ಬೆಂಗಳೂರಿನ ವಿಶ್ವ ಗಾಣಿಗ ಸಮುದಾಯದ ಗುರುಪೀಠಕ್ಕೆ ₹5 ಕೋಟಿ ಅನುದಾನ ನೀಡಿರುವುದು ಮತ್ತು ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್‌ಗೆ 8 ಎಕರೆ ಜಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತನೆ ಮಾಡಿರುವ ಕರ್ನಾಟಕ ಹೈಕೋರ್ಟ್ ವಕೀಲೆ ಬಿ ವಿ ವಿದ್ಯುಲ್ಲತಾ ಅವರನ್ನು ಶುಕ್ರವಾರ ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಿದೆ.
ಬೆಂಗಳೂರಿನ ಎನ್ ಹನುಮೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮುಂದಿನ ಎರಡು ವಾರಗಳಲ್ಲಿ ವಿದ್ಯುಲ್ಲತಾ ಅವರಿಗೆ ಹಸ್ತಾಂತರಿಸಬೇಕು ಎಂದು ಪೀಠವು ರಿಜಿಸ್ಟ್ರಿಗೆ ಈ ವೇಳೆ ನಿರ್ದೇಶಿಸಿತು.
ಅರ್ಜಿದಾರರಾದ ಹನುಮೇಗೌಡರಿಗೆ ಈ ಹಿಂದೆ ವಿಧಿಸಿರುವ ₹25 ಸಾವಿರ ದಂಡದ ಮೊತ್ತವನ್ನು ಅವರು ಚೆಕ್ ಮೂಲಕ ಪಾವತಿಸಿರುವುದಾಗಿ ಸರ್ಕಾರದ ಪರ ವಕೀಲರು ಪೀಠಕ್ಕೆ ವಿವರಿಸಿದರು. ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಅಪರಾಧ ತನಿಖಾ ವಿಭಾಗದ ಡಿವೈಎಸ್‌ಪಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ಅಧ್ಯಕ್ಷರಾದ ಬಿ ಜೆ ಪುಟ್ಟಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: 2011ರ ಬಜೆಟ್‌ನಲ್ಲಿ ಗಾಣಿಗ ಸಮುದಾಯದ ಗುರುಪೀಠಕ್ಕೆ ₹5 ಕೋಟಿ ಅನುದಾನ ಮೀಸಲಿರಿಸಲಾಗಿತ್ತು. ಅಂತೆಯೇ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ನಗರೂರು ಗ್ರಾಮದ ಸರ್ವೇ ನಂಬರ್ 112ರಲ್ಲಿ ಗೋಮಾಳದ ಎಂಟು ಎಕರೆ ಜಮೀನನ್ನು ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಹೆಸರಿಗೆ ನೋಂದಣಿ ಮಾಡಿಕೊಡಲಾಗಿದೆ. ಈ ಟ್ರಸ್ಟ್‌ಗೆ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದ ಬಿ ಜೆ ಪುಟ್ಟಸ್ವಾಮಿ ಅಧ್ಯಕ್ಷರಾಗಿದ್ದರು. ಇವರು ತಮ್ಮ ಅಧಿಕಾರ ಬಳಸಿ ಈ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬುದು ಅರ್ಜಿದಾರರ ಆರೋಪವಾಗಿತ್ತು.
ಈ ನಡುವೆ ಅರ್ಜಿದಾರರಾದ ಹನುಮೇಗೌಡ ಗಾಣಿಗ ಟ್ರಸ್ಟ್ ಅಧ್ಯಕ್ಷ ಬಿ ಜೆ ಪುಟ್ಟಸ್ವಾಮಿ ಅವರ ವಿರುದ್ಧ ದುರುದ್ದೇಶಪೂರ್ವಕವಾಗಿ ಹಲವು ದೂರುಗಳನ್ನು ನೀಡಿದ್ದರು. ಅದರಿಂದ ಬಿ ಜೆ ಪುಟ್ಟಸ್ವಾಮಿ ಅವರು ಹನುಮೇಗೌಡ ಅವರ ವಿರುದ್ಧ ಮಾನನಷ್ಟ ದಾವೆ ಹೂಡಿದ್ದರು. ಆ ಸಂಬಂಧ ವಿಚಾರಣಾಧೀನ ನ್ಯಾಯಾಲಯವು ಹನುಮೇಗೌಡಗೆ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಅವರು ಪ್ರಶ್ನಿಸಿರುವ ಮೇಲ್ಮನವಿಯು ವಿಚಾರಣಾ ಹಂತದಲ್ಲಿದೆ. ಆದರೆ, ಈ ಎಲ್ಲಾ ವಿಚಾರಗಳನ್ನು ಅರ್ಜಿಯಲ್ಲಿ ಹನುಮೇಗೌಡರು ಬಚ್ಚಿಟ್ಟಿದ್ದ ಹಿನ್ನೆಲೆಯಲ್ಲಿ 2020ರ ಮಾರ್ಚ್ ನಲ್ಲಿ ಹನುಮೇಗೌಡರಿಗೆ ಹೈಕೋರ್ಟ್ ₹25 ಸಾವಿರ ರೂಪಾಯಿ ದಂಡ ವಿಧಿಸಿತ್ತು.