ಬೆಂಗಳೂರು ಸಹಿತ 10 ನಗರಗಳಲ್ಲಿ ಗಾಳಿಯ ಗುಣಮಟ್ಟ ಕುಸಿತ, ವಾರ್ಷಿಕ 33,000 ಸಾವು: ಎನ್‌ಜಿಟಿ ಸ್ವಯಂಪ್ರೇರಿತ ವಿಚಾರಣೆ

ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ನಡೆಸಿದ ಅಧ್ಯಯನದ ಆಧಾರದ ಮೇಲೆ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಲಾಗಿದೆ. ಗಾಳಿಯಲ್ಲಿ ಭಾರಲೋಹಗಳ ಅಸ್ತಿತ್ವ ಕುರಿತು ಆಂಗ್ಲ ಪತ್ರಿಕೆಯೊಂದು ವರದಿ ಪ್ರಕಟಿಸಿತ್ತು.
Air Pollution
Air Pollution
Published on

ಭಾರತದಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ವಿವರಿಸುವ ಇತ್ತೀಚಿನ ಎರಡು ಅಧ್ಯಯನ ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)  ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದೆ.

ಎರಡೂ ಅಧ್ಯಯನಗಳು ಪರಿಸರ ಮಾನದಂಡಗಳ ಪಾಲನೆಗೆ ಸಂಬಂಧಿಸಿದಂತೆ ಗಣನೀಯ ಸಮಸ್ಯೆ ಇರುವುದನ್ನು ಪ್ರಸ್ತಾಪಿಸಿವೆ ಎಂದು ಅಧ್ಯಕ್ಷ, ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ , ನ್ಯಾಯಾಂಗ ಸದಸ್ಯ, ನ್ಯಾಯಮೂರ್ತಿ  ಅರುಣ್ ಕುಮಾರ್ ತ್ಯಾಗಿ , ಮತ್ತು ಪರಿಣಿತ ಸದಸ್ಯ ಡಾ.  ಎ ಸೆಂಥಿಲ್ ವೇಲ್‌ ಅವರಿದ್ದ ಪೀಠ  ತಿಳಿಸಿದೆ.

Also Read
ಗಣೇಶ ವಿಸರ್ಜನೆ ವೇಳೆ ವಾದ್ಯಗಾರರ ಸಂಖ್ಯೆ ಮಿತಿಗೊಳಿಸುವಂತೆ ನೀಡಿದ್ದ ಎನ್‌ಜಿಟಿ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಎರಡು ವರದಿಗಳ ಆಧಾರದ ಮೇಲೆ ಎರಡು ಪ್ರತ್ಯೇಕ ಆದೇಶಗಳನ್ನು ನೀಡಲಾಗಿದೆ. ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಅಧ್ಯಯನದ ಪ್ರಕಾರ 10 ಪ್ರಮುಖ ಭಾರತೀಯ ನಗರಗಳಲ್ಲಿ ವಾರ್ಷಿಕವಾಗಿ ಸುಮಾರು 33,000 ಸಾವುಗಳು ವಾಯು ಮಾಲಿನ್ಯಕ್ಕೆ ಸಂಬಂಧಿಸಿದ್ದಾಗಿವೆ. ಈ ಕುರಿತಂತೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು.

ಬೆಂಗಳೂರು , ಅಹಮದಾಬಾದ್, , ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ, ಶಿಮ್ಲಾ ಹಾಗೂ ವಾರಾಣಸಿ ನಗರಗಳಲ್ಲಿ, ವಾಹನ ಮಾಲಿನ್ಯ, ಕೈಗಾರಿಕಾ ಚಟುವಟಿಕೆ ಹಾಗೂ ಕಾಮಗಾರಿ ಧೂಳು,  ಕಳಪೆ ಗಾಳಿಯ ಗುಣಮಟ್ಟಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

ಮಾಲಿನ್ಯಕಾರಕ ಕಣಗಳು ಮಕ್ಕಳು ಮತ್ತು ವೃದ್ಧರ  ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದನ್ನು ಅಧ್ಯಯನ ಪ್ರಸ್ತಾಪಿಸಿದೆ. ವಾಯುಮಾಲಿನ್ಯದಿಂದ  ಹಾರ್ಮೋನ್  ವೈಪರೀತ್ಯ ಉಂಟಾಗಿ ಸಂತಾನೋತ್ಪತ್ತಿ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, , ತಮಿಳುನಾಡು, ದೆಹಲಿ, ತೆಲಂಗಾಣ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB), ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ  (MoEFCC) ಎನ್‌ಜಿಟಿ ನೋಟಿಸ್ ಜಾರಿ ಮಾಡಿದೆ. ಅಕ್ಟೋಬರ್ 23ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Also Read
ಕೇರಳದಲ್ಲಿ ಕಳೆದ ಎಂಟು ವರ್ಷಗಳಲ್ಲಿ 845 ಆನೆ ಸಾವು: ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದ ಎನ್‌ಜಿಟಿ

ಇನ್ನೊಂದು ಪ್ರಕರಣದಲ್ಲಿ, ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನಡೆಸಿದ ಅಧ್ಯಯನಕ್ಕೆ ಸಂಬಂಧಿಸಿದಂತೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯನ್ನು ಎನ್‌ಜಿಟಿ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ. ಪೂರ್ವ ದೆಹಲಿ, ಲೂಧಿಯಾನ ಮತ್ತು ಪಂಚಕುಲದಲ್ಲಿ ಹೆಚ್ಚಿನ ಪ್ರಮಾಣದ ಭಾರಲೋಹ ಮಾಲಿನ್ಯ ಉಂಟಾಗಿರುವುದನ್ನು  ಅಧ್ಯಯನ ಬಹಿರಂಗಪಡಿಸಿದೆ.

ಈ ಸಂಬಂಧ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ, ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಸಂಬಂಧಪಟ್ಟ ಎಲ್ಲ ಜಿಲ್ಲಾಧಿಕಾರಿಗಳಿಗೆ ಅದು ನೋಟಿಸ್‌ ಜಾರಿ ಮಾಡಿದೆ. ಈ ಅರ್ಜಿಯನ್ನು ಫೆಬ್ರವರಿ 6, 2025ರಂದು ವಿಚಾರಣೆ ನಡೆಸಲಾಗುತ್ತದೆ.

Kannada Bar & Bench
kannada.barandbench.com