

ಮೂರನೇ ರಾಷ್ಟ್ರೀಯ ಲೋಕ ಅದಾಲತ್‌ನ 931 ಪೀಠಗಳಲ್ಲಿ 44,28,455 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಒಟ್ಟು ಪರಿಹಾರದ ಮೊತ್ತ ₹2,384 ಕೋಟಿಯಷ್ಟಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆದ ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದರು.
ಹೈಕೋರ್ಟ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೈಕೋರ್ಟ್ ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಮತ್ತೊಬ್ಬ ಹಿರಿಯ ನ್ಯಾಯಮೂರ್ತಿ ಆರ್ ದೇವದಾಸ್ ಅವರ ಜೊತೆ ಈ ಕುರಿತ ಮಾಹಿತಿಯನ್ನು ಹಂಚಿಕೊಂಡ ಅವರು ರಾಜ್ಯದ ಮೂರು ಹೈಕೋರ್ಟ್ ಪೀಠಗಳಲ್ಲಿ ಒಟ್ಟು 1,010 ಪ್ರಕರಣ ಇತ್ಯರ್ಥಪಡಿಸಲಾಗಿದೆ’ ಎಂದು ತಿಳಿಸಿದರು.
ವಿಶೇಷ ಪ್ರಕರಣಗಳ ವಿಲೇವಾರಿಯಲ್ಲಿ ಐದು ವರ್ಷಕ್ಕೂ ಹಳೆಯದಾದ 1,227 ಪ್ರಕರಣ, 10 ವರ್ಷ ಮತ್ತು ಅದಕ್ಕೂ ಹಳೆಯದಾದ 140 ಹಾಗೂ 15 ವರ್ಷಕ್ಕೂ ಹಳೆಯದಾದ 23 ಪ್ರಕರಣಗಳು ಸೇರಿದಂತೆ ಒಟ್ಟು 1,390 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.
ಹಿರಿಯ ನಾಗರಿಕರ 1,562 ಪ್ರಕರಣ ಇತ್ಯರ್ಥಗೊಂಡಿವೆ. ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕಳೆದ 27 ವರ್ಷಗಳಿಂದ ಬಾಕಿ ಇದ್ದ ಸ್ಥಿರಾಸ್ತಿ ದಾವೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಅಮಲ್ಜಾರಿ ಪ್ರಕರಣವನ್ನು ₹4.21 ಕೋಟಿ ಮೊತ್ತಕ್ಕೆ ಪರಿಹರಿಸಲಾಗಿದೆ ಎಂದು ವಿವರಿಸಿದರು.
ಈ ಬಾರಿಯ ವಿಶೇಷವೆಂದರೆ 287 ದಂಪತಿಗಳು ಸಂಧಾನದ ಮೂಲಕ ತಮ್ಮ ಕೌಟುಂಬಿಕ ಕಲಹದ ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ಸಹಬಾಳ್ವೆಯ ಕಡೆ ಪುನಃ ಹೆಜ್ಜೆಯಿರಿಸಿದ್ದಾರೆ ಎಂದು ಹಿರಿಯ ನ್ಯಾಯಮೂರ್ತಿ ಆರ್ ದೇವದಾಸ್ ತಿಳಿಸಿದರು.
ಮಧ್ಯಸ್ಥಿಕೆ ಮತ್ತು ಸಮನ್ವಯ ಯೋಜನೆ ಸಮಿತಿ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯದಾದ್ಯಂತ ವಿಶೇಷ ಮಧ್ಯಸ್ಥಿಕೆ ಅಭಿಯಾನ 3.0 ಯನ್ನು ಕಳೆದ ಆಗಸ್ಟ್ 1ರಿಂದ ಆಯೋಜಿಸಲಾಗಿದೆ ಎಂದು ತಿಳಿಸಿದ ನ್ಯಾ.ದೇವದಾಸ್ ಅವರು, ‘ಈ ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ ಪಕ್ಷಗಾರರು ತಮ್ಮ ಪ್ರಕರಣಗಳನ್ನು ರಾಜಿ ಮುಖಾಂತರ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ವಿವರಿಸಿದರು.
ಈ ವರ್ಷದ ಕೊನೆಯ ಲೋಕ ಅದಾಲತ್ ಅನ್ನು ಡಿಸೆಂಬರ್ 12ರಂದು ರಾಜ್ಯದೆಲ್ಲೆಡೆ ಆಯೋಜಿಸಲಾಗುತ್ತಿದೆ. ವ್ಯಾಜ್ಯಕರ್ತರು ಯಾವುದೇ ವೆಚ್ಚವಿಲ್ಲದೆ ತಮ್ಮ ಪ್ರಕರಣಗಳನ್ನು ಇಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಅಂತೆಯೇ ಸಾಮಾಜಿಕ ಕಾಳಜಿಯ ಮಾಧ್ಯಮಗಳು ಇದನ್ನು ಸಾರ್ವಜನಿಕರಲ್ಲಿ ಪ್ರೋತ್ಸಾಹಿಸಬೇಕು ಎಂದು ನ್ಯಾ.ದೇವದಾಸ್ ಮನವಿ ಮಾಡಿದರು.
ಸೆಪ್ಟೆಂಬರ್ 19ರಂದು ನಡೆದ ಲೋಕ ಅದಾಲತ್‌ನಲ್ಲಿ 1,230 ವೈವಾಹಿಕ; ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹4 ಕೋಟಿ ಪರಿಹಾರ ಕೊಡಿಸಲಾಗಿದೆ. 2,828 ವಿಭಾಗದಾವೆ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹70 ಕೋಟಿ ಪರಿಹಾರ ಕೊಡಿಸಲಾಗಿದೆ.
4,160 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳಲ್ಲಿ ₹267 ಕೋಟಿ ಪರಿಹಾರ ಕೊಡಿಸಲಾಗಿದೆ. 10,093 ಚೆಕ್ ಬೌನ್ಸ್ ಪ್ರಕರಣ ಇತ್ಯರ್ಥಪಡಿಸಿದ ₹300 ಕೋಟಿ ಪರಿಹಾರ, 571 ಎಲ್‌ಎಸಿ ಅಮಲ್ಜಾರಿ ಪ್ರಕರಣ ಇತ್ಯರ್ಥಪಡಿಸಿ ₹82 ಕೋಟಿ ಪರಿಹಾರ, 584 ಎಂವಿಸಿ ಅಮಲ್ಜಾರಿ ಪ್ರಕರಣಗಳಲ್ಲಿ ₹71 ಕೋಟಿ, ರೇರಾದ 9 ಪ್ರಕರಣಗಳಲ್ಲಿ ₹88 ಲಕ್ಷ ಹಾಗೂ 130 ಗ್ರಾಹಕರ ವ್ಯಾಜ್ಯ ಪ್ರಕರಣಗಳಲ್ಲಿ ₹3 ಕೋಟಿ ಪರಿಹಾರ ಕೊಡಿಸಲಾಗಿದೆ ಎಂದು ತಿಳಿಸಿದರು.