ಕಾನೂನು ಅಭ್ಯಾಸ ಮಾಡುವ ಆಸೆ ಇಟ್ಟುಕೊಂಡಿದ್ದ 77 ವರ್ಷದ ಮಹಿಳೆಯೊಬ್ಬರು ಮೂರು ವರ್ಷದ ಎಲ್‌ಎಲ್ ಬಿ ಕೋರ್ಸ್ ಮಾಡಲು ಪ್ರವೇಶ ನೀಡದ ಭಾರತೀಯ ವಕೀಲರ ಪರಿಷತ್ತನ್ನು (ಬಿಸಿಐ) ಕಟೆಕಟೆಯಲ್ಲಿ ನಿಲ್ಲಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಿಸಿಐ ನಿಯಮಗಳ ಪ್ರಕಾರ 5 ವರ್ಷದ ಎಲ್‌ಎಲ್ ಬಿ ಕೋರ್ಸ್ ಮಾಡಲು 20 ವರ್ಷದ ಗರಿಷ್ಠ ವಯೋಮಿತಿ ಹಾಗೂ 3 ವರ್ಷದ ಎಲ್‌ಎಲ್ ಬಿ ಕೋರ್ಸ್ ಮಾಡಲು 30 ವರ್ಷದ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ರಿಷಬ್ ದುಗ್ಗಲ್ ವರ್ಸಸ್ ಭಾರತೀಯ ವಕೀಲರ ಪರಿಷತ್ತಿನ ಪ್ರಕರಣದಲ್ಲಿ ಬಿಸಿಐ ನಿಯಮಗಳ ಪ್ರಶ್ನಿಸಿ ಸಲ್ಲಿಸಲಾಗಿರುವ ಬಾಕಿ ಉಳಿದಿರುವ ಪ್ರಕರಣವನ್ನು ಮಧ್ಯಪ್ರವೇಶಿಸಿ ಇತ್ಯರ್ಥಪಡಿಸುವಂತೆ 77 ವರ್ಷದ ಮಹಿಳೆ ಮನವಿ ಸಲ್ಲಿಸಿದ್ದರು.
ಪತಿ ತೀರಿಹೋದ ಬಳಿಕ ಅವರ ಎಸ್ಟೇಟ್ ಅನ್ನು ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ 77 ವರ್ಷದ ರಾಜಕುಮಾರಿ ತ್ಯಾಗಿ ಅವರ ಮೇಲೆ ಬಿದ್ದದ್ದರಿಂದ ಅವರು ಕಾನೂನಿನ ಮೇಲೆ ಒಲವು ಬೆಳೆಸಿಕೊಳ್ಳಲಾರಂಭಿಸಿದರು. ವಕೀಲರನ್ನು ಆಶ್ರಯಿಸದೇ ಇದ್ದುದರಿಂದ ಪತಿಯ ಎಸ್ಟೇಟಿನ ದಾಖಲೆಗಳನ್ನು ಗುರುತಿಸುವಾಗ ರಾಜಕುಮಾರಿ ತ್ಯಾಗಿ ಅವರಿಗೆ ಸಾಕಷ್ಟು ಕಾನೂನಿನ ಸಮಸ್ಯೆಗಳು ಎದುರಾದವು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಮೂರು ವರ್ಷದ ಕಾನೂನು ಕೋರ್ಸ್‌ಗೆ ಸೇರುವ ಒಲವು ಹೊಂದಿದ್ದ ರಾಜಕುಮಾರಿ ತ್ಯಾಗಿಯವರು ಕಾನೂನು ಶಿಕ್ಷಣದ ನಿಯಮಗಳು-2008ರ ಪ್ರಕಾರ 2016ರ ಸೆಪ್ಟೆಂಬರ್ 17ರ ಸುತ್ತೋಲೆ ಸಂಖ್ಯೆ 6 ಮತ್ತು ಕಲಂ 28, ಷೆಡ್ಯೂಲ್ III, ನಿಯಮ 11 ಸಂವಿಧಾನದತ್ತವಾಗಿ ದೊರೆತಿರುವ ಪರಿಚ್ಛೇದ 14, 19(1)(g) ಮತ್ತು 21ರ ಸ್ಪಷ್ಟ ಉಲ್ಲಂಘನೆ ಎಂದು ಆದೇಶಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.
ವಕೀಲರ ಕಾಯಿದೆ-1961 ಮತ್ತು ಭಾರತೀಯ ವಕೀಲರ ಪರಿಷತ್ತಿನ (ಕಾನೂನು ಶಿಕ್ಷಣ) ನಿಯಮಗಳು-2008ರ ನಿಬಂಧನೆಗಳನ್ನು ನಿಮಯಗಳು ಉಲ್ಲಂಘಿಸುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ತಮ್ಮ ಇಚ್ಛೆಯ ಕಾಲೇಜು ಅಥವಾ ಸಂಸ್ಥೆಯಲ್ಲಿ ಕಾನೂನು ಶಿಕ್ಷಣ ಪಡೆಯುವ ಮೂಲಭೂತ ಹಕ್ಕು ತನಗಿದ್ದು ಆ ಹಕ್ಕಿಗೆ ಸಂವಿಧಾನದ 21ನೇ ವಿಧಿಯ ಅಡಿ ಸಂರಕ್ಷಣೆ ಇದೆ ಎಂದು ಘೋಷಿಸುವಂತೆ ಅರ್ಜಿದಾರರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.
ಪ್ರಶ್ನಾರ್ಹವಾದ ಅಧಿಸೂಚನೆಯು ಫ್ರಾನ್ಸಿಸ್ ಕೊರಲೈ ಮುಲ್ಲಿನ್ ವರ್ಸಸ್ ದೆಹಲಿ ಕೇಂದ್ರಾಡಳಿತ ಪ್ರದೇಶದ ಆಡಳಿತಗಾರರ ಪ್ರಕರಣದಲ್ಲಿ ಇದೇ ಗೌರವಾನ್ವಿತ ನ್ಯಾಯಾಲಯದ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
“ಸಂವಿಧಾನದ ಪರಿಚ್ಛೇದ 21ರ ಪ್ರಕಾರ ಉಲ್ಲೇಖಿಸಲಾಗಿರುವ ಬದುಕುವ ಹಕ್ಕು ಪ್ರಾಣಿಗಳ ರೀತಿಯಲ್ಲಿ ಜೀವಿಸುವುದಕ್ಕೆ ಸೀಮಿತವಾಗಿಲ್ಲ. ಅದರಲ್ಲಿ ಗೌರವಯುತವಾಗಿ ಜೀವಿಸುವುದು, ಬರವಣಿಗೆ ಮತ್ತು ಓದಿಗೆ ಸೌಕರ್ಯ ಮತ್ತು ನಿರ್ದಿಷ್ಟ ವ್ಯಕ್ತಿಯ ಇಚ್ಛೆ/ಮಾಧ್ಯಮಕ್ಕೆ ಅನುಗುಣವಾಗಿ ಸೂಚನೆಗಳನ್ನು ಪಡೆದುಕೊಳ್ಳುವ ಹಕ್ಕೂ ಸೇರಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ರಾಜಕುಮಾರಿ ತ್ಯಾಗಿ ಅವರನ್ನು ಅಡ್ವೊಕೇಟ್ ಆನ್ ರೆಕಾರ್ಡ್ ಸಂಸ್ಥೆಯ ಆಸ್ಥಾ ಶರ್ಮಾ, ನಿಪುನ್ ಸೆಕ್ಸೇನಾ, ಸೆರೆನಾ ಶರ್ಮಾ ಮತ್ತು ಉಮಂಗ್ ತ್ಯಾಗಿ ಪ್ರತಿನಿಧಿಸಿದ್ದರು.