ಅಪಘಾತದಲ್ಲಿ ಗಂಭೀರ ಅಂಗವೈಕಲ್ಯ: ವಿಮಾ ಪರಿಹಾರವನ್ನು ₹11 ಲಕ್ಷದಿಂದ ₹44 ಲಕ್ಷಕ್ಕೆ ಹೆಚ್ಚಳ ಮಾಡಿದ ಹೈಕೋರ್ಟ್‌

ಪರಿಹಾರ ಮೊತ್ತವನ್ನು ₹44, 92,140 ರೂಪಾಯಿಗೆ ಹೆಚ್ಚಿಸಿರುವ ಹೈಕೋರ್ಟ್, ಆ ಮೊತ್ತಕ್ಕೆ ಅಪಘಾತ ನಡೆದ ದಿನದಿಂದ ಅನ್ವಯವಾಗುವಂತೆ ವಾರ್ಷಿಕ ಶೇ.6ರಷ್ಟು ಬಡ್ಡಿ ಪಾವತಿಸುವಂತೆ ನ್ಯಾಷನಲ್‌ ಇನ್ಶೂರೆನ್ಸ್‌ ಕಂಪನಿಗೆ ಆದೇಶಿಸಿದೆ.
Justice H P Sandesh and Karnataka HC
Justice H P Sandesh and Karnataka HC
Published on

ಅಪಘಾತದಿಂದ ಶೇ.65ರಷ್ಟು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾದ ಎಂಜಿನಿಯರ್ ಪದವೀಧರನಿಗೆ ₹11 ಲಕ್ಷ ಪರಿಹಾರ ಪಾವತಿಸಲು ಮೋಟಾರು ವಾಹನ ನ್ಯಾಯ ಮಂಡಳಿಯು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ವಿಮಾ ಕಂಪೆನಿಗೆ ₹44 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಮಹತ್ವದ ಆದೇಶ ಮಾಡಿದೆ.

ನ್ಯಾಷನಲ್‌ ಇನ್ಯೂರೆನ್ಸ್‌ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

“ಆಟೋ ಚಾಲಕ ಕ್ಲೇಮುದಾರನ ನೆರೆಯ ನಿವಾಸಿ ಎಂಬುದು ನಿಜ. ಆದರೆ, ಆತ ನ್ಯಾಯ ಮಂಡಳಿಯ ಮುಂದೆ ಹಾಜರಾಗಿ, ತಾನು ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಲೋಬೊ ಸಂಚರಿಸುತ್ತಿದ್ದ ಬೈಕಿಗೆ ಹೊಡೆಯಿತು ಎಂಬುದಾಗಿ ಒಪ್ಪಿಕೊಂಡಿದ್ದಾನೆ. ಆಟೋರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ನಡೆದಿಲ್ಲ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಯನ್ನೂ ವಿಮಾ ಕಂಪೆನಿ ಒದಗಿಸಿಲ್ಲ. ಹೀಗಾಗಿ, ಅಪಘಾತದಲ್ಲಿ ಆಟೋ ರಿಕ್ಷಾವನ್ನು ವಂಚನೆಯಿಂದ ಸೇರ್ಪಡೆ ಮಾಡಲಾಗಿದೆ” ಎಂಬ ವಾದವನ್ನು ಒಪ್ಪಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಅಪಘಾತದಿಂದಾಗಿ ಲೋಬೊ ಶೇ.65ರಷ್ಟು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಚಿಕಿತ್ಸೆಗೆ ಐದು ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿದ್ದಾರೆ. ಎಂಜಿನಿಯರ್ ಪದವೀಧರನಾದ ಲೋಬೊ ಅಪಘಾತಕ್ಕೂ ಮುನ್ನ ವಿದೇಶದಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದು, ಮಾಸಿಕ ₹90 ಸಾವಿರ ರೂಪಾಯಿಗಿಂತ ಅಧಿಕ ವೇತನ ಪಡೆಯುತ್ತಿದ್ದರು. ಅಪಘಾತ ನಡೆದಾಗ ಅವರಿಗೆ 29 ವರ್ಷವಾಗಿತ್ತು. ಹೀಗಾಗಿ, ಪರಿಹಾರ ಮೊತ್ತ ಹೆಚ್ಚಿಸುವುದು ಸೂಕ್ತ” ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಪರಿಹಾರ ಮೊತ್ತವನ್ನು ₹44, 92,140 ರೂಪಾಯಿಗೆ ಹೆಚ್ಚಿಸಿರುವ ಹೈಕೋರ್ಟ್, ಆ ಮೊತ್ತಕ್ಕೆ ಅಪಘಾತ ನಡೆದ ದಿನದಿಂದ ಅನ್ವಯವಾಗುವಂತೆ ವಾರ್ಷಿಕ ಶೇ.6ರಷ್ಟು ಬಡ್ಡಿ ಪಾವತಿಸುವಂತೆ ನ್ಯಾಷನಲ್‌ ಇನ್ಶೂರೆನ್ಸ್‌ ಕಂಪನಿಗೆ ಆದೇಶಿಸಿದೆ.

ನ್ಯಾಷನಲ್‌ ಇನ್ಶೂರೆನ್ಸ್‌ ಕಂಪೆನಿ ಪರ ವಕೀಲರಾದ ಅನೂಪ್‌ ಮತ್ತು ಬಿ ಸಿ ಸೀತಾರಾಮ್‌ ರಾವ್‌ ಅವರು “ಪ್ರಕರಣದಲ್ಲಿ ಬೈಕು ಹಾಗೂ ಆಟೊ ನಡುವೆ ಡಿಕ್ಕಿಯೇ ಸಂಭವಿಸಿಲ್ಲ. ಆಯಾ ತಪ್ಪಿ ಸವಾರರು ಬೈಕಿನಿಂದ ಬಿದ್ದಿದ್ದಾರೆ. ಆದರೆ ಆಟೋ ರಿಕ್ಷಾ-ಬೈಕು ನಡುವೆ ಅಪಘಾತ ನಡೆದಿರುವುದಾಗಿ ತಿರುಚಲಾಗಿದೆ. ಆಟೋ ರಿಕ್ಷಾ ಚಾಲಕ, ಕ್ಲೇಮುದಾರ ಲೋಬೊ ನೆರೆಮನೆಯ ನಿವಾಸಿಯಾಗಿದ್ದು, ಪೊಲೀಸರೊಂದಿಗೆ ಸೇರಿ ದಾಖಲೆ ತಿರುಚಿದ್ದಾರೆ. ಆದ್ದರಿಂದ ನ್ಯಾಯ ಮಂಡಳಿಯ ಆದೇಶ ರದ್ದುಪಡಿಸಬೇಕು” ಎಂದು ಕೋರಿದ್ದರು.

ಪ್ರಕರಣದ ವಿವರ: ಮಂಗಳೂರಿನ ಮೂಡುಬಿದರೆ ಹೋಬಳಿಯ ಮಾಸ್ತಿಕಟ್ಟೆ ನಿವಾಸಿ ಅಲ್ವಿನ್ ಲೋಬೊ ಅವರು ತಮ್ಮ ಸೋದರನೊಂದಿಗೆ 2009ರ ಮೇ 23ರಂದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಆಟೋ ರಿಕ್ಷಾ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಲೋಬೊ ತಲೆ ಮತ್ತು ಎಡಗಾಲಿಗೆ ಗಂಭೀರ ಪೆಟ್ಟು ಬಿದ್ದಿತ್ತು. ನಂತರ ಎ ಜೆ ಆಸ್ಪತ್ರೆಯಲ್ಲಿ ಲೋಬೊ ಅವರು 2009ರ ಮೇ 23ರಿಂದ ಜುಲೈ 17ರವರೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ನಂತರದ ವರ್ಷಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಗಾಗಿ ಒಟ್ಟು ₹5,24,139 ರೂಪಾಯಿ ಖರ್ಚು ಮಾಡಿದ್ದರು. ಪರಿಹಾರ ಕ್ಲೇಮಿನ ವಿಚಾರಣೆ ನಡೆಸಿದ್ದ ಮೋಟಾರು ವಾಹನ ನ್ಯಾಯ ಮಂಡಳಿಯು ಲೋಬೊ ಅವರಿಗೆ ವಾರ್ಷಿಕ ಶೇ.8ರಷ್ಟು ಬಡ್ಡಿ ದರದಲ್ಲಿ ಒಟ್ಟು ₹11,39,340 ರೂಪಾಯಿ ಪರಿಹಾರ ಪಾವತಿಸುವಂತೆ ವಿಮಾ ಕಂಪೆನಿಗೆ 2015ರ ಜೂನ್‌ 20ರಂದು ಆದೇಶಿಸಿತ್ತು. ಅದರ ರದ್ದತಿ ಕೋರಿ ವಿಮಾ ಕಂಪೆನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಪ್ರತಿವಾದಿಗಳ ಪರವಾಗಿ ವಕೀಲ ಧನಂಜಯ್‌ ಕುಮಾರ್‌ ಅವರು ವಾದ ಮಂಡಿಸಿದ್ದರು.

Kannada Bar & Bench
kannada.barandbench.com