ದೇಶದೆಲ್ಲೆಡೆ ಸಂಸದರು, ಶಾಸಕರ ವಿರುದ್ಧ 4442 ಪ್ರಕರಣಗಳು ಬಾಕಿ: ಸುಪ್ರೀಂಗೆ ಅಮಿಕಸ್ ಕ್ಯೂರಿ ಮಾಹಿತಿ

ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ವರದಿ ಸಲ್ಲಿಕೆಯಾಗಿದೆ.
Supreme Court
Supreme Court

ದೇಶದೆಲ್ಲೆಡೆ ಸಂಸತ್ ಸದಸ್ಯರು ಹಾಗೂ ವಿಧಾನಸಭಾ ಶಾಸಕರ ವಿರುದ್ಧ 4,442 ಪ್ರಕರಣಗಳು ಬಾಕಿ ಇದ್ದು ಅವುಗಳಲ್ಲಿ ಹಾಲಿ ಸದಸ್ಯರಿಗೆ ಸೇರಿದ 2556 ಪ್ರಕರಣಗಳ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ ಎಂದು ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ), ವಿಜಯ್ ಹನ್ಸಾರಿಯಾ ಸುಪ್ರೀಂಕೋರ್ಟಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದಂತೆ ಅಮಿಕಸ್ ಕ್ಯೂರಿ ಅವರು ವರದಿ ಸಲ್ಲಿಸಿದ್ದಾರೆ. ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧ ದೇಶದೆಲ್ಲೆಡೆ ದಾಖಲಾಗಿದ್ದ ಮೊಕದ್ದಮೆಗಳ ವಿವರ ಸಂಗ್ರಹಿಸಲು ಹೈಕೋರ್ಟುಗಳಿಗೆ ನಿರ್ದೇಶನ ನೀಡಲಾಗಿತ್ತು.

ಜನಪ್ರತಿನಿಧಿಗಳಿಗೆಂದೇ ಇರುವ ವಿಶೇಷ ನ್ಯಾಯಾಲಯಗಳು ಸೇರಿದಂತೆ ವಿವಿಧ ಕೋರ್ಟುಗಳಲ್ಲಿ ಸಂಸದರು ಮತ್ತು ಶಾಸಕರ (ಹಾಲಿ ಮತ್ತು ಮಾಜಿ) ವಿರುದ್ಧ ಒಟ್ಟಾರೆ 4442 ಪ್ರಕರಣಗಳಿದ್ದು 2556 ಪ್ರಕರಣಗಳಲ್ಲಿ ಹಾಲಿ ಸದಸ್ಯರು ಆರೋಪಿ ಸ್ಥಾನದಲ್ಲಿದ್ದಾರೆ. ಭಾಗಿಯಾಗಿರುವ ಶಾಸಕರ ಸಂಖ್ಯೆ ಒಟ್ಟು ಪ್ರಕರಣಗಳಿಗಿಂತ ಹೆಚ್ಚಿದೆ. ಒಂದು ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಆರೋಪಿಗಳಾಗಿದ್ದಾರೆ. ಜೊತೆಗೆ ಒಬ್ಬ ಶಾಸಕರು ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.

ಅಮಿಕಸ್ ಕ್ಯೂರಿ ವರದಿ

ಇವುಗಳಲ್ಲಿ 413 ಪ್ರಕರಣಗಳು ಜೀವಾವಧಿ ಶಿಕ್ಷೆ ವಿಧಿಸುವಂತಹ ಗುರುತರ ಅಪರಾಧಗಳಿಂದ ಕೂಡಿದ್ದು ಇದರಲ್ಲಿ 174 ಪ್ರಕರಣಗಳು ಹಾಲಿ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

" 1988ರ ಭ್ರಷ್ಟಾಚಾರ ತಡೆ ಕಾಯ್ದೆ, 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 1959ರ ಶಸ್ತ್ರಾಸ್ತ್ರ ಕಾಯ್ದೆ, 1984ರ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆ, ಐಪಿಸಿ ಸೆಕ್ಷನ್ 500 ಅಡಿಯಲ್ಲಿ ಮಾನನಷ್ಟ, ಸೆಕ್ಷನ್ 420 ಐಪಿಸಿ ಅಡಿಯಲ್ಲಿ ವಂಚನೆ ಪ್ರಕರಣಗಳು," ಕೂಡ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿವೆ.

ಉತ್ತರಪ್ರದೇಶದಲ್ಲಿ ಸಂಸದರು ಮತ್ತು ಶಾಸಕರ ವಿರುದ್ಧ ಗರಿಷ್ಠ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ. ಅಲ್ಲಿನ ಜನಪ್ರತಿನಿಧಿಗಳ ವಿರುದ್ಧ 1,217 ಪ್ರಕರಣಗಳ ವಿಚಾರಣೆ ಬಾಕಿ ಇದ್ದು 446 ಪ್ರಕರಣಗಳಲ್ಲಿ ಹಾಲಿ ಶಾಸಕರು ಆರೋಪಿಯಾಗಿದ್ದಾರೆ. ಬಿಹಾರ ಎರಡನೇ ಸ್ಥಾನದಲ್ಲಿದ್ದು 531 ಪ್ರಕರಣಗಳು ಬಾಕಿ ಉಳಿದಿವೆ. ಅದರಲ್ಲಿ ಹಾಲಿ ಶಾಸಕರ ವಿರುದ್ಧ 256 ಪ್ರಕರಣಗಳಿವೆ. ಜನಪ್ರತಿನಿಧಿಗಳಿಗೆ ಸಂಬಂಧಿಸಿದ 331 ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿರುವ ಒಡಿಶಾ ಮೂರನೇ ಸ್ಥಾನದಲ್ಲಿದೆ. ಇವುಗಳಲ್ಲಿ 220 ಪ್ರಕರಣಗಳು ಹಾಲಿ ಶಾಸಕರು, ಸಂಸದರಿಗೆ ಸೇರಿವೆ.

ವರದಿ ಹಲವು ಶಿಫಾರಸುಗಳನ್ನು ಮಾಡಿದ್ದು ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯಗಳನ್ನು ನೇಮಿಸಿ ಶಾಸಕರು ಸಂಸದರು ಭಾಗಿಯಾಗಿರುವ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ನಡೆಸುವಂತೆ ಸೂಚಿಸಿದೆ. ಮರಣದಂಡನೆ/ ಜೀವಾವಧಿ, 7 ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾದವರ ವಿಚಾರಣೆಗಳನ್ನು ಈ ನ್ಯಾಯಾಲಯಗಳು ನಡೆಸಬೇಕು ಎಂದಿದೆ.

"ಅಪರೂಪದ ಮತ್ತು ವಿರಳ ಸಂದರ್ಭಗಳಲ್ಲಿ ಮತ್ತು ದಾಖಲಾರ್ಹ ಕಾರಣಗಳ ಹೊರತಾಗಿ ಪ್ರಕರಣಗಳನ್ನು ಯಾವುದೇ ಕಾರಣಕ್ಕೆ ಮುಂದೂಡಿಕೆಗೆ ಅವಕಾಶ ನೀಡಬಾರದು. ನಿಗದಿತ ದಿನಾಂಕಗಳಂದು ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿರುವುದು ಮತ್ತು ಕೋರ್ಟುಗಳು ನೀಡಿದ ಜಾಮೀನು ರಹಿತ ವಾರೆಂಟುಗಳನ್ನು ಜಾರಿಗೆ ತರುವುದು ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜವಾಬ್ದಾರಿಯಾಗಿರಬೇಕು.

- ಅಮಿಕಸ್ ಕ್ಯೂರಿ ವರದಿ

ಇಂತಹ ಪ್ರಕರಣಗಳಲ್ಲಿ ಸಾಕ್ಷಿಗಳು ಪ್ರಭಾವಿಗಳಿಗೆ ಸುಲಭದ ತುತ್ತಾಗದಂತೆ ಎಚ್ಚರವಹಿಸುವುದು ಮತ್ತು ಶಾಸಕರ ಪ್ರಭಾವಗಳನ್ನು ಪರಿಗಣಿಸಿ ಸಾಕ್ಷಿಗಳನ್ನು ರಕ್ಷಿಸುವುದು ಅತ್ಯಗತ್ಯ ಎಂದು ಕೂಡ ವರದಿ ಉಲ್ಲೇಖಿಸಿದೆ.

Kannada Bar & Bench
kannada.barandbench.com