ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜುಲೈ 11ರಂದು ರಾಜ್ಯಾದ್ಯಂತ ನಡೆಸಲಾದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹3 ಸಾವಿರ ಕೋಟಿ ಪರಿಹಾರ ಮೊತ್ತ ಪಾವತಿಸಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್ ಶಶಿಧರ್ ಶೆಟ್ಟಿ ಮತ್ತಿತರರು ಇದ್ದರು.
ಹೈಕೋರ್ಟ್ನ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳು, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 977 ಪೀಠಗಳಲ್ಲಿ ಜುಲೈ 11ರಂದು ಏಕಕಾಲಕ್ಕೆ ಕಲಾಪಗಳನ್ನು ನಡೆಸಿ ನ್ಯಾಯಾಲಯದಲ್ಲಿ ಬಾಕಿ ಇರುವ 2.54 ಲಕ್ಷ ಹಾಗೂ ವ್ಯಾಜ್ಯಪೂರ್ವ 76.25 ಲಕ್ಷ ಸೇರಿ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
2019ರಿಂದ 2026ರವರೆಗೆ 5.05 ಕೋಟಿಗೂ ಅಧಿಕ ಸಂಚಾರ ಚಲನ್ ಪ್ರಕರಣಗಳು ಬಾಕಿ ಇದ್ದು, ₹2,727 ಕೋಟಿ ದಂಡ ವಿಧಿಸಲಾಗಿದೆ. ಅದೇ ರೀತಿ 1991ರಿಂದ 2022ರವರೆಗೆ ಒಟ್ಟು 1.76 ಲಕ್ಷ ಪ್ರಕರಣಗಳು ಸಾರಿಗೆ ಇಲಾಖೆಯ ಮುಂದೆ ಬಾಕಿ ಉಳಿದಿವೆ. ಈ ಪ್ರಕರಣಗಳ ಇತ್ಯರ್ಥಕ್ಕೆ ರಾಜ್ಯ ಸರ್ಕಾರ 2026ರ ಜೂನ್ 21ರಿಂದ ಜುಲೈ 10ರವರೆಗೆ ಒಟ್ಟು 20 ದಿನಗಳ ಕಾಲ ಶೇ.50ರಷ್ಟು ರಿಯಾಯಿತಿ ನೀಡಿದೆ. ಆದರ ಪರಿಣಾಮ 19.13 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಿ ₹55 ಕೋಟಿಗೂ ಹೆಚ್ಚಿನ ದಂಡದ ಮೊತ್ತ ಸಂಗ್ರಹಿಸಲಾಗಿದೆ. ಸಾರಿಗೆ ಇಲಾಖೆಗೆ ಸಂಬಂಧಿಸಿದ 1,212 ಪ್ರಕರಣಗಳನ್ನು ವಿಲೇವಾರಿ ಮಾಡಿ ₹61.99 ಲಕ್ಷ ದಂಡದ ಮೊತ್ತ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಐದು ವರ್ಷ ಮತ್ತು ಅದಕ್ಕೂ ಹಳೆಯ 1,544 ಪ್ರಕರಣಗಳು, 10 ವರ್ಷ ಮತ್ತು ಅದಕ್ಕೂ ಹಳೆಯ 330, 15 ವರ್ಷ ಮತ್ತು ಅದಕ್ಕೂ ಹಳೆಯ 24 ಪ್ರಕರಣಗಳು ಸೇರಿ 1,899 ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಹಿರಿಯ ನಾಗರಿಕರಿಗೆ ಸಂಬಂಧಿಸಿದ 1,948 ಪ್ರಕರಣಗಳ ಇತ್ಯರ್ಥ.
ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿರುವ ವಾಣಿಜ್ಯ ಜಾರಿ ಪ್ರಕರಣವೊಂದರಲ್ಲಿ ಕೆನರಾ ಬ್ಯಾಂಕಿನ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ₹8 ಲಕ್ಷ ಮೊತ್ತದ ವಿವಾದವನ್ನು ಲೋಕ್ ಅದಾಲತ್‌ನಲ್ಲಿ ಕೇವಲ ₹15 ಸಾವಿರಕ್ಕೆ ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗಿದೆ.
ಧಾರವಾಡ ಜಿಲ್ಲೆಯ ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣವೊಂದರಲ್ಲಿ ₹2.45 ಕೋಟಿ ಮೊತ್ತದ ಅತಿ ಹೆಚ್ಚಿನ ಪರಿಹಾರವನ್ನು ಲೋಕ್ ಅದಾಲತ್‌ನಲ್ಲಿ ಕೊಡಿಸಲಾಗಿದೆ.
ಸುಮಾರು 315 ದಂಪತಿಗಳು ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಪುನಃ ಒಂದಾಗಿ ಬಾಳಲು ತೀರ್ಮಾನಿಸಿದರು.