ಷೆಡ್‌ ನಿರ್ಮಾಣಕ್ಕೆ ಅನುಮತಿಸಲು ₹400 ಲಂಚ: ಕಡ್ಡಾಯ ನಿವೃತ್ತಿ ಆದೇಶ ವಜಾ ಕೋರಿದ್ದ ಎಸ್‌ಡಿಸಿ ಮನವಿ ತಿರಸ್ಕೃತ

ʼಲಂಚ ಪಡೆದ ಬಗ್ಗೆ ಒಂದು ಸಂಶಯ ನಿರ್ಮಾಣವಾಗುತ್ತದೆʼ ಎಂದು ವಿಶೇಷ ನ್ಯಾಯಾಲಯ ಹೇಳಿದ್ದು, ಅರ್ಜಿದಾರರಿಗೆ ಅನುಮಾನದ ಲಾಭ ನೀಡಿ ಖುಲಾಸೆಗೊಳಿಸಲಾಗಿದೆ ಎಂಬುದು ಇದರ ಅರ್ಥ. ಗೌರವಪೂರ್ವಕವಾಗಿ ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿಲ್ಲ ಎಂದು ವಿವರಣೆ.
Justice S G Pandit and Karnataka HC
Justice S G Pandit and Karnataka HC

ಸೈಟಿನಲ್ಲಿ ಷೆಡ್‌ ನಿರ್ಮಾಣ ಮಾಡಲು ಅನುಮತಿ ನೀಡಲು ₹400 ಲಂಚ ಪಡೆದ ಆರೋಪದಲ್ಲಿ ತನ್ನನ್ನು ಕಡ್ಡಾಯ ನಿವೃತ್ತಿಗೊಳಿಸಿರುವ ನಗರಾಭಿವೃದ್ಧಿ ಇಲಾಖೆಯ ಆಕ್ಷೇಪಾರ್ಹ ಆದೇಶ ವಜಾ ಮಾಡುವಂತೆ ಕೋರಿದ್ದ ದ್ವಿತೀಯ ದರ್ಜೆ ಗುಮಾಸ್ತರೊಬ್ಬರ (ಎಸ್‌ಡಿಸಿ) ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

ಕೊಪ್ಪಳದ ಕುಷ್ಟಗಿ ತಾಲ್ಲೂಕಿನ ಮುನಿಸಿಪಲ್‌ ಕಾರ್ಪೊರೇಶನ್‌ನಲ್ಲಿ ಎಸ್‌ಡಿಸಿಯಾಗಿ, ಕಡ್ಡಾಯ ನಿವೃತ್ತಿ ಶಿಕ್ಷೆಗೆ ಗುರಿಯಾಗಿರುವ ಆರ್‌ ನರಸಿಂಹಲು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಿರಾಕರಿಸಿದೆ.

“ನ್ಯಾಯಾಲಯ ಅಥವಾ ನ್ಯಾಯ ಮಂಡಳಿಯು ನ್ಯಾಯಿಕ ಪರಿಶೀಲನಾ ಅಧಿಕಾರ ಚಲಾಯಿಸುವಾಗ ದಾಖಲೆಯಲ್ಲಿರುವ ಸಾಕ್ಷ್ಯವನ್ನು ಮರು ಪರಿಶೀಲಿಸಲು ಮೇಲ್ಮನವಿ ಪ್ರಾಧಿಕಾರವಾಗಿ ಕೆಲಸ ಮಾಡುವುದಿಲ್ಲ. ಶಿಕ್ಷೆ ವಿಧಿಸುವ ಪ್ರಾಧಿಕಾರವು ವಾಸ್ತವಾಂಶಗಳ ಮುಖ್ಯಸ್ಥನಾಗಿರುತ್ತದೆ. ತಪ್ಪಿತಸ್ಥ ಅಧಿಕಾರಿಯು ತನ್ನನ್ನು ಸಮರ್ಥಿಸಿಕೊಳ್ಳಲು ತನಿಖಾಧಿಕಾರಿಯು ಸಾಕಷ್ಟು ಸಮಯ ನೀಡುವ ಮೂಲಕ ಸ್ವಾಭಾವಿಕ ನ್ಯಾಯ ತತ್ವ ಪಾಲಿಸಿದ್ದಾರೆಯೆ ಎಂಬುದನ್ನು ಪ್ರಮುಖವಾಗಿಟ್ಟುಕೊಂಡು, ಪ್ರಕ್ರಿಯಾತ್ಮಕವಾಗಿ ಏನಾದರೂ ಅಕ್ರಮವಾಗಿರುವುದನ್ನು ಮಾತ್ರವೇ ನ್ಯಾಯಾಲಯ ಅಥವಾ ಮೇಲ್ಮನವಿ ಪ್ರಾಧಿಕಾರವು ನ್ಯಾಯಿಕ ಪರಿಶೀಲನೆಗೆ ಒಳಪಡಿಸುತ್ತದೆ” ಎಂದು ಆದೇಶದಲ್ಲಿ ವಿವರಿಸಿದೆ.

“ಜಿಲ್ಲಾ ವಿಶೇಷ ನ್ಯಾಯಾಲಯದ ಆದೇಶವನ್ನು ಅರ್ಜಿದಾರರು ಸಲ್ಲಿಸಿದ್ದು, ಅರ್ಜಿದಾರರಿಗೆ ಅನುಮಾನದ ಲಾಭ ನೀಡಲಾಗಿದೆ. “ಲಂಚದ ಹಣ ಪಡೆದ ಬಗ್ಗೆ ಒಂದು ಸಂಶಯ ನಿರ್ಮಾಣವಾಗುತ್ತದೆ” ಎಂದು ವಿಶೇಷ ನ್ಯಾಯಾಲಯ ಆದೇಶದಲ್ಲಿ ಹೇಳಿದ್ದು, ಅರ್ಜಿದಾರರಿಗೆ ಅನುಮಾನದ ಲಾಭ ನೀಡಿ ಖುಲಾಸೆಗೊಳಿಸಲಾಗಿದೆ ಎಂಬುದು ಇದರ ಅರ್ಥ. ಗೌರವಪೂರ್ವಕವಾಗಿ ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿಲ್ಲ” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

“ಎರಡನೇ ಷೋಕಾಸ್‌ ನೋಟಿಸ್‌ ಜೊತೆಗೆ ತನಗೆ ತನಿಖಾ ವರದಿಯನ್ನು ಒದಗಿಸಲಾಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಇದನ್ನು ನಂಬಲಾಗದು ಮತ್ತು ಈ ವಾದ ಮಾನ್ಯವಾಗುವುದಿಲ್ಲ. 2015ರ ಮೇ 4ರಂದು ನೀಡಿರುವ ಎರಡನೇ ಷೋಕಾಸ್‌ ನೋಟಿಸ್ ಜೊತೆಗೆ ತನಿಖಾ ವರದಿಯನ್ನು ಸೇರಿಸಲಾಗಿದೆ. ಇದಕ್ಕೆ ಅರ್ಜಿದಾರರು ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿದಾರರು ಮುಂದಿಟ್ಟಿರುವ ಯಾವುದೇ ವಾದದಲ್ಲಿ ಉರುಳಿಲ್ಲ” ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಖಾಲಿ ನಿವೇಶನದಲ್ಲಿ ಷೆಡ್‌ ನಿರ್ಮಾಣಕ್ಕೆ ಅನುಮತಿ ನೀಡಲು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಸವರಾಜ ಸಂಗಪ್ಪ ಗಾಣಿಗೇರ ಅವರಿಂದ 2008ರ ಅಕ್ಟೋಬರ್‌ 3ರಂದು ₹400 ಲಂಚ ಪಡೆಯುವಾಗ ಕುಷ್ಟಗಿ ಪುರಸಭೆಯಲ್ಲಿ ಎಸ್‌ಡಿಎ ಆಗಿದ್ದ ನರಸಿಂಹಲು ಅವರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಈ ಮೂಲಕ ಮೂಲಕ ಕೆಸಿಸಿ (ನಡತೆ) ನಿಯಮಗಳು 3(1)(i) ಮತ್ತು (iii) ಅಡಿ ವೃತ್ತಿ ದುರ್ನಡತೆ ತೋರಿದ್ದಾರೆ ಎಂದು ಇಲಾಖಾ ತನಿಖೆಯ ವರದಿಯಲ್ಲಿ ಹೇಳಲಾಗಿತ್ತು. ಇದನ್ನು ಆಧರಿಸಿ 2015ರ ಸೆಪ್ಟೆಂಬರ್‌ 7ರಂದು ನಗರಾಭಿವೃದ್ಧಿ ಇಲಾಖೆಯು ನರಸಿಂಹಲು ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿತ್ತು. ಈ ಆಕ್ಷೇಪಾರ್ಹ ಆದೇಶ ವಜಾ ಮಾಡಿ, ಮತ್ತದೇ ಸ್ಥಳಕ್ಕೆ ನಿಯೋಜಿಸುವಂತೆ ಕೋರಿದ್ದ ನರಸಿಂಹಲು ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಲು ನಿರಾಕರಿಸಿದೆ.

Related Stories

No stories found.
Kannada Bar & Bench
kannada.barandbench.com