ಕೃಷಿಕರಿಂದ ₹38 ಲಕ್ಷ ಹೆಚ್ಚುವರಿ ಹಣ ವಸೂಲಿ: ಶೇ 6ರ ಬಡ್ಡಿಯೊಂದಿಗೆ ಹಣ ಮರುಪಾವತಿಸಲು ಬ್ಯಾಂಕ್‌ಗೆ ಆಯೋಗ ನಿರ್ದೇಶನ

ವ್ಯಾಜ್ಯದ ವೆಚ್ಚದ ಭಾಗವಾಗಿ ₹10 ಸಾವಿರ ಪಾವತಿಸಬೇಕು. ಹೆಚ್ಚುವರಿಯಾಗಿ ಪಡೆದಿರುವ ₹38.18 ಲಕ್ಷಕ್ಕೆ ಶೇ 6ರ ಬಡ್ಡಿ ಸೇರಿಸಿ, 30 ದಿನದಲ್ಲಿ ಪಾವತಿಸಬೇಕು. ಇಲ್ಲವಾದಲ್ಲಿ ಶೇ 9ರ ಬಡ್ಡಿಯೊಂದಿಗೆ ಹಣ ಪಾವತಿಸಬೇಕು ಎಂದು ಆದೇಶಿಸಿದ ಆಯೋಗ.
Consumer Protection
Consumer Protection
Published on

ಕೃಷಿ ಜಮೀನಿನ ಅಭಿವೃದ್ಧಿಗಾಗಿ ₹3 ಕೋಟಿ ಸಾಲ ಪಡೆದಿದ್ದ ಗ್ರಾಹಕರೊಬ್ಬರಿಂದ ₹38 ಲಕ್ಷ ಹೆಚ್ಚುವರಿ ಪಡೆದಿರುವ ದೂರಿನ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ದೂರುದಾರ ಗ್ರಾಹಕರಿಂದ ಪಡೆದಿರುವ ಹೆಚ್ಚುವರಿ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸುವಂತೆ ಬೆಳಗಾವಿಯ ಶ್ರೀಮಾತಾ ಕೋ ಆಪರೇಟಿವ್‌ ಕ್ರೆಡಿಟ್ ಸೊಸೈಟಿಗೆ ಆದೇಶಿಸಿದೆ.

ಫಿರ್ಯಾದುದಾರ ಗೋಕಾಕ ತಾಲ್ಲೂಕಿನ ಕಮಲದಿನ್ನಿ ಗ್ರಾಮದ ಕೃಷಿಕ ಭೀಮಪ್ಪ ಹನಮಂತಪ್ಪ ರೆಡ್ಡಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ನ್ಯಾಯಾಂಗ ಸದಸ್ಯ ರವಿಶಂಕರ್‌ ಮತ್ತು ಮಹಿಳಾ ಸದಸ್ಯೆ ಸುನೀತಾ ಸಿ.ಬಾಗೇವಾಡಿ ಅವರು ಈ ಆದೇಶ ಮಾಡಿದ್ದಾರೆ.

ವ್ಯಾಜ್ಯದ ವೆಚ್ಚದ ಭಾಗವಾಗಿ ₹10 ಸಾವಿರಯನ್ನು ಪಾವತಿ ಮಾಡಬೇಕು. ಹೆಚ್ಚುವರಿಯಾಗಿ ಪಡೆದಿರುವ ₹ 38,18,819ಕ್ಕೆ ಶೇ 6ರ ಬಡ್ಡಿ ಸೇರಿಸಿ ಪಾವತಿಸಬೇಕು. 30 ದಿನಗಳ ಒಳಗೆ ಈ ಆದೇಶ ಪಾಲಿಸಬೇಕು. ತಪ್ಪಿದಲ್ಲಿ, ಹಿಂತಿರುಗಿಸಬೇಕಾದ ಹಣದ ಬಡ್ಡಿ ದರವನ್ನು ಶೇ 9ರ ಬಡ್ಡಿ ದರದೊಂದಿಗೆ ಪಾವತಿಸಬೇಕು ಎಂದು ಶ್ರೀಮಾತಾ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷರು, ಪ್ರಧಾನ ವ್ಯವಸ್ಥಾಪಕ ಮತ್ತು ವ್ಯವಸ್ಥಾಪಕರಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಕೃಷಿ ಜಮೀನಿನ ಅಭಿವೃದ್ಧಿಗಾಗಿ ಬೆಳಗಾವಿಯ ನ್ಯೂ ಗೂಡ್ಸ್‌ ಶೆಡ್‌ ರಸ್ತೆಯಲ್ಲಿರುವ ಶ್ರೀಮಾತಾ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಗೆ ಸ್ವತ್ತನ್ನು ಅಡವಿಟ್ಟಿದ್ದ ಭೀಮಪ್ಪ ಹನಮಂತಪ್ಪ ರೆಡ್ಡಿ ಮೂರು ಕೋಟಿ ರೂಪಾಯಿ ಸಾಲವನ್ನು ಶೇ 14ರ ಬಡ್ಡಿ ದರದಲ್ಲಿ ಪಡೆದಿದ್ದರು. ಸಾಲ ಮರುಪಾವತಿಗೆ 60 ತಿಂಗಳ ವಾಯಿದೆ ನೀಡಲಾಗಿತ್ತು. ಏತನ್ಮಧ್ಯೆ ಸಾಲದ ಮೊತ್ತವನ್ನು ಬಡ್ಡಿ ಸಮೇತ ಹಿಂದಿರುಗಿಸುವಾಗ ಸೊಸೈಟಿಯವರು ₹ 38,18,819ರಷ್ಟು ಹಣವನ್ನು ಹೆಚ್ಚುವರಿಯಾಗಿ ಪಡೆದಿದ್ದರು.

ಇದನ್ನು ಪ್ರಶ್ನಿಸಿ ಭೀಮಪ್ಪ ರಿಸರ್ವ್‌ ಬ್ಯಾಂಕ್ ಆಫ್‌ ಇಂಡಿಯಾದ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ಸೊಸೈಟಿಯವರು ಬಡ್ಡಿ ರೂಪದಲ್ಲಿ ಹೆಚ್ಚುವರಿಯಾಗಿ 38 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುವುದು ಸಾಲದ ಒಪ್ಪಂದ ಪತ್ರದ ಪ್ರಕಾರ ಮತ್ತು ಬ್ಯಾಂಕಿಂಗ್‌ ಕಾನೂನು ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿದೆ. ಇದು ಹಣಕಾಸಿನ ಸಂಸ್ಥೆಯ ಹೆಸರಿನಲ್ಲಿ ಸೇವೆಯ ಕೊರತೆಯಾಗುತ್ತದೆ. ಇದು ಅನ್ಯಾಯದ ವ್ಯಾಪಾರ ಎಂಬ ಅಭಿಪ್ರಾಯದೊಂದಿಗೆ ಹೆಚ್ಚುವರಿ ಮೊತ್ತ ಹಿಂತಿರುಗಿಸಲು ಆದೇಶಿಸಿದೆ.

Kannada Bar & Bench
kannada.barandbench.com