ಬೇಸಿಗೆ ರಜೆಯ ಮೊದಲ ವಾರದಲ್ಲಿ ರಜಾಕಾಲೀನ ಪೀಠದೆದುರು 300 ಹೊಸ ಪ್ರಕರಣಗಳ ಪಟ್ಟಿ ಮಾಡಲಾಗುವುದು: ಸಿಜೆಐ

ರಜಾಕಾಲೀನ ಪೀಠಗಳು ಸಾಮಾನ್ಯವಾಗಿ ತುರ್ತು ವಿಚಾರಣೆ ಅಗತ್ಯವಿರುವ ಪ್ರಕರಣಗಳನ್ನು ಆಲಿಸುತ್ತವೆ ಮತ್ತು ತುರ್ತು ಪರಿಹಾರದ ಅಗತ್ಯವಿದ್ದರೆ ಅಥವಾ ಸಂಬಂಧಪಟ್ಟ ಪೀಠ ಆಲಿಸಲು ಒಪ್ಪಿದರೆ ಮಾತ್ರ ಹೊಸ ಪ್ರಕರಣಗಳನ್ನು ವಿಚಾರಣೆಗೆ ಸ್ವೀಕರಿಸಲಾಗುತ್ತದೆ.
Supreme Court
Supreme Court
Published on

ಬೇಸಿಗೆ ರಜೆ ವೇಳೆ ವಿಚಾರಣೆ ನಡೆಸಲಿರುವ ರಜಾಕಾಲೀನ ಪೀಠಗಳು ರಜೆಯ ಮೊದಲ ವಾರದಲ್ಲಿ 300 ಹೊಸ ಪ್ರಕರಣಗಳ ವಿಚಾರಣೆ ನಡೆಸಲಿವೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮಂಗಳವಾರ ಹೇಳಿದರು.

ರಜೆ ವೇಳೆ ತುರ್ತು ಪ್ರಕರಣಗಳನ್ನಷ್ಟೇ ಆಲಿಸುವ ರಜಾಕಾಲೀನ ಪೀಠಗಳ ಸಾಮಾನ್ಯ ಅಭ್ಯಾಸಕ್ಕೆ ಇದು ಹೊರತಾದುದಾಗಿದೆ. ಈ ವಿಚಾರವನ್ನೇ ಸಿಜೆಐ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಅವರಿದ್ದ ಪೀಠ ಹೇಳಿತು. “ಹೊಸ ಪ್ರಕರಣಗಳನ್ನು ಪಟ್ಟಿ ಮಾಡುವುದಕ್ಕೆ ರಜಾಕಾಲೀನ ಪೀಠದ ನ್ಯಾಯಮೂರ್ತಿಗಳು ಒಪ್ಪಿದ್ದಾರೆ. ರಜೆಯ ಮೊದಲ ವಾರದಲ್ಲಿಯೇ 300 ಹೊಸ ಪ್ರಕರಣಗಳಿವೆ. ಅಲ್ಲದೆ ಹೈಬ್ರಿಡ್‌ ವಿಚಾರಣೆ ಲಭ್ಯವಿದ್ದು ಹೆಚ್ಚು ಅನುಕೂಲಕರ ಸ್ಥಳಗಳಿಗೆ ಹೋಗಲು ಬಯಸುವವರು ಅಲ್ಲಿಂದಲೇ ವಾದಿಸಬಹುದು” ಎಂದು ಸಿಜೆಐ ಹೇಳಿದರು.  

Also Read
ಕರ್ನಾಟಕ ಹೈಕೋರ್ಟ್‌ಗೆ ಏ.24ರಿಂದ ಮೇ 20ರವರೆಗೆ ಬೇಸಿಗೆ ರಜೆ; ಎಂಟು ದಿನ ಕರ್ತವ್ಯ ನಿರ್ವಹಿಸಲಿರುವ ರಜಾಕಾಲೀನ ಪೀಠಗಳು

ಆಗ ನ್ಯಾ. ನರಸಿಂಹ ಅವರು ಹಾಸ್ಯದ ಧಾಟಿಯಲ್ಲಿ “ಅಗತ್ಯವಿರುವ ಏಕೈಕ ಅಂಶ ಎಂದರೆ ಉಡುಪನ್ನು ಚೆನ್ನಾಗಿ ಸಿದ್ಧಪಡಿಸಿಕೊಂಡಿರಬೇಕು” ಎಂದರು.

ರಜಾಕಾಲೀನ ಪೀಠಗಳು ಸಾಮಾನ್ಯವಾಗಿ ತುರ್ತು ವಿಚಾರಣೆ ಅಗತ್ಯವಿರುವ ಪ್ರಕರಣಗಳನ್ನು ಆಲಿಸುತ್ತವೆ ಮತ್ತು ತುರ್ತು ಪರಿಹಾರದ ಅಗತ್ಯವಿದ್ದರೆ ಅಥವಾ ಸಂಬಂಧಪಟ್ಟ ಪೀಠ  ಆಲಿಸಲು ಒಪ್ಪಿದರೆ ಮಾತ್ರ ಹೊಸ ಪ್ರಕರಣಗಳನ್ನು ವಿಚಾರಣೆಗೆ ಸ್ವೀಕರಿಸಲಾಗುತ್ತದೆ.

ಮೇ 22ರಿಂದ ಜುಲೈ 3ರವರೆಗೆ ಸುಪ್ರೀಂ ಕೋರ್ಟ್‌ಗೆ ಬೇಸಿಗೆ ರಜೆ ಇರಲಿದ್ದು ಈ ಅವಧಿಯಲ್ಲಿ ವಿಚಾರಣೆ ನಡೆಸುವ ರಜಾಕಾಲೀನ ಪೀಠಗಳ ಬಗ್ಗೆ ಸುಪ್ರೀಂ ಕೋರ್ಟ್‌ ಈ ತಿಂಗಳ ಆರಂಭದಲ್ಲಿ ಮಾಹಿತಿ ನೀಡಿತ್ತು.

Kannada Bar & Bench
kannada.barandbench.com