ರಾಷ್ಟ್ರೀಯ ಅದಾಲತ್‌ನಲ್ಲಿ 41.81 ಲಕ್ಷ ಪ್ರಕರಣ ಇತ್ಯರ್ಥ; ₹2,345 ಕೋಟಿ ಪರಿಹಾರ

ನ್ಯಾಯಾಲಯದಲ್ಲಿ ಬಾಕಿಯಿದ್ದ 2,59,270 ಪ್ರಕರಣ ಮತ್ತು ವ್ಯಾಜ್ಯಪೂರ್ವ 39,22,498 ಪ್ರಕರಣಗಳು ಸೇರಿದಂತೆ ಒಟ್ಟು 41,81,768 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ.
Chief Justice N V Anjaria inaugurates Lok adalat
Chief Justice N V Anjaria inaugurates Lok adalat
Published on

ರಾಜ್ಯದಾದ್ಯಂತ ಮಾರ್ಚ್‌ 8ರಂದು ನಡೆದ 2025ನೇ ಸಾಲಿನ ಮೊದಲ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 41 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿವಾರ್ಹಕ ಅಧ್ಯಕ್ಷರೂ ಆದ ಹೈಕೋರ್ಟ್‌ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ತಿಳಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್‌ನ ಬೆಂಗಳೂರಿನ 5, ಧಾರವಾಡದ 4 ಮತ್ತು ಕಲಬುರ್ಗಿಯ 2 ಪೀಠಗಳು ಕಾರ್ಯನಿರ್ವಹಿಸಿ ಒಟ್ಟು 963 ಪ್ರಕರಣಗಳನ್ನು ಇತ್ಯರ್ಥಪಡಿಸಿವೆ. ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 994 ಅದಾಲತ್‌ ನಡೆಸಿವೆ. ಆ ಮೂಲಕ ಒಟ್ಟು 1,005 ಪೀಠಗಳು ಅದಾಲತ್‌ ನಡೆಸಿ ನ್ಯಾಯಾಲಯದಲ್ಲಿ ಬಾಕಿಯಿದ್ದ 2,59,270 ಪ್ರಕರಣಗಳು ಮತ್ತು ವ್ಯಾಜ್ಯಪೂರ್ವ 39,22,498 ಪ್ರಕರಣಗಳು ಸೇರಿದಂತೆ ಒಟ್ಟು 41,81,768 ಪ್ರಕರಣಗಳು ಇತ್ಯರ್ಥಪಡಿಸಿ, ಬರೋಬ್ಬರಿ ₹2,345 ಕೋಟಿ ಪರಿಹಾರ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಬಾರಿಯ ಅದಾಲತ್‌ನಲ್ಲಿ 5 ವರ್ಷ ಮತ್ತು ಅದಕ್ಕೂ ಹಳೆಯ 1,457 ಪ್ರಕರಣ ಮತ್ತು 10 ವರ್ಷ ಮತ್ತು ಅದಕ್ಕೂ ಹಳೆಯ 212 ಪ್ರಕರಣ, 15 ವರ್ಷ ಮತ್ತು ಅದಕ್ಕೂ ಹಳೆಯ 37 ಪ್ರಕರಣ ಮತ್ತು ಬೆಂಗಳೂರಿನ 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ 28 ವರ್ಷಗಳ ಹಳೆಯ ಕ್ರಿಮಿನಲ್‌ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿರುವುದು ವಿಶೇಷವಾಗಿದೆ. ಮತ್ತೊಂದು ವಿಶೇಷವೆಂದರೆ 1,540 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಂಡಿದ್ದಾರೆ ಎಂದು ನ್ಯಾಯಮೂರ್ತಿಗಳು ಹರ್ಷ ವ್ಯಕ್ತಪಡಿಸಿದರು.

ಇನ್ನು 1,966 ವೈವಾಹಿಕ ಪ್ರಕರಣಗಳು ಇತ್ಯರ್ಥಪಡಿಸಿ, 355 ದಂಪತಿಗಳನ್ನು ಸಂಧಾನದ ಮೂಲಕ ಮತ್ತೆ ಒಂದು ಮಾಡಲಾಗಿದೆ. 3,247 ಆಸ್ತಿ ವಿಭಾಗ ದಾವೆಗಳನ್ನು ವಿಲೇವಾರಿ ಮಾಡಲಾಗಿದೆ. 4,204 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹268 ಕೋಟಿ ಪರಿಹಾರ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೆ, 11,408 ಚೆಕ್​ ಬೌನ್ಸ್​ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 455 ಎಲ್ಎಸಿ ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹123 ಕೋಟಿ ಪರಿಹಾರ ಕಲ್ಪಿಸಲಾಗಿದೆ. 784 ಎಂವಿಸಿ ಅಮಲ್ಜಾರಿ ಪ್ರಕರಣಗಳನ್ನು ₹69 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥಪಡಿಸಲಾಗಿದೆ. ಹಾಗೆಯೇ, 3279 ಇತರೆ ಅಮಲ್ಜಾರಿ ಪ್ರಕರಣ ಇತ್ಯರ್ಥಪಡಿಸಿದ್ದು, ₹109 ಕೋಟಿ ಪರಿಹಾರ ಒದಗಿಸಲಾಗಿದೆ ಎಂದು ವಿವರಿಸಿದರು.

67 ಗ್ರಾಹಕ ವ್ಯಾಜ್ಯಗಳ ಪ್ರಕರಣಗಳು ಇತ್ಯರ್ಥ ಪಡಿಸಿದ್ದ ₹2.59 ಕೋಟಿ ಪರಿಹಾರ ನೀಡಲಾಗಿದೆ. ರಿಯಲ್‌ ಎಸ್ಟೇಟ್‌ಗೆ ಸಂಬಂಧಿಸಿದಂತೆ ರೇರಾ ಮುಂದೆ ಬಾಕಿಯಿದ್ದ 40 ಪ್ರಕರಣಗಳನ್ನು ₹2.6 ಕೋಟಿಗೆ, ಸಾಲ ವಸೂಲಾತಿ ನ್ಯಾಯಮಂಡಳಿಯಲ್ಲಿನ 411 ಪ್ರಕರಣಗಳನ್ನು ₹195 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರ ಜಿಲ್ಲೆಯ ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿ (ಸಿಸಿಎಚ್‌-1) ಎಂವಿಸಿ ಪ್ರಕರಣವೊಂದನ್ನು ₹1.20 ಕೋಟಿಗೆ, ಸಿಸಿಚ್‌-25ರಲ್ಲಿನ  ಪ್ರಕರಣವೊಂದನ್ನು 1.80 ಕೋಟಿಗೆ, ಸಿಸಿಎಚ್‌-4ರಲ್ಲಿನ ಪ್ರಕರಣವೊಂದನ್ನು ₹1.49 ಕೋಟಿ ಪರಿಹಾರ ಮೊತ್ತಕ್ಕೆ ಇತ್ಯರ್ಥಪಡಿಸಲಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಚೆಕ್‌ಬೌನ್ಸ್‌ಗಳನ್ನು ಕ್ರಮವಾಗಿ ₹3 ಕೋಟಿ ಮತ್ತು ₹5.81 ಕೋಟಿ ಮೊತ್ತಕ್ಕೆ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.

Also Read
ಎನ್‌ಎಲ್‌ಎಸ್‌ಎ ಲೋಕ್ ಅದಾಲತ್: ಮೈಸೂರಿನ ಅತಿ ಹಳೆಯ ಕೇಸ್ ಸೇರಿ 77 ಲಕ್ಷ ಪ್ರಕರಣಗಳ ವಿಲೇವಾರಿ

2025ನೇ ಸಾಲಿನ ಎರಡನೇ ರಾಷ್ಟ್ರೀಯ ಲೋಕ ಅದಾಲತ್‌ ಅನ್ನು ಮೇ 10ರಂದು ನಡೆಸಲು ತೀರ್ಮಾನಿಸಲಾಗಿದೆ. ವ್ಯಾಜ್ಯದಾರರು ಆ ಅದಲಾತ್‌ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಮೂರ್ತಿ ಕಾಮೇಶ್ವರ್‌ ರಾವ್‌ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ ಎಲ್‌ ರಘುನಾಥ, ಉಪ ಕಾರ್ಯದರ್ಶಿ ಎಂ ಶ್ರೀಧರ್ ಉಪಸ್ಥಿತರಿದ್ದರು.

Kannada Bar & Bench
kannada.barandbench.com