ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಒದಗಿಸುವ ಪ್ರಕ್ರಿಯೆಯ ಪ್ರತಿ ಹಂತವೂ ವಿಳಂಬವಾಗುತ್ತಿದೆ ಎಂದು ನಾಗಾಲ್ಯಾಂಡ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿತು [ಪಿಯುಸಿಎಲ್ ಮತ್ತು ನಾಗಾಲ್ಯಾಂಡ್ ನಡುವಣ ಪ್ರಕರಣ].
ಮೀಸಲಾತಿ ಜಾರಿಗೆ ತರಲು ರಾಜ್ಯ ಚುನಾವಣಾ ಆಯೋಗಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರಿದ್ದ ಪೀಠಕ್ಕೆ ಮಾಹಿತಿ ನೀಡಲಾಯಿತು. ಆದರೆ ಕೇವಲ ಎರಡು ದಿನಗಳ ಹಿಂದೆ (ಜುಲೈ 12) ಅನುಮೋದನೆ ನೀಡಿರುವುದನ್ನು ಗಮನಿಸಿದ ಪೀಠ ವಿಳಂಬದ ಬಗ್ಗೆ ಕಿಡಿ ಕಾರಿತು.
ಪ್ರಕರಣವನ್ನು ನ್ಯಾಯಾಲಯ ಕೈಗೆತ್ತಿಕೊಳ್ಳುತ್ತದೆ ಎಂದು ತಿಳಿದಾಗ ಅನುಮೋದನೆ ನೀಡಲಾಗಿದೆ. ಹೀಗಾಗಿ ನ್ಯಾಯಾಲಯ ರಾಜ್ಯ ಸರ್ಕಾರವನ್ನು ನಂಬುವುದಿಲ್ಲ. ಇದರಿಂದಾಗಿ ಚುನಾವಣೆಯ ಪ್ರತಿ ಹಂತವನ್ನೂ ಮೇಲ್ವಿಚಾರಣೆ ಮಾಡುವಂತಾಗಿದೆ ಎಂದು ನ್ಯಾ. ಕೌಲ್ ಅಸಮಾಧಾನ ವ್ಯಕ್ತಪಡಿಸಿದರು.
"ನಮಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ ... 12 ವರ್ಷಗಳು! ಯಾವಾಗಲೋ ಆಯಾಚಿತವಾಗಿ ಮಾಡಬಹುದಾಗಿದ್ದ ಕೆಲಸಕ್ಕೆ ಇಷ್ಟೊಂದು ಶ್ರಮ ಬೇಕಾಗಿದೆ. ಇದು ಬಹಳ ಬೇಸರದ ಸಂಗತಿ. ನೀವು ಲಿಂಗ ಸಮಾನತೆ ಬಗ್ಗೆ ಬೇರೆ ಮಾತನಾಡುತ್ತೀರಿ. ದೇಶದಲ್ಲಿಯೇ ಅತ್ಯಂತ ಮಹಿಳಾ ವಿದ್ಯಾವಂತರಿರುವ ಪ್ರದೇಶ ಬೇರೆ. ಅವರು ದೇಶದ ಎಲ್ಲೆಡೆ ಅಗತ್ಯವಿೆದ್ದಾರೆ” ಎಂದರು.
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸುವ ಸಂವಿಧಾನದ IX- ಎ ಭಾಗವನ್ನು ಕಾರ್ಯಗತಗೊಳಿಸದೆ ವಿನಾಯತಿ ನೀಡಿ ನಾಗಾಲ್ಯಾಂಡ್ ರಾಜ್ಯ ವಿಧಾನಸಭೆ ನಿರ್ಣಯ ಅಂಗೀಕರಿಸಿರುವುದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತೆ ರೋಸ್ಮರಿ ಜುವಿಚು ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.