಲಾಗದು… ದಾಖಲಾತಿಗಳನ್ನು ಪ್ರತಿವಾದಿಗಳ ಪರಿಶೀಲನೆಗೆ ನೀಡಲಾಗದು” ಎಂದರು.
ನಮ್ಮಿಂದ ಏನನ್ನು ಮುಚ್ಚಿಡಲಾಗುತ್ತದೋ ಅದನ್ನು ನ್ಯಾಯಾಲಯದಿಂದಲೂ ಮುಚ್ಚಿಡಲಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದು, ಮುಚ್ಚಿದ ಲಕೋಟೆಯಲ್ಲಿ ದಾಖಲಾತಿಗಳನ್ನು ಸಲ್ಲಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ತಮ್ಮ ವಾದಕ್ಕೆ ಪೂರಕವಾಗಿ ಬಳಸಿದರು. ತನ್ನ ಹಕ್ಕುಗಳು ಅಲ್ಲಿ ಮಿಳಿತವಾಗಿರುವಾಗ ದಾಖಲಾತಿಗಳನ್ನು ಪರಿಶೀಲಿಸುವುದಕ್ಕೆ ನ್ಯಾಯಾಲಯ ಅಸಮ್ಮತಿ ಸೂಚಿಸಲಾಗದು ಎಂದರು. ಮುಂದುವರೆದು, ಹೀಗೆಂದರು:
ಕೇಂದ್ರ ಸರ್ಕಾರವು 2018ರಲ್ಲಿ ಅಧಿಸೂಚನೆ ಹೊರಡಿಸಿರುವ ಪ್ರಕಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಎಲ್ಲಾ 2ಜಿ ತರಂಗಾಂತರ ಪ್ರಕರಣಗಳಿಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದೆ. ಅದಾಗ್ಯೂ, ಅವರ ಮೂಲಕ ಮೇಲ್ಮನವಿ ಸಲ್ಲಿಸಲಾಗುತ್ತಿಲ್ಲ ಎಂದರು.
ಅಗರ್‌ವಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಪ್ರಕರಣದಲ್ಲಿ ಇತರ ಆರೋಪಿಗಳನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲರಾದ ಸಿದ್ಧಾರ್ಥ್ ಲೂಥ್ರಾ ಮತ್ತು ಎನ್ ಹರಿಹರನ್ ಅವರು ಕೇಂದ್ರ ಸರ್ಕಾರದ ಪೂರ್ವಾನುಮತಿ ಪ್ರಮುಖ ವಿಚಾರ ಎಂದು ವಾದಿಸಿದರು.
ಪ್ರಕರಣದ ಹಿನ್ನೆಲೆಯನ್ನು ಗಮನಿಸದರೆ, ಹೈಕೋರ್ಟ್ ಮುಂದೆ ಸಲ್ಲಿಸಲಾಗಿರುವ ಮೇಲ್ಮನವಿಯನ್ನು ಎಎಸ್‌ಜಿ ನಡೆಸುತ್ತಿದ್ದರೆ ಅದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಬೇಕು ಎಂದು ವಾದಿಸಿದರು.
ಉಭಯ ವಾದಗಳನ್ನು ಆಲಿಸಿದ ನ್ಯಾಯಪೀಠವು “ಇಲ್ಲಿ ಒಪ್ಪಿಗೆ ದೊರೆತಿದೆ ಎಂದು ನಾನು ನಂಬಿಕೆ ಮತ್ತು ಭರವಸೆ ಹೊಂದಿದ್ದೇನೆ. ಅದಕ್ಕೆ ನನಗೆ ಸ್ಪಷ್ಟನೆ ನೀಡಬೇಕಿದೆ” ಎಂದಿತು.
ವಿವರಣೆ ಪಡೆಯಲು ಮಂಗಳವಾರದವರೆಗೆ ಕಾಲಾವಕಾಶ ನೀಡುವಂತೆ ಎಎಸ್ ಜಿ ಜೈನ್ ಮನವಿ ಮಾಡಿದರು. ಇದೇ ವೇಳೆ ಪೀಠವು ವಾರದಲ್ಲಿ ಮೂರು ದಿನ ಒಂದು ತಾಸು ಇಒಡಬ್ಲ್ಯು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ತಿಹಾರ್ ಜೈಲಿನಲ್ಲಿರುವ ಸಂಜಯ್ ಚಂದ್ರ ಅವರ ಜೊತೆ ವರ್ಚುವಲ್ ಚರ್ಚೆ ನಡೆಸಲು ಅವರ ಪರ ವಕೀಲ ವಿಶಾಲ್ ಗೊಸೈನ್ ಅವರಿಗೆ ಅನುಮತಿ ನೀಡಿತು. ಮಂಗಳವಾರ ವಿಚಾರಣೆ ಮುಂದುವರಿಯಲಿದೆ.