[ಶೇ.40 ಕಮಿಷನ್ ಆರೋಪ] ಬಿಜೆಪಿ ಹೂಡಿರುವ ಮಾನಹಾನಿ ಪ್ರಕರಣದಲ್ಲಿ ತಮ್ಮನ್ನು ಗುರಿಯಾಗಿಸಲು ದಾಖಲೆ ಇಲ್ಲ: ರಾಹುಲ್‌ ವಾದ

“ಬಿಜೆಪಿಯ ವಿರುದ್ಧದ ದುರುದ್ದೇಶಪೂರಿತ ಪ್ರಚಾರದಿಂದಾಗಿ ಪಕ್ಷದ ಹಲವು ಅಭ್ಯರ್ಥಿಗಳು 500-2000 ಮತಗಳ ಅಂತರದಲ್ಲಿ ಸೋಲನುಭವಿಸಿದರು” ಎಂದು ಬಿಜೆಪಿ ಪರ ವಕೀಲರ ವಾದ.‌
Rahul Gandhi, Siddaramaiah and D K Shivakumar
Rahul Gandhi, Siddaramaiah and D K Shivakumar
Published on

́40 ಪರ್ಸೆಂಟ್‌ ಸರ್ಕಾರʼದ ಆಪಾದನೆಯ ಸಂಬಂಧ ಕರ್ನಾಟಕದ ಬಿಜೆಪಿ ಘಟಕವು ಹೂಡಿರುವ ಮಾನಹಾನಿ ದಾವೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂದಿಯವರ ವಿರುದ್ಧ ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ ಅವರನ್ನು ಅನಗತ್ಯವಾಗಿ ಸಿಲುಕಿಸುವ ಪ್ರಯತ್ನ ಮಾಡಲಾಗಿದೆ ಎಂದು ರಾಹುಲ್‌ ಪರ ವಕೀಲರು ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಿದರು.

ಬಿಜೆಪಿಯು ಕಾಂಗ್ರೆಸ್‌ ಪಕ್ಷ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ವಿರುದ್ಧ ಹೂಡಿದ್ದ ಖಾಸಗಿ ದೂರಿನ ಸಂಜ್ಞೇ ಪರಿಗಣಿಸಿ ದಾಖಲಿಸಿರುವ ಮಾನಹಾನಿ ಪ್ರಕರಣ ರದ್ದುಪಡಿಸುವಂತೆ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು.

ಕಳೆದ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿ, ವರ್ಗಾವಣೆಗೆ ದರ ನಿಗದಿಪಡಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಈ ಸಂಬಂಧ ರಾಜ್ಯದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ʼಭ್ರಷ್ಟಾಚಾರ ದರ ಪಟ್ಟಿʼ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಜಾಹೀರಾತು ಪ್ರಕಟಿಸುವ ಮೂಲಕ ಮಾನಹಾನಿ ಮಾಡಿದೆ ಎಂದು ಆರೋಪಿಸಿ ಬಿಜೆಪಿ‌ ದಾವೆ ಹೂಡಿದೆ.

ದಾವೆಯ ಕುರಿತಾದ ಇಂದಿನ ವಿಚಾರಣೆ ವೇಳೆ, ರಾಹುಲ್‌ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿಯವರನ್ನು ನೇರವಾಗಿ ಗುರಿಯಾಗಿಸಲು ಅವರ ವಿರುದ್ಧ ಯಾವುದೇ ದಾಖಲೆಗಳು ಇಲ್ಲ ಎಂದು ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಿದರು.

ರಾಹುಲ್‌ ಗಾಂಧಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಶಶಿಕಿರಣ್‌ ಶೆಟ್ಟಿ ಅವರು “ಆಕ್ಷೇಪಿತ ಜಾಹೀರಾತಿನ ಟ್ವೀಟ್‌ಗೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ತಳುಕು ಹಾಕಲು ಯಾವುದೇ ದಾಖಲೆ ಇಲ್ಲ ಎಂಬುದನ್ನು ದೂರೇ ಬಹಿರಂಗಪಡಿಸುತ್ತದೆ. ರಾಹುಲ್‌ರನ್ನು ಗುರಿಯಾಗಿಸಬಹುದಾದ ಯಾವುದೇ ಟ್ವೀಟ್‌ ಅಥವಾ ಪ್ರಕಟಣೆ ಇಲ್ಲ. ಯಾರೇ ಜಾಹೀರಾತಿನ ಪ್ರಕಟಣೆ ನೀಡಿದ್ದರೂ ಅದು ಸರ್ಕಾರದ ಕುರಿತಿದ್ದಾಗಿದೆಯೇ ವಿನಾ ಬಿಜೆಪಿ ಗುರಿಯಾಗಿಸಿಲ್ಲ. ಅದಾಗ್ಯೂ ಅಂದಿನ ಬಿಜೆಪಿ ಸರ್ಕಾರ ಯಾವುದೇ ಕ್ರಮಕೈಗೊಂಡಿರಲಿಲ್ಲ” ಎಂದರು.

“ಆಕ್ಷೇಪಿತ ಜಾಹೀರಾತಿನ ಟ್ವೀಟ್‌ ಮಾಡಿದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಪಕ್ಷದ ಉಪಾಧ್ಯಕ್ಷರಾಗಿದ್ದರು ಎಂದು ಹೇಳಲು ಯಾವುದೇ ದಾಖಲೆ ಇಲ್ಲ. ಟ್ವೀಟ್‌ ಮಾಡಿರುವ ಸಂದರ್ಭದಲ್ಲಿ ರಾಹುಲ್‌ ಉಪಾಧ್ಯಕ್ಷರಾಗಿರಲಿಲ್ಲ. ಲೋಕಸಭೆಯ ಸದಸ್ಯತ್ವದಿಂದಲೂ ಅನರ್ಹಗೊಂಡಿದ್ದರು” ಎಂದರು. ಆನಂತರ ಈ ಸಂಬಂಧ ಅಫಿಡವಿಟ್‌ ಅನ್ನೂ ಶೆಟ್ಟಿ ಸಲ್ಲಿಸಿದರು.

“ಪ್ರಕರಣದಲ್ಲಿ ಸಮನ್ಸ್‌ ಜಾರಿ ಮಾಡುವಾಗ ಮ್ಯಾಜಿಸ್ಟ್ರೇಟ್‌ ವಿವೇಚನೆ ಬಳಿಸಿಲ್ಲ. ಜಾಹೀರಾತು ಪ್ರಕಟಿಸಲು ರಾಹುಲ್‌ ಗಾಂಧಿ ಅನುಮತಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲ. ಆರೋಪಿತ ಟ್ವೀಟ್‌ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನೂ ಸಲ್ಲಿಸಲಾಗಿಲ್ಲ. ಒಮ್ಮೆ ಸರ್ಕಾರ ಬಂದ ಮೇಲೆ ಅದು ಬಿಜೆಪಿಗೆ ಸೇರುವುದಿಲ್ಲ. ಅದು ಕರ್ನಾಟಕ ಸರ್ಕಾರವಾಗುತ್ತದೆಯೇ ವಿನಾ ಬಿಜೆಪಿ ಸರ್ಕಾರವಾಗುವುದಿಲ್ಲ” ಎಂದರು.

ಅರ್ಜಿದಾರ ಬಿಜೆಪಿ ಪ್ರತಿನಿಧಿಸಿದ್ದ ವಕೀಲ ಎಂ ವಿನೋದ್‌ಕುಮಾರ್‌ ಅವರು “2019-2023ರವರೆಗೆ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದವರು ಯಾರು? ಬಿಜೆಪಿಯನ್ನೇ ಗುರಿಯಾಗಿಸಿ ಜಾಹೀರಾತು ನೀಡಲಾಗಿದೆ. ಅಂದು ಆಡಳಿತದಲ್ಲಿ ಬಿಜೆಪಿಯನ್ನು ಭ್ರಷ್ಟಾಚಾರಿ ಎಂದು ಬಿಂಬಿಸಲು ಎಲ್ಲಾ ಪ್ರಮುಖ ಪತ್ರಗಳಲ್ಲಿ ಸರಣಿಯಾಗಿ ಜಾಹೀರಾತು ನೀಡಲಾಗಿತ್ತು. ಇದರಲ್ಲಿ ಮುಖ್ಯಮಂತ್ರಿ, ಮಂತ್ರಿ, ಎಂಜಿನಿಯರ್‌, ಕುಲಪತಿ ಹೀಗೆ ಪ್ರತಿಯೊಂದು ಹುದ್ದೆಗೂ ಇಂತಿಷ್ಟು ಕೋಟಿ ಲಂಚ ಪಡೆಯಲಾಗುತ್ತದೆ ಎಂದು ಉಲ್ಲೇಖಿಸಿ ಮಾನಹಾನಿ ಮಾಡಲಾಗಿದೆ” ಎಂದು ಆಕ್ಷೇಪಿಸಿದರು.

“ಅರ್ಜಿದಾರರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಶಾಸನಸಭೆಯ ಸದಸ್ಯರಾದ ಅರ್ಜಿದಾರರು ಅತ್ಯಂತ ಎಚ್ಚರಿಕೆಯಿಂದ ಇರಬೇಕಿತ್ತು. ಶೇ.40 ಸರ್ಕಾರ ಎಂದು ಹೇಳಿ ಬಿಜೆಪಿಯನ್ನು ಗುರಿಯಾಗಿಸಲಾಗಿತ್ತು. ಜಾಹೀರಾತಿನಲ್ಲಿ ಬಿಜೆಪಿ ಉಲ್ಲೇಖಿಸಿದಿದ್ದರೂ ಸಂಪೂರ್ಣವಾಗಿ ಕಮಲ ಪಕ್ಷವನ್ನು ಗುರಿಯಾಗಿಸಿದ್ದರಿಂದ ದಾವೆ ಹೂಡುವ ಹಕ್ಕು ಇದೆ” ಎಂದು ಸಮರ್ಥಿಸಿದರು.

“ಬಿಜೆಪಿಯ ವಿರುದ್ಧದ ದುರುದ್ದೇಶಪೂರಿತ ಪ್ರಚಾರದಿಂದಾಗಿ ಪಕ್ಷದ ಹಲವು ಅಭ್ಯರ್ಥಿಗಳು 500-2000 ಮತಗಳ ಅಂತರದಲ್ಲಿ ಸೋಲನುಭವಿಸಿದರು” ಎಂದು ವಾದಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಡಿಸೆಂಬರ್‌ 18ಕ್ಕೆ ಮುಂದೂಡಿತು.

Also Read
ಬಿಜೆಪಿ ವಿರುದ್ಧ ಶೇ.40 ಕಮಿಷನ್‌ ಆರೋಪ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ

ಪ್ರಕರಣದ ಹಿನ್ನೆಲೆ: ಬಿಜೆಪಿಯು ದಾಖಲಿಸಿದ್ದ ಖಾಸಗಿ ದೂರಿನಲ್ಲಿ, ಕಳೆದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಭ್ರಷ್ಟಾಚಾರವನ್ನು ಪ್ರಧಾನ ಅಸ್ತ್ರವಾಗಿಸಿದ್ದ ಕಾಂಗ್ರೆಸ್‌ 2023ರ ಮೇ 5ರಂದು ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಭ್ರಷ್ಟಾಚಾರ ದರ ಪಟ್ಟಿ ಎಂಬ ಹೆಸರಿನ ಅಡಿ ವಿವಿಧ ಹುದ್ದೆಗಳಿಗೆ ಬಿಜೆಪಿ ಲಂಚ ನಿಗದಿಪಡಿಸಿದೆ ಎಂದು ಆರೋಪಿಸಿತ್ತು ಎಂದು ದೂರಿತ್ತು.

ಅಲ್ಲದೇ, ಕೋವಿಡ್‌ ಸಾಮಗ್ರಿಗಳ ಪೂರೈಕೆ, ಲೋಕೋಪಯೋಗಿ ಗುತ್ತಿಗೆಗಳು, ಮಠಗಳಿಗೆ ಅನುದಾನ, ಶಾಲೆಗಳಿಗೆ ಮೊಟ್ಟೆ ಪೂರೈಕೆ, ರಸ್ತೆ ಕಾಮಗಾರಿಗಳಲ್ಲಿ ಶೇ 75-30% ಕಮಿಷನ್‌ ಪಡೆಯಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಪತ್ರಿಕೆಗಳಿಗೆ ನೀಡಿದ ಜಾಹೀರಾತಿನ ಕೊನೆಯಲ್ಲಿ ಶೇ. 40 ಕಮಿಷನ್ ನ (ಬಿಜೆಪಿ) ಸರ್ಕಾರವು ರೂ. 1.5 ಲಕ್ಷ ಕೋಟಿಯನ್ನು ಕಳೆದ ನಾಲ್ಕು ವರ್ಷಗಳಲ್ಲಿ ಲೂಟಿ ಮಾಡಿದೆ ಎಂದು ಆರೋಪಿಸಿತ್ತು. ಡಬಲ್‌ ಎಂಜಿನ್‌ ಸರ್ಕಾರಕ್ಕೆ ಬದಲಾಗಿ ಟ್ರಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿಯ ವರ್ಚಸ್ಸಿಗೆ ಹಾನಿ ಮಾಡಿ, ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಪಡಿಸಲಾಗಿದೆ. ಕೊನೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಆರೋಪಿಗಳು ಕೇಳಿದ್ದಾರೆ. ಸುಳ್ಳು ಜಾಹೀರಾತು ನೀಡಲು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿ ಅವರು ನೇರ ಕಾರಣವಾಗಿದ್ದಾರೆ ಎಂದು ಬಿಜೆಪಿಯು ತನ್ನ ದೂರಿನಲ್ಲಿ ಆರೋಪಿಸಿತ್ತು.

ರಾಹುಲ್‌ ಗಾಧಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಸುಳ್ಳು ಜಾಹೀರಾತನ್ನು ಹಂಚಿಕೊಂಡು ಬಿಜೆಪಿಗೆ ಮಾನಹಾನಿ ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ, ಕಾಂಗ್ರೆಸ್‌, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಮತ್ತು ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿಯು ಖಾಸಗಿ ದೂರಿನಲ್ಲಿ ಕೋರಿತ್ತು. ಇದರ ಸಂಜ್ಞೇ ಪರಿಗಣಿಸಿದ್ದ ವಿಶೇಷ ನ್ಯಾಯಾಲಯವು ಮಾನಹಾನಿ ದಾವೆ ದಾಖಲಿಸಿದೆ.

Kannada Bar & Bench
kannada.barandbench.com