ಧರ್ಮಸ್ಥಳದಲ್ಲಿ 74 ಅಸಹಜ ಸಾವಿನ ಪ್ರಕರಣ: ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

“2023ರ ನವೆಂಬರ್‌ 23ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಹಳೆಯ ದಾಖಲೆಗಳನ್ನು ನಾಶಪಡಿಸಲಾಗಿದೆ. ಅರ್ಜಿದಾರರು ಎತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡಿ ಏನೆಲ್ಲಾ ಮಾಡಬಹುದು ಅದನ್ನು ಮಾಡಲಾಗಿದೆ” ಎಂದ ಎಜಿ.
Karnataka High Court
Karnataka High Court
Published on

ಧರ್ಮಸ್ಥಳ ಗ್ರಾಮದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಏನು ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಧರ್ಮಸ್ಥಳದಲ್ಲಿ 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಾ ತಾಯಿ ಕುಸುಮವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Chief Justice Vibhu Bhakhru & Justice CM Poonacha
Chief Justice Vibhu Bhakhru & Justice CM Poonacha

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಅರ್ಜಿದಾರರು ಪ್ರಸ್ತಾಪಿಸಿರುವ ಪ್ರಕರಣಗಳು 2002ರಲ್ಲಿ ನಡೆದಿವೆ. 74 ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದ್ದು, ಯುಡಿಆರ್‌ ದಾಖಲಿಸಲಾಗಿದೆ. ಸದ್ಯ ರಚಿಸಲಾಗಿರುವ ವಿಶೇಷ ತನಿಖಾ ದಳಕ್ಕೆ ಪ್ರಕರಣಗಳನ್ನು ವರ್ಗಾಯಿಸುವಂಥದ್ದು ಏನೂ ಇಲ್ಲ. ಯುಡಿಆರ್‌ಗಳಿಗೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆ ಸಲ್ಲಿಸಿದರೆ ಅಥವಾ ದೂರು ದಾಖಲಿಸಿದರೆ, ಅದನ್ನು ತನಿಖೆಗೆ ಒಳಪಡಿಸಲಾಗುವುದು. ಇದೊಂದು ಸಾಮಾನ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿದೆ. ಅರ್ಜಿದಾರೆಯ ಸಹೋದರನನ್ನು ಧರ್ಮಸ್ಥಳ ಸಾಮೂಹಿಕ ದಹನ ಪ್ರಕರಣದಲ್ಲಿ ತನಿಖೆಗೆ ಒಳಪಡಿಸಲಾಗಿತ್ತು. ಇದರ ಸಂಬಂಧಿತ ಎಲ್ಲಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗುವುದು” ಎಂದರು.

“6.5.2002ರಂದು ಸಿಕ್ಕಿದ್ದ ಬಾಲಕಿಯ ಶವಕ್ಕೆ ಸಂಬಂಧಿಸಿದಂತೆ ಯುಡಿಆರ್‌ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶವ ಸಂಸ್ಕಾರ ನಡೆಸಿರುವುದು, ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿರುವುದು, ಅಂತಿಮ ವರದಿ, ವೈದ್ಯರ ಅಭಿಪ್ರಾಯ ಎಲ್ಲವೂ ಇದೆ” ಎಂದರು.

ಅರ್ಜಿದಾರರ ಪರ ವಕೀಲ ಎಸ್‌ ಬಾಲನ್‌ ಅವರು “ಅಸಹಜವಾಗಿ ಸಾವನ್ನಪ್ಪಿದವರ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಪ್ರಕ್ರಿಯೆ ಪಾಲಿಸದೇ ಶವಗಳ ಸಂಸ್ಕಾರ ಮಾಡಲಾಗಿದೆ. ಅಸಹಜವಾಗಿ ಸಾವನ್ನಪ್ಪಿದವರ 74 ಪ್ರಕರಣಗಳಲ್ಲಿ ಪಂಚನಾಮೆ ಪ್ರಕ್ರಿಯೆ ನಡೆಸಲಾಗಿಲ್ಲ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಪೊಲೀಸರು ಶವಗಳ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಪಂಚಾಯಿತಿಗೆ ಶಿಫಾರಸ್ಸು ಮಾಡಿದ್ದಾರೆ. ಶವ ಸಂಸ್ಕಾರ ಮಾಡಿದ್ದಾರೆಯೇ, ಸುಟ್ಟಿದ್ದಾರೆಯೇ ಎಂಬುದರ ಮಾಹಿತಿ ಇಲ್ಲ. ಈ ಸಂಬಂಧ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಮಹಿಳೆಯರು ಲಾಡ್ಜ್‌ನಲ್ಲಿ ಉಳಿದುಕೊಂಡು, ನಾಪತ್ತೆಯಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ತನಿಖೆ ನಡೆಸಲಾಗಿಲ್ಲ. ಶವಗಳನ್ನು ಸಂಸ್ಕಾರ ಮಾಡಲಾಗಿದೆ. ಆದರೆ, ಯಾವುದೇ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆದಿಲ್ಲ. 74 ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಬೇಕು ಎಂಬುದು ಕೋರಿಕೆಯಾಗಿದೆ” ಎಂದರು.

“6.5.2002ರಂದು 12.30ರ ವೇಳೆಗೆ ಗುರುತಿಲ್ಲದ ಬಾಲಕಿಯ ಶವವು ಧರ್ಮಸ್ಥಳ ಸಮೀಪದ ಬೈಲೂರು ಬ್ರಿಜ್‌ ಬಳಿ ಸಿಕ್ಕಿತ್ತು. ಇದು ಅಸಹಜವಾಗಿದ್ದು, ಸಿಆರ್‌ಪಿಸಿ ಸೆಕ್ಷನ್‌ 174ರ ಅಡಿ ಮಹಜರು ಪ್ರಕ್ರಿಯೆ ನಡೆಸಬೇಕು. ಆದರೆ, ಮಹಜರು ಪ್ರಕ್ರಿಯೆ ನಡೆಸಿಲ್ಲ. ಮರಣೋತ್ತರ ಪರೀಕ್ಷೆಯಾಗಿಲ್ಲ. ಎಲ್ಲಿ ಶವ ಸಂಸ್ಕಾರ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ. ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಕೆಲವರು ನಾಪತ್ತೆಯಾಗಿದ್ದಾರೆ” ಎಂದರು.

ಆಗ ಪೀಠವು “ತನಿಖಾ ವರದಿ ಎಲ್ಲಿದೆ? ಹಲವು ಅಸಹಜ ಸಾವಿನ ಪ್ರಕರಣದಲ್ಲಿ ತನಿಖೆಯೇ ನಡೆಯುವುದಿಲ್ಲ. ಸಾವಿಗೆ ಕಾರಣ ಏನು ಎಂಬ ಇರಬೇಕಲ್ಲವೇ?” ಎಂದಿತು.

ಇದಕ್ಕೆ ಅಡ್ವೊಕೇಟ್‌ ಜನರಲ್‌ ಅವರು “ಮಹಜರು, ಮರಣೋತ್ತರ ಪರೀಕ್ಷೆ, ವೈದ್ಯರ ಹೇಳಿಕೆ ಎಲ್ಲವೂ ಇದೆ. ಇಡೀ ದಾಖಲೆಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ತನಿಖೆಯ ವಿವರ, ಏನು ಮಾಡಲಾಗಿದೆ ಎಂಬುದನ್ನು ವಿಸ್ತೃತವಾದ ಆಕ್ಷೇಪಣೆಯಲ್ಲಿ ಸಲ್ಲಿಸಲಾಗುವುದು. ಸರ್ಕಾರದ ಸುತ್ತೋಲೆಯ ಪ್ರಕಾರ 2010ರವರೆಗಿನ ದಾಖಲೆಗಳನ್ನು ನಾಶಪಡಿಸಲಾಗಿದೆ. 20 ವರ್ಷಗಳ ಬಳಿಕ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪಿಐಎಲ್‌ ಸಲ್ಲಿಸಲಾಗಿದೆ. 2002ರ ದಾಖಲೆಗಳು ಇಲ್ಲ. 2023ರ ನವೆಂಬರ್‌ 23ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಹಳೆಯ ದಾಖಲೆಗಳನ್ನು ನಾಶಪಡಿಸಲಾಗಿದೆ. ಅರ್ಜಿದಾರರು ಎತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡಿ ಏನೆಲ್ಲಾ ಮಾಡಬಹುದು ಅದನ್ನು ಮಾಡಲಾಗಿದೆ” ಎಂದರು.

ಇದನ್ನು ಆಲಿಸಿದ ಪೀಠವು “ಈ ಹಂತದಲ್ಲಿ ಯಾವುದೇ ದಾಖಲೆ ಇಲ್ಲದೇ ಸರ್ಕಾರ ಹೇಗೆ ತನಿಖೆ ಮಾಡುತ್ತದೆ? ಕೆಲವು ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಅದನ್ನು ಹೇಗೆ ಹಾಜರುಪಡಿಸಲಾಗುತ್ತದೆ?” ಎಂದಿತು.

Also Read
ಧರ್ಮಸ್ಥಳದಲ್ಲಿ 74 ಅಸಹಜ ಸಾವಿನ ಪ್ರಕರಣ: ಕೈಗೊಂಡ ಕ್ರಮದ ಮಾಹಿತಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಈ ಹಂತದಲ್ಲಿ ಬಾಲನ್ ಅವರು “ಎಲ್ಲಾ ದಾಖಲೆಗಳನ್ನು ಸರ್ಕಾರ ನಾಶಪಡಿಸಿದೆ. ಯುಡಿಆರ್‌ ದಾಖಲಿಸಿದ್ದು, ಸಿಆರ್‌ಪಿಸಿ ಸೆಕ್ಷನ್‌ 174ರ ಅಡಿ ಪ್ರಕ್ರಿಯೆ ಪಾಲಿಸಲಾಗಿಲ್ಲ. ಎಸ್‌ಐಟಿ ರಚಿಸಲಾಗಿದೆ. ನಾವು ಪ್ರಸ್ತಾಪಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಏನು ತನಿಖೆ ಮಾಡಿದೆ ಎಂಬುದನ್ನು ತಿಳಿಸಲಿ. ಲಾಡ್ಜ್‌ನಲ್ಲಿ ಇದ್ದ ಬಾಲಕಿ ನಾಪತ್ತೆಯಾಗಿದ್ದಳು. ಆನಂತರ ಶವ ಪತ್ತೆಯಾಗಿದೆ. ಇದೆಲ್ಲಕ್ಕೂ ಸಂಬಂಧಿಸಿದ ದಾಖಲೆ ಸಲ್ಲಿಸಬೇಕು” ಎಂದರು.

ಆಗ ಅಡ್ವೊಕೇಟ್‌ ಜನರಲ್‌ ಅವರು “ಅರ್ಜಿದಾರೆಯ ಸಹೋದರ ದೂರು ನೀಡಿದ್ದು, ಆತ ದಾಖಲೆ ತಿರುಚಿರುವ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಆರೋಪಗಳಿಗಾಗಿ ಎಸ್‌ಐಟಿ ರಚಿಸಲಾಗಿದೆ” ಎಂದರು.

ಎಲ್ಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “74 ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಸಿರುವ ತನಿಖಾ ವರದಿಯನ್ನು ಸಲ್ಲಿಸಬೇಕು” ಎಂದ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು.

Kannada Bar & Bench
kannada.barandbench.com