'ಒಂದು ದೇಶ ಒಂದು ಚುನಾವಣೆ' ಪರ ಶೇ.81ರಷ್ಟು ಜನ ಸ್ಪಂದಿಸಿದ್ದಾರೆ: ಕಾನೂನು ಸಚಿವಾಲಯ

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಸಮಿತಿ 20,972 ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.
ಚುನಾವಣೆ
ಚುನಾವಣೆ

ದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕೆ ಎನ್ನುವ ಬಗ್ಗೆ ಕೇಂದ್ರದ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ದೇಶದ ಜನತೆಯಲ್ಲಿ ಶೇ 81ರಷ್ಟು ಜನ ಆ ಆಲೋಚನೆಯ ಪರವಾಗಿ ಇದ್ದಾರೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಅಸ್ತಿತ್ವದಲ್ಲಿರುವ ಕಾನೂನು ಮತ್ತು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕುರಿತಂತೆ ಸರ್ಕಾರ ಜನವರಿ 5ರಂದು ಸಲಹೆಗಳನ್ನು ಕೇಳಿತ್ತು. ನೋಟಿಸ್‌ಗೆ ಇ ಮೇಲ್‌ ಮೂಲಕ ಪ್ರತಿಕ್ರಿಯಿಸಲು ಜನವರಿ 15ರವರೆಗೆ ಅವಕಾಶ ನೀಡಲಾಗಿತ್ತು.

ಒಟ್ಟು 20,972 ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಶೇ 81ರಷ್ಟು ಏಕಕಾಲದಲ್ಲಿ ಚುನಾವಣೆ ನಡೆಸುವ ಕಲ್ಪನೆಯತ್ತ ಒಲವು ತೋರಿವೆ ಎಂದು ಕಾನೂನು ಸಚಿವಾಲಯದ ಪತ್ರಿಕಾ ಪ್ರಕಟಣೆ ಬಹಿರಂಗಪಡಿಸಿದೆ.

ಈ ರೀತಿ ಚುನಾವಣೆ ನಡೆಸುವ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು.

ರಾಜ್ಯಸಭೆ ವಿರೋಧ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್, ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ ) ಅರ್ಜುನ್ ರಾಮ್ ಮೇಘವಾಲ್ , 15ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್‌ ಕೆ ಸಿಂಗ್, ಹಿರಿಯ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್ ಹರೀಶ್ ಸಾಳ್ವೆ ಮತ್ತಿತರರನ್ನು ಒಳಗೊಂಡ ಸಮಿತಿ ನಿನ್ನೆ (ಜನವರಿ 21) ಸಭೆ ನಡೆಸಿತ್ತು.

ಸಲಹೆಗಳನ್ನು ಆಹ್ವಾನಿಸುವುದರ ಜೊತೆಗೆ, ಸರ್ಕಾರ 46 ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಕೂಡ ಕೇಳಿತ್ತು. 

"ಇಲ್ಲಿಯವರೆಗೆ, 17 ರಾಜಕೀಯ ಪಕ್ಷಗಳಿಂದ ಸಲಹೆಗಳನ್ನು ಸ್ವೀಕರಿಸಲಾಗಿದೆ. ಭಾರತೀಯ ಚುನಾವಣಾ ಆಯೋಗದ ಸಲಹೆಗಳನ್ನು ಕೂಡ ಸಮಿತಿ ಗಮನಿಸಿದೆ. ಇದಲ್ಲದೆ, ಸಮಿತಿಯ ಅಧ್ಯಕ್ಷರು, ಖ್ಯಾತ ನ್ಯಾಯವಾದಿಗಳು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಭಾರತದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತರು, ಭಾರತೀಯ ವಕೀಲರ ಪರಿಷತ್ತು, ಭಾರತೀಯ ವಾಣಿಜ್ಯೋದ್ಯಮ ಸಂಘಗಳ ಒಕ್ಕೂಟ (ಎಫ್ಐಸಿಸಿಐ), ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಮ್ ) ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮುಖ್ಯಸ್ಥರೊಂದಿಗೆ ಸಮಾಲೋಚನೆಗಳನ್ನು ಆರಂಭಿಸಲಾಗಿದೆ" ಎಂದು ಪ್ರಕಟಣೆ ತಿಳಿಸಿದೆ. 

ಉನ್ನತ ಮಟ್ಟದ ಸಮಿತಿಯ ಮುಂದಿನ ಸಭೆ ಜನವರಿ 27ರಂದು ನಡೆಯಲಿದೆ.

1951-52ರಿಂದ 1967ರವರೆಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆದವು. ನಂತರ ಈ ಕೊಂಡಿ ಕಳಚಿಹೋಯಿತು. ಈಗ ಚುನಾವಣೆಗಳು ಪ್ರತಿ ವರ್ಷ, ಬೇರೆ ಬೇರೆ ಸಮಯಗಳಲ್ಲಿ ನಡೆಯುತ್ತಿವೆ. ಇದು ಭಾರಿ ವೆಚ್ಚಕ್ಕೆ ಕಾರಣವಾಗಲಿದ್ದು ಭದ್ರತಾ ಪಡೆಗಳು ಮತ್ತಿತರ ಚುನಾವಣಾಧಿಕಾರಿಗಳು ದೀರ್ಘಕಾಲದವರೆಗೆ ತಮ್ಮ ಮೂಲ ಕರ್ತವ್ಯಗಳಿಂದ ಬೇರೆ ಇರುವಂತೆ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

[ಪತ್ರಿಕಾ ಪ್ರಕಟಣೆಯನ್ನು ಇಲ್ಲಿ ಓದಿ]

Attachment
PDF
PIB1998463.pdf
Preview

Related Stories

No stories found.
Kannada Bar & Bench
kannada.barandbench.com