'ಲಂಚದ ಆರೋಪಗಳಿಂದ ಜನಪ್ರತಿನಿಧಿಗಳು ಮುಕ್ತರೇ?' ನಿರ್ಧರಿಸಲಿದೆ 7 ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ

ಪಿ ವಿ ನರಸಿಂಹರಾವ್ ಪ್ರಕರಣದಲ್ಲಿ ಈ ಹಿಂದೆ ನೀಡಲಾಗಿದ್ದ ತೀರ್ಪನ್ನು ವಿಸ್ತೃತ ಪೀಠ ಮರುಪರಿಶೀಲಿಸಲಿದೆ. ತೀರ್ಪಿನಲ್ಲಿ 105 (2) ವಿಧಿಯು ಲಂಚದ ಆರೋಪಗಳಿಂದ ಜನಪ್ರತಿನಿಧಿಗಳನ್ನು ರಕ್ಷಿಸುತ್ತದೆ ಎಂದು ತಿಳಿಸಲಾಗಿತ್ತು.
Justices JB Pardiwala, AS Bopanna, CJI DY Chandrachud, MM Sundresh, and Manoj Misra
Justices JB Pardiwala, AS Bopanna, CJI DY Chandrachud, MM Sundresh, and Manoj Misra

ಸಂವಿಧಾನದ 105 (2) ಮತ್ತು 194(2) ವಿಧಿಗಳ ಅಡಿಯಲ್ಲಿ ಶಾಸಕರು ಅನುಭವಿಸುವ ಕಾನೂನು ವಿನಾಯಿತಿಯು ಲಂಚ ತೆಗೆದುಕೊಂಡಾಗ ಅವರನ್ನು ಕಾನೂನು ಕ್ರಮದಿಂದ ರಕ್ಷಿಸುತ್ತದೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಬುಧವಾರ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಿದೆ [ಸೀತಾ ಸೊರೆನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸಂವಿಧಾನದ 105 (2)ನೇ ವಿಧಿಯು ಸಂಸತ್‌ ಸದಸ್ಯರಿಗೆ ಅವರು ಸಂಸತ್ತಿನಲ್ಲಿ ಹಾಗೂ ಸಂಸದೀಯ ಸಮಿತಿಯಲ್ಲಿ ನೀಡಿದ ಯಾವುದೇ ಮತಕ್ಕೆ ಸಂಬಂಧಿಸಿದಂತೆ, ಆಡಿದ ಯಾವುದೇ ಮಾತಿಗೆ ಸಂಬಂಧಿಸಿದಂತೆ ರಕ್ಷಣೆ ಒದಗಿಸುತ್ತದೆ. ಈ ರಕ್ಷಣೆಯು ಲಂಚ ತೆಗೆದುಕೊಂಡಾಗ ಕಾನೂನು ಕ್ರಮ ಕೈಗೊಳ್ಳುವುದರ ವಿರುದ್ಧವೂ ರಕ್ಷಣೆ ನೀಡುತ್ತದೆಯೇ ಎನ್ನುವುದು ಪ್ರಸಕ್ತ ನ್ಯಾಯಾಲಯದ ಮುಂದಿರುವ ಪ್ರಶ್ನೆಯಾಗಿದೆ. ಇದೇ ರೀತಿಯ ರಕ್ಷಣೆಯನ್ನು ವಿಧಿ 194(2) ವಿಧಾನಸಭೆ ಸದಸ್ಯರಿಗೆ ನೀಡುತ್ತದೆ.

Also Read
ಮಾಡಾಳು ಲಂಚ ಪ್ರಕರಣ: ಎಸ್‌ಐಟಿ ಅಥವಾ ಸಿಬಿಐ ತನಿಖೆ ಕೋರಿದ್ದ ಶ್ರೀರಾಮ ಸೇನೆ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

ಪಿ ವಿ ನರಸಿಂಹರಾವ್‌ ಮತ್ತು ಪ್ರಭುತ್ವ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ, 105 (2)ನೇ ವಿಧಿ ಸಂಸದರು ಲಂಚ ಆರೋಪ ಎದುರಿಸುವುದರಿಂದ ರಕ್ಷಿಸುತ್ತದೆ ಎಂದು ಹೇಳಿತ್ತು. 105(2) ನೇ ವಿಧಿ ಮತದಾನಕ್ಕೆ ಮಾತ್ರ ಅನ್ವಯವಾಗದೆ ಮತದಾನದ ಮೇಲೆ ಪ್ರಭಾವ ಬೀರಿದ ಲಂಚವನ್ನು ತೆಗೆದುಕೊಳ್ಳುವುದು ಸೇರಿದಂತೆ ಮತದಾನಕ್ಕೆ ಸಂಬಂಧಿಸಿದ ಎಲ್ಲದಕ್ಕೂ ಅನ್ವಯವಾಗುತ್ತದೆ ಎಂದು 3:2 ಬಹುಮತದೊಂದಿಗೆ ನೀಡಲಾಗಿದ್ದ ತೀರ್ಪು ವಿವರಿಸಿತ್ತು.

ಈ ತೀರ್ಪನ್ನು ಮರುಪರಿಶೀಲಿಸಲು ವಿಸ್ತೃತ ಪೀಠ ರಚಿಸಲಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ, ಎಂ ಎಂ ಸುಂದರೇಶ್‌, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಸಂಸದರು ಮತ್ತು ಶಾಸಕರು ಪರಿಣಾಮಗಳ ಭಯವಿಲ್ಲದೆ ಸದನದಲ್ಲಿ ತಮ್ಮ ಅಭಿಪ್ರಾಯವ್ಯಕ್ತಪಡಿಸಲು ಮುಕ್ತವಾಗಿರಬೇಕು, ಆದರೆ ಕ್ರಿಮಿನಲ್ ಕ್ರಮದಿಂದ ರಕ್ಷಣೆ ಇರುವಂತಾಗಬಾರದು ಎಂದು ಹೇಳಿತು.

ವಿಧಿ 105(2) ಮತ್ತು 194(2)ರ ಉದ್ದೇಶವೆಂದರೆ ಶಾಸನ ರೂಪಿಸುವವರನ್ನು ಕ್ರಿಮಿನಲ್ ಕಾನೂನಿನ ಮುಂದೆ ಪರಿಹಾರ ಹೊಂದಿರುವ ಸಾಮಾನ್ಯ ವ್ಯಕ್ತಿಗಿಂತ ಹೆಚ್ಚಿನ ಸವಲತ್ತುಗಳೊಂದಿಗೆ ಪ್ರತ್ಯೇಕಿಸುವುದಲ್ಲ ಎಂದು ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ಹೇಳಿತು.  

Related Stories

No stories found.
Kannada Bar & Bench
kannada.barandbench.com