
ರಾಜ್ಯ ಸರ್ಕಾರವು ಬಳ್ಳಾರಿ ರಸ್ತೆ ನಿರ್ಮಿಸಲು ಮೈಸೂರಿನ ರಾಜಮನೆತನಕ್ಕೆ ಸೇರಿದ ಬೆಂಗಳೂರಿನ ಅರಮನೆಯ 15.39 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಅವರಿಗೆ ₹3,011 ಕೋಟಿ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಪಾವತಿಸಲು ನಿರ್ದೇಶಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ ಜಿ ಮಸೀಹ್ ಅವರ ವಿಭಾಗೀಯ ಪೀಠದ ಮುಂದೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ಕಳೆದ ಗುರುವಾರ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರ ವಿಭಾಗೀಯ ಪೀಠವು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿ, ರಾಜಮನೆತನಕ್ಕೆ ₹3,011 ಕೋಟಿ ಟಿಡಿಆರ್ ಪಾವತಿಸಲು ಆದೇಶಿಸಿದೆ. ಈ ಆದೇಶವನ್ನು ಪ್ರಶ್ನಿಸುತ್ತಿದ್ದು, ಅರ್ಜಿಯು ನಿರ್ಧಾರವಾಗುವವರೆಗೆ ಟಿಡಿಆರ್ ವಿಚಾರದಲ್ಲಿ ಮುಂದುವರಿಯದಂತೆ ಮನವಿ ಮಾಡಿದ್ದೇವೆ” ಎಂದರು.
ಇದಕ್ಕೂ ಮುನ್ನ, ಸಿಬಲ್ ಅವರು “ರಾಜ್ಯ ಸರ್ಕಾರವು 1996ರಲ್ಲಿ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆ ರೂಪಿಸಿದ್ದು, ಅದನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. 1997ರಲ್ಲಿ ಅದನ್ನು ಮೈಸೂರು ರಾಜಮನೆತನದವರು ಪ್ರಶ್ನಿಸಿದ್ದು, ಅದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ. ಅದು 28 ವರ್ಷದಿಂದ ಬಾಕಿ ಉಳಿದಿದೆ. ಇದು 472 ಎಕರೆ ಭೂಮಿಗೆ ಸಂಬಂಧಿಸಿದ ಪ್ರಕರಣವಾಗಿದೆ” ಎಂದರು.
“ಈ ನಡುವೆ ರಾಜ್ಯ ಸರ್ಕಾರವು ಬಳ್ಳಾರಿ ರಸ್ತೆ ನಿರ್ಮಿಸಲು ಮುಂದಾಗಿದ್ದು, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಆಕ್ಷೇಪಿಸಿದ್ದ ರಾಜಮನೆತನವು ಆ ಭೂಮಿಗೆ ಪರಿಹಾರ ನೀಡುವಂತೆ ಕೋರಿತ್ತು. ಆದರೆ, ವಾಸ್ತವದಲ್ಲಿ ಆ ಭೂಮಿಯು ಕಾಯಿದೆಯ ಅನ್ವಯ ಸರ್ಕಾರದ ಬಳಿಯಲ್ಲಿತ್ತು. ಈ ಪ್ರಕರಣವು ಹಲವು ವರ್ಷ ನಡೆದಿದ್ದು, ರಾಜಮನೆತನವು ಸರ್ಕಾರ 12 ಎಕರೆ ಭೂಮಿ ವಶಪಡಿಸಿಕೊಂಡಿದೆ ಎಂದು ದೂರಿತ್ತು. ಈ ಭೂವಿವಾದದ ವಿಚಾರಕ್ಕೆ ನಾನು ಹೋಗುವುದಿಲ್ಲ. ಅಂತಿಮವಾಗಿ ರಾಜಮನೆತನವು 15 ಎಕರೆ ಭೂಮಿ ವಶಪಡಿಸಿಕೊಂಡಿರುವುದಕ್ಕೆ ಟಿಡಿಆರ್ ನೀಡಲು ಆದೇಶಿಸಬೇಕು ಎಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಆದರೆ, ಸರ್ಕಾರವು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯಿದೆಗೆ 2004ರಲ್ಲಿ ತಿದ್ದುಪಡಿ ಮಾಡಿರುವುದರಿಂದ ಟಿಡಿಆರ್ ನೀಡಲಾಗದು ಎಂದು ಆಕ್ಷೇಪಿಸಿತ್ತು," ಎಂದು ವಿವರಿಸಿದರು.
ಮುಂದುವರೆದು, "ಈ ಕಾಯಿದೆಯ ಸೆಕ್ಷನ್ 14ಬಿ ಅಡಿ ಸ್ಥಳೀಯ ಆಡಳಿತಕ್ಕೆ ಭೂಮಿ ಅಗತ್ಯಬಿದ್ದರೆ ಭೂಮಾಲೀಕರು ಜಾಗ ಬಿಟ್ಟುಕೊಡಲಿದ್ದು, ಅವರಿಗೆ ಟಿಡಿಆರ್ ಲಭ್ಯವಾಗಲಿದೆ. ಆದರೆ, ರಾಜಮನೆತನವು 1996ರ ಕಾಯಿದೆಗೆ ಟಿಡಿಆರ್ ಹಣ ಪಾವತಿಸಬೇಕು ಎಂದು ಕೇಳುತ್ತಿದೆ. ಈಗ ರಾಜ್ಯ ಸರ್ಕಾರವು 15 ಎಕರೆ ಭೂಮಿಗೆ ₹3,011 ಕೋಟಿ ಟಿಡಿಆರ್ ಅನ್ನು ರಾಜಮನೆತನಕ್ಕೆ ನೀಡುವಂತೆ ಆದೇಶಿಸಿದೆ. ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಕಾಯಿದೆ 1996 ಇನ್ನೂ ನಿರ್ಧಾರವಾಗಿಲ್ಲ. ಅದಾಗ್ಯೂ, ಟಿಡಿಆರ್ ನೀಡಲು ಆದೇಶಿಸಲಾಗಿದೆ. ಹೀಗಾಗಿ, ತಿದ್ದುಪಡಿ ಕಾಯಿದೆಯನ್ನು ಹಿಂದಿನ ನಿರ್ಧಾರಕ್ಕೆ ಅನ್ವಯಿಸಲಾಗದು. ಆದ್ದರಿಂದ, ರಾಜಮನೆತನ ಟಿಡಿಆರ್ ಕೋರುತ್ತಿರುವುದಕ್ಕೆ ಸೆಕ್ಷನ್ 14ಬಿ ಅನ್ವಯಿಸಲ್ಲ. ನ್ಯಾಯಾಂಗ ನಿಂದನೆ ಅರ್ಜಿಯ ಮೂಲಕ ನ್ಯಾಯಾಲಯದ ತೀರ್ಪನ್ನು ತಿದ್ದುಪಡಿ ಮಾಡಲಾಗದು. ಹೀಗಾಗಿ, ನ್ಯಾಯಾಂಗ ನಿಂದನೆ ಅರ್ಜಿಯನ್ನು ಜಾರಿ ಮಾಡಲಾಗದು. ಆದರೆ, ಆದೇಶ ಮಾಡಿರುವ ನ್ಯಾಯಾಲಯವು ಅದನ್ನು ಉಲ್ಲೇಖಿಸಿಯೂ ಇಲ್ಲ. ಇಂದು ಟಿಡಿಆರ್ ಅನ್ನು ನಾವು ನೀಡುತ್ತಿದ್ದೇವೆ. ಜೊತೆಗೆ ಮೇಲ್ಮನವಿಯ ಭಾಗವಾಗಿ ಅರ್ಜಿ ಸಲ್ಲಿಸುತ್ತಿದ್ದು, ಅದು ನಿರ್ಧಾರವಾಗುವವರೆಗೆ ಏನೂ ಮಾಡಬಾರದು. ಈ ಅರ್ಜಿಯನ್ನು ನ್ಯಾಯಾಲಯವು ನಾಳೆ, ನಾಡಿದ್ದು ಅಥವಾ ಎಂದಾದರೂ ವಿಚಾರಣೆಗೆ ನಿಗದಿಪಡಿಸಬಹುದು” ಎಂದು ಕೋರಿದರು.
ರಾಜಮನೆತನದ ಪರ ವಕೀಲರ ಪೈಕಿ ಒಬ್ಬರು “ಮೇಲ್ಮನವಿದಾರರಿಗೆ ಟಿಡಿಆರ್ ನೀಡಲಾಗಿದೆ. ಇಂದು ಮಂಡಿಸಿರುವ ಎಲ್ಲಾ ವಾದವನ್ನು ಆಲಿಸಿದ ನ್ಯಾ. ಸುಂದರೇಶ್ ಅವರ ವಿಭಾಗೀಯ ಪೀಠವು ಅದನ್ನು ಗುರುವಾರ ತಿರಸ್ಕರಿಸಿದೆ. 2014ರಲ್ಲೇ ಟಿಡಿಆರ್ ನೀಡಬೇಕಿತ್ತು. 11 ವರ್ಷಗಳಿಂದ ಮೂರು ಸುತ್ತಿನ ವಿಚಾರಣೆಯ ಬಳಿಕ ಎಲ್ಲಾ ವಾದವನ್ನು ಆಲಿಸಿ ಸರ್ಕಾರದ ವಾದವನ್ನು ಸಮನ್ವಯ ಪೀಠ ತಿರಸ್ಕರಿಸಿದೆ. ಶುಕ್ರವಾರ ಟಿಡಿಆರ್ ನೀಡಲಾಗಿದೆ” ಎಂದರು.
ಆಗ ಕಪಿಲ್ ಸಿಬಲ್ ಅವರು “ಕಾನೂನಿನ ಅಡಿ ಟಿಡಿಆರ್ ನೀಡಲು ಹೇಗೆ ಸಾಧ್ಯ? ಕಾನೂನೇ ಅನ್ವಯಿಸದಿರುವಾಗ ಅದನ್ನು ನೀಡುವುದಾದರೂ ಹೇಗೆ? 2004ರಲ್ಲಿ ತಿದ್ದುಪಡಿ ಮಾಡುವ ಮೂಲಕ ಸೆಕ್ಷನ್ 14ಬಿ ಜಾರಿಗೆ ಬಂದಿದೆ. ಸಮನ್ವಯ ಪೀಠದ ಆದೇಶನ್ನು ಪ್ರಶ್ನಿಸಿದ್ದೇವೆ” ಎಂದರು.
ಇದಕ್ಕೆ ಪೀಠವು “ಸಮನ್ವಯ ಪೀಠ ನೀಡಿರುವ ತೀರ್ಪಿನ ಮೇಲೆ ನಾವು ಮೇಲ್ಮನವಿ ಎಂದು ಕೂರಬಹುದೇ?” ಎಂದು ಪ್ರಶ್ನಿಸಿತು. ಇದಕ್ಕೆ ಸಿಬಲ್ ಅವರು “ನ್ಯಾಯಾಂಗ ನಿಂದನೆ ಅರ್ಜಿಯ ಮೂಲಕ ನ್ಯಾಯಾಲಯದ ಆದೇಶವನ್ನು ತಿದ್ದುಪಡಿ ಮಾಡುವುದು ಹೇಗೆ?” ಎಂದು ಪ್ರಶ್ನೆ ಹಾಕಿದರು. ಇದನ್ನು ಆಲಿಸಿದ ಸಿಜೆಐ ಅರ್ಜಿಯನ್ನು ನಾಳೆಗೆ ಪಟ್ಟಿ ಮಾಡಲು ಆದೇಶಿಸಿದರು.