ಲಂಚದ ಹಣಕ್ಕಾಗಿ ಜಲ್ಲಿ, ಕಲ್ಲು ಮತ್ತು ಮಣ್ಣು ತುಂಬಿದ ಟಿಪ್ಪರ್ ಮತ್ತಿತರರ ಭಾರಿ ವಾಹನಗಳನ್ನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಓಡಾಟಕ್ಕೆ ಪೊಲೀಸರು ಅನುಮತಿಸಿದ್ದಾರೆ ಎಂದು ಆರೋಪಿಸಿ ಖಾಸಗಿ ಸುದ್ದಿ ವಾಹಿನಿಯೊಂದು ಬಿತ್ತರಿಸಿದ ಕುಟುಕು ಕಾರ್ಯಾಚರಣೆಯ ಆಧಾರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮೂವರು ಎಸಿಪಿ, ಒಂಭತ್ತು ಮಂದಿ ಪೊಲೀಸ್ ಇನ್‌ಸ್ಪೆಕ್ಟರ್, ಹಲವು ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳಿಗೆ ಈಚೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿನ ಚಿಕ್ಕಜಾಲ, ಕೆಂಗೇರಿ, ರಾಜಾಜಿನಗರ, ಮಲ್ಲೇಶ್ವರಂ, ಹುಳಿಮಾವು, ಬ್ಯಾಟರಾಯನಪುರ, ಹೆಬ್ಬಾಳ, ಕೆ ಎಸ್ ಲೇಔಟ್, ಬನಶಂಕರಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ಗಳಾದ ಆರ್ ಜಗದೀಶ್, ಎಂ ಮಲ್ಲಿಕಾರ್ಜುನ್, ಎಸ್ ಶಿವರತ್ನ, ಎಸ್ ಗಿರೀಶ್ ಕುಮಾರ್, ಎಚ್ ಎಸ್ ವೆಂಕಟೇಶ್, ರೂಪಾ ಹಡಗಲಿ, ಕೆ ವಸಂತ ಕುಮಾರ್, ಟಿ ವೆಂಕಟೇಶ್, ಎನ್ ನರಸಿಂಹಮೂರ್ತಿ, ಎಸಿಪಿಗಳಾದ ಎಂ ಎಸ್ ಅಶೋಕ್, ಬಿ ಎಸ್ ಶ್ರೀನಿವಾಸ್, ಎಲ್ ನಾಗೇಶ್, ಕುಮಾರಸ್ವಾಮಿ ಲೇಔಟ್, ಹೆಬ್ಬಾಳ, ಮಲ್ಲೇಶ್ವರಂ, ಬ್ಯಾಟರಾಯನಪುರ, ರಾಜಾಜಿನಗರ, ಕೆಂಗೇರಿ, ಮಲ್ಲೇಶ್ವರಂ ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ಗಳಾದ ಕೆ ಲೋಕೇಶ್, ಆರ್ ವೆಂಕಟೇಶ್, ಎನ್ ಗಂಗರಾಜು, ಬಿ ಸುನೀಲಾ, ಎಸ್ ಎನ್ ಭೋಜರಾಜ್, ಎಂ ಹನುಮಂತರಾಯಪ್ಪ, ಸುಬ್ರಹ್ಮಣ್ಯಸ್ವಾಮಿ, ಮಲ್ಲೇಶ್ವರಂ ಠಾಣೆಯ ಕಾನ್‌ಸ್ಟೆಬಲ್ ವಿ ಚಂದ್ರಕುಮಾರ್ ಅವರು ಸಲ್ಲಿಸಿರುವ ಅರ್ಜಿಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ಅವರು ಮಾನ್ಯ ಮಾಡಿದ್ದಾರೆ.
“ಎಲ್ಲರೂ ಸರ್ಕಾರಿ ಅಧಿಕಾರಿಗಳಾಗಿದ್ದು, ಸೇವೆಯಲ್ಲಿದ್ದಾರೆ. ನ್ಯಾಯಾಲಯದ ವ್ಯಾಪ್ತಿಯಲ್ಲಿಯೇ ಕರ್ತವ್ಯದಲ್ಲಿದ್ದಾರೆ. ಹೀಗಾಗಿ ಅವರು ನ್ಯಾಯದಾನದಿಂದ ನಾಪತ್ತೆಯಾಗುತ್ತಾರೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಅರ್ಜಿದಾರರು 2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಒಬ್ಬರ ಭದ್ರತೆ ನೀಡಬೇಕು. ಈ ರೀತಿಯ ಅಪರಾಧದದಲ್ಲಿ ಅರ್ಜಿದಾರರು ಭಾಗಿಯಾಗಬಾರದು. ಪ್ರಾಸಿಕ್ಯೂಷನ್ ಸಾಕ್ಷಿಯ ಮೇಲೆ ಪ್ರಭಾವ ಬೀರಬಾರದು ಅಥವಾ ಸಾಕ್ಷಿಯನ್ನು ನಾಶಪಡಿಸಬಾರದು. ತನಿಖಾ ಸಂಸ್ಥೆಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ” ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.