ಲೋಕ ಅದಾಲತ್‌: ರಾಜ್ಯದಲ್ಲಿ 34.76 ಲಕ್ಷ ಪ್ರಕರಣಗಳು ಇತ್ಯರ್ಥ; ₹1,911 ಕೋಟಿ ರೂಪಾಯಿ ಪರಿಹಾರ

ಬೆಂಗಳೂರಿನ ಶ್ರೀರಾಮ್‌ ಜನರಲ್‌ ಇನ್ಯುರೆನ್ಸ್‌ ಕಂಪೆನಿ ಲಿಮಿಟೆಡ್‌ ವರ್ಸಸ್‌ ಕೆ ಪೂಜಾ ಇತರರು ವಿರುದ್ಧದ ಪ್ರಕರಣವನ್ನು ನ್ಯಾಯಮೂರ್ತಿ ಕೆ ಸೋಮಶೇಖರ್‌ ಅವರ ನೇತೃತ್ವದ ಪೀಠವು 1.15 ಕೋಟಿ ರೂಪಾಯಿ ಪರಿಹಾರದೊಂದಿಗೆ ಇತ್ಯರ್ಥಪಡಿಸಿದೆ.
KALSA Chairman Justice G Narendrar, Justice K Somashekar and others were present at Press Meet
KALSA Chairman Justice G Narendrar, Justice K Somashekar and others were present at Press Meet
Published on

ರಾಜ್ಯದಾದ್ಯಂತ ಜುಲೈ 8ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು ಸುಮಾರು 35 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹1,911 ಕೋಟಿಗಳನ್ನು ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರಾದ ನ್ಯಾಯಮೂರ್ತಿ ಜಿ ನರೇಂದರ್‌ ಅವರು ತಿಳಿಸಿದರು.

ರಾಷ್ಟ್ರೀಯ ಲೋಕ ಅದಾಲತ್‌ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ರಾಜ್ಯದಲ್ಲಿ ಶನಿವಾರ 1,020 ಪೀಠಗಳು ಕಾರ್ಯ ನಿರ್ವಹಿಸಿದ್ದು, ಒಟ್ಟು 34,76,231 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪೈಕಿ 2,50,344 ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 32,25,887 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಒಟ್ಟು ₹1,911 ಕೋಟಿ ಪರಿಹಾರದ ಮೊತ್ತ ಇದರಲ್ಲಿ ಸೇರ್ಪಡೆಯಾಗಿದೆ ಎಂದು ವಿವರಿಸಿದರು.

ಅದಾಲತ್‌ನಲ್ಲಿ ಒಟ್ಟು 1,874 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳ 243 ಜೋಡಿಗಳನ್ನು ಒಂದು ಮಾಡಲಾಗಿದೆ. ಆಸ್ತಿಗೆ ಸಂಬಂಧಿಸಿದ 3,844 ವಿಭಾಗ ದಾವೆಗಳನ್ನು ಇತ್ಯರ್ಥಪಡಿಸಲಾಗಿದೆ. ಮೋಟಾರು ವಾಹನ ಅಪರಾಧಕ್ಕೆ ಸಂಬಂಧಿಸಿದ 5,007 ಪ್ರಕರಣಗಳಿಗೆ ಮುಕ್ತಿ ನೀಡಲಾಗಿದ್ದು, 224 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ. 11,982 ಚೆಕ್‌ ಬೌನ್ಸ್‌ ಪ್ರಕರಣಗಳು ಅದಾಲತ್‌ನಲ್ಲಿ ಅಂತ್ಯ ಕಂಡಿವೆ. 615 ಭೂಸ್ವಾಧೀನ ಎಕ್ಸಿಕ್ಯೂಷನ್‌ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹141 ಕೋಟಿ ಪರಿಹಾರ ಕೊಡಿಸಲಾಗಿದೆ. ಇತರೆ 4,921 ಎಕ್ಸಿಕ್ಯೂಷನ್‌ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹234 ಕೋಟಿ ಪರಿಹಾರ ಪಾವತಿಸುವಂತೆ ಮಾಡಲಾಗಿದೆ. ರೇರಾ ವ್ಯಾಪ್ತಿಗೆ ಬರುವ 98 ಪ್ರಕರಣಗಳನ್ನು ಪರಿಹರಿಸಿ, ₹14 ಕೋಟಿ ಪರಿಹಾರ ಕೊಡಿಸಲಾಗಿದೆ. 180 ಗ್ರಾಹಕರ ವ್ಯಾಜ್ಯ ಸಂಬಂಧಿ ಪ್ರಕರಣಗಳನ್ನು ಬಗೆಹರಿಸುವ ಮೂಲಕ ₹6 ಕೋಟಿ ಪರಿಹಾರ ಕೊಡಿಸಲಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಅದಾಲತ್‌ನಲ್ಲಿನ ವಿಶೇಷಗಳು: ಶ್ರೀರಾಮ್‌ ಜನರಲ್‌ ಇನ್ಯುರೆನ್ಸ್‌ ಕಂಪೆನಿ ಲಿಮಿಟೆಡ್‌ ವರ್ಸಸ್‌ ಕೆ ಪೂಜಾ ಇತರರು ವಿರುದ್ಧದ ಪ್ರಕರಣವನ್ನು ನ್ಯಾಯಮೂರ್ತಿ ಕೆ ಸೋಮಶೇಖರ್‌ ಅವರ ನೇತೃತ್ವದ ಪೀಠವು ₹1.15 ಕೋಟಿ ಪರಿಹಾರದೊಂದಿಗೆ ಇತ್ಯರ್ಥಪಡಿಸಿದೆ.

Also Read
ಜುಲೈ 8ಕ್ಕೆ ರಾಷ್ಟ್ರೀಯ ಲೋಕ ಅದಾಲತ್; ಟ್ರಾಫಿಕ್ ಚಲನ್ ಪ್ರಕರಣಗಳ ದಂಡದಲ್ಲಿ ಶೇ.50 ವಿನಾಯಿತಿ

ಆಸ್ತಿ ಪಾಲು ವಿಭಜನೆಗೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ಪೀಠವು ಇತ್ಯರ್ಥಪಡಿಸಿದೆ. ಪಕ್ಷಕಾರರಲ್ಲಿ ಒಬ್ಬರಾದ 74 ವರ್ಷದ ಲಲಿತಮ್ಮ ಎಂಬವರು ಆಂಬುಲೆನ್ಸ್‌ನಲ್ಲಿ ಹೈಕೋರ್ಟ್‌ಗೆ ಬಂದಿದ್ದರು. ನ್ಯಾ. ಹೇಮಲೇಖಾ ಅವರು ಖುದ್ದು ಆಂಬುಲೆನ್ಸ್‌ ಬಳಿ ತೆರಳಿ ಹೇಳಿಕೆ ದಾಖಲಿಸಿಕೊಂಡು ಪ್ರಕರಣ ಇತ್ಯರ್ಥಪಡಿಸಿದ ಘಟನೆಯೂ ನಡೆದಿದೆ.

ಹುಬ್ಬಳ್ಳಿ ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ 63 ವರ್ಷ ಹಿಂದಿನ ಸಿವಿಲ್‌ ದಾವೆಗೆ ಮುಕ್ತಿ ದೊರೆತಿದೆ. ಚಿತ್ರದುರ್ಗದ ಹಿರಿಯ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಕಳೆದ 30 ವರ್ಷಗಳಿಂದ ಹಾಗೆ ಇದ್ದ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. 13 ವರ್ಷಗಳ ಹಿಂದೆ ಹೊಸದುರ್ಗದ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲಿಸಿದ್ದ ದಂಪತಿಗಳನ್ನು ಒಂದು ಮಾಡುವ ಮೂಲಕ ಪ್ರಕರಣಕ್ಕೆ ಸುಖಾಂತ್ಯ ಕಾಣಿಸಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com