ಸಂಚಾರ ನಿಯಮ ಉಲ್ಲಂಘನೆಗಾಗಿ ವಾಹನ ಸವಾರರಿಗೆ ವಿಧಿಸಲಾಗಿದ್ದ ದಂಡ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡುವುದನ್ನು 15 ದಿನಗಳ ಕಾಲ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ಧರಿಸಿದೆ.
ಹೈಕೋರ್ಟ್‌ನ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಯೂರ್ತಿ ಬಿ ವೀರಪ್ಪ ಅವರ ನೇತೃತ್ವದಲ್ಲಿ ಸೋಮವಾರ ನಡೆದ ರಾಜ್ಯ ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಗಳ ಸಭೆಯಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರು ನಗರದ ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಡಾ. ಎಂ ಎ ಸಲೀಂ ಅವರು, ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದನ್ನು 15 ದಿನ ಕಾಲ ವಿಸ್ತರಿಸಬೇಕು. ಈ ಕುರಿತು ಸಾರ್ವಜನಿಕರ ಬೇಡಿಕೆಯಿದೆ ಎಂದು ಸಭೆಯಲ್ಲಿ ಮನವಿ ಮಾಡಿದರು. ವಿಶೇಷ ಆಯುಕ್ತರ ಮತ್ತು ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ, ಸಂಚಾರ ನಿಯಮ ಉಲ್ಲಂಘನೆ ದಂಡ ಪ್ರಕರಣದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದನ್ನು 15 ಕಾಲ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಕಾನೂನು ಸೇವೆಗಳ ಪ್ರಾಧಿಕಾರ ತೀರ್ಮಾನಿಸಿತು.
2 ಕೋಟಿ ಪ್ರಕರಣ -1,300 ಕೋಟಿ ದಂಡ ಬಾಕಿ: ನ್ಯಾಯಮೂರ್ತಿ ಬಿ ವೀರಪ್ಪ ಅವರು 2023ರ ಜನವರಿ 27ರಂದು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಂಚಾರ ನಿಯಮ ಉಲ್ಲಂಘನೆ ಪಾವತಿಗೆ ವಿನಾಯಿತಿ ನೀಡುವಂತೆ ಸಲಹೆ ನೀಡಿದ್ದರು. ಅದರಂತೆ ಸಾರಿಗೆ ಇಲಾಖೆಯು ಫೆಬ್ರವರಿ 3ರಿಂದ ಫೆಬ್ರವರಿ 11ರವರೆಗೆ ಶೇ.50 ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿತ್ತು. ಇದರಿಂದ ಫೆಬ್ರವರಿ 3ರಿಂದ ಫೆಬ್ರವರಿ 11ವರೆಗೆ ಒಟ್ಟು 52.11 ಲಕ್ಷ ಪ್ರಕರಣಗಳನ್ನು ಇತ್ಯರ್ಥ ಪಡಿಸಿ, 152 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿತ್ತು.
ರಾಜ್ಯದಲ್ಲಿ ಇನ್ನೂ 2 ಕೋಟಿ ಸಂಚಾರ ನಿಯಮ ಉಲ್ಲಂಘನೆ ದಂಡ ಪ್ರಕರಣಗಳಿದ್ದು, 1,300 ಕೋಟಿ ರೂಪಾಯಿ ದಂಡದ ಮೊತ್ತ ಸಂಗ್ರಹಗೊಳ್ಳಬೇಕಿದೆ. ಇದರಿಂದ ಶೇ.50ರಷ್ಟು ವಿನಾಯಿತಿ ನೀಡುವುದನ್ನು ಎರಡು ವಾರ ಕಾಲ ವಿಸ್ತರಿಸಲು ಕೋರಿ ವಿಶೇಷ ಆಯುಕ್ತರಾದ (ಸಂಚಾರ ವಿಭಾಗ) ಡಾ.ಸಲೀಂ ಅವರು ಕಾನೂನು ಸೇವಾ ಪ್ರಾಧಿಕಾರಕ್ಕೆ ಪತ್ರ ಬರೆದು ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಸಲಾಯಿತು.